ಅಯ್ಯೋ….
ಮುಟ್ಟುವ ತನಕ ಗೊತ್ತೇ ಆಗಲಿಲ್ಲ.
ನನ್ನಂತೆಯೇ ಅವನೂ ಮನುಷ್ಯನೆಂದು!
ಅಪ್ಪಿಕೊಂಡ ಮೇಲೆ ಅರಿವಾಯಿತು
ನಾನೂ ಅವನೂ ಒಂದೇ ಎಂದು!
ಕೇಡಿಗೆ ವಶವಾಗಿ
ಹಲ್ಲುಗಳ ಮಸೆದಿದ್ದೆವು ಹುಡಿಯಾಗುವ ತನಕ
ಕಲ್ಲುಗಳನೆತ್ತೆತ್ತಿ ಒಗೆದಿದ್ದೆವು ಪುಡಿಯಾಗುವ ತನಕ
ಕುರುಡಾಗಿ ಕಾದಾಡಿದೆವು
ಬರಡಾಗಿ ಬೈದಾಡಿದೆವು
ಒಡಲಲ್ಲಿ ಬೆಂಕಿ ಎದೆಯಲ್ಲಿ ವಿಷ
ದಗಧಗನೆ ಉರಿದುಕೊಂಡು
ಕವಕವನೆ ಕಾರಿಕೊಂಡು
ಸಾಧಿಸಿದೆವು ಹಟ ಪಣಕೊಟ್ಟು…
ಭಿನ್ನ-ಭೇದದ ಹೊರೆ ಹೊತ್ತು
ವಾಲಿತ್ತು ಕತ್ತು ಎತ್ತಲಾಗದೆ ಶಿರ
ನೋಯುತ್ತಾ ಬೇಯುತ್ತಾ
ಕೊಳೆಯುತ್ತಾ ಬರುತ್ತಾ
ಭಂಡ ಬಾಳುವೆಯ ಬಾಳಿ
ನಲುಗಿದ್ದೆವು ರವರವ ನರಕದಲ್ಲಿ…
ಗರ ಬಡಿದಿತ್ತೆ ನಾಲಿಗೆಗೆ ?
ಹೌದು….
ಸುಳ್ಳು ನುಡಿದಿತ್ತು ಕಳ್ಳಾಟವಾಡಿತ್ತು
ಮುಳ್ಳು ಹೊಕ್ಕಿತ್ತು ಮಳ್ಳು ಹಿಡಿದಿತ್ತು!
ಹೊರಗೆ ಕಾಣಿಸದಿದ್ದರೂ
ಒಳಗೊಳಗೆ ಅನಿಸಿತ್ತು
ಹಟವೇಕೆ ಘಟ ನೀನು
ದಿಟವಲ್ಲ ಪಟ ನೀನು
ಮಿಗವಾಗು ಖಗವಾಗು
ಪಶು ಪಕ್ಷಿ ಹುಳುವಾಗು
ಗಿಡವಾಗು ಮರವಾಗು
ಹೂ-ಬಳ್ಳಿ ಹುಲ್ಲಾಗು
ಜಗವಾಗು ಮಗುವಾಗು
ಹೊರೆಯಿಳಿಸಿ ಹಗುರಾಗು
ತೂಗು ಬಾಗು ಮಾಗು…
*****