ಕತೆಗಾರರು ಯಶಸ್ವಿ ಪತ್ರಿಕಾ ಲೇಖಕರಾಗರೆಂದು ಯಾರೋ ನುಡಿದ ನೆನಪಿದೆ. ಅದರಲ್ಲಿ ಸತ್ಯವಿದ್ದಿರಬೇಕು.
ನಾನು ಕತೆಗಾರನಂತೆ. ಹಾಗೆಂದು ಜನರು ಹೇಳುವರು. ಜನರು ಒಗ್ಗಟ್ಟಾಗಿ ಇಟ್ಟ ಹೆಸರು, ತೊಟ್ಟಿಲಿನಲ್ಲಿ ತಂದೆ-ತಾಯ್ಗಳು ಇರಿಸಿದ ಹೆಸರಿಗಿಂತ ಬಲವುಳ್ಳುದು. “ಜನಾಭಿಪ್ರಾಯ” ವೆನ್ನುತ್ತಲೇ- ನೀವದನ್ನು ವಿರೋಧಿಸಲಾರಿರಿ.
ಕತೆಗಾರನಾಗಿಯೂ ನಾನು “ಜ್ಞಾನಸಿಂಧು” ಪತ್ರಿಕಾಲಯದಲ್ಲಿ ಪರಿಚಯವುಳ್ಳವನು. “ಸುಬಾವ್, ಐ. ಸಿ. ಎಸ್. ಇವರ ವಿವಾಹದ ಕುರಿತು ನಿಮಗೆ ತಿಳಿದುದೆಲ್ಲವನ್ನೂ ವಿವರಿಸಿ, ನಮ್ಮ ಪತ್ರಿಕೆಗೊಂದು ಬಾತ್ಮಿ ಬರೆದು ಬಿಡಿ!” ಎಂದು ಸಂಪಾದಕರು ವಿನಂತಿಸಿದರು.
ಲೇಖನಿಯನ್ನೆ, ‘ಕರಿಮಣಿ’ ಎಂಬ ನೂತನ ಶಾಯಿ ಕುಪ್ಪಿಯಲ್ಲಿ ಮುಳುಗಿಸಿ, ಬರೆಯಲಾರಂಭಿಸಿದೆ.
” ಎಸ್ , ಇವರ ಮುಖವು ದುಷ್ಯಂತನ ತೇಜವನ್ನು ಪಡೆದು, ಆ ಅಭಿನವ ಶಾಕುಂತಲೆಯ ಪೂರ್ಣಿಮಾಚಂದ್ರ ಸದೃಶವಾದ..”
“ಕ್ಷಮಿಸಿರಿ; ನೀವೂ ಕೇಳುವ ಆ ಅಭಿನವ ಶಕುಂತಲೆ (ವಧು) ಯು ಮುಖಕ್ಕೆ ನೀಲಗಿರಿ ಅಥವಾ ಬಾಬಾಬುಡನ್ ಗಿರಿ-ಅಥವಾ ಇನ್ಯಾವದಾದರೂ ಗಿರಿಯ ಸ್ನೋವನ್ನು ತಿಕ್ಕಿರಬಹುದು. ಆಕೆಯ ಮುಖದ ಮೇಲೆ ಕಲೆಗಳಿರಲಿಲ್ಲ!” ಎಂದರು ಸಂಪಾದಕರು.
‘ಪೂರ್ಣಿಮಾಚಂದ್ರ’ನೆಂಬುದನ್ನು ಅಳಿಸಿದೆ. ಆ ಮೇಲೆ ಕೆನೆಹಾಲಿನಂತೆ ಶುಭ್ರವಾದ ಮೊಗಕ್ಕೆದುರಾಗಿ ಆ ಮಂಟಪದಲ್ಲಿ ಶೋಭಿಸುತ್ತಿತ್ತು. ಶೋಕಭಾರದಿಂದ, ಕಂದಿದ ತಾವರೆಯಂತ, ವಧುವಿನ ಮಾತೃವು, ಕಣ್ವನಂತೆ ತೇಜಪುಂಜವಾದ ಶರೀರಕಾಂತಿಯುಳ್ಳ…” ಈ ರೀತಿಯಾಗಿ ಬರೆದೆ. ಮುಕ್ಕಾಲು ತಾಂವು ಬರೆದೆ. ಬರೆದು ಮುಗಿಸಬೇಕಾದರೆ ಏಳು ಕಾಗದಗಳಲ್ಲಿ ತಿದ್ದಿದೆ. ಎಂಟನೆ ಪ್ರತಿಯನ್ನು ಶುದ್ಧವಾಗಿ ಬರೆದು, ಸಂಪಾದಕರ ಕೈಗೆ ಒಪ್ಪಿಸಿದೆ. ಪತ್ರಿಕಾ ವ್ಯವಸಾಯವು ನಿಜವಾಗಿಯೂ ನಾವೆಣಿಸಿದಷ್ಟು ಸುಲಭವಲ್ಲ.
ಸಂಪಾದಕರು ಅದನ್ನು ಕೈಗೆ ತೆಗೆದುಕೊಂಡು, ತಮ್ಮ ದೃಷ್ಟಿ ಹೊರಳಿಸಿ, ನಗುತ್ತ ನನಗೆ ವಿದಾಯವಿತ್ತರು. ಬರೆಹಗಾರರನ್ನು ಪರೀಕ್ಷಿಸುವುದೇ ಈ ಸಂಪಾದಕರುಗಳ ದುರ್ಬುದ್ಧಿ -ನಾನು ಮಾತ್ರ ಜಯಶೀಲನಾದೆನಲ್ಲವೇ- ಎಂಬ ಸಂತೋಷದಿಂದ ತೆರಳಿದೆ.
ತಾ. ೧೭-೩-೧೯೩೪ರ ‘ಜ್ಞಾನಸಿಂಧು’ವನ್ನು ತೆರೆದು ನೋಡಿದಾಗ, ನಾನು ಬರೆದುಕೊಟ್ಟ ಮುಕ್ಕಾಲು ತಾಂವು ಬರಹವು ಐದು ಪಂಕ್ತಿಗಳಲ್ಲಿ ಈ ಕೆಳಗಿನಂತೆ ರೂಪಾಂತರ ಹೊಂದಿ ಪ್ರಕಟವಾಗಿತ್ತು:-
“ಐ. ಸಿ. ಎಸ್. ದುಷ್ಯಂತತೇಜ, ಇವರು ಅಭಿನವ ಶಾಕುಂತಲೆ ಎಂಬ ಕನೆಹಾಲಿನವಳನ್ನು ಶೇಕದಾರ್ ಕಂದಿತಾವರ್ ಮತ್ತು ಕಣ್ವನಾಥ ಎಂಬವರ ಸಮಕ್ಷಮ, ಇದೇ ಕಳೆದ ತಾ. ೧೪ರಲ್ಲಿ ವಿವಾಹವಾದರು. ನಮ್ಮ ಜಿಲ್ಲೆಯಲ್ಲಿ ನಡೆದ ಈ ಏಳನೆಯ ಅಂತರ್ಜಾತೀಯ ವಿವಾಹವು ಇತರರೆಲ್ಲರಿಗೆ ಆದರ್ಶವಗಿದೆ!”
ಇದು ಯಾರ ಕೈಯಾಗಿರಬಹುದು?-ಯಾರು ಒಲ್ಲ! ಕಾಣದ ಕೈ!
“ಕತೆಗಾರರು ಪತ್ರಿಕಾವ್ಯವಸಾಯವನ್ನು ತಿಳಿಯದುದಷ್ಟೆ – ಪತ್ರಿಕಾ ವ್ಯವಸಾಯಿಗಳು ಕಥಾಲೇಖನವನ್ನು ಅರಿಯರು. ದಯಮಾಡಿ ನೀವು ಕಳೆದ ಸಂಚಿಕೆಯಲ್ಲಿ ಪ್ರಕಟಸಿದ ಆ ಭಯಂಕರ ವಾರ್ತೆಯನ್ನು ತಿದ್ದು ಬಿಡಿರಿ” ಎಂದು ಸಂಪಾದಕರಿಗೆ ಪತ್ರ ಬರೆದರೆ, ಉತ್ತರವೂ ಇಲ್ಲ, ತಿದ್ದುಪಡಿ ಪ್ರಕಟವಾದುದೂ ಇಲ್ಲ.
ಬಹುಶಃ “ಸಂಪಾದಕರ ತೀರ್ಮಾನವೇ ಕೊನೆಯದು.”
ಆಶ್ಚರ್ಯವೆಂದರೆ-ದುಷ್ಯಂತ ತೇಜ ಐ. ಸಿ. ಎಸ್. ಎಂಬವನೊಬ್ಬನು ಅಭಿನವ ಶಕುಂತಲೆ ನಾಮಾಂಕಿತ ಕೆನೆ ಹಾಲಿ ಎಂಬ ಗ್ರಾಮಸ್ಥಳನ್ನು ಶೇಕದಾರ್ ಕಂದಿತಾವರ್ ಮತ್ತು ಕಣ್ವನಾಥ ಎಂಬ ಹೆಸರಿನ ಮಹನೀಯರ ಸಮಕ್ಷಮ ವಿವಾಹವಾದುದು ನಿಜವೆಂದು,- ನಮೂರಿನ ಜನರೆಲ್ಲರೂ ಇಂದಿಗೂ ನಂಬಿರುವರು!
*****