ಒಂದು ಕಾಲವಿತ್ತು
ಆಗ ನನ್ನ ಕೂಗಿನಿಂದಲೇ
ಬೆಳಗಾಗುತ್ತಿತ್ತು
ಮುಂಜಾನೆಗೆ ಹೆಸರೇ ಇತ್ತು
“ಕೋಳಿ ಕೂಗೋ ಹೊತ್ತು” ಎಂದು.
ನಾನು ಕೂಡ ಸುಂದರ
ಬಾತುಗಳಂತೆ
ರಾಜ ಹಂಸಗಳಂತೆ.
ನನಗೂ ಮೋಹಕ ನಡಿಗೆ ಇತ್ತು
ದೊಡ್ಡ ಸಂಸಾರವಿತ್ತು
ನನ್ನ ಮರಿಗಳೊಂದಿಗೆ
ಹೋಗುತ್ತಿದ್ದರೆ ನಾನು
ಕಿರಿಯರಿಗೆ ಆಟ, ಚಲ್ಲಾಟ
ಹಿರಿಯರಿಗೆ ಒಳ್ಳೆಯ ನೋಟ
ನಾನು ಒಂದು ಹಕ್ಕಿಯಾಗಿದ್ದೆ
ಅಲ್ಪ ಸ್ವಲ್ಪ ಹಾರುತ್ತಿದ್ದೆ.
ಈಗ ಆ ಕಾಲ ಹೋಯಿತು
ಜನ ನಮ್ಮನ್ನು
ಸಾಕತೊಡಗಿದರು
ನಮ್ಮಮೊಟ್ಟೆಗಾಗಿ
ತಮ್ಮ ಹೊಟ್ಟೆಗಾಗಿ
ನಮ್ಮಮೊಟ್ಟೆಗಳ ತಿಂದು ತೇಗಿ
ನಮ್ಮನ್ನೇ ಕೊಂದು ತಿಂದರು!
ಬಾಯಿ ಚಪ್ಪರಿಸಿದರು
ನಮ್ಮ ಮೊಟ್ಟೆ-ಮಾಂಸಗಳಿಗೆ,
ಪ್ರೀತಿ ಇಲ್ಲದೆ ಬೆಳೆಸಿ
ಕರುಣೆ ಇಲ್ಲದೆ ಸಾಯಿಸಿ
ಕೋಳಿ ಸಾಕಣೆ ಒಂದು
ಉದ್ಯಮ ಮಾಡಿದರು!
ಈಗ ಹಾರುವುದಿರಲಿ,
ನಡೆಯುವಂತೆಯೂ ಇಲ್ಲ.
ಇತರ ಎಲ್ಲ ಪ್ರಾಣಿಗಳಂತೆ,
ಮನುಷ್ಯರಂತೆ ನಾವು ಕೂಡ
ಪ್ರಕೃತಿ ದೇವಿಯ ಮಕ್ಕಳು
ಎಂದರೆ ಕೇಳುವರಾರು?
ನಾವೀಗ ಒಂದು ಸರಕು
“ಕೋಳಿ ಫಾರಂ” ಎಂಬ ಕಾರ್ಖಾನೆಯಲ್ಲಿ
ನಮ್ಮನ್ನು ಉತ್ಪಾದಿಸುತ್ತಾರೆ
ತೂಗಿ ತಕ್ಕಡಿಯಲ್ಲಿ ಮಾರುತ್ತಾರೆ
ಸೈಕಲ್ಲುಗಳಲ್ಲಿ ಕಟ್ಟಿ ಸಾಗಿಸುತ್ತಾರೆ
ಕೊಂದು, ಬೇಯಿಸಿ, ಖಾರ ಎರೆದು ತಿನ್ನುತ್ತಾರೆ
ನಾವು ಜೀವಿಗಳೆಂಬುದ ಮರೆಯುತ್ತಾರೆ!
*****
೨೧-೦೬-೧೯೯೨