ಮರ, ನಮ್ಮ ಕೈಮರ
ನಾಗರೀಕರ ಅಗತ್ಯದ ಕುರುಹಾಗಿ
ಹಸಿರು ಛಿಂದಿಯನುಟ್ಟ ಗುಡ್ಡದ ಸನಿಹ
ಹತ್ತಾರು ಮೀಟರು ಅಂತರದಿ
ತೇರಂತೆ ಎತ್ತರಕ್ಕೆ ಬೆಳೆದು ರಾರಾಜಿಸುತ್ತಿತ್ತು.
ನಾವು, ಒತ್ತರಿಕೆ ಗುಣದವರು
ಎಬ್ಬಿಸಿದ ಸಾಲು, ಸಾಲು ಕಾಂಕ್ರೀಟು
ಬೆಟ್ಟ ಗುಡ್ಡಗಳಂತ ಕಟ್ಟಡಗಳು
ರಸ್ತೆ, ಆವರಣ, ತರ ತರ ಕಾಮಗಾರಿಗಳು
ತಂದಿರಲಿಲ್ಲ ಧಕ್ಕೆ, ಸಧ್ಯ !
ಅದರ ಅಸ್ತಿತ್ವಕ್ಕೆ.
ನೆಲೆ ತಪ್ಪಿ ಕಂಗೆಟ್ಟ
ಹದ್ದು, ಹಕ್ಕಿ, ಕ್ರಿಮಿ ಕೀಟಗಳಿಗೆ
ಹಸಿರು ಪ್ರಿಯರಿಗೆ
ಬತ್ತದ ಸಿಹಿ ನೀರ ಪುಟ್ಟ ಬುಗ್ಗೆಯಂತೆ ತೋರುಗಾಣುತ್ತಿತ್ತು.
ಬಾಹ್ಯದಿ ನಗು ನಗುತ್ತಿತ್ತು
ಅಂತರಾಳದಿ ಹಲ್ಲುಕಚ್ಚಿ ಹೋರಾಟ ನಡೆಸಿತ್ತು
ಜೀವ ಸೆಲೆಗಾಗಿ;
ಮುಂದೆ, ಜೀವ ಜಂತುಗಳ ನಡುವೆ ಸಂಭವಿಸುವ
ಸಮರ ಸಂದರ್ಭವ ಸಾಕ್ಷೀಕರಿಸಿ.
ಫಲಿಸಲಿಲ್ಲ.
ಅಕಾಲದಲಿ ಮುಪ್ಪಡರಿ
ಎಲೆಗಳು ಉದುರಿವೆ;
ಟಿಸಿಲು, ಟಿಸಿಲು ಒಣಗಿ ಮುರಿದು ಬೀಳುತಿವೆ
ಗೆದ್ದಲು ಮುಗಿ ಬಿದ್ದಿವೆ
ಚೆಕ್ಕೆ ತೊಗಲು ಸುಲಿಯುತಿದೆ
ಜೀವ ಜಗದ ಮುಂಬರುವ
ಕರಾಳ ದಿನಗಳ ತೋರು ಬೆರಳಾಗಿ.
ನಿಗೂಢವೆಂದರೆ
ತೆರವುಗೊಳಿಸಿಲ್ಲ
ಹದ್ಹೊಂದು ತನ್ನ ಗೂಡ
ಇಂದಿಗೂ ನಡೆಸಿದೆ ಬಾಳು ಅದರ ಸಂಗಡ
ಪ್ರೇಮಕ್ಕೋ.. ವಿಧಿಯಿಲ್ಲದಕ್ಕೋ.. ಭಂಡತನಕ್ಕೋ…
ಬರೆಯುತ್ತ ವಿನಾಶ ಸೂಚನೆಯ ಪತ್ರ!
*****