ಪ್ರಿಯ ಸಖಿ,
ಗಳಿಗೆ ಗಳಿಗೆಗೂ ಹೊಸ ಹೊಸರೀತಿಗೆ
ಈ ಜಗವೋಡುತಿದೆ
ಹಳತ ನೋಡಿ ತಾ ಕಿಲಕಿಲ ನಗುತಲಿ
ಓ ಜಗವೋಡುತಿದೆ
ಕವಿ ಪುತಿನ ಅವರ ‘ಹೊಸಹಾಡು’ ಕವನದ ಈ ಸಾಲುಗಳನ್ನು ಕೇಳಿದ್ದೀಯಲ್ಲವೇ? ಬದುಕು ನಿಂತ ನೀರಲ್ಲ ಅದು ನಿರಂತರ ಹೊಸತರ ಅನ್ವೇಷಕ. ರೀತಿನೀತಿಗಳಿಗೆ ಜಗತ್ತು ಒಡ್ಡಿಕೊಳ್ಳುತ್ತಾ ಸಾಗುತ್ತಿದೆ. ಜೊತೆಗೇ ಹಳತೆಲ್ಲವನ್ನೂ ಗೇಲಿಮಾಡಿ ನಗುತ್ತಲೂ ಇರುತ್ತದೆ. ಕವಿ ಇಲ್ಲಿ ಹಾಗಿದ್ದರೆ ಹಳತೆಲ್ಲವೂ ವ್ಯರ್ಥವೇ? ಹೊಸತು ಯಾವುದೇ ಆದರೂ ಸರಿಯೇ? ಅದರ ಪೂರ್ವಪರ ವಿವೇಚಿಸದೇ ಅದನ್ನು ಅಪ್ಪಿಕೊಳ್ಳುವುದು ಸರಿಯೇ? ಎಂದು ಚಿಂತಿಸುತ್ತಾರೆ.
ಹೊಸತರಲ್ಲಿ ಗುಣಾವಗುಣಗಳಿರುವಂತೆ ಹಳತರಲ್ಲಿ ಕೂಡ ಗುಣಾವಗುಣಗಳಿವೆ. ಹೊಸತು-ಹಳತು ಎರಡರ ಧನಾತ್ಮಕ ಗುಣಗಳನ್ನೂ ಹೀರಿಕೊಂಡು ನಡೆದಾಗ ಮಾತ್ರ ಜಗತ್ತು ಪ್ರಗತಿಯನ್ನು ಸಾಧಿಸುತ್ತದೆ. ಷೋಪೆನ್ ಹಾರ್ ಎಂಬ ಚಿಂತಕ ‘ಹೊಸದು ಬರುವುದು. ಯಾವಾಗಲೂ ಹಳೆಯದರ ಆಧಾರದ ಮೇಲೆಯೇ’ ಎನ್ನುತ್ತಾರೆ. ವಿವೇಚನೆಯಿಲ್ಲದೇ, ಹೂಸತೆನ್ನುತ್ತಾ ವಿಜ್ಞಾನ, ತಂತ್ರಜ್ಞಾನದ ಹೆಸರಿನಲ್ಲಿ ಪ್ರಗತಿಯನ್ನು ಸಾಧಿಸಿದ್ದೇನೆಂದುಕೊಳ್ಳುತ್ತಾ ತನ್ನ ವಿನಾಶವನ್ನು ತಾನೇ ತೋಡಿಕೊಂಡರೆ ಅದು ಮೂರ್ಖತನವಲ್ಲವೇ? ಕವನದ ಕೊನೆಯಲಿ ಕವಿ
ಗಳಿಗೆ ಗಳಿಗೆಗೂ ಹೊಸ ಹೊಸ ರೀತಿಗೆ
ಈ ಜಗವೋಡುತಿದೆ
ಪ್ರಗತಿಯ ಹಂತಕೊ?
ಪ್ರಣಯ ದುರಂತಕೋ?
ಎಂದು ಪ್ರಶ್ನಿಸುತ್ತಾರೆ. ಹೊಸತೆಲ್ಲವನ್ನೂ ವಿವೇಚನೆಯಿಲ್ಲದೇ ಒಪ್ಪಿಕೊಂಡು ನಡೆದಾಗ ಅದು ನಮ್ಮನ್ನು ಪ್ರಳಯದ ಅಂಚಿಗೂ ತಂದು ನಿಲ್ಲಿಸಬಹುದಲ್ಲವೇ?
ಪ್ರಿಯ ಸಖಿ, ಹೊಸತೇ ಆಗಲಿ, ಹಳತೇ ಆಗಲಿ ಎಲ್ಲವನ್ನೂ ವಿವೇಚನೆಯ ಮೂಸೆಯಲ್ಲಿ ಬೇಯಿಸಿ ಉತ್ತಮವಾದುದನ್ನು ತೆಗೆದುಕೊಂಡು ಕೆಟ್ಟದನ್ನು ಬಿಟ್ಟಾಗ ಮಾತ್ರ ಪ್ರಗತಿ ಸಾಧ್ಯ. ಕಣ್ಣುಮುಚ್ಚಿ ಎಲ್ಲವನ್ನೂ ಸ್ವೀಕರಿಸಿದಲ್ಲಿ ಖಂಡಿತಾ ಪ್ರಳಯವೇ! ನಮ್ಮ ಕವಿವಾಣಿಯೇ ಹೇಳಿಲ್ಲವೆ? ‘ಹಳೇಬೇರು ಹೊಸ ಚಿಗುರು ಕೂಡಿರಲು ಮರ ಸೊಗಸು’ ಎಂದು ಬರಿಯ ಹಳತಿನಿಂದ ಅಥವಾ ಬರಿಯ ಹೊಸತಿನಿಂದ ವಿನಾಶ ಖಿಂಡಿತಾ ಎರಡರ ಸಮನ್ವಯವೇ ನಿಜವಾದ ಪ್ರಗತಿ ನೀನೇನೆನ್ನುತ್ತಿ ಸಖಿ?
*****