ಪ್ರಿಯ ಸಖಿ,
ಆಸೆಯೇ ದುಃಖಕ್ಕೆ ಮೂಲ ಎಂದ ಗೌತಮ ಬುದ್ಧ. ಹಾಗೆಂದು ಆಸೆಗಳೇ ಇಲ್ಲದ ಸ್ಥಿತಿಗೆ ತಲುಪಿದರೆ ಅದು ಮನುಜಕುಲದ ಅವಸಾನವೇ ಸರಿ. ಮನುಜನ ಉಳಿವಿಗೆ ಆಸೆಯೆಂಬುದು ಇರಲೇಬೇಕು. ಎಲ್ಲವೂ ಬೇಕು ಎನ್ನುವ ಅತಿ ಆಸೆ ಹಾಗೇ ಏನೂ ಬೇಡ ಎಂಬ ನಿರಾಕರಣೆಯ ಮಧ್ಯೆ ಒಂದು ಗೆರೆ ಎಳೆದು ಬದುಕನ್ನು ಸಹ್ಯವಾಗಿಸಿಕೊಂಡಾಗ ಮಾತ್ರ ಮನುಷ್ಯ ಸಂತತಿ ಈ ಭೂಮಿಯಲ್ಲಿ ಕೆಲಕಾಲವಾದರೂ ನೆಮ್ಮದಿಯಿಂದ ಬದುಕುಳಿದೀತು.
ವಿಜ್ಞಾನ-ತಂತ್ರಜ್ಞಾನದ ಹೆಸರಿನಲ್ಲಿ ಮಾನವ ಅನೇಕ ಪ್ರಗತಿಯನ್ನು ಸಾದಿಸಿದ್ದಾನೆ. ಎಲ್ಲವೂ ಬೇಕುಗಳ ಪೂರೈಕೆಗೆ! ತನ್ನ ಪ್ರಚಂಡ ಬುದ್ಧಿ ಶಕ್ತಿ ಯಿಂದ ವಿನಾಶಕಾರಿ ಅಣ್ವಸ್ತ್ರಗಳನ್ನೂ, ರಾಕೆಟ್ಗಳನ್ನೂ ಸಬ್‍ಮೆರಿನ್‍ಗಳು, ರೋಬಾಟ್, ಕಂಪ್ಯೂಟರ್ ಏನೆಲ್ಲಾ ಸೌಲಭ್ಯಗಳನ್ನು ಕಂಡು ಹಿಡಿದಿದ್ದಾನೆ. ನೆಲವನ್ನು ಬಗೆದು ಬೇಕಾದ ಬೇಡದ ಏನೆಲ್ಲ ಖನಿಜ ತನ್ನದಾಗಿಸಿಕೊಂಡಿದ್ದಾನೆ. ರಸಗೊಬ್ಬರ, ಕೀಟನಾಶಕ ಬಳಸಿ ಅಪಾರ ಕೃಷಿ ಉತ್ಪನ್ನಗಳನ್ನು ಬೆಳೆಯುವ ಭರದಲ್ಲಿ ಭೂಮಿ ಬರಡಾಗಿಸುತ್ತಿದ್ದಾನೆ. ತನ್ನ ಸುಖಕ್ಕಾಗಿ ಬೃಹದಾಕಾರದ ಕಟ್ಟಡಗಳು, ಜಲಾಶಯಗಳು ನಿರ್ಮಾಣವಾಗುತ್ತಿದೆ. ಬೆಟ್ಟ, ಗುಡ್ಡ, ಪರ್ವತ, ಕಾಡುಗಳನ್ನು ತುಂಡು ಮಾಡಿ ನಗರಗಳು ಬೆಳೆಯುತ್ತಿವೆ. ಪ್ರಾಕೃತಿಕ ಸಂಪತ್ತೆಲ್ಲಾ ಎಡಬಿಡದೇ ಲೂಟಿಗೊಳ್ಳುತ್ತಿದೆ. ತನ್ನ ಐಷಾರಾಮಿ ಬದುಕಿನ ಕನಸಿನಲ್ಲಿ ಎಲ್ಲವನ್ನೂ ಪಣಕ್ಕಿಟ್ಟು ತನ್ನ ಬೇಕುಗಳನ್ನು ಪೂರೈಸಲು ಹವಣಿಸುತ್ತಿದ್ದಾನೆ. ಈ ದುರಾಸೆಯಲ್ಲಿ ಮುಂದಿನ ಜನಾಂಗಕ್ಕೆ ಬದುಕಲು ಪ್ರಾಕೃತಿಕ ಸೌಲಭ್ಯಗಳನ್ನು ಉಳಿಸಿಡಬೇಕೆಂಬ ವಿವೇಚನೆಯನ್ನೇ ಮಾನವ ಕಳೆದುಕೊಂಡಿದ್ದಾನೆ.
ಪರಿಸರದ ನಿರಂತರ ಶೋಷಣೆಯಿಂದಾಗಿ, ಪ್ರಕೃತಿಯ ಸಮತೋಲನ ತಪ್ಪಿ ಅನೇಕ ವಿಕೋಪಗಳು ಎಚ್ಚರಿಕೆಯ ಗಂಟೆಯಾಗಿ ಬಡಿಯುತ್ತಲೇ ಇವೆ.
ಬೇಕು ರಾಕ್ಷಸನ ದಾಳಿಗೆ ಸಿಕ್ಕು ಹೊರಗಿನ ಪರಿಸರ ನಾಶವಾಗುತ್ತಿದೆ. ಮಾನವನ ಒಳಗೂ ಸ್ವಾರ್ಥ, ಸ್ವಹಿತ, ಅತಿ ಆಸೆ, ದ್ವೇಷ, ಅಸೂಯೆ, ಪೈಪೋಟಿಗಳಿಂದ ತುಂಬಿಕೊಂಡು ನೈತಿಕವಾಗಿ ಕುಸಿಯುತ್ತಿದೆ. ಇಂದು ಮಾನವ ಆಂತರಿಕ ಶ್ರೀಮಂತಿಕೆಗಿಂತ ಬಾಹ್ಯ ಶ್ರೀಮಂತಿಕೆಗೆ ಹೆಚ್ಚು ಪ್ರಾಶಸ್ತ್ಯ ನೀಡುತ್ತಿದ್ದಾನೆ. ಹಣವಂತನೇ ಪ್ರತಿಷ್ಠಿತ ಎಂಬ ಕಲ್ಪನೆ ಸಮಾಜದಲ್ಲಿ ಬೇರೂರಿದೆ. ಆ ಹಣವನ್ನು ಯಾವುದೇ ನೀಚ ದಂಧೆಯಿಂದ ಗಳಿಸಿದ್ದರೂ ಅದು ನಗಣ್ಯ. ಅದಕ್ಕೆಂದೇ ಇಂದು ಮಾನವ ಕಷ್ಟಪಡದೇ ಬೆವರು ಹರಿಸದೇ ದಿಢೀರ್ ಶ್ರೀಮಂತನಾಗಬೇಕೆಂದು ಬಯಸುತ್ತಾನೆ. ಕೊಳ್ಳುಬಾಕ ಸಂಸ್ಕೃತಿ ನಿಧಾನಕ್ಕೆ ತನ್ನ ಕಬಂಧ ಬಾಹುಗಳನ್ನು ಚಾಚಿ ನಮ್ಮನ್ನು ನುಂಗುತ್ತಿದೆ.
ಮಾನವನ ದುರಾಸೆ ಹೀಗೇ ಮುಂದುವರಿದರೆ ಭೂಮಿ ಮೇಲೆ ಇಡೀ ಜೀವಿ ಸಂಕುಲವೇ ನಾಶವಾಗುವ ದಿನ ದೂರವಿಲ್ಲ. ಹಾಗಾದರೆ ಈ ಬೇಕು ರಾಕ್ಷಸನ ಹಸಿವನ್ನು ಹಿಂಗಿಸಲು ಸಾಧ್ಯವೇ ಇಲ್ಲವೇ ? ಅವನು ನಮ್ಮನ್ನು ಸರ್ವನಾಶ ಮಾಡುವುದನ್ನು ನೋಡುತ್ತಾ ಕೈ ಕಟ್ಟಿ ಕುಳಿತು ಬಿಡಬೇಕೆ? ಅವನ ಹಸಿವಿನ ಕೊನೆಯ ಗುರಿ, ಕೊನೆಯ ಬಲಿ ನಾವೇ ಆಗಬೇಕೆ? ನಮ್ಮಿಂದ ನಮ್ಮೊಳಗೇ ಹುಟ್ಟಿ ಬೆಳೆದ ಈ ಬೇಕು ರಾಕ್ಷಸನನ್ನು ಹದ್ದುಬಸ್ತಿನಲ್ಲಿಡಲು ನಮ್ಮಿಂದಲೇ ಸಾಧ್ಯವಿಲ್ಲವೇ? ಸರಳ ಜೀವನ ಉನ್ನತ ಚಿಂತನ ಎಂಬ ಆದರ್ಶಕ್ಕೆ ಈ ಬೇಕು ಪ್ರಪಂಚದಲ್ಲಿ ಬೆಲೆಯೇ ಇಲ್ಲವೇ?
ಸಖಿ, ಈ ಕುರಿತು ಪೂರ್ತಿ ಕಾಲಮೀರಿ ಹೋಗುವ ಮೊದಲು ಈಗಲಾದರೂ ಯೋಚಿಸಬೇಕಲ್ಲವೇ?
*****