ನಿನ್ನ ಧಿಕ್ಕರಿಸಿದ ತರ್ಕಕ್ಕೆ
ಮೊನ್ನೆ ಕಾಲು ಮುರಿಯಿತು
ಬಗ್ಗಿ
ಕೈ ಮುಗಿದು ಹೇಳಿತು
“ನಾ ತುಳಿಯದ ನೆಲವಿದೆ,
ಕುಡಿಯದ ಗಾಳಿ ನೀರು,
ಅರಿಯದ ನೆಲೆ ಇವೆ.
ಅವಕ್ಕೆ
ಬಗೆ ಬಗೆ ಬೆಲೆ, ಬೇರು.
ಅಲ್ಲೆಲ್ಲ ಹೋಗಿ ಬಾ,
ನಿಧಾನ ಆಗಿ ಬಾ,
ಹುಗಿದ ಕೊಪ್ಪರಿಗೆಗಳನ್ನು
ಹಗಲಿಗೆ ತಾ.”
ಸದ್ಯ
ಕೈಕೋಲು ಕೊಲ್ಲುವ ಬಡಿಗೆಯಾಗದ್ದಕ್ಕೆ.
ನಮಿಸಿದೆ.
ಹೆಡಿಗೆ ಹೊತ್ತಾಗಲೇ ನಡಿಗೆ ಕುಂಟಿತ್ತು. ಇರಲಿ
ಎತ್ತಿದ ಹೆಡೆಯಲ್ಲೇ
ರತ್ನದ ಬೆಳಕು ಸಿಕ್ಕು
ಕುಂಟುತ್ತಲೇ ಸುತ್ತುವೆ ಹೆಳವ
ಕಾಣದ ನೆಲವ.
*****