ಮುಂಜಾನೆ ಮೊಗ್ಗಾಗಿ
ಬಳ್ಳಿಯಲಿ ಒಡಮೂಡಿ
ಮಂದಹಾಸ ಬೀರುತಲಿ
ಅರಳಿ ನಗುವ ಸುಂದರ
ಪುಷ್ಪಗಳೆ..
ಪರಿಮಳವ ಬೀರಿ
ನಗೆಯ ಚೆಲ್ಲುತಲಿ
ಜನ ಮನವ ಆಕರ್ಷಿಸಿ
ಉದ್ಯಾನದಿ ಬೆರೆಯುವಂತೆ
ಮಾಡಿದ ಪುಷ್ಪಗಳೆ
ದೇವರಿಗೆ ಮುಡುಪಾಗಿ
ಪೂಜೆಯಲಿ ಒಂದಾಗಿ
ಭಕ್ತರ ಪಾಲಿಗೆ ಬೆಳಕಾಗಿ
ದೇವರ ಮುಡಿಯನೇರಿ
ಧನ್ಯತೆ ಪಡೆದ ಪುಷ್ಪಗಳೆ
ಬಳ್ಳಿಯಂತೆ ಬಳುಕುವ
ನಾರಿಯರ ನೀಳ ಕೇಶದ
ಮುಡಿಯ ಸೇರಿ ನಗುತ್ತಾ
ಮಂಗಳೆಯರ ಅಂದ ಹೆಚ್ಚಿಸಿದ
ಮಂದಾರ ಪುಷ್ಪಗಳೆ
ಬಾಡಿ ಹೋಗುವ ಮುನ್ನ
ಸಾವ ಮನೆ ಸೇರಿ
ಶಾಂತತೆಯ ಮೆರೆದು
ಮಡಿದ ದೇಹದ ಜೊತೆಗೆ
ಮರೆಯಾಗುವ ಪುಷ್ಪಗಳೆ
ಒಂದೇ ದಿನದಲ್ಲಿ ಅರಳಿ
ಬಾಡಿ ಬಿದ್ದು ಹೋಗುವ ನೀನು
ಅದೆಷ್ಟೋ ಜನೋಪಯೋಗಿ
ನನಗೂ ಕರುಣಿಸು ನಿನ್ನ ಸ್ವಭಾವ
ನಿನ್ನಂತೆ ಸುಮಧುರವಾಗಿ ಬಾಳುವೆ
*****