ಯುಗದ ಆದಿ ಯುಗಾದಿ
ಭುವಿಗೆ ಇನ್ನು ಹೊಸ ಕಾಂತಿ
ಹಸಿರ ಹೊತ್ತ ಗಿಡಮರಗಳು
ಹಾತೊರೆದು ನಿಂತಿವೆ
ನವ ಯುಗದ ಸ್ವಾಗತಕೆ
ಕೋಗಿಲೆಗಳ ಇಂಚರದಿ
ಮಂಗಳಕರ ನಾದದಲಿ
ಭೂರಮೆಯು ಕೈ ಬೀಸಿ
ಕರೆಯುವಳು ನಮ್ಮನ್ನೆಲ್ಲ
ಹೊಸ ವರುಷದ ಹೊನಲಿಗೆ
ಚೈತ್ರದಲಿ ಚಿಗುರೊಡೆದು
ಹೊಸ ಜನ್ಮವ ತಾ ತಳೆದು
ಹಸಿರಲ್ಲಿ ಮೊಗ್ಗಾಗಿ
ಮೊಗ್ಗುಗಳೆಲ್ಲ ಹೂವಾಗಿ
ಮಡಿಲಲ್ಲಿ ಫಲವ ಹೊತ್ತಿಹಳು
ಹೆಣ್ಣೊಂದು ಬಸಿರಾಗಿ
ಸೀಮಂತಕೆ ಅಣಿಯಾದಂತೆ
ಹಸಿರೆಲ್ಲ ಬಸಿರಾಗಿ ನಿಂತು
ಸೀಮಂತ ತನಗೂ ಬೇಕೆಂದಿದೆ
ಈ ಯುಗಾದಿ ದಿನದಂದೇ
ಸಹೋದರರೆಲ್ಲ ಸೇರಬನ್ನಿ
ಸಹೋದರಿಯರನ್ನ ಜೊತೆಗೆ ಕರೆತನ್ನಿ
ಜಾತಿ, ಧರ್ಮ, ಭಾಷೆಗಳ ಭೇದ ತೊರೆದು
ಮಾಡೋಣ ಸೀಮಂತವ ನಾವೆಲ್ಲ ಇಂದು
ಫಲ ಹೊತ್ತ ಹಸಿರ ಸಿರಿ ದೇವಿಗೆ
*****