ಪ್ರಿಯ ಸಖಿ,
ಕೆಲವರಿಗೆ ಅನ್ಯರ ಖಾಸಗಿ ಬದುಕಿನ ಒಳ-ಹೊರಗನ್ನು ಕೆದಕುವುದೆಂದರೆ ಬಹುಪ್ರಿಯ. ತಮ್ಮ ಬದುಕಿನ ಬಟ್ಟೆ ಚಿಂದಿಚಿಂದಿಯಾಗಿದ್ದರೂ ಅನ್ಯರ ಬದುಕಿನ ಬಟ್ಟೆಯ ಸಣ್ಣ ತೂತಿನಲ್ಲಿ ಕೈಯಾಡಿಸುವುದು. ಅದನ್ನು ಮತ್ತಷ್ಟು ಹರಿಯುವುದು ಇಂತಹಾ ಕೀಳು ಅಭಿರುಚಿ. ಇದನ್ನು ಕಂಡ ಕವಿ ಎನ್. ಎಸ್. ಲಕ್ಷ್ಮೀನಾರಾಯಣಭಟ್ಟರು ತಮ್ಮ ‘ನಿಂತ ನೀರ ಕಲಕಬೇಡಿ” ಎಂಬ ಕವನದಲ್ಲಿ
ನಿಂತ ನೀರ ಕಲಕಬೇಡಿ ಕಲ್ಲುಗಳೇ
ಹೂದಳಗಳ ಇರಿಯಬೇಡಿ ಮುಳ್ಳುಗಳೇ
ಏನಿದೆಯೋ ನೋವು ಅದಕೆ ತಮ್ಮದೇ
ಬಾಳಲು ಬಿಡಿ ತಮ್ಮಷ್ಟಕೆ ಸುಮ್ಮನೇ
ಎನ್ನುತ್ತಾರೆ. ಎಷ್ಟೊಂದು ಮಾರ್ಮಿಕವಾದ ಮಾತಲ್ಲವೇ ಸಖಿ? ಪ್ರತಿಯೊಬ್ಬ ವ್ಯಕ್ತಿಗೂ ಅವನದೇ ಆದ ಖಾಸಗಿ ಬದುಕೊಂದು ಇದ್ದೇ ಇರುತ್ತದೆ. ಅಲ್ಲಿ ನೋವು,
ದುಃಖ, ದುಮ್ಮಾನ, ಹೇಳಲಾಗದ ಅನೇಕ ಭಾವಗಳು ಮಡುಗಟ್ಟಿ ನಿಂತಿರುತ್ತವೆ. ಅದನ್ನು ಕಲಕಲು, ಕೆದಕಲು, ಯಾರಿಗೂ ಅಧಿಕಾರ ಇರುವುದಿಲ್ಲ. ಆದರೆ ಕೆಲವು ಅಧಿಕಪ್ರಸಂಗಿಗಳು ಅನ್ಯರ ಖಾಸಗಿ ಬದುಕಿನಲ್ಲಿ ಮೂಗು ತೂರಿಸಿ ಅವರಿಗೆ ಹಿಂಸೆ ನೀಡಿ ತಾವು ವಿಚಿತ್ರ ಸುಖವನ್ನು ಅನುಭವಿಸುತ್ತಾರೆ. ಕವನದ ಕೊನೆಯಲ್ಲಿ ಇಂತಹವರಿಗೆ ಕವಿ
ಯಾವ ಜೀವ ಯಾವ ನೋವಿಗೀಡೋ
ಯಾವ ಭಾವ ನೆಮ್ಮಿ ಅದರ ಪಾಡೋ
ಮಾಡಲು ಬಿಡಿ ತನ್ನ ಯಾತ್ರೆ ತಾನು
ನೀಡಲು ಬಿಡಿ ತನ್ನೊಳಗಿನ ಜೇನು
ಎಂದು ಹೇಳುತ್ತಾರೆ. ಯಾವ ಜೀವಿಗೆ ಅವನ ಅಂತರಾಳದಲ್ಲಿ ಯಾವ ನೋವಿದೆಯೋ? ಯಾವ ಭಾರ್ವೊತ್ಕರ್ಷದಲ್ಲಿ ಅವನು ಬೇಯುತ್ತಿದ್ದಾನೋ ಅವನ ನೋವನ್ನು ಅವನೇ ಅನುಭವಿಸಬೇಕು. ಅದನ್ನು ಕೆದಕಿ ಮತ್ತಷ್ಟು ನೋವು ಕೊಡುವುದರ ಬದಲು ಅವನು ಏಕಾಂತದಲ್ಲಿ ತಾನೇ ನೋವನನುಭವಿಸಿ ಅದರಲ್ಲೇ ಮಾಗಿ ಪರಿಪಕ್ವವಾಗಿ
ನೋವೆಲ್ಲವ ನುಂಗಿ ಸಿಹಿಯಾದ ಜೇನನ್ನು ಕೊಡುವವರೆಗೂ ಕಾಯೋಣ ಎನ್ನುತ್ತಾರೆ ಕವಿ. ನಿಜಕ್ಕೂ ಇದೇ ಸರಿಯಾದ ಮಾರ್ಗವೂ ಅಲ್ಲವೇ ಸಖಿ?
*****
ಭಾವಗೀತೆಯ ಭಾವ ಅರ್ಥ ತುಂಬಾ ಸೊಗಸಾಗಿದೆ. ಪ್ರತಿಯೊಂದು ಶಬ್ದ ಕೂಡ ಅರ್ಥ ಕೊಡುತ್ತ ಸಾಗುತ್ತೆ. ಹಾಡತ ಇರೋಣ ಅನಿಸುತ್ತೆ. ಲಕ್ಷ್ಮೀನಾರಾಯಣ ಭಟ್ಟರಿಗೆ ಅನಂತ ಧನ್ಯವಾದಗಳು.🙏🙏🙏