ಅನಿರೀಕ್ಷಿತವಾಗಿ ಮಾಡಿದ ಭಾಷಣ,
ವರ್ಷಗಳ ಅನಂತರ ಮಾಡಿದ ನಾಟಕ,
ಆಶು ಭಾಷಣ ಸ್ಪರ್ಧೆಯಲ್ಲಿ ಗಳಿಸಿದ ಬಹುಮಾನ
ಟ್ರೈನಿಂಗ್‌ಗೆ ಹೋಗಿದ್ದಾಗ ಮಾಡಿದ ಉಪನ್ಯಾಸ
ಇವೆಲ್ಲ ಕಂಡಾಗ ಕ್ಷಣ ಹೊತ್ತು ಅನಿಸಿತ್ತು
ನನ್ನೊಳಗಿನ ಕಲಾವಿದ ಇನ್ನೂ ಇದ್ದಾನೆ ಜೀವಂತ.
ಮನೆ ಕಟ್ಟಿಸುವಾಗ ಕಂಟ್ರಾಕ್ಟರ್‌ನೊಂದಿಗೆ ಮಾತುಕತೆ
ತಾಂತ್ರಿಕ, ಆರ್ಥಿಕ ವಿಷಯಗಳ ವಾದ-ವಿವಾದಗಳು
ಹಲವು ಹತ್ತು ಚರ್ಚೆಗಳು, ಚೌಕಾಸಿಗಳು.
ಆ ಸಮಯದಲ್ಲಿ ಅವನು ಹೇಳಿದ್ದ
‘ನೀವು ಸಿವಿಲ್ ಇಂಜಿನಿಯರ್ ಆಗಬೇಕಿತ್ತು’.
ಹಾಗೇನಿಲ್ಲ ಬಿಡಿ, ಆಯಾ ಸಂದರ್ಭಗಳಲ್ಲಿ
ನನ್ನೊಳಗಿನ ಇಂಜಿನಿಯರು, ಲಾಯರು, ಮಾರ್ವಾಡಿ
ಜಾಗೃತರಾಗಿ ತಮ್ಮ ಭೂಮಿಕೆ ನಿಭಾಯಿಸಿದರು.
ಒಮ್ಮೊಮ್ಮೆ ಕೆಲವು ನಯವಂಚಕರ ಕಂಡಾಗ
ವಿಪರೀತ ಸಿಟ್ಟು ನೆತ್ತಿಗೇರಿ, ಕತ್ತಿ ಹಿರಿದು,
ಕತ್ತು ಕತ್ತರಿಸಿ, ನೆತ್ತರು ಹರಿಸಿ…
ಇನ್ನೂ ಏನೇನೋ ಮಾಡಿ ಮುಗಿಸಬೇಕೆನಿಸುತ್ತದೆ.
ಮತ್ತೊಮ್ಮೆ ಶಾಂತವಾಗಿ, ಎಲ್ಲ ತೊರೆದು
ಸಂತನಾಗಿ, ದೂರ ಸಾಗಬೇಕೆನಿಸುತ್ತದೆ.
ನನ್ನೊಳಗೆ ಒಬ್ಬ ವೀರನೋ, ಕೊಲೆಗಾರನೋ,
ಸನ್ಯಾಸಿಯೋ, ಸಮಾಜ ಸುಧಾರಕನೋ,
ಎಷ್ಟೆಲ್ಲ ಮಂದಿ ಮನೆ ಮಾಡಿದ್ದಾರೆ
ಈ ನನ್ನ ಮನ ಮಂದಿರದಲ್ಲಿ!
ಕಾಲ ಕಾಲಕ್ಕೆ ಕಾಣಿಸಿಕೊಳ್ಳುತ್ತಾರೆ
ಕಾರ್ಯ ನಿರ್ವಹಿಸಿ ಕಾಣೆಯಾಗುತ್ತಾರೆ!
ಈ ಎಲ್ಲ ಗುಣ ಪುರುಷರ ಆಗರ,
ಆಗಲಿ ನನ್ನ ಮನ ಶಾಂತ ಸಾಗರ.
*****
೨೬-೧೧-೧೯೯೩