ಕಥನ ಗೀತೆ
ಪುಣ್ಣೇವು ತುಂಬೈತೆ ಈ ಊರ ತುಂಬ
ಸಾರೈತೆ ಈ ಊರ ಮನಮನೆಯ ಕಂಬ
ಬೆಟ್ಟದ ಮ್ಯಾಲೊಂದು ನೀರಿನ ದೊಣೆಯೈತೆ
ಅದರ ಸುತ್ತಲಿಗೊಂದು ಸತ್ಯೇದ ಕತೆಯೈತೆ
ಸತ್ಯೇವು ಒಡೆದಂಥ ಮಂದಿಯೇ ಇಲ್ಲವೊ
ಇಂಥ ಮೈಮೇನಂತು ಮತ್ತೆಲ್ಲು ಕಾಣೆವೊ
ಬಂದಾನೊ ರಾಮನು ವನವಾಸಕೆಂದು
ಈ ಊರ ಬೆಟ್ಟದ ಮ್ಯಾಗಡೆಗಂದು
ಹೆಂಡತಿ ಸೀತಮ್ಮ ಜತ್ಯಾಗೆ ಬಂದಾಳೊ
ಈ ಊರ ನೆಲಕೆಲ್ಲ ಸಂತೋಷ ತಂದಾಳೊ
ಗಂಡನ ಜತ್ಯಾಗೆ ಬಾಳೇವು ತಳ್ಯಾಳೊ.
ಬಂದ ದಿವಸವೆ ಇಲ್ಲಿ ಬೆಟ್ಟದ ಮ್ಯಾಗಡೆ
ಬವಣೆಯು ಬಂತಲ್ಲ ಸೀತಮ್ಮ ತಾಯಿಗೆ
ನೀರ ಹೊಯ್ಕಳಕಂತ ಎಲ್ಲೆಲ್ಲು ಹುಡುಕ್ಯಾಳೊ
ಸೀತಮ್ಮ ಬೆಟ್ಟದ ಮ್ಯಾಲೆಲ್ಲ ಹುಡುಕ್ಯಾಳೊ
ಎಲ್ಲಿ ನೋಡಿದರಲ್ಲಿ ನೀರಿಲ್ಲ ಬರಿ ಬಂಡೆ
ಬರಿ ಬಂಡೆ ಮ್ಯಾಲೆಲ್ಲ ಬಿಸಿಲಿನ ಹೆಸರೈತೆ
ಬಂಡೆ ಮ್ಯಾಲಿನ ಹೆಸರು ಕಾಲಿಗೆ ಬಲು ಒತ್ತಿ
ಮಯ್ಯಂಗೆ ಮನಸೂನು ಬೆವರಾಗಿ ಹೋಗೈತೆ.
ಬೆಟ್ಟದ ಕೆಳಗಲ್ಲಿ ಗಂಗೀ ಹಳ್ಳದ ನೀರು
ಅದರ ಮ್ಯಾಲೆ ಊರ ಪುಣ್ಣೇದ ಹೆಸರು
ಇಲ್ಲಿ ಮ್ಯಾಲೆಲ್ಲೂ ನೀರಿಲ್ಲವಾಗೈತೆ
ಸೀತಮ್ಮನಿಗೆ ಬಲು ರೋಸಿಕೆ ಬಂದೈತೆ.
ಬಂದಾಳೊ ಬಂದಾಳೊ ರಾಮಣ್ಣನತಾವ
ತೋಡಿಕೊಂಡಳೊ ಎಲ್ಲ ರೋಸಿಕೆ ನೋವ
ಕೇಳಿದ್ದೆ ತಡ ನಮ್ಮ ರಾಮಣ್ಣ ಬಂದಾನೊ
ರೋಸಿಕೆ ಬ್ಯಾಡೆಂದು ಬಾಣವ ತೆಗೆದಾನೊ
ನೋಡ್ಯಾನೊ ಬಂಡೆಯ, ಬಾಣವ ಬಿಟ್ಟಾನೊ
ಬಿಟ್ಟ ಬಾಣವು ಅಲ್ಲಿ ಬರ್ರಂತ ಹೋಯ್ತು
ಗಟ್ಟಿ ಬಂಡೆಯ ಮೈ ಎರಡಾಗಿ ಹೋಯ್ತು
ಉಕ್ಕಿ ಬಂದಾಳೊ ಗಂಗಮ್ಮ ನಿಂದಾಳೊ ಅಲ್ಲಿ
ತಾಯಿ ಸೀತಮ್ಮ ದೊಣೆಯಂತ ಹೆಸರಾಯಿತಲ್ಲಿ.
ತಾಯಿ ಸೀತಮ್ಮನ ದೊಣೆ ತುಂಬ ದ್ಯಾವರ ನೀರು
ಮುಟ್ಟಬಾರದು ಅದನು ಊರ ಹೊಲೆ ಮಾದಿಗರು
ಮುಟ್ಟಹೋದರೆ ಅಲ್ಲಿ ನೆತ್ತರು ಬಿದ್ದೀತು
ಜವರಾಯ್ನ ಜತ್ಯಾಗೆ ಜೀವ ಹೋದೀತು
ಊರು ಸುಟ್ಟೀತು.
೨
ಊರಿನ ಹೊರಗೊಂದು ಮಾದಿಗರ ಹಟ್ಟಿ
ಮಾದಿಗರ ಹುಡುಗಿ ಹೆಸರು ಪುಟ್ಟಿ
ಹರೆಯಕ್ಕೆ ಬಂದವ್ಳೆ ಹರಿದೈತೆ ಸೀರೆ
ಎಲ್ಡಕ್ಸರ ಕಲಿತ ಚೆನ್ನಚಲುವೆ
ಮಾಸಿದ ಮುಖದಾಗೆ ಮಿಂಚೊಂದು ಬರುತೈತೆ
ಒಳಗಿಳಿದು ಹೊಳೆಹೊಳೆದು ಮನಸನ್ನು ಸುಡುತೈತೆ
ಮುಟ್ಟಬಾರದ್ಯಾಕೆ ಮ್ಯಾಲಿನ ದೊಣೆ ನೀರು?
ಗಂಗೀಹಳ್ಳವು ನಮ್ಮ ಪಾಲಿಗಿಲ್ಲವ್ಯಾಕೆ?
ಮನುಸರಲ್ಲವೆ ನಾವು ಮನುಸರಲ್ಲವೆ?
ಕೆಂಪಲ್ಲವೆ ನಮ್ಮ ರಕುತ ಕೆಂಪಲ್ಲವೆ?
ನರದಾಗೆ ನೆಗೆದವು ಮಿಡಿನಾಗರ ಮಿಂಚು
ಬೆದರಿ ಬಿದ್ದಿತು ಆಗ ‘ಸತ್ಯೇದ’ ಸಂಚು
ಹೊಂಟಾಳೊ ಪುಟ್ಟಕ್ಕ ದೊಣೆ ನೀರ ಬೆಟ್ಟಕ್ಕೆ
ಕಟ್ಟುಕಟ್ಟಳೆಯನ್ನು ಸಿಟ್ಟಲ್ಲಿ ಸುಟ್ಟಾಳೊ
ಹೊಸ ಆಸೆ ಹುಟ್ಟಲ್ಲಿ ಹೆಜ್ಜೆ ಇಟ್ಟಾಳೊ
ಮೆಟ್ಟಿಲ ಮೆಟ್ಯಾಳೋ
ಬೆಟ್ಟದ ಮೆಟ್ಟಿಲು ಮೆಟ್ಯಾಳೊ.
ಮಾದಿಗರ ಹುಡುಗಿ ಪುಟ್ಟಕ್ಕೆ ಮುಟ್ಟಿ
ಮೆಟ್ಟಲಿಗು ಬಂದೈತೆ ಸಿಟ್ಟು
ಕಾದ ಕೆಂಡವದಾಗಿ ಕಾಲು ಸುಟ್ಟೈತೆ
ಹತ್ತಿಕ್ಕಿ ಹೊರಡುವ ಆಸೆ ಅರಳೈತೆ.
ಸೀತಮ್ಮನ ದೊಣೆ ಸನಿಯಕ್ಕೆ ಬಂದಾಳೊ
ಆಸೆಗೆ ಅಲೆ ಬಡಿದು ನಡುಗಿ ನಿಂದಾಳೊ
ಕ್ಷಣದಾಗೆ ಕಲಿಯಾಗಿ ನಡುಕ ನಿಂತು
ಉಸಿರೋದ ಮನಸಿಗೆ ಬದುಕ ಕೊಟ್ಟಾಳೊ
“ಮನುಸರ ಬಾಳ್ಳೇವು ನಮಗಂತು ಇಲ್ಲ
ಹೆಣಬಿದ್ದರೇನಂತೆ, ಹೆಜ್ಜೆ ಹಿಂದಿಕ್ಕಲ್ಲ”
ಕಾಲು ಬಂದಿತು
ದೊಣೆಯ ಬಳಿಗೆ
ನೋಟ ನೆಟ್ಟಿತು
ನೀರ ಕಡೆಗೆ
ನಿಮಿ ನಿಮಿರುವ ಮೈ
ನಡುನಡುಗುವ ಕೈ
ಅದೊ ಹೊರಟಿತು
ಇದೊ ಬಂದಿಕು
ಸ್ಥಿರವಾಯಿತು ಸೈ
ಹೋರಾಡುತ ಭಯ ಕೊಂದಳು
ಕೈ ಇಟ್ಟಳು, ಖುಷಿಪಟ್ಟಳು
ನೀರೆರಚುತ ಪುಟ್ಟಿ
ನಮ್ಮ ಮಾದಿಗರ ಪುಟ್ಟಿ
ನೆತ್ತರೇನು ಬೀಳಲಿಲ್ಲ
ಜೀವವೆಲ್ಲೂ ಹೋಗಲಿಲ್ಲ
ಪುಟ್ಟಿ ಮನಸು ಹಕ್ಕಿಯಾಗಿ
ಹಾರಿ ಊರ ಸೇರಿತು
ನಿಂತ ನೆಲಕೆ ನೆಣವ ತುಂಬಿ
ಬೆಳ್ಳಿ ಚುಕ್ಕಿಯಾಯಿತು.
೩
ಹಿಂದಿನಿಂದ ಬಂದ ಮಾತು
“ಗಂಗಿ ಹಳ್ಳ ದ್ಯಾವರದು
ಹೊಲೆ ಮಾದಿಗ ಹಟ್ಟಿಗಿಲ್ಲ
ಊರ ಜನರ ಸೊತ್ತದು.
ಶಿವನ ಜಟೆಯ ಗಂಗೆ ತಾಯಿ
ಹರಿದು ಬಂದಳಿಲ್ಲಿಗೆ
ಪುಣ್ಯದೂರ ಭೂಮಿಗೆ”
‘ಗಂಗಿ ಹಳ್ಳ ಯಾಕೆ ಇಲ್ಲ?’
ಪುಟ್ಟಿ ಪ್ರಶ್ನೆಯಾದಳು
ನೋಡೆ ಬಿಡುವೆನೆಂದು ಹೋಗಿ
ಮುಳುಗಿ ಎದ್ದಳು.
ಮರದ ಮರೆಯ
ಕಣ್ಣ ಸೆರೆಯ
ಊರ ಹಿರಿಯ ಕಂಡನು
ಊರ ಗಣ್ಯ
ಅವನ ಪುಣ್ಯ
ಪುಟ್ಟಿ ಸಿಕ್ಕಿಬಿದ್ದಳು
ಸದ್ದ ಕೇಳಿ
ಶುದ್ಧನೆಂದು
ಬೆಚ್ಚಿ ಬೆದರಿ ನಿಂತಳು
ಅವನು ಬಂದು
ಇವಳು ನಡುಗಿ
ಗಂಗಿ ಹಳ್ಳ ಬೆವರಿತು.
ಕಣ್ಣಿನಲ್ಲಿ ಅಳೆದನಾಗ ಊರ ಹಿರಿಯ ಮೈಯ
“ಏನು ಬಂದೆ ಇಲ್ಲಿ? ನಿನ್ನದ್ಯಾವ ನ್ಯಾಯ?
ನನ್ನ ಬಲೆಗೆ ಬಿದ್ದರೇನೆ ಸತ್ಯಶರಣೆ ನೀನು
ಇಲ್ಲವೆಂದು ಚಾವಡಿಗೆ ಬಲಿಯಾಗುವೆಯೇನು?”
ಮಣ್ಣನೆಲ್ಲ ಮುಕ್ಕಿ ತಿಂದು
ಮೇಲಕೆದ್ದ ಚಾವಡಿ
ಹಳೆಯ ಕಂಬ ಮೌಲ್ಯಬಿಂಬ
ಇತಿಹಾಸದ ರಾಡಿ
ಊರ ನಡುವೆ ನಡುಗಿಸುವ
ಚಿತ್ರ ಎದುರು ಬಂದಿತು.
ಹುಟ್ಟುತಿರುವ ಸಿಟ್ಟಿನಲ್ಲೆ
ಭಯದ ಬೀಜವಿದ್ದಿತು
ಭಯವ ಮುಚ್ಚಿ ರೊಚ್ಚು ಎದ್ದು
ಕೆನ್ನೆಗೊಂದು ರಾಚಿತು.
೪
ಸುದ್ದಿ ತಿಳಿದು ಎದ್ದು ಬಂತು
ನಿದ್ದೆಯೂರ ಸಂದಣಿ
“ಸಂಪ್ರದಾಯ ಸುಟ್ಟ ರಂಡೆ
ಊರ ಕೇಡು ಲೌಡಿ ಮುಂಡೆ
ಗಂಗಿಹಳ್ಳ ಮೀಯಲಿಕ್ಕೆ
ಇವಳಾದಳ ರಾಣಿ?”
ಊರ ತುಂಬ ಬೆಂಕಿ ಬಿಸಿಲು
ಬಾಯಿ ಬಂತು ಬೀದಿಗೆ
ಕಟ್ಟುನಿಟ್ಟು ಎಲ್ಲ ಬಿಟ್ಟು
ಮಸೆಯುತಿತ್ತು ನಾಲಗೆ.
ಕಂಬ ಕೆರಳಿ ಮೀಸೆ ತಿರುವಿ
ಚಾಟಿಯಾಯ್ತು ಚಾರಡಿ
ಕೋಟಿ ಕಣ್ಣು ಅತ್ತರೂನು
ಕುರುಡು ಕಲ್ಲು ಚಾವಡಿ.
ಚಾಟಿ ಚಾವಡಿ ನ್ಯಾಯದಂಗಡಿ
ಲೆಕ್ಕ ಕೇಳಿತು ಬಾರಿಸಿ
ರಕ್ತ ಬಿದ್ದರೂ ಎದ್ದು ಒದ್ದರು
ಬಿದ್ದ ಪುಟ್ಟಿಯ ಏಳಿಸಿ
ಒಬ್ಬರಾದರು ಹೇಳಲಿಲ್ಲ
‘ಸಾಕು ಏಟು ನಿಲ್ಲಿಸಿ’.
ಪಾಪಿಯೆನಿಸಿ ಪುಟ್ಟಿ ಅಲ್ಲಿ ಪ್ರಾಣ ಬಿಟ್ಟಳು
ಮನುಜ ಬಾಳು ಬ್ಯಾಡವೆಂದು ಜೀವ ತೆತ್ತಳು.
ಚಿಮ್ಮಿ ನಗಲು ತುಡಿಯುತ್ತಿದ್ದ ಚಿಲುಮೆ ಬತ್ತಿತು
ಪುಣ್ಯದೂರು ಜೀವನುಂಗಿ ಗಣ್ಯವಾಯಿತು!
೫
ಸುತ್ತಮುತ್ತಲಿಗೆಲ್ಲ ಹೆಸರಿನ ಊರು
‘ತಾಯಿ ಸೀತಮ್ಮದೊಣೆ’ ಗಂಗೀಹಳ್ಳದ ಊರು
ಊರ ಬೀದ್ಯಾಗೆಲ್ಲ ಚಾವಡಿ ನೆರಳು
ಹಿಂಡಿ ಹಿಪ್ಪೆ ಮಾಡೋ ಭೂತದ ಬೆರಳು.
ಗಂಗೀಹಳ್ಳವದೇನು! ಸೀತಮ್ಮದೊಣೆಯೇನು!
ಬಿತ್ತಿ ಬೆಳೆದಂಥ ಈ ಪುಣ್ಣೇದ ಕತೆಯೇನು!
ಹದ್ದು ಹಾರಾಡೊ ಊರ ಮನೆಮನೆಯ ಜಂತ್ಯಾಗೆ
ಲೊಚಗುಟ್ಟೊ ಮನಸಿನ ಕತೆಯೇನು ವೆತೆಯೇನು!
ಸತ್ತ ಮನಸಿನ ಈ ಬಿರುಗಣ್ಣ ಚಾವಡಿ
ಸಾವಿನ ತತ್ತಿಯ ದಿನವೂ ಇಟ್ಟೀತು
ಗಂಗೀಹಳ್ಳದ ನೀರು ಪುಣ್ಣೇದ ಹೆಸರಲ್ಲಿ
ಜೀವಾನೆ ಹೊಡಕೊಂಡು ನಗ್ತಾನೆ ಹೋಯಿತು!
ಮನುಸರ ಕೊಲ್ಲುವ ನೆತ್ತರ ಕುಡಿಯುವ
ರಕ್ಕಸ ಚಾವಡಿ ನಾಶಣವಾಗಲಿ
ಊರು ಹಟ್ಟೀಲೆಲ್ಲ ಪುಟ್ಟಕ್ಕ ಹುಟ್ಟಲಿ
ಊರಂದೂರೆ ಆಗ ಹೊಸದಾಗಿ ನಿಲ್ಲಲಿ.
*****