ಗೃಹಸಚಿವ ದಯಾನಂದರಿಗೆ ಕ್ರಾಂತಿಕಾರಿಯರು ಒಂದು ತಲೆನೋವಾಗಿ ಬಿಟ್ಟಿದ್ದರು. ಮುಖ್ಯಮಂತ್ರಿಯವರು ಬಹುದಿನದಿಂದ ತಮ್ಮ ರಾಜ್ಯವನ್ನು ಇಡೀ ದೇಶದಲ್ಲೇ ಒಂದು ಮಾದರಿ ರಾಜ್ಯವಾಗಿ ರೂಪಿಸಲು ಬಹು ಪ್ರಾಮಾಣಿಕತೆಯಿಂದ ದುಡಿಯುತ್ತಿದ್ದರು. ಕ್ರಾಂತಿಕಾರಿಯರು ಆಗಾಗ ಅಲ್ಲಲ್ಲಿ ಸ್ಫೋಟಿಸುತ್ತಿದ್ದ ಬಾಂಬುಗಳು, ರಾಜಕಾರಣಿಯರ, ಗಣ್ಯರ ಕೊಲೆಗಳು ಅವರಿಗೆ ಗಂಭೀರ ಸಮಸ್ಯೆಯಾಗಿದ್ದವು. ಮುಖ್ಯಮಂತ್ರಿಯವರೇ ಶರಣಾಗತರಾದ ಕ್ರಾಂತಿ ಕಾರಿಯರಿಗೆ ವಿವಿಧ ಸವಲತ್ತುಗಳನ್ನು ಘೋಷಿಸಿದ ನಂತರ ಬಹುಜನ ಕ್ರಾಂತಿ ಕಾರಿಯರು ಶರಣಾಗತರಾಗಿದ್ದರು. ಶರಣಾಗತರಾಗದ ಕ್ರಾಂತಿಕಾರಿ ತಂಡಗಳ ಜಾಡು ಹಿಡಿದು ಹೋಗಿ ಪೋಲಿಸಿನವರು ಹಲವರನ್ನು ಮುಗಿಸಿದ್ದರು.
ಹಾಗೆ ನೋಡಿದರೆ ಈ ಮುಖ್ಯಮಂತ್ರಿಯವರ ಪ್ರಾಮಾಣಿಕ ಮನೋಧರ್ಮದ ಕಾರಣ ರಾಜ್ಯದಲ್ಲಿ ಕ್ರಾಂತಿಕಾರಿಯರ ಹಿಂಸಾಚಾರ ಸಾಕಷ್ಟು ಅಡಗಿತ್ತು. ಮಿಕ್ಕ ಅಲ್ಪಸ್ವಲ್ಪ ಕೆಲಸವನ್ನು ದಯಾನಂದರ ಮೇಲೆ ಬಿಟ್ಟುಬಿಟ್ಟರು ಮುಖ್ಯಮಂತ್ರಿಯವರು. ರಾಜ್ಯದ ಏಳಿಗೆಗೆ ನೂರಾರು ಕೆಲಸಗಳನ್ನು ಕೈಗೆತ್ತಿಕೊಂಡ ಅವರಿಗೆ ಇನ್ನು ಕ್ರಾಂತಿಕಾರಿಯರ ಕಡೆ ಗಮನ ಕೊಡುವಷ್ಟು ಬಿಡುವಿರಲಿಲ್ಲ. ಹಲವು ಕ್ರಾಂತಿಕಾರಿ ತಂಡಗಳವರು ಶರಣಾಗತರಾದರೆ, ಇನ್ನೂ ಹಲವರು ಪೋಲೀಸರ ಕೈಯಲ್ಲಿ ಸಾವನ್ನಪ್ಪಿದ್ದರು. ಅದರಿಂದ ಮಿಕ್ಕ ಕ್ರಾಂತಿಕಾರಿಯರ ಚಟುವಟಿಕೆಗಳು ನಿಷ್ಕ್ರಿಯವಾಗಿದ್ದವೆಂದೇ ಹೇಳಬೇಕು.
ಆದರೆ ಈ ಕಲಕ್ಕನ ತಂಡ ಇನ್ನೂ ಸಕ್ರಿಯವಾಗಿ ತನ್ನ ಕೆಲಸ ಮುಂದುವರೆಸುತ್ತಿತ್ತು. ಬಂಡೇರಹಳ್ಳಿಯಲ್ಲಿ ಆದ ಕೊಲೆಗಳ ವರದಿ ಅವರಿಗೆ ಒಂದು ದಿನ ತಡವಾಗಿ ಲಭಿಸಿತ್ತು. ಅದೂ ಅಲ್ಲದೇ ಅವಳ ಹೆಸರು ಹೇಳಿ ದೋಚಲಾದ ಹಣದ ಸ್ವಲ್ಪ ಭಾಗ ಮತ್ತು ವಡವೆಗಳನ್ನು ಆ ಜಮೀನ್ದಾರನಿಗೆ ಮರಳಿಸಲಾಗಿತ್ತು. ಇದು ಗೃಹಸಚಿವರಿಗೆ ನುಂಗಲಾಗದ ತುತ್ತು. ತಮ್ಮ ಖಾತೆಯವರು ಮಾಡಬೇಕಾದ ಕೆಲಸವನ್ನು ಕಲ್ಲಕ್ಕ ಮಾಡಿದ್ದಳು. ಬಂಡೇರಹಳ್ಳಿ ಎಲ್ಲೋ ಇರುವ ಕುಗ್ರಾಮವೆಂದು ಕಡೆಗಣಿಸುತ್ತಿದ್ದಾರೆ. ಪೋಲಿಸಿನವರು ಅವರನ್ನು ತರಾಟೆಗೆ ತೆಗೆದುಕೊಳ್ಳಬೇಕು. ಏನೇ ಆಗಲಿ ಆದಷ್ಟು ಬೇಗ ಕಲ್ಲಕ್ಕನ ತಂಡವನ್ನು ಮುಗಿಸಿಬಿಡಬೇಕು. ಇಲ್ಲದಿದ್ದರೆ ತಮ್ಮ ಕುರ್ಚಿಗೆ ಅಪಾಯ. ಆಗಲೇ ಬೇರೆ ಕೆಲಸದ ನಿಮಿತ್ತ ಮುಖ್ಯಮಂತ್ರಿಯವರನ್ನು ಭೇಟಿಯಾದಾಗ ಕಲ್ಲಕ್ಕನ ವಿಷಯವೆತ್ತಿದ್ದರು. ಅವರೀಗ ಬರೀ ರಾಜ್ಯದ ಮುಖ್ಯಮಂತ್ರಿಯೇ ಅಲ್ಲ. ಪಾರ್ಟಿಯ ಸರ್ವಾಧಿಕಾರಿಯೂ ಆಗಿದ್ದರು.
ತಕ್ಷಣ ಸಂಬಂಧಿತ ಪೋಲಿಸ್ ಅಧಿಕಾರಿಯರನ್ನು ಕರೆದು ಈ ವಿಷಯ ಕೂಲಂಕುಷವಾಗಿ ಚರ್ಚಿಸಿ ಒಂದು ನಿಖರವಾದ ನಿರ್ಣಯ ತೆಗೆದುಕೊಳ್ಳಬೇಕು. ಕಲಕ್ಕನ ಕ್ರಾಂತಿಕಾರಿ ತಂಡವನ್ನು ಹಿಡಿಯಲು, ಅವರನ್ನು ಶರಣಾಗತರಾಗುವಂತೆ ಮಾಡಲು ಏನೇನು ಮಾಡಬಹುದೆಂದು ಯೋಚಿಸುತ್ತಿದ್ದಾಗ ಫೋನಿನ ಗಂಟೆಯ ನಾದ ಆರಂಭವಾಯಿತು. ಬಹು ಬೇಸರದಿಂದಲೇ ರಿಸೀವರ್‌ನ್ನು ಎತ್ತಿಕೊಂಡರವರು.
“ಸರ್! ಮುಖ್ಯಮಂತ್ರಿಯವರು ನಿಮ್ಮೊಡನೆ ಮಾತಾಡುತ್ತಾರಂತೆ” ಬಹು ವಿನಯವಾಗಿ ಹೇಳಿದ. ಅವರ ಸೆಕ್ರೆಟರಿ ಸಂಪರ್ಕ ಮುರಿದ. ಒಮ್ಮೆಲೇ ಗೃಹಸಚಿವ ದಯಾನಂದರ ನರನಾಡಿಗಳಲ್ಲೆಲ್ಲಾ ಗೌರವಾಭಿಮಾನದ ಭಾವಗಳು ತುಂಬಿಬಂದವು. ಅದರ ಕಾರಣವಾಗೇ ಅವರು ಕುರ್ಚಿಯಿಂದ ಎದ್ದರು. ಅದರ ಅರಿವು ಅವರಿಗೂ ಇರಲಿಲ್ಲ.
“ನಾನು ಸರ್ ದಯಾನಂದ! ಹೇಳಿ ಸರ್…”
“ಈ ಬಂಡೇರಹಳ್ಳಿಯದು ಏನು ಗೋಳು” ವಿನಯಾತಿರೇಕದಿಂದ ಅವರ ಮಾತು ಮುಗಿಯುವ ಮುನ್ನ ಕಟುವಾದ ದನಿಯಲ್ಲಿ ಕೇಳಿದರು ಮುಖ್ಯಮಂತ್ರಿ.
“ನಾನೀಗ ಅದರ ಬಗ್ಗೆ ಯೋಚಿಸುತ್ತಿದ್ದೆ ಸರ್” ಇನ್ನೂ ಹೆಚ್ಚಿನ ವಿನಯವನ್ನು ತಮ್ಮ ದನಿಯಲ್ಲಿ ತುಂಬಿಕೊಂಡು ಹೇಳಿದರು ಗೃಹಸಚಿವ ದಯಾನಂದ.
“ಬರಿ ಯೋಚಿಸಿದರೆ ಏನೂ ಆಗುವುದಿಲ್ಲ ದಯಾನಂದ ಅವರೇ! ಏನಾದರೂ ಮಾಡಬೇಕು. ಏನು ಮಾಡುತ್ತಿದ್ದೀರಿ” ಅಸಮಾಧಾನ ಸ್ಪಷ್ಟವಾಗಿತ್ತು ಮುಖ್ಯಮಂತ್ರಿಯವರ ದನಿಯಲ್ಲಿ.
“ಈಗಲೇ ಸಂಬಂಧಿತ ಪೋಲಿಸ್ ಅಧಿಕಾರಿಯರ ಮೀಟಿಂಗ್ ಕರೆಯುತ್ತೇನೆ. ಗಂಭೀರ ಚರ್ಚೆ ನಡೆಸಿದ ನಂತರ ಏನು ಮಾಡಬೇಕೆಂಬ ನಿರ್ಣಯ ತೆಗೆದುಕೊಳ್ಳುತ್ತೇವೆ. ಅದಾದ ತಕ್ಷಣ ನಿಮಗೆ ತಿಳಿಸುತ್ತೇನೆ ಸರ್” ಇನ್ನೂ ನಿಂತೇ ಇದ್ದ ದಯಾನಂದ ಕೂಲಂಕುಷವಾಗಿ ವಿವರ ನೀಡಿದರು.
“ಈ ಕಲಕ್ಕ ಬಹಳ ಬೃಹದಾಕಾರವಾಗಿ ಬೆಳೆಯುತ್ತಿದ್ದಾಳೆ. ಅದನ್ನು ಆದಷ್ಟು ಬೇಗ ತಡೆಗಟ್ಟಿ” – ಎಂದು ಕಟುವಾಗಿ ಹೇಳಿ ಮುಂದೆ ಮಾತು ಬೇಡವೆಂಬಂತೆ ಸಂಪರ್ಕ ಮುರಿದರು ಮುಖ್ಯಮಂತ್ರಿ. ಫೋನನ್ನು ಅದರ ಸ್ಥಾನದಲ್ಲಿಡುತ್ತಾ ಕುಳಿತ ದಯಾನಂದ ಮುಂದಿನ ಕಾರ್ಯಾಚರಣೆ ಆರಂಭಿಸಿದರು.
ಅವರ ಸೆಕ್ರೆಟರಿ ಪೋಲಿಸ್ ಕಮೀಷನರಿಗೆ, ಕ್ರೈಮ್ ಬ್ರಾಂಚಿನ ಐಜಿಗೆ ಮತ್ತು ಆಂಟಿ ರೆವೆಲ್ಯೂಷನರಿ ಸ್ಕ್ವಾಡ್‌ನ ಮುಖ್ಯಸ್ಥ ಶ್ರೀವಾಸ್ತವರಿಗೆ ಫೋನ್ ಮಾಡಿ ಇನ್ನರ್ಧ ಗಂಟೆಯಲ್ಲಿ ಗೃಹಸಚಿವರ ಚೇಂಬರಿನಲ್ಲಿ ಅತಿ ಮುಖ್ಯ ಮೀಟಿಂಗ್ ಇದೆ ಎಂದು ಅರ್ಧ ಗಂಟೆಯಲ್ಲಿ ಬರಬೇಕೆಂದು ಫೋನಿನ ಮೂಲಕ ತಿಳಿಸಿದ.
ಪೋಲಿಸ್ ಕಮೀಶನರ್ ರಂಜೀತ್ ಸಿಂಗ್ ಇನ್ನಾವ ತಲೆನೋವು ಹುಟ್ಟಿಕೊಂಡಿರಬಹುದೆಂದು ತಮ್ಮಲ್ಲೇ ಗೊಣಗಿಕೊಳ್ಳುತ್ತಾ ಗೃಹಸಚಿವರು ತನ್ನ ಕರೆಸಿದ್ದರ ಕಾರಣ ಏನಿರಬಹುದೆಂದು ಯೋಚಿಸತೊಡಗಿದರು. ಅವರಿಗೆ ಅಂತಹ ಯಾವ ಕಾರಣವೂ ಹೊಳೆಯಲಿಲ್ಲ. ಬಂಡೇರಹಳ್ಳಿಯಲ್ಲಿ ನಡೆದ ಘಟನೆ ಅವರಿಗೆ ಗೃಹಸಚಿವರಿಗಿಂತ ಮೊದಲೇ ಗೊತ್ತಾಗಿತ್ತು. ಅದನ್ನವರು ಅಷ್ಟು ಮುಖ್ಯವಾಗಿ ಪರಿಗಣಿಸಿರಲಿಲ್ಲ. ಅವರ ಚಿಂತನೆ ಯಾವ ನಿಖರ ನಿರ್ಣಯಕ್ಕೂ ಬರದಾಗ ಮೆದುಳಿನ ಕಸರತ್ತನ್ನು ಬಿಟ್ಟರು.
ಕ್ರೈಮ್‌ಬ್ರಾಂಚಿನ ಐ.ಜಿ.ಯವರದೂ ಅದೇ ಸ್ಥಿತಿ, ರಾಜ್ಯದಲ್ಲಿ ಯಾವ ತರಹದ ಅಪರಾಧವೂ ನಡೆದಿಲ್ಲ. ಹಾಗಾದಲ್ಲಿ ತನ್ನ ಕರೆಸಿದ್ದೇಕೆಂಬ ಯೋಚನೆ. ಇಬ್ಬರೂ ಮೀಟಿಂಗ್‌ಗೆ ಬರಲಿದ್ದಾರೆಂಬುವದು ಅವರಿಗೆ ಗೊತ್ತಿರಲಿಲ್ಲ.
ತನ್ನ ಯಾಕೆ ಕರೆಸಿರಬಹುದೆಂಬುವುದು ಆಂಟಿ ರೆವಲ್ಯೂಷನರಿ ಸ್ಕ್ವಾಡ್‌ನ ಮುಖ್ಯಸ್ಥರಿಗೆ ಗೊತ್ತಿತ್ತು. ಬಂಡೇರಹಳ್ಳಿಯಲ್ಲಿ ನಡೆದ ಘಟನೆ. ಆ ಕಲ್ಯಾಣಿ, ಕಲ್ಲಕ್ಕ, ಕಾಳಿ, ಜಗದಾಂಭೆಯನ್ನು ಮನಸ್ಸಿಗೆ ತೋಚಿದಹಾಗೆ ಶಪಿಸತೊಡಗಿದರು. ಅವಳು ಯಾವಾಗ ಎಲ್ಲಿರುತ್ತಾರೆಂಬುವುದೂ ತಿಳಿಯುವುದು ಕಷ್ಟ, ಅವಳ ಬಗ್ಗೆ ಮಾಹಿತಿ ಕೊಡಬಲ್ಲ ಒಬ್ಬ ಇನ್‌ಫಾರ್ಮರನನ್ನು ತಾವು ಹುಡುಕಲು ಸಾಧ್ಯವಾಗಿಲ್ಲ. ಅವಳನ್ನು ಬಂಧಿಸುವದೇ ಆಗಲಿ ಎನ್‌ಕೌಂಟರಿನಲ್ಲಿ ಮುಗಿಸುವುದೇ ಆಗಲಿ ಅಷ್ಟು ಸುಲಭದ ಕೆಲಸವಲ್ಲವೆಂದು ಈ ರಾಜಕಾರಣಿಗಳಿಗೆ ಹೇಗೆ ತಿಳಿ ಹೇಳಬೇಕು. ಬಹಳ ಕಷ್ಟದ ಕೆಲಸ. ಆದರೆ ತಾನೇ ಮಾಡಬೇಕೆಂಬುವುದನ್ನು ತನಗೆ ತಾನು ನೆನಹಿಸಿಕೊಂಡ ಸ್ಕ್ವಾಡಿನ ಮುಖ್ಯಸ್ಥ ಶ್ರೀವಾಸ್ತವ. ಅವಳ ಆಗುಹೋಗುಗಳನ್ನು ಅರಿಯಲು ತಾವು ಪಡಬಾರದ ಪಾಡು ಪಟ್ಟಾಗಿದೆ. ಅವಳು, ಅವಳ ತಂಡದವರು ಯಾವಾಗ ಎಲ್ಲಿ, ಎಂತಹ ದೌರ್ಜನ್ಯವನ್ನು ಎಸಗುತ್ತಾರೆಂಬುದನ್ನು ಊಹಿಸುವುದೂ ಕಷ್ಟ, ಈವರೆಗೂ ಅವಳ ತಂಡದಲ್ಲಿ ಎಷ್ಟು ಜನರಿದ್ದಾರೆಂಬುವುದು ಗೊತ್ತಾಗಿಲ್ಲ. ಹೀಗೆ ಕೈಕಟ್ಟಿ ಸುಮ್ಮನಿದ್ದರೆ ಆಗುವುದಿಲ್ಲ. ಏನಾದರೂ ಮಾಡಬೇಕು ಎಂದುಕೊಂಡು. ಗೃಹಸಚಿವರನ್ನು ಭೇಟಿಯಾಗಲು ಹೋಗಲು ಸಿದ್ಧನಾದ. ಆತನಿಗೂ ಅಲ್ಲಿ ಕ್ರೈಮ್‌ಬ್ರಾಂಚ್‌ನ ಐ.ಜಿ. ಮತ್ತು ಕಮೀಷನರು ಬರುತ್ತಾರೆಂದು ಗೊತ್ತಿರಲಿಲ್ಲ.
ಗೃಹಸಚಿವ ದಯಾನಂದರ ಕಾರ್ಯಾಲಯದಲ್ಲಿ ಮೂವರೂ ಪೋಲೀಸ್ ಅಧಿಕಾರಿಯರ ಭೇಟಿಯಾಯಿತು. ಅವರು ತಮ್ಮಲ್ಲಿ ಮಾತಾಡಿಕೊಳ್ಳುವ ಮೊದಲೇ ಅವರಿಗಾಗಿ ಸಚಿವರು ಕಾಯುತ್ತಿದ್ದಾರೆಂದು ಹೇಳಿದ ಅವರ ಆಪ್ತಕಾರ್ಯದರ್ಶಿ. ಒಬ್ಬರ ಮುಖವನೊಬ್ಬರು ನೋಡಿಕೊಂಡು ಮುಂದೇನು ಕಾದಿದೆಯೋ ಎಂದುಕೊಳ್ಳುತ್ತಾ ಸಚಿವರ ಚೇಂಬರಿನಲ್ಲಿ ಪ್ರವೇಶಿಸಿದರು ಮೂವರೂ ಪೋಲೀಸ್ ಅಧಿಕಾರಿಯರು.
ಬಿಳಿಯ ನೆಹರೂ ಶರ್ಟ್, ಪೈಜಾಮ್ ತೊಟ್ಟ ಗೃಹಮಂತ್ರಿಯವರ ಮುಖ ಅಧಿಕಾರದ ಅಹಂಭಾವವನ್ನು ಹೊರಗೆಡಹುತ್ತಿತ್ತು. ಮೂವರು ಅಧಿಕಾರಿಯವರ ಮೇಲೆ ಕಣ್ಣಾಡುತ್ತಿದ್ದಾಗ ಅವರ ತುಟಿಗಳಲ್ಲಿ ವ್ಯಂಗ್ಯದ ಮುಗುಳ್ನಗೆ, ನಾಟಕೀಯವಾಗಿ ಎದುರಿನ ಆಸನಗಳ ಕಡೆ ಕೈತೋರಿಸುತ್ತಾ ಹೇಳಿದರು.
“ಕೂಡಿ… ಕೂಡಿ… ಆಗಿನಿಂದ ನಾ ನಿಮಗಾಗೇ ಕಾಯುತ್ತಿದ್ದೆ”
ಅವರ ಅಂತಹ ವ್ಯಂಗ್ಯದ ಮಾತು ಕೇಳಿ ಕೇಳಿ ಅಭ್ಯಾಸವಾಗಿಹೋಗಿತ್ತು ಆ ಪೋಲೀಸ್ ಅಧಿಕಾರಿಯವರಿಗೆ. ಆದರೂ ಪ್ರತಿಸಲ ಅಂತಹ ಮಾತು ಕೇಳಿದಾಗ ಅವರಲ್ಲಿ ಎಲ್ಲಿಲ್ಲದ ಸಿಟ್ಟು ಉಕ್ಕಿ ಬರುತ್ತಿತ್ತು. ಅದನ್ನು ನುಂಗಿಕೊಳ್ಳುವುದೂ ಅವರಿಗೆ ಅಭ್ಯಾಸವಾಗಿ ಹೋಗಿತ್ತು. ಯಾವ ಬಗೆಯ ಪ್ರತಿಕ್ರಿಯೆಯನ್ನೂ ತೋರದ ಅವರೆದುರಿನ ಕುರ್ಚಿಗಳಲ್ಲಿ ಕುಳಿತರು. ತಮ್ಮೆದುರು ಕುಳಿತ ಮೂವರೆಡೆ ನೋಟ ಹಾಯಿಸಿ ಕೇಳಿದರು ಗೃಹಸಚಿವರು.
“ಈ ಕಲ್ಲಕ್ಕ ಮತ್ತವರ ತಂಡ ನಮಗೀ ಜನ್ಮದಲ್ಲಿ ಸಿಗುವದಿಲ್ಲವೇ! ಅಷ್ಟು ಷಂಡವಾಗಿದೆಯೇ ನಮ್ಮ ಪೋಲಿಸ್ ಖಾತೆ”
“ನಾವು ಸತತವಾಗಿ ನಮ್ಮ ಪ್ರಯತ್ನ ಮಾಡುತ್ತಿದ್ದೇವೆ ಸರ್! ಆದರೆ ಈವರೆಗೂ ನಮಗೆ ಅವರ ಸ್ವಲ್ಪವೂ ಸುಳಿವು ಸಿಕ್ಕಿಲ್ಲ” ಕೂಡಲೇ ಉತ್ತರಿಸಿದ ಆಂಟಿ ರವೆಲ್ಯೂಷನರಿ ಸ್ಕ್ವಾಡಿನ ಮುಖ್ಯಸ್ಥ ಶ್ರೀವಾಸ್ತವ.
“ನಿಮಗೆ ಬಂಡೇರಹಳ್ಳಿಯಲ್ಲಿ ಆದ ವಿಷಯ ತಿಳಿದಿರಲಿಕ್ಕಿಲ್ಲ…”
“ಅದನ್ನು ರಾತ್ರಿ ನಾವೇ ನಿಮ್ಮ ಕಾರ್ಯದರ್ಶಿಗೆ ತಿಳಿಸಿದ್ದು ಸರ್” ಅವರ ಮಾತು ಮುಗಿಯುವ ಮುನ್ನ ಹೇಳಿದರು ಕಮೀಶನರ್ ರಂಜೀತ್ ಸಿಂಗ್.
“ಉಪಕಾರ ಮಾಡಿದಿರಿ! ಆದರೆ ಅದರ ಬಗ್ಗೆ ವಿಚಾರಣೆ ಆರಂಭವಾಗಿದೆಯೇ” ಅವರ ಮಾತು ಮುಗಿಯುತ್ತಲೇ ವ್ಯಂಗ್ಯ ತುಂಬಿದ ದನಿಯಲ್ಲಿ ಬಂತು ಗೃಹಮಂತ್ರಿಯವರ ಮಾತು. ಅವರ ಅಂತಹ ಪ್ರತಿಮಾತಿನಿಂದ ಅಸಹನೆ ಹೆಚ್ಚಾಗುತ್ತಿತ್ತು. ಆಂಟಿರೆವೆಲ್ಯೂಷನರಿ ಸ್ಕ್ವಾಡ್‌ನ ಮುಖ್ಯಸ್ಥರಿಗೆ ಅವರು ಉತ್ತರಿಸಿದರು.
“ಬಂಡೇರಹಳ್ಳಿಯಲ್ಲಿ ಪೋಲೀಸ್ ಸ್ಟೇಷನ್ ಇಲ್ಲ. ರಾಮನಗರದಿಂದ ಪೋಲೀಸಿನವರು ಹೋಗಿ ಶವಗಳನ್ನು ಪೋಸ್ಟ್ ಮಾರ್ಟಂಗೆ ಕಳುಹಿಸಿದ್ದಾರೆ. ಕೊಲೆ ಯಾರು ಮಾಡಿದ್ದಾರೆಂದು ಇನ್‌ವೆಸ್ಟಿಗೇಷನ್ ಮಾಡುವ ಅವಶ್ಯಕತೆ ಇಲ್ಲ ಸರ್. ಅವರುಗಳೇ ಎಚ್ಚರ ಹೇಳಿಹೋಗಿದ್ದಾರೆ”
ಬಹು ಆಸಕ್ತಿಯಿಂದ ಅವರ ಮುಖವನ್ನೇ ನೋಡುತ್ತಾ ಹೇಳಿದರು ಮಂತ್ರಿವರ್ಯರು.
“ಅದನ್ನೆಲ್ಲಾ ನಾನು ಪೇಪರಿನಲ್ಲಿ ಓದಿದ್ದೇನೆ. ಅದನ್ನು ಕೇಳಲು ನಾನು ನಿಮ್ಮನ್ನು ಕರೆಸಿರಲಿಲ್ಲ. ನೀವೇನು ಮಾಡುತ್ತಿದ್ದೀರಿ? ಅದನ್ನು ಕೇಳಲು ಕರೆಸಿದ್ದು”
ಮಾತು ಮಾತಿಗೂ ಸ್ಕ್ವಾಡಿನ ಮುಖ್ಯಸ್ಥರ ಸಹನೆ ಮೀರುತ್ತಿತ್ತು. ತಕ್ಷಣ ಹೇಳಿದರವರು.
“ನಾವು ಹೇಳಿದ್ದನ್ನೇ ಪೇಪರಿನವರು ಮುದ್ರಿಸಿದ್ದಾರೆ ಸರ್! ಯಾವ ಪತ್ರಕರ್ತನೂ ಬಂಡೇರಹಳ್ಳಿಗೆ ಹೋಗಿ ಎಲ್ಲಾ ಅನ್ವೇಷಣೆ ಮಾಡಿ ವರದಿ ಬರೆದಿಲ್ಲ”
ತಮ್ಮ ಜತೆಗಿನ ಅಧಿಕಾರಿ ಈ ರೀತಿ ಮಾತಾಡಬಾರದಾಗಿತ್ತೆನಿಸಿತು ಮಿಕ್ಕೆಲ್ಲ ಅಧಿಕಾರಿಯರಿಗೆ.
“ಅದನ್ನೇ ನಾ ಕೇಳುತ್ತಿರುವುದು, ಕನಿಷ್ಠ ಈಗ ಆ ದರಿದ್ರ ಕಲ್ಲಕ್ಕ ಎಲ್ಲಿದ್ದಾಳೆಂದು ಗೊತ್ತಾಗಿದೆ. ಅವಳನ್ನು ಹಿಡಿಯಲು ನೀವೇನು ಮಾಡುತ್ತಿದ್ದೀರಿ” ಸಿಟ್ಟಿನ ದನಿಯಲ್ಲಿ ಕೇಳಿದರು ದಯಾನಂದ. ಕಮೀಷನರ್ ಅದಕ್ಕೆ ಉತ್ತರಿಸ ಬೇಕೆಂದುಕೊಳ್ಳುತ್ತಿದ್ದಾಗ ಸಿಟ್ಟಿನಲ್ಲಿ ತಾನು ಯಾರೊಡನೆ ಮಾತಾಡುತ್ತಿದ್ದೇ ನೆಂಬುವುದು ಮರೆತ ಆಂಟಿ ರೆವಲ್ಯೂಷನರಿ ಸ್ಕ್ವಾಡಿನ ಅಧಿಕಾರಿ ಹೇಳಿದ.
“ಬಂಡೇರಹಳ್ಳಿ ಎಲ್ಲಿದೆ ನಿಮಗೆ ಗೊತ್ತೆ ಸರ್”
“ಇಲ್ಲ!” ಅವರಿಗರಿವಿಲ್ಲದಂತೆ ದಯಾನಂದರ ಬಾಯಿಂದ ಮಾತು ಹೊರಟಿತು. ಮಾತು ಹೊರಬಿದ್ದ ಮೇಲೆ ತಾವು ಮಾಡಿದ ತಪ್ಪಿನ ಅರಿವಾಯಿತವರಿಗೆ, ಅವರಿಬ್ಬರ ನಡುವೆ ಮಾತು ಬೆಳೆಯದಿರಲು ಕೂಡಲೇ ನಯವಾದ ದನಿಯಲ್ಲಿ ಹೇಳಿದರು ಕಮಿಷನರ್.
“ಸರ್! ಬಂಡೇರಹಳ್ಳಿಯಲ್ಲದೇ ಅದರ ಸುತ್ತಮುತ್ತಲಿನ ಪ್ರದೇಶ ಕೂಡ ದಟ್ಟವಾದ ಕಾಡಿನಿಂದ ಕೂಡಿದೆ. ಅಲ್ಲಿ ಕಲ್ಲಕ್ಕನನ್ನು ಹುಡುಕುವುದು ಸುಲಭವಲ್ಲ.”
ತಾವು ಮಾಡಿದ ತಪ್ಪಿನ ಅರಿವು ತಾವು ಅವರುಗಳ ಅಧಿಕಾರಿ ಎಂದು ನಿರೂಪಿಸುವ ಛಲ ದಯಾನಂದರಲ್ಲಿ ಇನ್ನೂ ಸಿಟ್ಟು, ಉಕ್ಕಿ ಬರುವಂತೆ ಮಾಡಿತು. ಆ ಅವಸ್ಥೆಯಲ್ಲಿ ತಾವೇನು ಮಾತಾಡುತ್ತಿದ್ದೇವೆಂಬುದು ಮರೆತರವರು.
“ಅವಳನ್ನು ಹುಡುಕುವದಲ್ಲ ಕಾಡಿನಲ್ಲೇ ಅವಳನ್ನೂ ಅವಳ ತಂಡವನ್ನು ನಾಮರೂಪವಿಲ್ಲದಂತೆ ಮಾಡಿಬಿಡಿ. ಅದು ಅಷ್ಟು ಕಷ್ಟದ ಕೆಲಸವೆ! ನಿವೇಲ್ಲಾ ಏನು ಮಾಡುತ್ತಿದ್ದೀರಿ. ಸ್ವಲ್ಪವಾದರೂ ಬುದ್ದಿ ಉಪಯೋಗಿಸಲಾಗುವುದಿಲ್ಲವೇ”
ಗೃಹಸಚಿವರ ಮಾತು ಮುಗಿಯುತ್ತಿದ್ದಂತೆ ಪೋಲೀಸ್ ಅಧಿಕಾರಿಯರು ಒಬ್ಬರ ಮುಖವನ್ನೊಬ್ಬರು ನೋಡಿಕೊಂಡರು. ಅದಕ್ಕೇನು ಹೇಳಬೇಕೆಂದು ತಕ್ಷಣ ತೋಚಲಿಲ್ಲ. ಗಂಭೀರ ಮುಖ ಮಾಡಿದ ಸ್ಕ್ವಾಡಿನ ಮುಖ್ಯಸ್ಥ ಶ್ರೀವಾಸ್ತವ ಅಷ್ಟೇ ಗಂಭೀರದನಿಯಲ್ಲಿ ಹೇಳಿದರು.
“ಹೌದು ಸರ್! ನಾವು ಆ ಬಗ್ಗೆ ಯೋಚಿಸಲೇ ಇರಲಿಲ್ಲ. ಒಂದು ಕೆಲಸ ಮಾಡಬಹುದು”
“ಏನದು? ಅದರಿಂದ ಕಲ್ಲಕ್ಕ ಮತ್ತವಳ ತಂಡವನ್ನು ಬುಡಸಮೇತ ಮುಗಿಸಲು ಸಾಧ್ಯವೇ?”- ಅವರ ಮಾತು ಮುಗಿಯುತ್ತಲೇ ಗಂಭೀರ, ಆತುರದ ದನಿಯಲ್ಲಿ ಕೇಳಿದರು ಗೃಹಸಚಿವ ದಯಾನಂದರು. ಅಷ್ಟೇ ಗಂಭೀರ ನಿಧಾನ ದನಿಯಲ್ಲಿ ಪ್ರತಿಕ್ರಿಯಿಸಿದರು ಸ್ಕ್ವಾಡಿನ ಮುಖ್ಯಸ್ಥ ಶ್ರೀವಾಸ್ತವ.
“ಪ್ರಯತ್ನಿಸಬಹುದು ಸರ್, ಅದಕ್ಕೆ ನಮ್ಮ ಸೈನ್ಯದ ಸಹಾಯಬೇಕು. ಬರಿ ಇನ್‌ಫೆಂಟರಿಫೋರ್‍ಸ್ ಒಂದೇ ಸಾಲುವುದಿಲ್ಲ, ಏರ್‌ಪೋರ್ಸಿನ ನಾಲ್ಕಾರು ಸ್ಕ್ವಾರ್ಡ್‌ಗಳು ಬೇಕಾಗಬಹುದು. ಒಂದು ತಿಂಗಳ ಆಪರೇಷನ್. ಅದರಲ್ಲೂ ನಾವು ಸಫಲರಾಗಬಹುದೆಂದು ಹೇಳುವುದು ಕಷ್ಟ. ಆ ಹೊತ್ತಿಗೆ ಕಲ್ಲಕ್ಕ ಮತ್ತವಳ ತಂಡದವರು ಪಟ್ಟಣದ ಜನಜಂಗುಳಿಯಲ್ಲಿ ಸೇರಿದರೂ ಸೇರಬಹುದು. ನೀವು ಸೈನ್ಯದ ಸಹಾಯಕ್ಕೆ ಬರೆಯಿರಿ ಸರ್”
ಅವರ ಗಂಭೀರ ಮಾತು ಮುಗಿದಾಗ ಈ ವ್ಯಕ್ತಿಗೆ ತನ್ನ ಕೆಲಸದ ಭಯವಿಲ್ಲವೇ ಎನಿಸಿತು ಮಿಕ್ಕಿಬ್ಬ ಪೋಲೀಸ್ ಅಧಿಕಾರಿಯರಿಗೆ. ಸ್ಕ್ವಾಡಿನ ಮುಖ್ಯಸ್ಥ ಗಂಭೀರ ದನಿಯಲ್ಲಿ ಆಡಿದ ಹುಡುಗಾಟಿಕೆ ಮಾತಿನ ಅರಿವಾಗಲು ಗೃಹಸಚಿವರಿಗೆ ಸ್ವಲ್ಪ ಸಮಯ ಹಿಡಿಯಿತು. ಅದು ಗೊತ್ತಾಗುತ್ತಿದ್ದಂತೆ ಮುಖ ಸಿಟ್ಟಿನಿಂದ ಗಂಟುಗಳು ಕಟ್ಟಿತು. ಅದರ ಪರಿಣಾಮವಾಗೇ ಕುರ್ಚಿಯಿಂದ ಎದ್ದು ಅಬ್ಬರಿಸಿದರು.
“ನೀವು… ನೀವು… ಒಬ್ಬ ಸಾಮಾನ್ಯ ಪೋಲೀಸ್ ಅಧಿಕಾರಿ ನನ್ನೊಡನೆ ಹುಡುಗಾಟವಾಡುತ್ತಿದ್ದೀರಾ”
ಆ ಅಬ್ಬರಿಕೆ ಇಡೀ ಚೇಂಬರನ್ನು ನಡುಗಿಸುವಂತಿತ್ತು. ಇಂತಹ ರಾಜಕಾರಣಿಯರ ಕಾರಣವಾಗೇ ಕ್ರಾಂತಿಕಾರಿಯರು ಹುಟ್ಟಿಕೊಳ್ಳುತ್ತಾರೆ ಎಂದುಕೊಂಡರು ಸ್ಕ್ವಾಡಿನ ಮುಖ್ಯಸ್ಥ ಶ್ರೀವಾಸ್ತವ. ಅಬ್ಬರಿಕೆಯ ಅಲೆಗಳು ನಂದುತಿದ್ದಂತೆ ಆವರೆಗೆ ಸುಮ್ಮನಿದ್ದ ಕ್ರೈಮ್‌ನ ಐ.ಜಿ ಮಾತಾಡಿದರು.
“ನೋಡಿ ಸರ್! ನಾವು ಕಲ್ಲಕ್ಕ ಮತ್ತವಳ ತಂಡವನ್ನು ನಾಶ ಮಾಡಬೇಕು ತಾನೆ ಅದರ ಬಗ್ಗೆ ನಾವು ನಮ್ಮಲ್ಲೇ ವಿಚಾರವಿಮರ್ಶೆ ನಡೆಸಿ ಏನು, ಹೇಗೆ ಮಾಡುವುದೆಂದು ತೀರ್ಮಾನಿಸಿ ನಿಮಗೆ ಹೇಳುತ್ತೇವೆ ಸರಿ ತಾನೇ ಸರ್!”
ಆ ಮಾತು ಗೃಹಸಚಿವ ದಯಾನಂದರಿಗೆ ಸ್ವಲ್ಪ ಸಮಾಧಾನ ತಂದಂತೆ ಕಂಡಿತು. ನಿಧಾನವಾಗಿ ಕುರ್ಚಿಯಲ್ಲಿ ಕುಳಿತ ಅವರ ನೋಟ ಸ್ಕ್ವಾಡಿನ ಮುಖ್ಯಸ್ಥರ ಮೇಲೆ ಇತ್ತು. ಅವರು ಅಲ್ಲಿ ನಡೆಯುತ್ತಿರುವ ಸಮಾವೇಶಕ್ಕೂ ತಮಗೂ ಯಾವ ಸಂಬಂಧವೂ ಇಲ್ಲದಂತೆ ತಲೆಕೆಳಗೆ ಮಾಡಿ ಕುಳಿತಿದ್ದರು. ಆ ವ್ಯಕ್ತಿಯ ವರ್ಗಾವಣೆ ಖಂಡಿತವೆಂದುಕೊಂಡ ಕಮೀಶನರ್ ನಯವಿನಯದ ದನಿಯಲ್ಲಿ ತಮ್ಮ ನಿರ್ಣಯವನ್ನು ತಿಳಿಸಿದರು.
“ನೀವು ಅನುಮತಿಸಿದರೆ ಸರ್, ನಾವು ಕಲ್ಲಕ್ಕನನ್ನು ಹಿಡಿಯುವ ನಮ್ಮ ಯೋಜನೆಯನ್ನು ರೂಪಿಸಿ ಮತ್ತೆ ನಿಮ್ಮ ಮುಂದೆ ಹಾಜರಾಗುತ್ತೇವೆ, ಸರಿತಾನೆ ಸರ್!”
ಗೃಹಸಚಿವರ ಮುಖಭಾವ ಇಬ್ಬರ ನಮ್ರ ಮಾತುಗಳಿಂದ ಸಾಕಷ್ಟು ಬದಲಾಗಿತ್ತು. ನಿರ್ಣಯ ತೆಗೆದುಕೊಂಡಂತಹ ದನಿಯಲ್ಲಿ ಹೇಳಿದರು,
“ಸರಿ! ಹೋಗಿ ಆದಷ್ಟು ಬೇಗ ಯೋಜನೆಯನ್ನು ರೂಪುಗೊಳಿಸಿ ಫೋನ್ ಮಾಡಿ.”
“ಕಲ್ಲಕ್ಕನ ಸಮಸ್ಯೆ ಪರಿಹಾರವಾಗುವರೆಗೂ ನಾವೇನೂ ಬೇರೆಯದನ್ನು ಯೋಚಿಸುವುದಿಲ್ಲ. ಬರುತ್ತೇವೆ ಸರ್” ಎಂದರು ಕ್ರೈಮ್ಸ್‌ನ ಐ.ಜಿ. ಸಾಹೇಬರು. ಆ ಮೂವರು ಪೋಲೀಸ್ ಅಧಿಕಾರಿಯರು ಗೃಹಸಚಿವರ ಚೇಂಬರ್‌ನಿಂದ ಹೊರಬಿದ್ದ ಮೇಲೆ ಹೇಳಿದರು ಕಮೀಷನರ್ ರಂಜಿತ್‌ಸಿಂಗ್.
“ನನ್ನ ಕಾರ್ಯಾಲಯದಲ್ಲಿ ಕುಳಿತು ಈ ವಿಷಯ ಮಾತಾಡುವ.”
ಅದಕ್ಕೆ ತಮ್ಮ ಒಪ್ಪಿಗೆ ಸೂಚಿಸುವಂತೆ ತಲೆ ಹಾಕಿದರು ಮಿಕ್ಕಿಬ್ಬರು. ಮೂರೂ ವಾಹನಗಳು ಅಲ್ಲಿಂದ ಕಮೀಷನರರ ಕಾರ್ಯಾಲಯದ ಕಡೆ ಓಡತೊಡಗಿದವು.
ಅಲ್ಲಿದ್ದ ಪೇದೆಯರು, ಇನ್ನಿತರ ಪೋಲೀಸ್ ಅಧಿಕಾರಿಯರು ಶಿಸ್ತಿನಿಂದ ಹಾಕುತ್ತಿದ್ದ ಸೆಲ್ಯೂಟ್‌ಗಳನ್ನು ಸ್ವೀಕರಿಸುತ್ತಾ ತಮ್ಮ ಕೋಣೆಯ ಮೊದಲ ಭಾಗದಲ್ಲಿ ಬಂದ ರಂಜೀತ್‌ಸಿಂಗ್ ಯಾರ ಫೋನು ಬಂದರೂ ತನಗೆ ಕನೆಕ್ಷನ್ ಕೊಡಬಾರದೆಂದು, ಯಾರು ಬಂದರೂ ಒಳಗೆ ಬಿಡಬಾರದೆಂದು ತಮ್ಮ ಕಾರ್ಯದರ್ಶಿಗೆ ಹೇಳಿ ಚೇಂಬರನ್ನು ಪ್ರವೇಶಿಸಿದರು. ಅವರ ಹಿಂದೆಯೇ ಇದ್ದರು ಕ್ರೈಮ್‌ನ ಐ.ಜಿ. ಮತ್ತು ಸ್ಕ್ವಾಡಿನ ಮುಖ್ಯಸ್ಥರು. ಸದ್ದಿಲ್ಲದಂತೆ ದಪ್ಪನೆಯ ಬಾಗಿಲು ಮುಚ್ಚಿಕೊಳ್ಳುತ್ತಿದ್ದಂತೆ ಹೇಳಿದರು ಸ್ಕ್ವಾಡಿನ ಮುಖ್ಯಸ್ಥ ಶ್ರೀವಾಸ್ತವ.
“ಇಂತಹ ರಾಜಕಾರಣಿಯರ ಮಾತುಗಳನ್ನು ಕೇಳುತ್ತಿದ್ದರೆ ಹೇಸಿಗೆ ಹುಟ್ಟುತ್ತದೆ. ಬಂಡೇರಹಳ್ಳಿ ಮತ್ತು ಕಾಡಿನ ವಿಷಯವೇನೂ ತಿಳಿಯದ ಇವರು ಕ್ರಾಂತಿಕಾರಿಯರ ಬಗ್ಗೆ ಮಾತಾಡುತ್ತಾರೆ.”
ಇನ್ನೂ ಇಳಿಯದ ತಮ್ಮ ರೋಷವನ್ನು ಕಾರಿಕೊಳ್ಳುವಂತ್ತಿತ್ತವರ ಮಾತು.
“ಏನೇ ಆಗಲಿ ನೀವು ಹಾಗೆ ಮಾತಾಡಬಾರದಾಗಿತ್ತು” ಹೇಳಿದರು ಕಮೀಷನರ್.
“ಆದದ್ದು ಆಗಿ ಹೋಯಿತು, ಈಗ ಅದರ ಮಾತು ಬೇಡ. ನಮ್ಮೆದುರಿರುವ ಸಮಸ್ಯೆ ಬಗ್ಗೆ ಯೋಚಿಸುವ” ತಕ್ಷಣ ಮುಖ್ಯ ವಿಷಯಕ್ಕೆ ಬಂದರು ಕ್ರೈಮ್‌ನ ಐ.ಜಿ.
“ನಿಜ! ಮೊದಲು ಕಾಫಿ ನೀರು ತರೆಸಿ” ಹೇಳಿದ್ದ ಸ್ಕ್ವಾಡಿನ ಮುಖ್ಯಸ್ಥ ಶ್ರೀವಾಸ್ತವ.
ಆ ಮೂವರು ಪೋಲೀಸ್ ಅಧಿಕಾರಿಗಳ ಜವಾಬ್ದಾರಿಗಳು ಬೇರೆ ಬೇರೆಯಾಗಿದ್ದರೂ ಅವರೆಲ್ಲಾ ಐ.ಪಿ.ಎಸ್. ಅಧಿಕಾರಿಯರು ವಯಸ್ಸು ಕೂಡ ಹೆಚ್ಚಕಡಿಮೆ ಒಂದೇ ಎನ್ನಬಹುದು. ರಾಜಕಾರಣಿಯರ ಮನೋಧರ್ಮದ ಪ್ರಕಾರ ಅವರ ಹುದ್ದೆಗಳು ಯಾವಾಗ ಹೇಗೆ ಬದಲಾಗುತ್ತವೆ ಎನ್ನುವುದು ಹೇಳಲಾಗುವುದಿಲ್ಲ. ಬಹುಕಾಲದಿಂದ ಪೋಲೀಸ್ ಖಾತೆಯಲ್ಲಿ ದುಡಿಯುತ್ತಿದ್ದ ಅವರಿಗೆ ಒಬ್ಬರ ಮನೋಭಾವ ಇನ್ನೊಬ್ಬರಿಗೆ ಚೆನ್ನಾಗಿ ಗೊತ್ತಿತ್ತು. ನೀರು ಕಾಫಿ ಕುಡಿದಾದನಂತರ ಹೇಳಿದರು ಸ್ಕ್ವಾಡಿನ ಮುಖ್ಯಸ್ಥರು.
“ಇದು ಇಷ್ಟು ಬೇಗ, ಇಷ್ಟು ಅವಸರದಲ್ಲಿ ಆಗುವ ಕೆಲಸವಲ್ಲ, ಆ ಕಲ್ಯಾಣಿಯ ಹುಡುಕಾಟದಲ್ಲಿ ನಮ್ಮವರು ಎಷ್ಟು ಜನ ಸತ್ತಿದ್ದಾರೆಂಬುವುದೂ ಆ ದಯಾನಂದರಿಗೆ ಗೊತ್ತಿಲ್ಲ. ಅವರನ್ನೇ ಬಂಡೇರಹಳ್ಳಿಯ ಕಾಡಿನ ನಡುವೆ ಬಿಟ್ಟು ಬಂದರೆ ಗೊತ್ತಾಗುತ್ತದೆ.”
“ಅದು ನಮಗೂ ಗೊತ್ತು! ಈಗ ನಾವು ಕ್ರಾಂತಿಕಾರಿಯರನ್ನು ಕಾಡಿನಲ್ಲಿ ಅಟ್ಟಿಸಿಕೊಂಡು ಹೋಗುವುದು ಬಿಟ್ಟು ಬೇರೆ ಯಾವುದಾದರೂ ವಿಧಾನವನ್ನು ಯೋಚಿಸಬೇಕು. ಅಂತಹ ಯಾವುದಾದರೂ ಯೋಜನೆ ಹಾಕಬೇಕು” ಹೇಳಿದರು ಕಮೀಷನರ್ ರಂಜೀತ. ಅದೇ ಚಿಂತನೆಯಲ್ಲಿ ಮೂವರೂ ತೊಡಗಿದರು. ದೊಡ್ಡ ಚೇಂಬರಿನಲ್ಲಿ ಮೌನ. ತಮ್ಮ ಹಣೆಯನ್ನು ಎಡಗೈಯ ಎರಡೂ ಬೆರಳುಗಳಿಂದ ಉಜ್ಜಿಕೊಳ್ಳುತ್ತಿದ್ದ ಕ್ರೈಮ್ಸ್‌ನ ಐ.ಜಿ. ಸುಮಾರು ಮೂರು ನಿಮಿಷಗಳು ಸಂದಿದ ಮೇಲೆ ಒಮ್ಮೆಲೆ ಏನೋ ನೆನಪಾದಂತೆ ಹೇಳಿದರು.
“ನಾವು ತೇಜ್‌ನನ್ನು ಈ ಕೆಲಸಕ್ಕೆ ಯಾಕೆ ಉಪಯೋಗಿಸಿಕೊಳ್ಳಬಾರದು” ಇನ್ಸ್‌ಪೆಕ್ಟರ್ ತೇಜ್‌ನ ಬಗ್ಗೆ ಅಲ್ಲಿದ್ದ ಮೂವರೂ ಪೋಲೀಸ್ ಅಧಿಕಾರಿಯರಿಗೂ ಚನ್ನಾಗಿ ಗೊತ್ತಿತ್ತು. ಡಿ.ಜಿ.ಯನ್ನೇ ನೋಡುತ್ತಿದ್ದ ಸ್ಕ್ವಾಡಿನ ಮುಖ್ಯಸ್ಥ ಕೆಲಕ್ಷಣಗಳ ಬಳಿಕ ಕೇಳಿದರು.
“ಹೇಗೆ?”
“ಬುದ್ಧಿವಂತ, ಧೈರ್ಯಶಾಲಿ, ಮನಸ್ಸು ಮಾಡಿದರೆ ಅವನೊಬ್ಬನೇ ಅವರ ಠಿಕಾಣೆಯನ್ನು ಪತ್ತೆ ಹಚ್ಚಬಹುದು” ಹೇಳಿದರು ಕಮೀಶನರ್.
“ನಿಜ! ಅವನು ಸತ್ತರೂ ಅಳಲು ಹಿಂದೆ ಮುಂದೆ ಯಾರೂ ಇಲ್ಲ” ವ್ಯಂಗ್ಯದ ದನಿಯಲ್ಲಿ ತಮ್ಮ ಮಾತನ್ನು ಸೇರಿಸಿದರು ಸ್ಕ್ವಾಡಿನ ಮುಖ್ಯಸ್ಥ ಶ್ರೀವಾಸ್ತವ. ಕ್ರಾಂತಿಕಾರಿಯರ ಬಗ್ಗೆ ಅವರಿಗೆ ಗೊತ್ತಿದಷ್ಟು ಚೆನ್ನಾಗಿ ಅಲ್ಲಿದ್ದ ಮಿಕ್ಕಿಬ್ಬರಿಗೆ ಗೊತ್ತಿರಲಿಲ್ಲ.
ಉತೇಜ್‌ನ ಚಿಂತನೆಯಲ್ಲಿ ತೊಡಗಿದರು ಅಲ್ಲಿದ್ದ ಮೂವರೂ. ಹಲವು ಕ್ಷಣಗಳ ಮೌನವನ್ನು ಮುರಿದರು ಐ.ಜಿ.
“ನನಗೆ ತೇಜ್‌ನ ಬಗ್ಗೆ ಚೆನ್ನಾಗಿ ಗೊತ್ತು. ಅವನು ಅಷ್ಟು ಸುಲಭವಾಗಿ ಸಾಯುವವನಲ್ಲ. ಈಗಾಗಲೇ ಅವನನ್ನು ಮುಗಿಸಲು ಯತ್ನಿಸಿದ ಹಲವರು ತಾವೇ ಸಾವನ್ನು ಅಪ್ಪಿದ್ದಾರೆ” ಆತ್ಮವಿಶ್ವಾಸದಿಂದ ತುಂಬಿತ್ತವರ ಮಾತು.
“ನಾವು ಈ ಬಗ್ಗೆ ಯೋಚಿಸಬಹುದು. ಅದಕ್ಕೆ ತಮ್ಮ ಮಾತನ್ನೂ ಸೇರಿಸಿದರು ಕಮೀಶನರ್. ಅವರಿಬ್ಬರ ಕಡೆ ನೋಡುತ್ತಾ ಮಾತಾಡಿದರು ಸ್ಕ್ವಾಡ್‍ನ ಮುಖ್ಯಸ್ಥ ಶ್ರೀವಾಸ್ತವ.
“ಸರಿ! ಯೋಚಿಸುವ, ಅವನೊಬ್ಬನೇ ಈ ಕೆಲಸ ಹೇಗೆ ಸಾಧಿಸಬಲ್ಲ”
“ಅವನನ್ನೇ ಕರೆಸಿ ಅದರ ಬಗ್ಗೆ ಚರ್ಚಿಸಬಹುದಲ್ಲ! ಅವನೂ ತನ್ನ ಸಲಹೆಗಳನ್ನು ಕೊಡಬಹುದು” ಹೇಳಿದರು ಐ.ಜಿ. ಮತ್ತೆ ಅವರ ಎರಡು ಬೆರಳುಗಳು ಹಣೆಯನ್ನು ನೀವಿಕೊಳ್ಳುವ ಕೆಲಸ ಆರಂಭಿಸಿದವು.
“ಮೊದಲು ಅವನಿಗೆ ಈ ಕೆಲಸದಲ್ಲಿರುವ ಅಪಾಯದ ಪೂರ್ತಿ ಅರಿವು ಮಾಡಿಕೊಡಬೇಕು. ಅದನ್ನು ಕೇಳಿದ ಬಳಿಕ ಅವನು ಈ ಕೆಲಸಕ್ಕೆ ಒಪ್ಪಿಕೊಂಡರೆ ಮಾತನ್ನು ಮುಂದುವರೆಸಬಹುದು. ಈವರೆಗೆ ಸಾಹಸದ ಕೆಲಸಗಳನ್ನು ಮಾಡಿ ಅವನು ಬದುಕಿ ಉಳಿದಿರುವುದೇ ಒಂದು ಪವಾಡ, ಅವನು ಅನುಮತಿಸಿದರೆ ಮುಂದಿನ ಯೋಜನೆಯ ಬಗ್ಗೆ ಚರ್ಚಿಸಬಹುದು” ಹೇಳಿದರು ಸ್ಕ್ವಾಡಿನ ಮುಖ್ಯಸ್ಥರು. ಅದಕ್ಕೆ ಕಮೀಶನರ್‌ರಿಂದ ಕೂಡಲೇ ಉತ್ತರ ಬಂತು.
“ಅವನು ಒಪ್ಪಿಕೊಳ್ಳುತ್ತಾನೆ ಅದರಲ್ಲಿ ನನಗೆ ಸಂದೇಹವಿಲ್ಲ.”
“ಅವನನ್ನೇ ಬಲಿಪಶುವನ್ನಾಗಿ ಮಾಡುವುದಿದ್ದರೆ ಕರೆಸಿ, ಮಾತಾಡುವ”
* * *
ಇನ್ಸ್‌ಪೆಕ್ಟರ್ ಉತೇಜ್‌ನನ್ನು ಬಹುಜನ ತೇಜ್ ಎಂದೇ ಕರೆಯುತ್ತಿದ್ದರು. ಸುಮಾರು ಆರು ಅಡಿ ಎತ್ತರದ ಅವನದು ದೃಢವಾದ ಅಂಗಸೌಷ್ಟವ. ಅಷ್ಟೇ ಆಕರ್ಷಕ ಮುಖ. ಅವನು ಪೋಲೀಸ್ ಯುನಿಫಾರ್ಮ್‌ನಲ್ಲಿರುತ್ತಿದ್ದುದು ತೀರ ವಿರಳ. ಸಿ.ಸಿ.ಎಸ್‌ನಲ್ಲಿ ಕೆಲಸ ಮಾಡುತ್ತಿದ್ದ ಕಾರಣ ಪೋಲೀಸರ ಪೋಷಾಕದ ಅವಶ್ಯಕತೆ ಇಲ್ಲ. ಯಾವಾಗಲೂ ನಗುತ್ತಾ, ನಗಿಸುತ್ತಾ ಇರುತಿದ್ದ ಅವನನ್ನು ಪರಿಚಯವಿಲ್ಲದವರು ಪೋಲೀಸ್ ಖಾತೆಗೆ ಸೇರಿದವನೆಂದು ಗುರುತಿಸುವುದು ಕಷ್ಟ.
ಹಾಗೇ ಅವನು ಏನು ಮಾತಾಡುತ್ತಾನೆ ಎಂಬುವುದೂ ಯಾರೂ ಊಹಿಸಲಾರರು. ಎಂತೆಂತಹ ಹೇಮಾ ಹೇಮೀ ರೌಡಿಯರ ಬಾಯಿಬಿಡಿಸಿದ ಶ್ರೇಯ ಅವನದ್ದಾಗಿತ್ತು. ತನ್ನ ಪ್ರಾಣಕ್ಕೆ ಅಪಾಯವಿದೆ ಎಂಬುವುದು ಗೊತ್ತಿದ್ದರೂ ಒಬ್ಬನೇ ಇಬ್ಬರು ಐ.ಎಸ್.ಪಿ ಏಜೆಂಟರನ್ನು ಬಂಧಿಸಿ, ಅವರ ಬಾಯಿಬಿಡಿಸಿ ಹತ್ತು ಕೆ.ಜಿ. ಆರ್.ಡಿ.ಎಕ್ಸ್‌ನ್ನು ವಶಪಡಿಸಿದ. ಆ ಇಬ್ಬರ ಬಂಧನದಿಂದಾಗಿ ಪಟ್ಟಣದ ಹತ್ತಾರು ಯುವಕರು ಅವನ ಜಾಲದಲ್ಲಿ ಸಿಕ್ಕಿಬಿದ್ದಿದ್ದರು. ಪಟ್ಟಣದಲ್ಲಿ ಆಗಲಿರುವ ಮತಕಲಹಗಳ ವಿಷಯ ಬಯಲಾಗಿತ್ತು. ಅದರಿಂದಾಗಿ ಅವನ ಮೇಲೆ ಎರಡು ಸಲ ಕೊಲೆಯ ಯತ್ನಗಳು ನಡೆದಿದ್ದವು. ಅದರ ವಾಸನೆಯನ್ನು ಮೊದಲೇ ಗ್ರಹಿಸಿದ ತೇಜಾ ಅದರಿಂದ ತಪ್ಪಿಸಿಕೊಂಡಿದ್ದ. ಅವನ ನಗುವ, ನಗಿಸುವಷ್ಟು ಸ್ವಭಾವದ ಕಾರಣ ಎಷ್ಟೋ ಅಪರಾಧಿಗಳು ಅವನ ಮಾತಿಗೆ ಮೋಸಹೋಗಿ ಅವನಿಗೆ ಬಿದ್ದಿದ್ದರು.
ಮೂವರು ಹಿರಿಯ ಪೋಲೀಸ್ ಅಧಿಕಾರಿಗಳೆದುರು ಕುಳಿತಿದ್ದ ತೇಜ. ಅವನಿಗೆ ಕಲ್ಲಕ್ಕ ಮತ್ತು ತಾವು ಯೋಚಿಸಿದ ಯೋಜನೆಯ ಬಗ್ಗೆ ಕ್ಲುಪ್ತವಾದ ವಿವರ ಕೊಟ್ಟು, ಆ ಕೆಲಸವನ್ನು ಮಾಡುವನೇ ಎಂದು ಕೇಳಿದರು ಕಮೀಷನರ್. ಕೆಲಕ್ಷಣಗಳು ಮಾತ್ರ ಯೋಚಿಸಿದ ತೇಜಾ ಆ ಕೆಲಸ ಮಾಡಲು ಒಪ್ಪಿಕೊಂಡಿದ್ದ. ಅವನನ್ನೇ ನೋಡುತ್ತಿದ್ದ ಸ್ಕ್ವಾಡಿನ ಮುಖ್ಯಸ್ಥ ಶ್ರೀವಾಸ್ತವ ಕರುಣಾಜನಕ ನಗೆಯನ್ನು ತುಟಿಗಳ ಮೇಲೆ ತಂದುಕೊಂಡು ಹೇಳಿದರು.
“ನೀನು ಸಾವನ್ನು ಅಪ್ಪಲು ಹೋಗುತ್ತಿರುವೆ, ಅದು ನೆನಪಿಡು.”
“ಅದು ಬಲವಂತವಾಗಿ ಬಂದು ನನ್ನನ್ನು ಅಪ್ಪುವ ಮೊದಲು ನಾವೇ ಹೋಗಿ ಅದನ್ನು ಅಪ್ಪುವುದು ಒಳ್ಳೆಯದಲ್ಲವೇ?” ಅದಕ್ಕೆ ನಗುತ್ತಲೇ ಉತ್ತರಿಸಿದ ತೇಜಾ.
“ಈ ಕೆಲಸ ಹೇಗೆ ಮಾಡುತ್ತಿ?” ಪ್ರಶ್ನಿಸಿದರು ಕಮೀಷನರ್ ಸಾಹೇಬರು.
“ನನಗೆ ಮೊದಲು ಈ ಕಲ್ಲಕ್ಕನ ಎಲ್ಲಾ ವಿವರಗಳು ಬೇಕು. ನಂತರ ಸ್ಕ್ವಾಡಿನ ಚೀಫಿನೊಡನೆ ಮಾತಾಡಿ ಯೋಜನೆ ರೂಪಿಸಬಹುದು” ಹೇಳಿದ ತೇಜಾ.
“ಹಾಗಾದರೆ ಇವತ್ತಿನ ಮಟ್ಟಿಗೆ ಈ ಕೆಲಸ ಮುಗಿದ ಹಾಗಾಯಿತು” ಹೇಳಿದರು ಕ್ರೈಮ್ಸ್‌ನ ಐ.ಜಿ.
“ನಾ ನಿನಗೆ ಬೇಕಾದ ಎಲ್ಲಾ ವಿವರ ಕೊಡುತ್ತೇನೆ. ಆರಾಮವಾಗಿ ಯೋಜನೆ ಹಾಕುವ” ಹೇಳಿದರು ಸ್ಕ್ವಾಡಿನ ಮುಖ್ಯಸ್ಥ ಶ್ರೀವಾಸ್ತವ. ಅವರು ಕಮೀಶನರ್ ಸಾಹೇಬರ ಚೆಂಬರಿನಲ್ಲಿ ಬಂದಾಗಿನಿಂದ ಮೊದಲ ಬಾರಿ ಟೆಲಿಫೋನಿನ ಗಂಟೆ ಬಾರಿಸತೊಡಗಿತು. ಯಾವುದೋ ಮುಖ್ಯ ವ್ಯಕ್ತಿಯದೇ ಕರೆ ಇರಬಹುದೆಂದುಕೊಳ್ಳುತ್ತಾ ರಿಸೀವರನ್ನು ಎತ್ತಿಕೊಂಡರು ಕಮೀಷನರ್.
“ಸರ್! ಸಿ.ಎಂ. ಸಾಹೇಬರು ಲೈನಿನಲ್ಲಿದ್ದಾರೆ” ಎಂದ ಅವರ ಸೆಕ್ರೆಟರಿ ಸಂಪರ್ಕ ಮುರಿದ.
“ಹಲೋ ಸರ್ ನಾನು ರಂಜೀತ್ ಸಿಂಗ್…”
“ಹೊಂ ಮಿನಿಸ್ಟರಿಗೆ ಹೇಳಿದಂತೆ ಯಾವುದಾದರೂ ಯೋಜನೆ ರೂಪಿಸಿರುವಿರೇ?” ಅವರ ಮಾತನ್ನು ಅರ್ಧಕ್ಕೆ ತಡೆದು ಕೇಳಿದರು ಸಿ.ಎಂ. ಸಾಹೇಬರು.
“ಹೂಂ! ಸರ್! ಅದೀಗ ಸ್ಪಷ್ಟ ರೂಪ ತಾಳುತ್ತಿದೆ. ಎಲ್ಲರೂ ಇಲ್ಲೇ ಇದ್ದಾರೆ. ಈ ರಾತ್ರಿಯವರೆಗೆ ಎಲ್ಲವೂ ನಿಖರವಾಗಬಹುದು” ಬಹು ವಿನಯದ ದನಿಯಲ್ಲಿ ಹೇಳಿದರು ಕಮೀಷನರ್. ಹೋಂಮಿನಿಸ್ಟರರು ಆಗಲೇ ಸಿ.ಎಂ. ಸಾಹೇಬರಿಗೆ ವಿಷಯ ತಿಳಿಸಿರಬಹುದೇ ಎಂದುಕೊಳ್ಳುತ್ತಿದ್ದಾಗ ಸಿ.ಎಂ. ಸಾಹೇಬರ ದನಿ ಕೇಳಿಬಂತು.
“ಹೋಂ ಮಿನಿಸ್ಟರ್‌ರು ಏನೇನು ಮಾತಾಡಿದರೆಂಬುವುದು ನನಗೆ ಗೊತ್ತು. ನಿಮ್ಮ ಸಂಗಡಿಗರಿಗೆ ಅದರ ಯೋಚನೆ ಬಿಟ್ಟು ಕೆಲಸ ಮುಂದುವರೆಸಲು ಹೇಳಿ, ಈಗಿನಿಂದ ಕೆಲಕಾಲ ಹೋಂಮಿನಿಸ್ಟರಿಯನ್ನು ನಾನೇ ನೋಡಿಕೊಳ್ಳ ಬೇಕೆಂದುಕೊಂಡಿದ್ದೇನೆ. ನಿಮ್ಮ ಯೋಜನೆ ಪೂರ್ಣ ನಿಖರರೂಪ ತಾಳಿದ ಕೂಡಲೇ ಫೋನ್ ಮಾಡಿ, ಭೇಟಿಯಾಗಿ ಮಾತಾಡುವ… ರಾತ್ರಿ ಎಷ್ಟು ಹೊತ್ತಾದರೂ ಚಿಂತೆ ಇಲ್ಲ ಫೋನ್ ಮಾಡಿ” ಎಂದ ಸಿ.ಎಂ. ಸಾಹೇಬರು ತಮ್ಮ ಉದ್ದನೆಯ ಮಾತು ಮುಗಿಸಿ ಸಂಪರ್ಕ ಮುರಿದರು. ಅವರು ಹೇಳಿದ್ದನ್ನೇ ಮೆಲುಕು ಹಾಕುತ್ತಾ ರಿಸೀವರನ್ನು ಕೆಳಗಿಟ್ಟರು ಕಮೀಷನರ್.
ಮಾತು ಮುಗಿಯುವವರೆಗೂ ತಮ್ಮನ್ನೇ ನೋಡುತ್ತಲಿದ್ದ ಅಲ್ಲಿ ಕುಳಿತವರಿಗೆ ಸಿ.ಎಂ. ಸಾಹೇಬರು ಹೇಳಿದ ಮಾತನ್ನು ಹೇಳಿದರು ಕಮೀಷನರ್, ಅವರ ಮಾತು ಮುಗಿಯುತ್ತಲೇ ಹೇಳಿದರು ಸ್ಕ್ವಾಡಿನ ಮುಖ್ಯಸ್ಥ ಶ್ರೀವಾಸ್ತವ.
“ಹೋಂ ಮಿನಿಸ್ಟರ್‌ರ ದಡ್ಡತನ ಅವರಿಗೆ ಗೊತ್ತಾದಹಾಗಿದೆ.”
“ಅದರಲ್ಲಿ ಸಂದೇಹವಿಲ್ಲ. ಅವರು ಪ್ರತಿಕಡೆ ತಮ್ಮ ನಂಬಿಕಸ್ಥರನ್ನು ಇಟ್ಟುಕೊಂಡಹಾಗಿದೆ” ಹೇಳಿದರು ಕ್ರೈಮ್ಸ್‌ನ ಐ.ಜಿ.
“ಇಂತಹ ದಕ್ಷ, ಬುದ್ಧಿವಂತ ಸಿ.ಎಂ. ಸಾಹೇಬರು ಈ ದಯಾನಂದನನ್ನು ಇಷ್ಟು ದಿನ ಹೇಗೆ ಸಹಿಸಿದರೆಂಬುವುದೇ ಆಶ್ಚರ್ಯ” ಹೇಳಿದರು ಕಮೀಷನರ್.
“ಈ ರಾಜಕೀಯದ ಬಗ್ಗೆ ನಾವು ಹೆಚ್ಚು ತಲೆಕೆಡಿಸಿಕೊಳ್ಳುವುದು ಬೇಡ. ತೇಜಾನನ್ನು ನಾನೀಗ ಜತೆಗೆ ಕರೆದೊಯ್ಯುತ್ತೇನೆ. ನಾವು ಯೋಜನೆ ರೂಪಿಸಿದ ನಂತರ ಫೋನ್ ಮಾಡುತ್ತೇನೆ” ತಮ್ಮ ಕುರ್ಚಿಯಿಂದ ಏಳುತ್ತಾ ಹೇಳಿದರು ಸ್ಕ್ವಾಡಿನ ಮುಖ್ಯಸ್ಥರು. ತಾನೂ ಎದ್ದು ತೇಜಾ ಅವರಿಂದ ದೂರ ಸರಿದು ನಿಂತ.
“ರಾತ್ರಿ ಎಷ್ಟು ಹೊತ್ತಾದರೂ ಫೋನ್ ಮಾಡಿ, ನಾನು ಸಿ.ಎಂ. ಸಾಹೇಬರಿಗೆ ಎಲ್ಲ ವಿವರ ಕೊಡಬೇಕು” ತಾವು ಕುರ್ಚಿಯಿಂದ ಏಳುತ್ತಾ ಹೇಳಿದರು ಕಮೀಷನರ್. ಐ.ಜಿ. ಸಾಹೇಬರೂ ಎದ್ದ ಬಳಿಕ ಬಿಡುಗಡೆಯ ಶಿಷ್ಟಾಚಾರ ಮುಗಿಯಿತು. ಕಮೀಷನರ್‌ರಿಗೆ ಆಕರ್ಷಕ ಭಂಗಿಯಲ್ಲಿ ಸೆಲ್ಯೂಟ್ ಹೊಡೆದು ಆ ಕೋಣೆಯಿಂದ ಹೊರಬಿದ್ದ ತೇಜಾ. ಸ್ಕ್ವಾಡಿನ ಮುಖ್ಯಸ್ಥರ ವಾಹನದಲ್ಲಿ ಅವರ ಬದಿಗೆ ಅವನು ಕುಳಿತ ಮೇಲೆ ಅದು ಇನ್ನೊಂದು ಪೋಲೀಸ್ ಕಾರ್ಯಾಲಯದ ಕಡೆ ಓಡತೊಡಗಿತು.
*****