ಬಾಳ ದಿಬ್ಬಣವು ಹೊರಟಿಹುದು ಅಂದದಲಿ
ಗೋಳ ಜೀವನದ ವಾದ್ಯದಿಂದುಸುರುತಲಿ…
ಮುಂದೆ ಬದುಕಿನ ಸೋಗ
ಕಂಡು ಮೆರೆಯಲು ಬೇಗ
ಜೀವನದ ಬಂಡಿಯನು ಹೊಡೆಯುತಲಿ
ಜೀವಿಕೆಯ ಸುಗಮತೆಯನರಸುತಲಿ…
ಕಲ್ಲು-ಮುಳ್ಳಿನ ಹಾದಿ
ಗೆಲ್ಲು-ಸೋಲಿನ ಬೀದಿ.
ಬದುಕಿನುದ್ದಕು ಇಹುದೆಂದು
ಅದುವೆ ಜೀವನದ ಸೊಗಸೆಂದು
ಉಳಿದುಳಿದು ನುಡಿಸುತಲಿ
ಅಳವಡಿತ ಭಾವದಲಿ…
ಮುಂದಿಹುದು ಕಳೆಹೀನ ಪಥವೆಂದು
ಬಂದಿಹುದು ರಸಹೀನ ಜಗಕೆಂದು,
ಬಂಧನವು ಬಡತನದ ಹಗಲಿರುಳು ಬಿಡದೆಂದು
ಅರಿತಿದ್ದು ಕಳೆಗೊಟ್ಟು ಸಾಗುತಲಿ
ಪರಿಪರಿಯ ಗಾನವನು ಮಾಡುತಲಿ…
ಸುರುಸುರುಳಿ ಹೊರಹೊರಳಿ ರಾಗಿಸುವ ನಾಗಸರ
ತರುಗಳನು ಮೋದಿಸಿ ಪರವಶ ಪಡಿಸುತಿದೆ,
ಮರುಕಳಿಸಿ ಪದಪಿಂದ ಪಾಡಿತಿದೆ
ಕಿರುಗವನ ಮರಗಳಿಗೆ ಅರುಹುತಿದೆ
ಮರುಗಳಿಗೆ ತಡವರಿಸೆ ಗೀತಸುಧೆ…
ಹುರುಪಳಿದ ಮಧುಬನವು ನಿಡುಸುಯ್ಯುತಿದೆ…..
ಬರಸಿಡಿಲು ದಡಲೆಂದು ಬಡಿದರೂ
ಚರಚರನೆ ಮಳೆಗಾಳಿ ಸುರಿದರೂ
ಗರಬಡಿದ ದಿಬ್ಬಣವು ಸಾಗಿಹುದು, ಬಾಳ-
ಚರಮ ಸೀಮೆಯ ಕೊನೆಯಂಚನರಸುತಲಿ….
‘ಬದುಕು’-‘ಭಾಗ್ಯ’ಗಳೆಂಬ ವಧೂ-ವರರನು
ಸದಭಿಮಾನದ ಹುರುಪಿಂದ ಮುನ್ನಡೆಸುತಲಿ
*****