ಪ್ರಿಯ ಸಖಿ,
ಕೆಲವರಿಗೆ ತಾವು ಮಹಾನ್ ಬುದ್ಧಿವಂತರು ತಮಗಿಂತಾ ಬುದ್ಧಿವಂತರು ಈ ಪ್ರಪಂಚದಲ್ಲೇ ಇಲ್ಲ. ತಮ್ಮ ಪ್ರಚಂಡ ಬುದ್ಧಿಶಕ್ತಿಯಿಂದ ಎಲ್ಲರನ್ನೂ ಸದಾ ಮೂರ್ಖರನ್ನಾಗಿಸುತ್ತಿರಬಹುದು ಎಂಬ ಗರ್ವ ಇರುತ್ತದೆ ಇಂತಹವರನ್ನು ಕಂಡ ಅಬ್ರಹಾಂ ಲಿಂಕನ್.
You can fool some
of the people all the time
and all the people
some time
But you can not fool
all the people at
all the time
ನೀನು ಕೆಲವರನ್ನು ಸದಾ ಮೂರ್ಖರನ್ನಾಗಿಸಬಲ್ಲೆ ಮತ್ತು ಎಲ್ಲರನ್ನು ಕೆಲಕಾಲ ಮೂರ್ಖರನ್ನಾಗಿಸಬಲ್ಲೆ. ಆದರೆ ಎಲ್ಲರನ್ನೂ ಎಲ್ಲ ಕಾಲಕ್ಕೂ ನೀನು ಮೂರ್ಖರನ್ನಾಗಿಸಲಾರೆ ಎನ್ನುತ್ತಾರೆ.
ಸತ್ಯವಾದ ಮಾತಲ್ಲವೇ ಸಖಿ. ಪೆದ್ದರಾದ ಕೆಲವರನ್ನು ಸದಾ ಮೂರ್ಖರನ್ನಾಗಿಸುವುದು ಕಷ್ಟದ ಕೆಲಸವಲ್ಲ. ಹಾಗೇ ಎಲ್ಲರನ್ನೂ ತನ್ನ ಒಂದು ವಿಷಯದ ಪಾಂಡಿತ್ಯದಿಂದ ಕೆಲಕಾಲ ಮೂರ್ಖರನ್ನಾಗಿಸುವುದು ಸುಲಭ. ಆದರೆ ಎಲ್ಲರನ್ನೂ ಎಲ್ಲ ಕಾಲಕ್ಕೂ ಮೂರ್ಖರನ್ನಾಗಿಸುವ ಮಹಾನ್ ಬುದ್ಧಿವಂತ ಬಹುಶಃ ಈ ಪ್ರಪಂಚದಲ್ಲೇ ಹುಟ್ಟಿಲ್ಲ!
ವ್ಯಕ್ತಿಯೊಬ್ಬ ಎಷ್ಟೇ ಬುದ್ಧಿವಂತನೆನಿಸಿಕೊಂಡಿದ್ದರೂ ಅವನು ಈ ಪ್ರಪಂಚದ ಎಲ್ಲ ವಿಷಯವನ್ನೂ ಅರಿತಿರುವವನೇನಲ್ಲ. ಅವನ ಬುದ್ಧಿಶಕ್ತಿಗೂ ಮಿತಿಯೆಂಬುದೊಂದು ಇದ್ದೇ ಇದೆ. ನಾನೇ ಬುದ್ಧಿವಂತ ನಾನು ಎಲ್ಲರನ್ನೂ ಎಲ್ಲ ಕಾಲಕ್ಕೂ ಮೂರ್ಖರನ್ನಾಗಿಸಬಲ್ಲೆ ಎಂದು ಹೇಳುವವನೇ ನಿಜವಾದ ಮೂರ್ಖ.
ಸಖಿ, ವ್ಯಕ್ತಿ ಬುದ್ಧಿವಂತನಾದಷ್ಟೂ ವಿದ್ಯಾವಂತನಾದಷ್ಟೂ ವಿನಯಶೀಲನಾಗಬೇಕು ಎನ್ನುತ್ತಾರೆ ಹಿರಿಯರು. ಬುದ್ಧಿವಂತ ವ್ಯಕ್ತಿ ಅಹಂಕಾರಿ, ಗರ್ವಿಷ್ಟನಾದಾಗ, ಎದುರಿನವರನ್ನು ಸದಾ ಮೂರ್ಖರನ್ನಾಗಿಸುವುದೇ ತನ್ನ ಗುರಿ ಮಾಡಿಕೊಂಡಾಗ ಅವನು ಸಮಾಜದಲ್ಲಿ ಗೌರವವನ್ನು ಕಳೆದುಕೊಳ್ಳುತ್ತಾನೆ. ಜೊತೆಗೆ ತಾನೇ ಶ್ರೇಷ್ಠ ಎಂಬ ಅಹಂಕಾರದಲ್ಲಿ ಮಿಕ್ಕವರನ್ನು ಕೀಳಾಗಿ ಕಾಣುತ್ತಾ ತಾನೇ ತನ್ನ ಸುತ್ತ ಅಹಂನ ಕೋಟೆಯನ್ನು ಕಟ್ಟಿಕೊಂಡು ಒಂಟಿಯಾಗಿಬಿಡುತ್ತಾನೆ. ಇತರರನ್ನು ಮೂರ್ಖರನ್ನಾಗಿಸುವ ಆಟದಲ್ಲಿ ತಾನೇ ತನ್ನ ಗೋರಿ ತೋಡಿಕೊಳ್ಳುತ್ತಾನೆ. ಇಂತಹ ಬುದ್ಧಿವಂತಿಕೆ ಯಾವ ಕೆಲಸಕ್ಕೆ ನೀನು ಹೇಳು.
*****