ಬ್ಯಾಸ್ಕೆಟ್‌ಬಾಲ್ ಪಂದ್ಯಾವಳಿಯ ಫೈನಲ್‌ಗೆ ನಿರೀಕ್ಷೆಯನ್ನು ಮೀರಿ ವಿದ್ಯಾರ್ಥಿ ವಿದ್ಯಾರ್ಥಿನಿಯರು ಸೇರಿದ್ದರು. ರಂಗನ ತಂಡ ಗೆಲ್ಲುವ ಬಗ್ಗೆ ಬೆಟ್ಸ್ ಶುರುವಾಗಿತ್ತು. ಲೆಕ್ಚರರ್‌ಗಳಲ್ಲೂ ಯಾವ ಅನುಮಾನವಿರಲಿಲ್ಲ. ಆಟ ಆರಂಭವಾಗುತ್ತಲೇ ಶೀಟಿ ಚಪ್ಪಾಳೆಗಳು ಮೊಳಗಿದವು. ರಂಗನಲ್ಲಿದ್ದ ಹಾರ್ಸ್ ಸ್ಟ್ರೆಂಥ್ ಜಿಂಕೆಯ ಜಂಪಿಂಗ್ ಸ್ಟೈಲ್, ಹಾವಿನಂತೆ ತಪ್ಪಿಸಿಕೊಂಡು ಹರಿವ ಪರಿ, ಕರಾರುವಕ್ಕಾಗಿ ಬ್ಯಾಸ್ಕೆಟ್ ಬಾಲ್ ಎಸೆವ ಗೆಲುವಿನ ಗುರಿ ವೈರಿಗಳನ್ನು ತಲ್ಲಣಗೊಳಿಸಿದರೂ ಮನದಲ್ಲಿ ಅವನ ಬಗ್ಗೆ ಮೆಚ್ಚುಗೆಯಿಲ್ಲದಿರಲಿಲ್ಲ. ಮೊದಲೆಲ್ಲಾ ರಂಗನ ಆಟ ತೀವ್ರಗತಿಯಲ್ಲಿದ್ದು ಸಂಗ್ರಾಮಸಿಂಹನಾಗಲೆ ತನ್ನ ತಂದೆಯ ತಂತ್ರಫಲಿಸದ ಬಗ್ಗೆ ಹತಾಶೆಯ ಅಂಚಿನಲ್ಲಿದ್ದ. ಗ್ಯಾಲರಿಯಲ್ಲಿ ಬಂದು ಕೂತಿದ್ದ ಪರಮೇಶಿಯತ್ತ ಅವನು ಮುಕ್ಕಿ ಬಿಡುವಂತೆ ನೋಡಿದ. ಪರಮೇಶಿಗಾಗಲೆ ಎದ್ದು ಹೋಗಿ ತಮ್ಮನ ಕೆನ್ನೆಗೆ ಬಾರಿಸುವಷ್ಟು ಕೋಪ ಉಕ್ಕೇರಿತ್ತು. ರಂಗನ ಅಣ್ಣನೇ ಸ್ವತಹ ಆಟ ನೋಡಲು ಬಂದು ಕೂತಿದ್ದು ರಂಗನ ತಂಡದವರಿಗೆ ಹೊಸ ಸ್ಫೂರ್ತಿ ತಂದುಕೊಟ್ಟಿತ್ತು. ಗೆಲುವಿನ ಬಗ್ಗೆ ಯಾವುದೇ ಸಂಶಯವಿರಲಿಲ್ಲ. ಆದರೆ ಇದ್ದಕ್ಕಿದ್ದಂತೆ ರಂಗನ ಆಟದಲ್ಲಿ ಉದಾಸೀನತೆ ಕಂಡಿತು. ಅವನು ಜಿಂಕೆಯಂತೆ ಎಗರಿ ಎಸೆದ ಬಾಲ್ ಬ್ಯಾಸ್ಕೆಟಿನ ಆಚೆ ಬೀಳುವಾಗ ತಂಡ ಕಂಗಾಲಾಯಿತು. ‘ಏನಾಯಿತೋ ರಂಗ… ಕೇರ್‌ಫುಲ್ ಆಗಿ ಆಡೋ’ ಗೆಳೆಯರ ಗೋಗರೆತ, ರಂಗ ಅಣ್ಣನತ್ತ ನೋಡಿದ ಅಣ್ಣನ ಮುಖದಲ್ಲಿ ಮೂಡಿದ ಮಂದಹಾಸ ಅಷ್ಟು ದೂರಕ್ಕೂ ಕಂಡಿತು, ವಿಷಾದದ ನಗೆ ಬೀರಿದ ರಂಗ ತನ್ನ ತಂಡ ಸೋಲಿನತ್ತ ಸಾಗಲು ಬಿಟ್ಟು ಪೆಟ್ಟು ತಿಂದ ಹಾವಿನಂತಾದ ನೆರೆದ ಶೇಕಡ ಎಂಬತ್ತರಷ್ಟು ವಿದ್ಯಾರ್ಥಿ ವಿದ್ಯಾರ್ಥಿನಿಯರಲ್ಲಿ ಸಂಗ್ರಾಮನ ತಂಡ ಸೋಲಲಿ ಎಂಬ ಆಸೆಯಿತ್ತು. ಎಲ್ಲರೂ ಒಂದಲ್ಲ ಒಂದು ವಿಧದಲ್ಲಿ ಅವನ, ಅವನ ಪಟಾಲಮ್ಮುಗಳಿಂದ ತೊಂದರೆಗೀಡಾದವರೆ. ಅಂತೆಯೇ ಮೇಷ್ಟ್ರುಗಳಲ್ಲೂ ರಂಗನ ತಂಡವೇ ಗೆಲ್ಲಬೇಕೆಂಬ ಹಂಬಲವಿತ್ತು. ಆದರೆ ರೆಫ್ರಿಯಂತೆ ಕೂತ ಪರಮೇಶಿಯ ಬೇಡಿಕೆ ಈಡೇರಿಸಲೇಬೇಕಾದ ಅಗತ್ಯ ರಂಗನಿಗಿತ್ತು. ತಾಯಿಯ ಕಟ್ಟಪ್ಪಣೆಯನ್ನವನು ಮೀರುವಂತಿರಲಿಲ್ಲ. ಅಷ್ಟಕ್ಕೂ ಮೀರಿದರೆ ಮನೆಯಲ್ಲುಂಟಾಗಬಹುದಾದ ಅನಾಹುತದ ಆರಿವು ಹರಿದಾಗ ರಂಗ ಸೋಲಿನತ್ತಲೇ ಸರಿದ. ‘ಏನೆ, ನಿಮ್ಮೂರಿನ ಹುಡ್ಗ ಹಿಂಗೆ?’ ಕೆಲವರು ಚಿನ್ನುವನ್ನು ಗೇಲಿಮಾಡಿದರು. ‘ನನಗೇನೋ ಅಮ್ಮ, ಅವನು ಬೇಕಾಗಿ ಸೋಲ್ತಿದಾನೆ ಅನ್ಸುತ್ತೆ ಕಣ್ರೆ’ ಚಿನ್ನು ಹಾಗಂದಾಗ ಬಹಳಷ್ಟು ವಿದ್ಯಾರ್ಥಿನಿಯರಿಗೆ ಅವಳ ಮಾತು ಸರಿ ಎನ್ನಿಸಿತು. ಯಾರು ಸರಿಯೋ ಯಾರು ತಪ್ಪೋ ಪಂದ್ಯದಲ್ಲಿ ರಂಗನ ತಂಡ ಇನ್ನಿಲ್ಲದ ಸೋಲನ್ನು ಕಂಡಿತ್ತು. ಸಂಗ್ರಾಮನ ಪಟಾಲಮುಗಳು ಕೂಗಾಡಿ ಕೇಕೆ ಹಾಕಿ ಶಿಳ್ಳೆ ಹೊಡೆದು ಹುಲಿವೇಷ ಹಾಕಿದವರೋಪಾದಿಯಲ್ಲಿ ಕುಣಿದರೂ ಉಳಿದ ಯಾರಲ್ಲೂ ಅಂತಹ ಉತ್ಸಾಹ ಮೂಡಲಿಲ್ಲ.
‘ನನ್ಮಗ್ನೆ ಮ್ಯಾಚ್ ಹಾಳುಮಾಡಿಬಿಟ್ಟಲ್ಲೋ, ಏನಾಗಿತ್ತೋ ನಿನ್ಗೆ?’ ತಂಡದವರು ಬೈದರೂ ಅವನ ಸಾಮರ್ಥ್ಯದ ಬಗ್ಗೆ ಅವರಿಗೆ ಈಗಲೂ ಭರವಸೆಯಿತ್ತು. ಏನೇಆಗಿರಲಿ ಆಗಿರಲಿ ಈ ಸೋಲು ಸೋಲಲ್ಲ ಅಂದುಕೊಂಡರೂ ಬತ್ತಿದ ಮೋರೆಗಳಲ್ಲಿ ಕವಿದ ಮಂಕು ಕುಸಿದ ಆತ್ಮವಿಶ್ವಾಸವನ್ನು ಮುಚ್ಚಿಡುವಲ್ಲಿ ಸೋಲು ಕಂಡಿತ್ತು. ಸಂಗ್ರಾಮನ ತಂಡದ ಹಾರಾಟ ಚೀರಾಟ ಕುಣಿದಾಟವನ್ನು ಸೈರಿಸದ ಹಲವರು ಕೂಡಲೆ ಅಲ್ಲಿಂದ ನಿರ್ಗಮಿಸಿದರು. ಚಿನ್ನು ಮನೆಗೆ ಸ್ಕೂಟಿ ಏರಿ ಬರುವಾಗ ರಂಗ ಸೈಕಲ್ ಮೇಲೆ ಹಿಂದೆ ಬರುತ್ತಿದ್ದದು ಕಂಡರೂ ನಿಲ್ಲಿಸಿ ಅವನನ್ನು ಮಾತನಾಡಿಸುವ ಬಯಕೆಗೆ ಧೈರ್ಯದ ಗರಿಗಳೇ ಮೂಡಲಿಲ್ಲ. ಸೋತವನನ್ನು ಸಾಂತ್ವನಿಸುವ ತನ್ನ ಆಶೆಯನ್ನವಳು ಚಿಗುರಿನಲ್ಲೇ ಚಿವುಟಿ ಹಾಕಿದಳು.
ಈ ಆಟದ ಸೋಲು ಗೆಲುವುಗಳು ಕಾಲೇಜಿನ ಮುಂದಿನ ದಿನಗಳಲ್ಲಿ ಯಾವ ರೀತಿಯ ಪರಿಣಾಮಕ್ಕೆಡೆ ಕೊಡುವುದೋ ಎಂಬ ಅಳುಕು ಪ್ರಿನ್ಸಿಪಾಲರಲ್ಲಿತ್ತು. ಆದರೆ ಹಾಗೇನೂ ಆಗಲಿಲ್ಲ. ರಂಗನಾಗಲಿ ಸಂಗ್ರಾಮನಾಗಲಿ ಯಾವ ತರ್‍ಲೆ ತಂಟೆ ತಕರಾರುಗಳಿಗೆ ನೀರೆರೆಯಲಿಲ್ಲ. ರಂಗ ಸೋಲನ್ನು ಮರೆತು ಎಂದಿನಂತೆ ತನ್ನ ಪಾಠ ಪ್ರವಚನಗಳತ್ತ ಆಸಕ್ತನಾದ. ಪೈಪೋಟಿ ಮಾಡಲು ಸಿದ್ಧನಾದ ಸಂಗ್ರಾಮ ಎದುರಾಳಿ ಅಂದುಕೊಂಡವನ ನಿರುತ್ಸಾಹದಿಂದ ಕೊಂಚ ಮಂಕಾದ. ಕಾಲೇಜ್ ದಿನಗಳು ಉಪ್ಪಿಲ್ಲದ ಸಾಂಬಾರ್‌ನಂತೆ ಸಪ್ಪೆ ಸಪ್ಪೆ. ಪುನಃ ರಂಗನನ್ನು ಕೆಣಕಿ ಕಾಲೇಜ್ ದಿನಗಳಿಗೆ ರಂಗು ಮೂಡಿಸಲು ಹಾತೊರೆದ. ರಂಗು ಮೂಡಿಸಲು ಕಾಲೇಜೇ ಆಗಬೇಕೆ ? ಸಂಪಿಗೆಹಳ್ಳಿಗೂ ಸಹ ಅದರದ್ದೇ ಆದ ರಂಗಿದೆ. ಚಮಕ್ ಇದೆ. ಹಳ್ಳಿಯ ರಂಗು ಗುಂಗು ಮಾಸದಂತಿರಲೆಂದೇ ವರುಷಕ್ಕೊಮ್ಮೆ ಬರುವ ಜಾತ್ರೆ ಪರಸೆ ಉತ್ಸವಗಳಿವೆ. ಹಳ್ಳಿ ಎಂದರೆ ತೀರಾ ಹಳ್ಳಿಯಲ್ಲ ಹೋಬಳಿಯಾದರೂ ತಾಲ್ಲೂಕಿನಂತೆ ಅಭಿವೃದ್ಧಿ ಹೊಂದಿದ್ದ ಸಂಪಿಗೆಹಳ್ಳಿಯಲ್ಲಿ ಪದವಿ ಪೂರ್ವ ಕಾಲೇಜಿತ್ತು. ಪೊಲೀಸ್ ಸ್ಟೇಷನ್, ಪ್ರಾಥಮಿಕ ಆರೋಗ್ಯ ಕೇಂದ್ರ, ದನದ ಆಸ್ಪತ್ರೆ, ನವಭಾರತ ಎಂಬ ಟೆಂಟ್ ಸಿನಿಮಾ, ಅಂಗಡಿ ಮುಂಗಟ್ಟುಗಳು ಇದ್ದರೂ ಅಗತ್ಯ ವಸ್ತುಗಳಿಗೆ ಪೇಟೆಯತ್ತಲೇ ಮುಖ ಮಾಡಬೇಕಿತ್ತು. ಸ್ಟೇಷನ್ ಇದ್ದರೂ ಹಳ್ಳಿ ಪಂಚಾಯ್ತಿಗಳು ಪಾಳೇಗಾರರ ಕಟ್ಟೆಮನೆಯಲ್ಲೇ ಫೈಸಲ್ ಆಗುತ್ತಿದ್ದವು. ಹೀಗಾಗಿ ಪೊಲೀಸರು ಹಾಯಾಗಿದ್ದರೂ ಜೇಬು ಮಾತ್ರ ಖಾಲಿ ಮುಖದಲ್ಲೂ ಪ್ಯಾಲಿಕಳೆ.
ರಂಗ ಪಂದ್ಯದಲ್ಲಿ ಸೋತಿದ್ದರಿಂದ ಕಾಲೇಜಲ್ಲಿನ ಸಹಪಾಠಿಗಳಿಗೆ ನೋವಾದಂತೆ ಸಹಜವಾಗಿ ಅವನ ತಾಯಿ ಮತ್ತು ತಂಗಿ ಅದೇ ನೋವಿನಲ್ಲಿ ಭಾಗಿಗಳು, ತನ್ನಿಂದಾಗಿ ಮಗ ಸೋಲಿನ ಕಹಿಯನ್ನುಣ್ಣಬೇಕಾಯಿತಲ್ಲವೆಂದು ತಾಯಿಯ ಜೀವ ಮರುಗಿತು. ಆದರೆ ಕೆಲಸ ಕಳೆದುಕೊಂಡು ನಿರುದ್ಯೋಗಿಯಾಗುವ ಪರಮೇಶಿಯೂ ತನ್ನ ಮಗನೆ. ಆಟದಲ್ಲಿ ಸೋತರೆ ಅಂತಹ ನಷ್ಟವಾಗುವುದು ಆಟಗಾರನಿಗೆ ಮಾತ್ರ ಜೀವನದಲ್ಲಿ ಸೋತರೆ? ಜೊತೆಗೆ ರಂಗ ಉಳಿದ ಮಕ್ಕಳಿಗಿಂತ ಒಂದಿಷ್ಟು ದಡ್ಡನೆ. ಅವನು ಪಿಯುಸಿ ಮುಗಿಸಲು ಕುರಿಕೋಣಗಳು ಬಿದ್ದವು. ದೇಹವೇನೋ ಬೆಳೆದಿದೆ ಬುದ್ಧಿಗೆ ಆವೇಗವಿಲ್ಲ. ಆದರೂ ಉಳಿದ ಬುದ್ದಿವಂತ ಮಕ್ಕಳಿಗಿಂತ ರಂಗ ಅಂತಃಕರಣಿ, ತಾಯಿ ತಂಗಿ ಅಂತ ಒದ್ದಾಡುತ್ತಾನೆ. ಮದುವೆಯ ನಂತರ ಹೇಗೋ? ಉಳಿದಿಬ್ಬರೂ ಮೊದಲು ಹಾಕಿದ ಗೆರೆ ದಾಟಿದವರಲ್ಲ ಚೆನ್ನಾಗಿ ಓದಿದರು. ಕಮಲಮ್ಮ ತನ್ನ ಗಂಡ, ಮಕ್ಕಳ ಆಸಕ್ತಿ ಕಂಡು ಅವರು ಇಚ್ಛೆಪಟ್ಟದ್ದನ್ನು ಓದಿಸಲೆಂದೇ ತೋಟ ಮಾರಿದ್ದನ್ನು ನೆನೆದಳು. ಆಕಸ್ಮಿಕವೆಂಬಂತೆ ಶುರುವಾದ ವಾಂತಿಬೇದಿ ‘ಅಲೋಉಲೋ’ ಎನ್ನುವುದರೊಳಗೆ ಗಂಡನನ್ನು ಕಿತ್ತುಕೊಂಡಿತ್ತು. ಮಕ್ಕಳೇನೋ ದುಡಿಯುತ್ತಿದ್ದರು ಬೇಕಾದ ಕಡೆ ಮದುವೆಯೂ ಆದರು. ಸಾಯುವಾಗಲೂ ಗಂಡನಿಗೆ ರಂಗ ದಡ್ಡ, ಮುಗ್ಧ ಕೆಟ್ಟದ್ದನ್ನು ಮಾಡಿ ಗೊತ್ತಿಲ್ಲದವನು ಮುಂದೆ ಹೇಗೆ ಬದುಕುತ್ತಾನೋ ಎಂಬ ಕೊರಗಿತ್ತು. ಇದ್ದ ಒಬ್ಬ ಮಗಳ ಕುರಿತು ಅಂತಹ ಆತಂಕವೇನಿರಲಿಲ್ಲ. ಮೂವರು ಅಣ್ಣಂದಿರು ದೊಡ್ಡ ಹುದ್ದೆಗಳಲ್ಲಿ ಇದ್ದಾರೆ. ಅವಳ ಮದುವೆ ಜಾಂ ಜಾಂ ಅಂತಲೇ ಮಾಡುತ್ತಾರೆಂದೇ ನಂಬಿದವರು. ಆದರೆ ಗಂಡ ತೀರಿಕೊಂಡ ವರ್ಷದಲ್ಲೇ ತಮ್ಮ ಮಕ್ಕಳು ಹೆಂಡಿರ ಕೈಗೊಂಬೆಗಳಂತಾಗಿ ತಾವು ಯಜಮಾನಿಯಾಗಿ ಮೆರೆದ ಮನೆಯಲ್ಲೇ ಆಳಿನಂತೆ ನಡೆಸಿಕೊಳ್ಳುವಾಗ ‘ಎಲ್ಲರ ಮನೆಯ ದೋಸೆಯೂ ತೂತೆ’ ತಮಗೆ ತಾವೇ ತಿಳಿ ಹೇಳಿಕೊಂಡು, ಉದಾಸೀನತೆ ತೋರುವ ಮಕ್ಕಳು ಸೊಸೆಯರಿಗೇ ಹೊಂದಿಕೊಂಡರು. ಸೊಸೆಯರನ್ನು ಅವರೆಂದೂ ಆಕ್ಷೇಪಿಸಲಿಲ್ಲ. ತಮ್ಮ ಚಿನ್ನವೇ ಸರಿಯಿಲ್ಲವೆಂದಾಗ ಆಚಾರಿಯನ್ನಂದೇನು ಉಪಯೋಗವೆಂದುಕೊಂಡ ಕಮಲಮ್ಮ ಬದಲಾದ ಮಕ್ಕಳ ವಿಕಲತೆ ಬಗ್ಗೆ ಒಳಗೇ ಬೇಸರಗೊಂಡಳು. ಅವರಿಗೆ ತೀವ್ರ ನೋವಾಗಿದ್ದು ತಮ್ಮನ್ನು ನಡೆಸಿಕೊಳ್ಳುತ್ತಿರುವ ರೀತಿಯಿಂದಲ್ಲ ತಮ್ಮಿಂದಾಗಿ ಇದ್ದ ಒಬ್ಬ ಮಗಳಿಗೂ ರಂಗನಿಗೊದಗಿದ ಸ್ಥಿತಿಯನ್ನು ನೋಡುವಾಗ ದಿನದಿಂದ ದಿನಕ್ಕೆ ಖಿನ್ನಳಾಗುತ್ತಿದ್ದಳು. ದುಡಿಯದವರು ಭೂಮಿಯ ಮೇಲೆ ಬದುಕಲು ಅನರ್ಹರೆಂಬಂತೆ ಧಿಮಾಕು ತೋರುವ ತಮ್ಮ ಮಕ್ಕಳು ಸೊಸೆಯರ ಪ್ರವೃತ್ತಿ ಅವಳನ್ನು ಇರಿಯದ ದಿನವಿಲ್ಲ. ಅದಕ್ಕೆ ಸರಿಯಾಗಿ ರಂಗನ ಉಡಾಫೆ ಸ್ವಭಾವ, ಓದುವುದೊಂದನ್ನು ಬಿಟ್ಟು ಎಲ್ಲದರ ಬಗ್ಗೆ ಇರುವ ಆಸಕ್ತಿ ಎಂಥವರ ವಿರೋಧವನ್ನು ಕಟ್ಟಿಕೊಳ್ಳಲೂ ಹೇಸದ ದಾರ್ಷ್ಟ್ಯ ತನಗೆ ಸಂಬಂಧಪಡದ ಪ್ರಕರಣಗಳಲ್ಲೂ ಮೂಗು ತೂರಿಸಿ ನೊಂದವರ, ನ್ಯಾಯದ ಪರ ನಿಲ್ಲುವ ಅವನನ್ನು ತೆಗಳಲೂ ಆಕೆಗೆ ಮನಸ್ಸುಬಾರದು. ‘ಬಡವಾ ನೀ ಮಡಗಿದಂಗಿರಪ್ಪಾ’ ಎಂದವನಿಗೆ ತಿಳಿಸಿ ಹೇಳದ ದಿನವಿಲ್ಲ. ತಾನಷ್ಟೇ ಅಲ್ಲ ಮನೆಯಲ್ಲಿ ಅಣ್ಣಂದಿರು ಹೊಡೆದರೂ ಹೊಡೆಸಿಕೊಳ್ಳುತ್ತಾನೆ, ಬೈದರೂ ಬೈಸಿಕೊಳ್ಳುತ್ತಾನೆ ಎಂದೂ ತಿರುಗಿಬಿದ್ದವನಲ್ಲ. ಹೀಗಾಗಿ ಅವನೆಂದರೆ ಆಕೆಗೆ ಹೆಚ್ಚು ಪ್ರೀತಿ. ಆದರೆ ತೋರಿಸುವಂತಿಲ್ಲ. ಅಷ್ಟನ್ನೂ ಸೈರಿಸದಂತಹ ಸೊಸೆ ಮುದ್ದುಗಳನ್ನು ಪಡೆದ ಭಾಗ್ಯ ಕಮಲಮ್ಮನದು. ಗಂಡನನ್ನು ಕಳೆದುಕೊಂಡ ನಂತರ ಅಕ್ಷರಶಃ ಅನಾಥಸ್ಥಿತಿ. ಮಗಳಿಗೊಬ್ಬ ವರ ಸಿಕ್ಕು, ರಂಗನಿಗೊಂದು ಕೆಲಸ ಸಿಕ್ಕು ಈ ನರಕದಿಂದ ಪಾರಾಗಲಿ ಎಂಬುದಷ್ಟೇ ದೇವರಲ್ಲಿ ಆಕೆಯ ಮೊರೆ. ಸಂಪಿಗೆ ಹಳ್ಳಿಯಲ್ಲಿ ವರ್ಷಕ್ಕೊಮ್ಮೆ ದುಗ್ಗಮ್ಮನ ಜಾತ್ರೆ ಭಾರಿ ಜೋರು. ತೇರು ಎಳೆಯುತ್ತಾರೆ ಕೆಂಡ ಹಾಯುತ್ತಾರೆ. ಸುತ್ತಮುತ್ತಲ ಹಳ್ಳಿಯ ಸಹಸ್ರ ಸಹಸ್ರ ಜನ ಸೇರುತ್ತಾರೆ. ಕುರಿಕೋಳಿಗಳ ಬಲಿಗಂತೂ ಲೆಕ್ಕವಿಲ್ಲ. ಅಂತೆ ಸಸ್ಯಾಹಾರಿಗಳ ಮನೆಯಲ್ಲಿ ಹೋಳಿಗೆ ಪಾಯಸದ ಗಮಗಮ. ಜಾತ್ರೆಯ ಹೆಸರಲ್ಲಿ ಇಸ್ಪೀಟು, ಜೂಜಾಟ, ಕೋಳಿ ಅಂಕ ಎಲ್ಲಾ ಉಂಟು. ಈ ಕಾರಣವಾಗಿ ಪೊಲೀಸರ ಜೇಬಿಗೆ ಅಪರೂಪಕ್ಕೆ ಶುಕ್ರದೆಸೆ, ಕುಸ್ತಿ ಪಂದ್ಯಗಳೂ ನಡೆಯುತ್ತವೆ. ರಾಜ್ಯಮಟ್ಟದ ಪೈಲ್ವಾನರೂ ಸಂಪಿಗೆಹಳ್ಳಿಗೆ ಬಂದು ಸವಾಲ್ ಹಾಕುತ್ತಾರೆ. ರಥೋತ್ಸವದಲ್ಲಿ ರಥವನ್ನೇರಿದ ದುರ್ಗಾಂಬಿಕೆಯನ್ನು ಮೊದಲು ಪೂಜಿಸಿ ರಥೋತ್ಸವಕ್ಕೆ ಚಾಲನೆ ನೀಡುವ ದೇವತಾಕಾರ್ಯವನ್ನು ಹಿಂದಿನಿಂದಲೂ ಪಾಳೇಗಾರರ ಮನೆತನವೇ ನಡೆಸಿಕೊಂಡು ಬಂದಿದೆ. ಹೀಗಾಗಿ ಜಾತ್ರೆ ಚೆನ್ನಾಗಿ ನಡೆಯಬೇಕು. ಅಕ್ಕಪಕ್ಕದ ಹಳ್ಳಿಗರೂ ಬರಬೇಕು ಗದ್ದಲ ಪುಂಡಾಟವಿರಬಾರದು. ತಮ್ಮ ಸಿರಿವಂತಿಕೆಯ ಅಟ್ಟಹಾಸದ ಪ್ರದರ್ಶನಕ್ಕೆ ಜಾತ್ರೆಯೇ ವೇದಿಕೆಯಾಗಬೇಕು. ಇದರಿಂದ ಮುಂದಿನ ಚುನಾವಣೆಗಳಿಗೂ ಲಾಭವಾಗಬೇಕು ಎಂದೆಲ್ಲಾ ಲೆಕ್ಕಾಚಾರ ಮಾಡುವ ಉಗ್ರಪ್ಪ ಜಾತ್ರೆಯನ್ನು ತಮ್ಮ ರಾಜಕೀಯ ಹುನ್ನಾರಗಳಿಗೆ ಮೊದಲಿನಿಂದಲೂ ಏಣಿ ಮಾಡಿಕೊಂಡವನು. ಕುಸ್ತಿಯಲ್ಲಿ ಗೆದ್ದವರಿಗೆ ಬಂಗಾರದ ತೋಡಾ ತೊಡಿಸುವ ಸಂಪ್ರದಾಯವನ್ನು ಭರಮಪ್ಪನವರೂ ಹೆಚ್ಚು ಇಷ್ಟಪಟ್ಟೇ ಪಾಲಿಸುತ್ತಾ ಬಂದವರು. ಅದರಲ್ಲೂ ಪಂದ್ಯದಲ್ಲಿ ತಮ್ಮ ಊರಿನ ಪೈಲ್ವಾನರೇ ತೋಡಾ ಪಡೆಯಬೇಕೆಂಬ ಹಂಬಲ. ಅದಕ್ಕೆಂದೇ ಯಾವತ್ತೂ ಗರಡಿಯ ಮನೆಯ ಕಡೆಗೆ ಅವರದ್ದೊಂದು ಕಣ್ಣು.
‘ನೋಡ್ಲಾ ಚಮನಸಾಬು, ನಮ್ಮೂರಿನ ಹೈಕಳೇ ಬಂಗಾರದ ತೋಡಾ ತೊಡಬೇಕು. ಹಂಗೆ ತಯಾರ್ ಮಾಡಬೇಕ್ಲಾ’ ಎಂಬುದವರ ಕಳಕಳಿಯ ಬೇಡಿಕೆ, ಚಮನ್ ಸಾಬಿಯೂ ಕಡಿಮೆಯವನೇನಲ್ಲ. ಕಸರತ್ತು ಲಡತ್ತು ಪಟ್ಟು ಹಾಕುವುದನ್ನು ಕಲಿಸುವುದರಲ್ಲಿ ನಿಷ್ಣಾತ. ವಯಸ್ಸು ಐವತ್ತಾದರೂ ಇಪ್ಪತ್ತರ ಹುಮ್ಮಸ್ಸು, ಜಾತ್ರೆಯ ಹಿಂದಿನ ದಿನವೇ ಜಂಗಿ ಕುಸ್ತಿಗಳು ನಡೆಯುತ್ತವೆ. ಜಾತ್ರೆಯ ದಿನ ಬಹುಮಾನ ವಿತರಣೆ, ಭರಮಪ್ಪನವರಿಗೆ ಜಾತ್ರೆಗಿಂತ ಜಂಗಿಕುಸ್ತಿಯ ಮೇಲೆ ಬಹು ಖಯಾಲಿ. ತಮ್ಮ ಗರಡಿ ಹುಡುಗರೇ ಗೆಲ್ಲಬೇಕೆಂಬ ಹಠ. ಆ ಹಠ ಅವರೊಬ್ಬರದಾಗಿದ್ದರೆ ಅವಿರತ ಗೆಲುವು ಸಾಧ್ಯವಿರಲಿಲ್ಲವೇನೋ. ಗರಡಿ ಹುಡುಗರಲ್ಲೂ ಅಷ್ಟೆ, ಗೆದ್ದೇ ತೀರಬೇಕೆಂಬ ಜಿದ್ದು. ಜಾತ್ರೆಯ ಸಲುವಾಗಿ ದುಗ್ಗಮ್ಮನ ಗುಡಿಯಷ್ಟೇ ಅಲ್ಲ ಅನೇಕ ಮನೆಗಳೂ ಹೊಸದಾಗಿ ಸುಣ್ಣಬಣ್ಣ ಕಂಡವು. ಪಾಳೇಗಾರರ ಮನೆಗೆ ಹೊಸ ಸಿಂಗಾರ, ವಿದ್ಯುತ್ ಅಲಂಕಾರದಿಂದ ಮೈಸೂರು ದಸರಾದ ಸೊಬಗು, ಇಡೀ ಹಳ್ಳಿಗೇ ಯೌವನ ಮರುಕಳಿಸಿತ್ತು. ಹಳೆ ಪೆಟಾರಿಯಲ್ಲಿದ್ದ ಮದುವೆ ಸೀರೆಗಳನ್ನು ಈಚೆಗೆ ತರುವ ಉಮೇದು ಹಳೆಮುತೈದೆಯರಿಗೆ. ಹೊಸ ಜೋಡಿಗಳಿಗೆ ಹೊಸ ಪೀತಾಂಬರ ಅಪರೂಪದ ಸೂಟುಬೂಟು ತೊಟ್ಟು ಕೈಕೈ ಹಿಡಿದು ನಡೆದಾಡುವ ಸಡಗರ ಮಕ್ಕಳ ಓದಿಗೆ ಅಲ್ಪವಿರಾಮ ಕುಣಿದಾಟದ ಸಂಭ್ರಮ. ಹಳೆ ಮುದುಕರಿಗೆ ಜರಿ ಅಂಚಿನ ಧೋತರ ಉಟ್ಟು ಹೆಗಲ ಮೇಲೆ ಶಲ್ಯ ಹಾಕಿ ಸಿಗರೇಟಿನ ಧಂ ಎಳೆಯುತ್ತಾ ಹೆಂಗಸರ ಗಮನ ಸೆಳೆವ ಚಪಲ. ನವಭಾರತಿ ಟೆಂಟ್‌ನಲ್ಲಿ ರಾಜಕುಮಾರನ ಹೊಸ ಸಿನಿಮಾ ರಿಲೀಸ್ ಗಿಲೀಟಿನ ಒಡವೆ ಮಾರೋರು, ಬಳೆ, ಟೇಪು, ಸ್ನೋ, ಪೌಡರ್ ಹರವಿಕೊಂಡು ಕೂತವರು ಕಾರಮಂಡಕ್ಕಿ, ಬೆಂಡುಬತ್ತಾಸು ಮಳಿಗೆಗಳು ಸಣ್ಣಪುಟ್ಟ ಗುಡಾರಗಳಲ್ಲಿ ಹೋಟೆಲ್ ಇಟ್ಟವರು ಹಾದಿಬೀದಿಗಳಲ್ಲಿ ಮೆಣಸಿನಕಾಯಿ ಬೋಂಡಾ, ವಡೆ, ಜಿಲೇಬಿ ತಯಾರ್ ಮಾಡುವವರ ಗುಂಪು, ದೊಗಳೆ ಚಡ್ಡಿ ಬಣ್ಣದ ಬನಿಯನ್ ವಾಯಿಲ್ ಸೀರೆ, ಜುಬ್ಬ ಪೈಜಾಮ ರಾಶಿ ಹಾಕಿಕೊಂಡು ಸಸ್ತಾರೇಟಿನ ಆಶೆ ತೋರೋರು, ಬಲೂನು ಗಿರಿಗಟ್ಲೆ ಬೊಂಬಾಯಿ ಮಿಠಾಯಿ ಆಸಾಮಿಗಳು, ಐಸ್ ಕ್ರೀಂ ಗಾಡಿ ದಬ್ಬೋರು, ಸ್ಟೀಲ್ ಸಿಲ್ವಾರ ಪಾತ್ರೆ ಪಡಗ ಗುಡ್ಡೆ ಹಾಕ್ಕೊಂಡು ‘ಒಂದು ಸ್ಟೀಲ್ ಪಾತ್ರೆ ಕೊಂಡ್ರೆ ಒಂದು ಸಿಲ್ವಾರ್ ಪಾತ್ರೆ’ ಎಂದು ಆಸೆ ಹುಟ್ಟಿಸುವ ಸಾಬಿಗಳು, ಬಿಸಿಲಿಗೆ ಬಾಡಿದ ಹೂಮಾರೋ ಬಾಡದ ಹುಡುಗಿಯರು. ಸರ್ಕಸ್‌ನೋರೂ ಬರೋರಿದ್ದು ಸ್ವಲ್ಪದರಲ್ಲೇ ಮಿಸ್ ಆಗಿ ಬಾಂಬೆ ಷೋನವರು ಟೆಂಟ್ ಹಾಕಿದ್ದರು. ಸಂಪಿಗೆಹಳ್ಳಿ ಜಾತ್ರೆ ಅಂದರೆ ಸಾಮಾನ್ಯವೆ ಅನ್ನುವಂತಿತ್ತು. ಜಾತ್ರೆಯ ಗದ್ದಲದಲ್ಲಿ ತಿರುಗುತ್ತಾ ಮನೆಗೆಲಸ ಮರ್ತಿಯೋ ರಂಗ, ಅಣ್ಣ ಅತ್ತಿಗೆಯೋರ ಜೊತೆನಲ್ಲೇ ಇರು. ಅವರಿಗೆ ಆ ಜನ ಜಂಗುಳಿಯಲ್ಲಿ ಅಮ್ಮನಿಗೆ ಕಾಯಿ ಒಡೆಸಿ ಪೂಜೆ ಮಾಡಿಸೋಕೆ ಆಗೊಲ್ಲ. ನಿಂದೇ ಆ ಕಾರ್ಯ. ರಾತ್ರಿ ಬೇಗ ಮನೆಗೆ ಬಂದು ಬಿಡಬೇಕು. ಕುಸ್ತಿಪಸ್ತಿ ಅಂತ ಆಡೋಕೆ ಹೋಗ್‌ಕೂಡ್ದು. ಅದೆಲ್ಲಾ ಓದೋ ಹುಡುಗರಿಗೆ ಆಗಿಬರಲ್ಲ. ನೀನು ಓದಿ ವಿದ್ಯಾವಂತನಾಗಿ ದೊಡ್ಡ ನೌಕರಿ ಹಿಡಿಬೇಕು. ನಿನ್ನ ನಾಯಿಗಿಂತ ಕೀಳಾಗಿ ಕಾಣೋ ಅಣ್ಣ-ಅತ್ತಿಗೆಯರು ನಾಚೋವಂತೆ ಬಾಳಬೇಕು. ಕಂಡಕಂಡೋರ ಹತ್ತಿರ ಜಗಳ ಬಡಿದಾಟ ಮಾಡ್ಕೊಂಡು ಮನೆಯವರ ಮಾನ ಹರಾಜ್ ಹಾಕಬಾರು. ದೊಡ್ಡವರಿಗೆ ದೊಡ್ಡ ಮನೆಯವರಿಗೆ ಎದುರಾಡಬಾರದು. ಸಂಪನ್ನ ಸಭ್ಯ ಅನ್ನಿಸ್ಕೋಬೇಕು ರಂಗಾ’ ದಿನವೂ ರಂಗನ ಮುಂದೆ ತಾಯಿಯ ಪಾರಾಯಣ ವಾರದ ಮೊದಲೇ ಆರಂಭವಾಗಿತ್ತು. ಆಕೆಯ ಆತಂಕವನ್ನು ಅರ್ಥಮಾಡಿಕೊಳ್ಳದಷ್ಟು ಅವಿವೇಕಿ ಏನಲ್ಲ ರಂಗ.
“ಆಯ್ತಮ್ಮ ಟೋಟಲಿ ಹಲ್ಲುಕಿತ್ತ ಹಾವಿನ ತರಾ ಇರ್ಬೇಕು… ಅಷ್ಟೆತಾನೆ… ಓಕೆ. ನೀನು ನಗನಗ್ತಾ ಇದ್ದರೆ ನಾನು ಸೋಲೋಕೂ ರೆಡಿ, ಸಾಯೋಕೂ ರೆಡಿ’ ಅಂದು ಅವನೇನೋ ನಕ್ಕು ತಾಯಿ-ತಂಗಿಯ ಕಣ್ಣಲ್ಲಿ ನೀರು ತರಿಸಿ ‘ಸಾರಿ’ಯೂ ಕೇಳುತ್ತಿದ್ದ.
‘ನಿನ್ನ ಶತ್ರುಗಳು ಸಾಯ್ಲಿ’ ಎಂದು ತಾಯಿ ಸೆರಗು ನಿವಾಳಿಸಿ ಲಟಿಕೆ ತೆಗೆಯುವಾಗ ರಂಗ, ಕಾವೇರಿ ನುಗ್ಗಿ ಬರುವ ನಗೆಯನ್ನು ತಡೆಹಿಡಿಯುತ್ತಿದ್ದರು. ತಾಯಿ ನೊಂದಿಕೊಳ್ಳಲುಂಟೆ.
ಜಾತ್ರೆಯ ಹಿಂದಿನ ದಿನದ ವಿಶೇಷವೆಂದರೆ ಸುತ್ತಮುತ್ತಲ ಹಳ್ಳಿ ಪಟ್ಟಣಗಳಿಂದ ಬರುವ ಭಾರಿ ಪೈಲ್ವಾನರ ಕಾಟಾ ಜಂಗಿಕುಸ್ತಿ. ಅದಕ್ಕೆ ಪಾಳೇಗಾರರ ಮನೆಯವರದ್ದೇ ಉಸ್ತುವಾರಿ ಜವಾಬ್ದಾರಿ. ಗೆದ್ದವರಿಗೆ ಬಹುಮಾನಗಳ ವಿಲೇವಾರಿ. ಅವರಿಗೆಂದೇ ಬ್ಯಾಟೆ ಕಡಿದು ಪೆಶಲ್ ಆಗಿ ಮಾಡಿದ ತಲೆಕಾಲು ಸಾರಿನ ಕಮ್ಮನೆಯ ತಯಾರಿ, ಕುಸ್ತಿ ಶುರುವಾದರೆ ಜಾತ್ರೆ ಶುರುವಾದಂತೆಯೇ. ಕುಸ್ತಿಗೂ ಜಾತ್ರೆಗೆ ಸೇರಿದಂತೆಯೇ ಜನ ಸೇರುತ್ತಿತ್ತು. ಪೈಲ್ವಾನರಿಗೆ ‘ಹಿಡಿ, ಪಟ್ಟು ಹಾಕು ಎತ್ತಿ ಎಸೆಯ್ಲೆ ಚಿತ್‌ಮಾಡು’ ಎಂದೆಲ್ಲಾ ಅರಚಾಡಿ ಉತ್ಸಾಹ ತುಂಬುತ್ತಿದ್ದ ಪರಿಗೆ ಪೈಲ್ವಾನರ ತುಂಬಿದ ಮಾಂಸಖಂಡಗಳಲ್ಲಿ ಮದವೇರುತ್ತಿತ್ತು. ಪಾಳೇಗಾರರೇ ಬಂದು ಕೂತಾಗ ಉತ್ಸಾಹಕ್ಕೆಲ್ಲಿಯ ಬರ. ಸಂಪಿಗೆಹಳ್ಳಿಯಲ್ಲಿನ ವಿಶೇಷವೆಂದರೆ ದೊಡ್ಡವರ ಮನೆಯ ಹೆಂಗಸರಿಗೂ ಕುಸ್ತಿ ನೋಡುವ ಬಯಕೆ. ಅವರು ಪಾಳೇಗಾರರೊಂದಿಗೆ ಬಂದು ಕೂರುವಾಗ ಕುಸ್ತಿ ಆಡುವ ಪಡ್ಡೆಗಳಿಗೂ ಇನ್ನಿಲ್ಲದ ಖುಷಿ. ಕೆಳಗಳಹಳ್ಳಿ ಹುಡುಗರೂ ಕುಸ್ತಿಗೆ ತೆಕ್ಕೆ ಬೀಳುವುದನ್ನು ನೋಡಲು ಅವರ ಹೆಂಗಸರಿಗೂ ಆಶೆ. ‘ದೊಡ್ಡವರ ಮನೆಯೋರೆ ಬತ್ತಾರೆಂದಾಗ ನಮ್ಮದೇನ್ ಮಹಾ ಹೋದ್ರಾತು’ ಎಂದವರೂ ಎಗ್ಗಿಲ್ಲದೆ ಸೇರುತ್ತಿದ್ದರು. ಈ ಸಲವೂ ಬೇರೆ ರಾಜ್ಯಗಳಿಂದ ಕುಸ್ತಿಗೆ ಬಂದಿದ್ದು ಕಂಡು ಭರ್‍ಮಪ್ಪನಿಗೆ ಅಗದಿ ಖುಷಿ. ಪತ್ರಿಕೆಗಳಲ್ಲಿ ಜಾಹಿರಾತು ಕೊಡುತ್ತಿದ್ದರಿಂದ ಬಂಗಾರದ ತೋಡಾ, ವಿಶೇಷ ಆದರ ಆತಿಥ್ಯ ಸಿಗುವುದೆಂದಾಗ ತಾವೂ ಒಂದು ಕೈ ನೋಡಬಾರದೇಕೆಂದು ಅವರಿಗೂ ಅನ್ನಿಸಿರಬಹುದು. ನಮ್ಮ ಮುಂದೆ ಈ ಹಳ್ಳಿ ಹುಡ್ರು ಯಾವ ಲಡತ್ತು ಮಾಡಿಯಾರೆಂಬ ಉದಾಸೀನವೋ, ಆತ್ಮವಿಶ್ವಾಸವೋ, ಅಹಂಕಾರವೋ ತೋಡಾ ತೊಡುವ ಆಶೆಯೋ ಅಥವಾ ಇವೆಲ್ಲವೋ. ಕಳೆದೆರಡು ವರ್ಷಗಳೂ ಬಂದಂತೆ ಈ ಸಲವೂ ಪಟ್ಟಣದಿಂದ ಪರ್ವತಾಕಾರದ ಪೈಲ್ವಾನರುಗಳೂ ಆಗಮಿಸಿರುವುದು ಕಂಡುಬಂತು. ಅವರು ದಟ್ಟಿಪಂಚೆ ಮಲ್‌ಜುಬ್ಬ ತಲೆಗೆ ಪೇಟೆ ಸುತ್ತಿಕೊಂಡು ಕೊಬ್ಬಿದ ಮೈತೋರುತ್ತಾ ಸಲಗದಂತೆ ಸಂಪಿಗೆಹಳ್ಳಿಯ ಬೀದಿಯಲ್ಲಿ ನಡೆಯುತ್ತಾ ಬೀದಿಗೇ ಹೊಸ ಶೋಭೆ ತಂದಾಗ ಹಳ್ಳಿಗರಿಗೆ ತಮ್ಮ ಊರು ಪರಸೆ ಪಾಳೆಗಾರರ ಬಗೆಗಿದ್ದ ಅಭಿಮಾನ ನೂರ್ಮಡಿಯಾಯಿತು. ಹೊಸ ಶೋಭೆ ತಂದ ಹೊರಗಿನವರೇ ತಲೆತಗ್ಗಿಸುವಂತಹ ಪ್ರಕರಣಕ್ಕೆ ನಾಂದಿ ಹಾಡಿಯಾರೆಂಬುದನ್ನು ಯಾರೊಬ್ಬರು ಕನಸುಮನಸಿನಲ್ಲೂ ಊಹಿಸಿರಲಾರರು. ಯಾರೂ ಊಹಿಸದಂಥ ಘಟನೆ ನಡೆದಾಗಲೇ ಅಲ್ಲವೆ ಹಳೆನೀರು ಹೋಗಿ ಹೊಸ ನೀರು ಬರುವುದು!
‘ಜಂಗಿ ಕುಸ್ತಿ’ ಆರಂಭವಾದಾಗ ಎಲ್ಲೆಲ್ಲೂ ತೋಳು ತೊಡೆತಟ್ಟುವ ಸದ್ದೇ ಪ್ರತಿಧ್ವನಿಸಿತು. ಕುಸ್ತಿ ಖಯಾಲಿಗಳ ಶೀಟಿ, ಚಪ್ಪಾಳೆ, ಪಾಳೇಗಾರರ ಮನೆತನದವರು ದೊಡ್ಡ ಶಾವಿಯಾನದಡಿ ಎತ್ತರದ ಆಸೀನಗಳಲ್ಲಿ ವಿರಾಜಮಾನರಾದಾಗ ಕುಸ್ತಿ ಆರಂಭಗೊಂಡಿತು. ಸುತ್ತೂರ ಜನವೇ ಜಮಾಯಿಸಿತ್ತು! ಬಂದ ಪೈಲ್ವಾನರುಗಳನ್ನೆಲ್ಲಾ ‘ಬೆನ್ನು ಅಡಿ’ ಮಾಡಿದ ಧೀರನಿಗೆ ಬಂಗಾರದ ತೋಡಾವನ್ನು ಭರಮಪ್ಪನವರೇ ಖುದ್ ತೊಡಿಸುತ್ತಿದ್ದರು. ಕುಸ್ತಿಗಳ ಬಿಸಿ, ಬಿಸಿಲಿನ ತಾಪವನ್ನು ಮೀರಿಸಿತ್ತು. ಬೆವರು ವರೆಸಿಕೊಳ್ಳಲೂ ಸಮಯ ವ್ಯರ್ಥ ಮಾಡದೆ ತೆಕ್ಕೆ ಬಿದ್ದರು. ಎಲ್ಲಾ ಸಮಬಲರಂತೆ ಕಂಡರೂ ಯಾಕೋ ಪಾಳೇಗಾರ ಭರಮಪ್ಪರ ಎಡಹುಬ್ಬು ಹಾರಿತು. ಸುತ್ತಮುತ್ತಲ ಹಳ್ಳಿ ಪೈಲ್ವಾನರಲ್ಲಿ ಒಬ್ಬೊಬ್ಬರನ್ನೇ ಪಟ್ಟುಹಾಕಿ ಕ್ಷಣಾರ್ಧದಲ್ಲೇ ಮಣ್ಣು ಮಾಡುತ್ತಿದ್ದ ಮಹಾರಾಷ್ಟ್ರದ ರಾಮೋಜಿ ಪೈಲ್ವಾನನ ಟೆಕ್ನಿಕ್ ಅರಿಯದೆ ಚೋಟಾಬಡಾ ಪೈಲ್ವಾನರೆಲ್ಲಾ ಧರೆಗುರುಳಿದರು. ದೈತ್ಯಾಕಾರದ ರಾಮೋಜಿ ದೇಹದಲ್ಲಷ್ಟೇ ಕೊಬ್ಬಿರಲಿಲ್ಲ. ಮನುಷ್ಯ ಕೂಡ ಹಾಗೆ ಗೆದ್ದಾಗ ವಿಪರೀತ ಅಹಂಕಾರದಿಂದ ಹೂಂಕರಿಸುತ್ತಾ ದುಟ್ಟಿಸುತ್ತಾ ರೌಂಡ್ ಹೊಡೆಯುತ್ತಾ ‘ಯಾವನಿದ್ದೀರಾ ಬರಲೆ’ ಎಂದು ತೊಡೆ ತಟ್ಟುತ್ತಿದ್ದ. ಇದು ಭರಮಪ್ಪನವರಿಗೆ ‘ಪಿಚ್’ ಅನಿಸಿತು. ರಾಮೋಜಿ ಗೆದ್ದಾಗಲೆಲ್ಲಾ ಎದ್ದುನಿಂತು ಪುಟ್ಟ ಮಕ್ಕಳಂತೆ ಚಪ್ಪಾಳೆ ತಟ್ಟುತ್ತಾ ನೆಗೆದಾಡುವ ಚಿನ್ನು ಬಗ್ಗೆ ಸಹ ಅವರಿಗೆ ರೇಗಿತು.
‘ಸುಮ್ಮೆ ಕುಕ್ಕರು, ಎಳೆ ಮಕ್ಕಳಂಗೆ ಆಡಬ್ಯಾಡ’ ಗದರಿಸಿದರಾದರೂ ಚಿನ್ನು ಕೇರ್ ಮಾಡಲಿಲ್ಲ.
‘ಯಾರ್ ಗೆದ್ದರೇನ್ ತಾತ, ಸ್ಪೋರ್ಟಿವ್ ಆಗಿ ತಗೋಬೇಕು; ಎಂದು ಮುಸುಡಿ ತಿರುವಿ ತಾತನನ್ನು ಅಣಕಿಸಿದಾಗ ಅವರೂ ನರಂ. ಈಗ ರಾಮೋಜಿ ಮೇಲೆ ಆಡುವ ಉಸ್ತಾದ್‌ಗಳು ಸಂಪಿಗೆಹಳ್ಳಿ ಗರಡಿ ಹುಡುಗರು. ಚಮನ್ಸಾಬಿ ‘ಅಲ್ಲಾಹು’ ಎಂದು ತಮ್ಮ ಹುಡುಗರ ಬೆನ್ನು ತಟ್ಟಿ ಹರಸಿ ಕಳಿಸಿದ. ಸಾಬಿಗೆ ನಮಸ್ಕರಿಸಿ ಮಟ್ಟಿಗಿಳಿದ ಪೈಲ್ವಾನರು, ದೂರದಲ್ಲಿ ವಿರಾಜಮಾನರಾಗಿದ್ದ ಪಾಳೇಗಾರರಿಗೂ ಅಖಾಡದಿಂದಲೇ ನಮಸ್ಕರಿಸುತ್ತಿದ್ದರು. ರಾಮೋಜಿಗೆ ಕೈಕುಲುಕುವ ಮುನ್ನ, ಪಾಳೇಗಾರರದ್ದೂ ‘ತಾಯಿ ದುಗ್ಗಮ್ಮ’ ಎಂದು ದೇವಿಯ ಧ್ಯಾನ ಮಾಡುವ ಸ್ಥಿತಿ. ಊರಿನ ಗರಡಿಯ ಪೈಲ್ವಾನರು ರಾಮೋಜಿಯನ್ನು ಒಂದಿಷ್ಟು ಕೆಣಕಿದರು ಬೆವರಿಳಿಸಿದರು. ಅಖಾಡಸುತ್ತಿಸಿ ಸುಸ್ತು ಮಾಡಿದರು. ಪೆಟ್ಟಿಗೆ ಸಿಗದೆ ಪಾರಾದರೇ ಹೊರತು ಅವನ ಪಟ್ಟಿಗೆ ಸಿಕ್ಕಾಗ ಮಣ್ಣು ಮುಕ್ಕಿದರು. ಚಮನ್‌ಸಾಬಿಯ ಕೆಂಪು ಮೋರೆ ಕಪ್ಪಿಟ್ಟರೆ, ಪಾಳೇಗಾರರ ಕಪ್ಪು ಮೋರೆಯಲ್ಲಿ ಕಪ್ಪು ಮೋಡಗಳು ಉತ್ಸವ ಹೊರಟವು. ಗರಡಿ ಹುಡುಗರು ನಿಖಾಲಿಯಾದರು.
‘ಯಾರಿದ್ದೀರಿ… ಬರ್‌ಬರಿ?’ ರಾಮೋಜಿ ಸವಾಲ್ ಹಾಕುವಾಗ ರಂಗ ನಿಜಕ್ಕೂ ರಾಮೋಜಿಯ ಆಟದ ವೈಖರಿ, ಅವನಲ್ಲಿದ್ದ ಖಂಡಬಲ, ಆತ್ಮವಿಶ್ವಾಸವನ್ನು ಮೆಚ್ಚಿ ಚಮನ್‌ಸಾಬಿ ಎದುರು ಹೊಗಳಿದಾಗ ‘ಅದು ನಿನಗಿಲ್ಲೇನ್ಲೆ ಹೈವಾನ್’ ಸಾಬಿ ರೇಗಿದ್ದ. ‘ಏನ್ ಮಾಡ್ಲಿ ಗುರು. ನಮ್ಮ ತಾಯಿಗೆ ಕುಸ್ತಿಮಸ್ತಿಯೆಲ್ಲಾ ಇಷ್ಟ ಆಗೋದಿಲ್ಲ. ನನ್ನನ್ನು ಗರಡಿಗೇ ಹೋಗಬೇಡ ಅಂತಾರೆ. ಅದೆಲ್ಲಾ ನಮ್ಮಂಥವರಿಗಲ್ಲ. ತಿನ್ನೋಕೆ ಗತಿಯಿಲ್ಲದೋರು ತೊಡೆತಟ್ಟಬಾರ್‍ದು ಮಗಾ’ ಎಂಬುದಾಕೆಯ ವೇದನೆ-ನಿವೇದನೆ. ಆದರೂ ರಂಗ ಕೇಳೋನಲ್ಲ, ‘ದೇಹ ಗಟ್ಟಿಯಿದ್ದರೇನೇ ಮನಸೂ ಗಟ್ಟಿ ಅಮ್ಮಾ’ ಅಂತ ಮಸ್ಕಾ ಮಾಡಿ ಗರಡಿಗಂತೂ ತಪ್ಪಿಸಿದವನಲ್ಲ.
ರಾಮೋಜಿಯ ಸವಾಲನ್ನು ಸ್ವೀಕರಿಸುವವರೇ ಕಾಣಲಿಲ್ಲ. ಹಳ್ಳಿ ಹುಡುಗರಿಗೆ ತಲೆ ಎತ್ತದಷ್ಟು ನಾಚಿಕೆ, ಭರಮಪ್ಪನವರಂತೂ ಪೇಚಿಗೆ ಬಿದ್ದರು. ಇದನ್ನೆಲ್ಲಾ ಕಂಡು ಉರಿದುಹೋದ ಮೈಲಾರಿ, ‘ಅಪ್ಪಾಜಿ, ಮುಖ ಯಾಕೆ ಚಿಕ್ಕದು ಮಾಡ್ಕೊಂತಿರಿ. ನನ್ನನ್ನ ಹರಸಿ ಕಳಿಸಿಕೊಡಿ. ನಾನು ಹೋಗಿ ಅವನ ಸೊಕ್ಕು ಮುರಿತೀನಿ’ ಹೂಂಕರಿಸಿದ.
‘ಹೋಗ್ಲಿಬಿಡಪ್ಪ… ಇದು ನಮ್ಮ ಹಳ್ಳಿ ಮಾನಾಪಮಾನದ ಪ್ರಶ್ನೆ. ನಮ್ಮೋನು ಸಿಟಿನಲ್ಲಿ ಆರು ವರ್ಷ ಜಿಮ್‌ಗೆ ಹೋಗಿ ಐರನ್‌ಮ್ಯಾನ್ ತರಾ ಆಗಿದ್ದಾನೆ’ ಉಗ್ರಪ್ಪನಿಗೆ ಸೋದರನ ಮೇಲೆ ನಂಬಿಕೆಯಿತ್ತು ಪರವಹಿಸಿ ಮಾತನಾಡಿದ.
‘ಅದ್ಸರಿ ಕಣೋ, ಸೋತರೆ ಇಡೀ ಹಳ್ಳಿ ಜೊತೆಗೆ ನಮ್ಮ ಮನೆತನದ ಮಾನವೇ ಮಣ್ಣುಪಾಲಾಗೇತಲ್ಲೋ’ ಭರಮಪ್ಪ ಚಿಂತೆಗೆ ಬಿದ್ದರು ಬಹಳಷ್ಟು ಯೋಚಿಸಲು ಸಮಯವಿರಲಿಲ್ಲ.
‘ಸುಮ್ನೆ ತೋಡಾ ತೊಡಿಸಿ ಕಳಿಸಿಬಿಡಿ ಯಜಮಾನರೆ’ ಶಾನುಭೋಗರ ಸಲಹೆ ಹೊರಬಂತು.
‘ಅಲ್ಲಲೆ ಶಾನುಭೋಗ, ಆ ನನ್ಮಗ ಗೆದ್ದೋನು ಮಟ್ಟಿಗೆ ಸಲಾಮ್ ಮಾಡಿ ಬಂದಿದ್ದರೆ ಕಾಂಪಿಟೇಸನ್ ಮುಗಿಯೋದು. ಅವನಿನ್ನೂ ಸವಾಲ್ ಹಾಕ್ತಾ ಹುಚ್ಚುಪ್ಯಾಲಿ ಹಂಗೆ ಕುಣಿತಾ ಅವನಲ್ಲ. ಅವನಿಗೆ ತೋಡಾ ತೊಡಿಸಿಬಿಟ್ಟರೆ ಸುತ್ತ ಹಳ್ಳಿನಾಗೆ ಯಾರೂ ಗಂಡಸರಿಲ್ಲಾ ಅಂಬೋದ್ನ ಒಪ್ಕೊಂಡಂಗೆ ಆಗೋಯ್ತದಲ್ಲಲಾ… ಈ ಅಬ್ಬೆಪಾರಿಗಳಿಂದ ಅಪಮಾನ ಮಾಡಿಸ್ಕೊಂಡ ಮ್ಯಾಗೆ ಈಟು ತೊಲ ಮೀಸೆ ಇಟ್ಕೊಂಡು ಊರಾಗೆ ಹೆಂಗ್ಲಾ ತಿರುಗೋದು’ ಭರಮಪ್ಪ ಹಳಹಳಿಸಿದರು. ಅಷ್ಟರಲ್ಲಾಗಲೆ ಮೈಲಾರಿ ಹನುಮಾನ್ ಚೆಡ್ಡಿ ಧರಿಸಿ ಅಖಾಡಕ್ಕಿಳಿದು ಬಿಟ್ಟಿದ್ದ. ಪತ್ನಿ ಕೆಂಚಮ್ಮ ನಾಗತಿ ಅಲಿಯಾಸ್ ಸುಮಾಳ ಎದೆಬಡಿತ ಒಮ್ಮೆಲೆ ಏರುಪೇರಾಗಿತ್ತು.
‘ಸುಮ್ಮಿರು ಅತ್ತಿಗೆ, ಚಿಗಪ್ಪ ಗೆದ್ದು ಬರ್ತಾನೆ’ ಚಿನ್ನು ಸಡಗರ ಪಡುವಾಗ ‘ಸುಮ್ನೆ ಕುಕ್ಕರ್‍ಸೆ’ ಚಿನ್ನಮ್ಮ ಜಬರಿಸಿ ಅವಳ ಉತ್ಸಾಹಕ್ಕೆ ತಣ್ಣೀರು ಎರಚಿದಳು.
ಸ್ವತಹ ಪಾಳೇಗಾರರ ವಂಶದ ಕುಡಿಯೇ ಅಖಾಡಕ್ಕೆ ಇಳಿದಾಗಲೂ ರಾಮೋಜಿ ಒಂದಿನಿತೂ ಎದೆಗುಂದಲಿಲ್ಲ. ಅಷ್ಟೆ ಆಗಿದ್ದರೆ ಯಾರಿಗೂ ಬಾಧಕವೂ ಅನಿಸುತ್ತಿರಲಿಲ್ಲ. ರಾಮೋಜಿ ತನ್ನಲ್ಲಿ ಅಡಗಿದ್ದ ಕೊಬ್ಬನ್ನು ಮತ್ತೊಂದು ವಿಧದಲ್ಲಿ ಪ್ರದರ್ಶಿಸಿ ಪಾಳೇಗಾರರ ಜಂಘಾಬಲ ಉಡುಗಿಸಿದ. ‘ಪಾಳೇಗಾರರ ಮನೆತನದ ಕುಡಿಯೇ ಈಗ ತನಗೆ ಎದುರಾಗೇತೆ ಅಂದ್ಮೇಲೆ ಇದು ಸರ್ವೆಸಾಮಾನ್ಯ ಕುಸ್ತಿ ಅಲ್ರಿ… ಬರಿ ಬಂಗಾರದ ತೋಡಾಕ್ಕೆ ನಾನ್ ತೊಡೆತಟ್ಟವನಲ್ರಿ ನಾ ಕೇಳಿದ್ದ ಕೊಡಬೇಕ್ರಿ’ ಸವಾಲ್ ಎಸೆದು ಸೊಂಟದ ಮೇಲೆ ತನ್ನೆರಡು ಕೈಗಳನ್ನಿರಿಸಿ ನಿಂತಿದ್ದ.
‘ಆತೇಳು. ನಮ್ಗೆ ಭಗವಂತ ಭಾಗ್ಯ ಕೊಟ್ಟಿರೋದೆ ಬೇಡಿದ್ದನ್ನು ನೀಡೋಕೆ… ಬೇಡು ಅದೇನು ಬೇಡಿಯೋ ಬೇಡು’ ಭರಮಪ್ಪ ಕುಸ್ತಿಗೆ ನಿಂತ ಮಗನ ಮೇಲಿನ ಭರವಸೆಯಿಂದ ಮೀಸೆ ತೀಡಿದ.
‘ಮಾತಿಗೆ ತಪ್ಪಬಾರ್‍ದರಿ ಮತ್ತೆ’ ಕೀಟಲೆ ಮಾಡಿದ ರಾಮೋಜಿ.
‘ಇಡೀ ನನ್ನ ಅಡವು ಆಸ್ತಿ ಬೇಡಿಯೇನ್ಲಾ? ಅಸ್ತು ಅಂದೆ ಕುಸ್ತಿ ಮಾಡು’ ಕೋಪದಿಂದ ಗುಡುಗಿದರು ಭರಮಪ್ಪ.
‘ಅದಕ್ಕಿಂತ ಅಮೂಲ್ಯವಾದ್ನೆ ಕೇಳ್ತೀನಿ… ಕೊಟ್ಟಿರೇನು?’ ಹುಬ್ಬೇರಿಸಿ ಹುಬ್ಬು ಹಾರಿಸಿದ ರಾಮೋಜಿ.
‘ಆತೇಳ್ಳಾ ಹೈವಾನ್… ಮೊದ್ಲು ಕೈಕೈ ಮಿಲಾಯಿಸು’ ಅಂದವರೆ ಶುರು ಮಾಡಿ ಎಂಬಂತೆ ಕೈ ಸನ್ನೆ ಮಾಡಿದರು.
ಕುಸ್ತಿ ಆರಂಭವಾದಾಗ ಎಲ್ಲೆಡೆ ಗದ್ದಲವೋ ಗದ್ದಲ. ಶೀಟಿ ಚಪ್ಪಾಳೆಗಳು ಮೊರೆದವು. ಮೈಲಾರಿ ದುಷ್ಟತನ ದರ್ಪವನ್ನು ಕಂಡು ರೇಜಿಗೆ ಪಟ್ಟುಕೊಂಡವರೂ ಸಹ ಅವನು ಗೆಲ್ಲಲಿ ಎಂದೇ ಹರಕೆ ಹೊತ್ತರು. ಇದು ಸಂಪಿಗೆಹಳ್ಳಿಯ ಗೌರವದ ಪ್ರಶ್ನೆ ಎಂಬ ಅರಿವು ಎಲ್ಲರನ್ನೂ ಉದ್ವಿಗ್ನಗೊಳಿಸಿತು. ಕ್ರೂರಿ ಮೈಲಾರಿ ರಾಮೋಜಿಯ ತೊಡೆ ಮುರಿದೇ ಮುಂಬೈಗೆ ಗದಮ್ತಾನೆ. ಅವನದೆಷ್ಟು ಜನರ ಕೈಕಾಲು ಮುರಿದಿಲ್ಲ, ತಲೆ ಹೊಡೆದಿಲ್ಲ, ಗಾಡಿಗೆ ಕಟ್ಟಿ ಎಳೆಸಿಲ್ಲ. ಮಕಮುಸುಡಿ ಒಂದು ಮಾಡಿಲ್ಲವೆಂದು ಅವನ ಮಹಾಕ್ರೂರತ್ವವನ್ನೇ ಮಾನದಂಡವಾಗಿ ಮಾಡಿಕೊಂಡು ಮೈಲಾರಿ ಗೆಲ್ಲುತ್ತಾನೆಂದೇ ಬೆಟ್ ಕಟ್ಟಿದರು. ಎಂಥವರನ್ನು ಐದಾರು ಮಿನೀಟಿನಲ್ಲಿ ಮಗ್ಗಲು ಮುರಿದು ಕೆಡವುವ ರಾಮೋಜಿ ಮೈಲಾರಿಯನ್ನು ಮಣಿಸಲು ತ್ರಾಸಪಡುವಾಗ ಹಳ್ಳಿಗೆ ಹಳ್ಳಿಯೇ ಖುಷಿ. ಚಿನ್ನು ಕೂಗಿ ಕುಣಿದಾಡಿದರೆ ಇನ್ನು ಪ್ಯಾಟೆ ಜಿಮ್ನಾಗದೇನೆ ಕಲಿತಿರವಲ್ಲನ್ಯಾಕೆ. ಮೊದ್ಲು ನಮ್ಮ ಗಲ್ಡಿನಾಗೆ ಸಾಮು ತೆಗೆದೋನ್ಲಾ’ ಎಂದು ರಂಗನತ್ತ ನೋಡುತ್ತಾ ಚಮನ್‌ಸಾಬಿಯೂ ಗರ್ವಪಟ್ಟ. ಆದರೆ ಬರುಬರುತ್ತಾ ಮೈಲಾರಿ ರಾಮೋಜಿಗೆ ಮುಲಾಖಾತ್ ನೀಡದೆ ಬಚಾವಾಗುವ ಆಟ ಆಡಲಾರಂಭಿಸಿದ್ದನ್ನು ಮೊದಲು ಗಮನಿಸಿದ್ದು ಚಮನ್‌ಸಾಬಿಯೆ. ಆತ ನಿಟ್ಟುಸಿರು ಬಿಡಲಾಗಲೆ ಭರಮಪ್ಪನವರೂ ಸೋಲಿನ ಸುಳಿವನ್ನು ಗ್ರಹಿಸಿ ಒಳಗೇ ಹಿಂಗಿಹೋದರು. ಹರೆಯದಲ್ಲಿದ್ದಾಗ ಅವರದೆಷ್ಟು ಕುಸ್ತಿ ಮಾಡಿಲ್ಲ-ನೋಡಿಲ್ಲ. ತಂದೆಯ ಮೋರೆ ಮುದುಡಿದುದನ್ನು ಕಂಡ ಉಗ್ರಪ್ಪ ಮಂಕಾದ. ಇದೆಲ್ಲಾ ಪ್ರತಿಕ್ರಿಯೆ ಕ್ರಿಯೆಗಳಾಗುತ್ತಿರುವಾಗಲೇ ರಾಮೋಜಿ, ದೋಬಿಚಟ್ ಹಾಕಿ ಮೈಲಾರಿಯನ್ನು ಎತ್ತಿ ಎಸೆದು ಎದೆಯ ಮೇಲೆ ಕೂತ. ಎಲ್ಲವೂ ಕ್ಷಣಸ್ತಬ್ದ. ಶೀಟಿ ಚಪ್ಪಾಳೆ ಹೊಡೆಯುವವರೂ ಗತಿಯಿಲ್ಲ. ಅಪಮಾನವನ್ನು ನುಂಗಿಕೊಂಡ ಭರಮಪ್ಪನವರೇ ಎದ್ದು ನಿಂತು ಚಪ್ಪಾಳೆ ತಟ್ಟಿದಾಗ ಒಂದಷ್ಟು ಜನರಲ್ಲಿ ಚಪ್ಪಾಳೆ ತಟ್ಟುವ ಚೈತನ್ಯ ನುಗ್ಗಿ ಬಂತು. ಕೆಳಗೆ ಬಿದ್ದ ಮೈಲಾರಿಯನ್ನು ರಾಮೋಜಿಯೇ ಕೈನೀಡಿ ಎತ್ತಿ ನಿಲ್ಲಿಸಿದ. ಮೈಲಾರಿ ಎಲ್ಲರ ಸಮಕ್ಷಮ ಸೋತಿದ್ದನಾದರೂ ‘ನನ್‍ಮಗ್ನೆ ನೀನು ಅದು ಹೆಂಗೆ ಮುಂಬೈಗೆ ಹೋಗಿಯೋ ನೋಡ್ತಿನ್ಲಾ’ ಎಂದು ಒಳಗೆ ಕೂತೊಡಿಸಿದ.
‘ಭೇಷ್ ಉಸ್ತಾದೋಂಕಾ ಉಸ್ತಾದ್ ಕಣಯ್ಯ ನೀನು. ಅದೇನ್ ಕೇಳ್ತಿಯೋ ಕೇಳು ಕೊಟ್ಟೇನು?’ ಭರಮಪ್ಪನವರಿಗೆ ಬೇಗ ಮುಗಿಸಿ ಮನೆ ಸೇರುವ ಆತುರ.
‘ಕೊಟ್ಟಮಾತಿಗೆ ತಪ್ಪಂಗಿಲ್ಲ… ಏನಂದೀರಿ?’ ಚೇಷ್ಟೆನಗೆ ಚೆಲ್ಲಿದ ರಾಮೋಜಿ.
‘ಪಾಳೇಗಾರರಿಗೆ ನಾಲಿಗೆ ಎಲ್ಡಿರಲ್ಲ… ಹೆಚ್ಚಿಗೆ ಮಾತೂಬೇಕಿಲ್ಲ. ಏನು ಬೇಕೋ ಕೇಳು?’ ಅಭ್ಯಾಸ ಬಲವೆಂಬಂತೆ ಮೀಸೆ ಹುರಿಗೊಳಿಸಿದರು ಉತ್ಸಾಹವೇ ಇರಲಿಲ್ಲ. ತಾನು ಗೆದ್ದಾಗಲೆಲ್ಲಾ ಚಪ್ಪಾಳೆ ತಟ್ಟಿ ಕಾರಂಜಿಯಂತೆ ಕುಣಿದು ಕುಪ್ಪಳಿಸುತ್ತಿದ್ದ ನಗೆಮಲ್ಲಿಗೆ ಚಿನ್ನುವಿನತ್ತ ಅವನ ಕಣ್ಣುಗಳು ಕೀಲಿಸಿದವು.
‘ನಿಮ್ಮ ಅಡವು ಆಸ್ತಿ ಬ್ಯಾಡ್ರಿ, ನನ್ನ ಎತ್ತರಕ್ಕೂ ನೀವು ಬಂಗಾರ ಸುರಿದರೂ ನಾ ಒಲ್ಲೆ. ನಿಮ್ಮ ಪಕ್ಕದಾಗೆ ಬಂಗಾರದಂಥ ಹುಡ್ಗಿ ಆ ಪೋರಿ ಇದ್ದಾಳ್ ನೋಡ್ರಿ ಅವಳ್ನ ನನ್ಗೆ ಲಗ್ನ ಮಾಡಿಕೊಡ್ರಿ… ಅಷ್ಟು ಸಾಕು’ ದೊಡ್ಡ ದನಿ ತೆಗೆದು ಸರ್ವರಿಗೂ ಕೇಳುವಂತೆಯೇ ತನ್ನ ಬೇಡಿಕೆಯನ್ನು ಮಂಡಿಸಿದ.
‘ಏನಂದಲೆ ಕುನ್ನಿ’ ಅಬ್ಬರಿಸಿ ಎದ್ದು ನಿಂತರು ಭರಮಪ್ಪ ಹಳ್ಳಿಗರೂ ಅಪಮಾನದಿಂದ ತಲೆ ತಗ್ಗಿಸಿದರು. ನೆರೆದ ಹೆಂಗಸರ ಮುಖ ಬಾಡಿದವು. ಪಾಳೇಗಾರರ ಫ್ಯಾಮಿಲಿ ದಂಗು ಬಡಿದಿತ್ತು.
‘ನಿನ್ನಪ್ನ, ನಿನ್ನ ಉಳಿಸಲ್ಲಲೇ..’ ಮೈಲಾರಿ ರಾಮೋಜಿಯ ಮೇಲೆ ಎಗರಿದ. ರಾಮೋಜಿ ಅವನನ್ನು ಅತ್ತ ತಳ್ಳಿದ.
‘ಇದ್ರಾಗೆ ನಂದೇನು ಬಲವಂತಿಲ್ರಿ, ಬೇಕಾದ್ದು ಕೊಡ್ತೀನಿ ಅಂದ್ರಿ… ಕೇಳಿದ್ದು ತೆಪ್ಪಾ…?’ ಭರಮಪ್ಪನವರನ್ನೇ ಕೆಣಕುವಂತೆ ನೋಡಿದ.
‘ಮನುಸ್ಯಾರ್‍ನ ಪಣಕ್ಕಿಡೋಕೆ ಇವೇನು ಮಾಭಾರತದ ಕಾಲವೇನಪ್ಪ?’ ರಾಜಯ್ಯ ಮಾಸ್ತರರು ನೊಂದು ನುಡಿದರು.
‘ಅದೆಲ್ಲಾ ಪುರಾಣ ಪುಣ್ಯಕತಿ ನಂಗೊತ್ತಿಲ್ರಿ, ಕೊಡದಾದ್ರೆ ಕೊಡ್ರಿ ಇಲ್ಲದಿದ್ದರೆ ಬಿಡ್ರಿ’ ಅಂದ ರಾಮೋಜಿ. ಭರಮಣ್ಣನ ಅಸಹಾಯಕತೆ, ಚಿನ್ನು ಹೆದರಿ ಬಿಕ್ಕುತ್ತಿದ್ದಳು. ಅಮ್ಮ ಚಿಗಮ್ಮ ಒಳಗೆ ಅರೆಜೀವವಾಗಿದ್ದರೂ ಚಿನ್ನುವನ್ನು ಸಂತೈಸುತ್ತಿದ್ದರು. ಉಗ್ರಪ್ಪನ ಉಸಿರೇ ಏರುಪೇರು, ಎಲ್ಲರ ಮುಂದೂ ‘ಮುಂದೇನು?’ ಎಂಬ ಪ್ರಶ್ನೆ. ಭಾಳಷ್ಟು ಜನ, ‘ಬಲು ಮೆರೀತಿದ್ದರು. ಸರಿಯಾಗಿ ಆತು ನೋಡು’ ಅಂತ ಹಿಗ್ಗಿದ್ದು ಉಂಟು.
‘ಅದ್ಕೆ ಹಿರೇರೆ ಅಂಬೋದು ಉದ್ದವಾದ್ದು ಮುರಿತೇತೆ ಅಂತ’ ಪಾಳೇಗಾರರಿಂದ ಅಪಮಾನಗೊಂಡಿದ್ದ ಕೂಲಿ ಹೆಂಗಸರೂ ನಿಟ್ಟುಸಿರಾದರು.
‘ಅದೆಂಗಾರ ಇರ್‍ಲಿ. ಪಾಪ ಗಿಣಿ ಹಂಗೆ ಸಾಕಿ ಆ ಚಿನ್ನುನಾ ಗಿಡುಗನ ಕೈನಾಗೆ ಕೊಡಾಕಾದೀತಾ’ ಎಂದು ನೊಂದುಕೊಂಡವರೇ ಹೆಚ್ಚು.
‘ಬಲವಂತ ಏನಿಲ್ಲ ದೊಡ್ಡವರೆ… ಆಗೋಲ್ಲ ಅಂದ್ರೆ ನಾ ಹೊಂಟಿನ್ರ್‍ಈ’ ರಾಮೋಜಿ ಅಂದ. ಅವನು ಹಿಂದಿನ ಒರಟತನ ಅಹಮಿಕೆ ತೋರದೆ ಸಭ್ಯನಂತೆ ಮಾತಾಡಿದಾಗ ಯಾರಿಗೂ ಅವನ ಮೇಲೆ ಹರಿಹಾಯುವ ಮನಸ್ಸಾಗಲಿಲ್ಲ. ಭರಮಪ್ಪನೂ ಬಾಡಿದ ಮೋರೆಯಲ್ಲಿ ನಗು ಬರಿಸಿಕೊಂಡು,
‘ಆತೇಳಪ್ಪಾ… ಆಗೋಲ್ಲ… ಇಲ್ಲ ಅಂಬೋ ಮಾತು ನಮ್ಮ ಪರಂಪರೆದಾಗೆ ಇಲ್ಲ’ ಅಂದುಬಿಟ್ಟಾಗ ಚಿನ್ನು ಚೀರಿದಳು ತಟ್ಟನೆ.
‘ಅಪ್ಪಾ, ನಿನಗೇನ್ ತಲಿಗಿಲಿ ಕೆಟ್ಟೇತೇನ್?’ ಉರಿಗಣ್ಣುಬಿಟ್ಟ ಉಗ್ರಪ್ಪ.
‘ನಾನು ಆಡಿದ ಮಾತು ಉಳಿಬೇಕು, ಇಲ್ಲ… ನನ್ನ ಜೀವ ಅಳಿಬೇಕಷ್ಟೆ’ ಹನಿಗಣ್ಣಾದರು ಭರಮಪ್ಪ.
‘ಪಾಳೇಗಾರ ಅಂದ್ರೆ ನೀವ್ ಕಣ್ರಿ ಯಜಮಾನ್… ಒಪ್ದೆ. ಈಗೂ ನಿಮ್ಮ ಊರಿನ ಹುಡುಗರಿಗೆ ಒಂದು ಛಾನ್ಸ್ ಕೊಡ್ತೀನಿ. ಗಂಡಸು ಮಗ ಯಾವನಾರ ಇದ್ದರೆ ಈಗ್ಲೂ ನನ್ನ ಕುಸ್ತಿನಾಗೆ ಮಣ್ಣು ಮುಕ್ಕಿಸ್ಲಿ. ನಾನ್ ಅಂಥ ಸರದಾರನಿಗೆ ಆ ಹುಡ್ಗಿ ಬಳುವಳಿಯಾಗಿ ಕೊಡ್ತೀನಿ… ಹಳ್ಳಿ ಮಾನ ಉಳಿಸ್ಲಿಕ್ಕೆ ಮತ್ತೊಂದು ಅವಕಾಶ ಕೊಟ್ಟೀನಿ… ಐದು ಮಿನಿಟ್‌ನಾಗೆ ನನ್ನ ಮುಂದೆ ಬರ್‍ಲಿಲ್ಲ… ಆ ಪೋರಿ ನನ್ನಾಕೆ. ಧಂ ಇದ್ದರೆ ಬರ್ರಲಾ’ ತೊಡೆತಟ್ಟಿದ ರಾಮೋಜಿ, ತೊಡೆ ತಟ್ಟಿದ ಶಬ್ದ ಸಿಡಿಲಿನಂತೆ ಭಾಸವಾದಾಗ ಎರಡು ಹೆಜ್ಜೆ ಹಿಂದೆ ಸರಿದವರೇ ಕಂಡುಬಂದರು.
‘ಅಲೆ ರಂಗಾ, ಏಟು ಬಾಡಿ ಬೆಳಸಿದರೇನ್ಲಾ? ಊಟಕ್ಕಿಲ್ಲದ ಉಪ್ಪಿನಕಾಯಿ ಇದ್ದಂಗೆ. ನಾಯಿ ಮೊಲೆಯಾಗ್ಳಹಾಲಿದ್ದಂಗೆ. ಬಳಸ್ದೆ ಇರೋ ಶಕ್ತಿ ತುಕ್ಕು ಹಿಡಿದ ಕಬ್ಬಿಣ ಇದ್ದಂಗೆ, ಊರಿನ ಮಾನ ಉಳಿಸೋ ಪ್ರಯತ್ನನಾರ ಮಾಡಯ್ಯ’ ಚಮನ್‌ಸಾಬಿ ಅಂಗಲಾಚಿದ.
‘ಉಸ್ತಾದ್, ನಮ್ಮ ತಾಯಿ…’ ಗೊಣಗಿದ ರಂಗ.
‘ಅವರಿಗೆ ನಾನು ಹೇಳ್ತಿನಯ್ಯ. ಆ ಕೊಬ್ಬಿದ ಗೂಳಿ ನೆಲಕ್ಕೆ ಕೆಡವು ಕಂದಾ’ ರಾಜಯ್ಯ ಮೇಷ್ಟ್ರು ಗದ್ಗದಿತರಾಗಿ ಕೈ ಜೋಡಿಸಿದರು.
‘ಸಣ್ಣೂರಿಗೆಲ್ಲಾರ ಕೈ ಮುಗಿತಾರಾ ಮೇಷ್ಟ್ರೆ ಆಶೀರ್ವಾದ ಮಾಡಿ. ಉಸ್ತಾದ್ ನೀನೂ ಮಾಡು’ ರಂಗ ತಟ್ಟನೆ ಅವರುಗಳ ಕಾಲಿಗೆ ನಮಸ್ಕರಿಸಿ ಕಣ್ಣು ಪಿಳುಕಿಸುವಷ್ಟರಲ್ಲೇ ಚಂಗನೆ ಅಖಾಡಕ್ಕೆ ನೆಗೆದ. ಯಾರೂ ಬರಲು ಸಾಧ್ಯವಿಲ್ಲವೆಂದೇ ಸವಾಲಿಗಿಳಿದಿದ್ದ ರಾಮೋಜಿ ಎದುರು ನಿಂತ ಪಡ್ಡೆ ಹುಡುಗನನ್ನು ನೋಡಿ ಬೆರಗಾದ.
‘ಯೋಯ್, ಹುಡುಗಿ ಮೇಲೆ ಆಸೆನಾ? ಇಕ್ಕಾ… ಕಣ್ಣುಮಿಟುಕಿಸಿ ನಕ್ಕ ರಾಮೋಜಿ.
‘ಇಲ್ಲ… ನಿನಗೆ ಮಣ್ಣು ಮುಕ್ಕಿಸೋ ಆಶೆ’ ಎನ್ನುತ್ತಲೇ ಬಟ್ಟೆ ಕಳಚಿ ಚೆಡ್ಡಿಯಲ್ಲಿ ನಿಂತು ತೋಳು ತೊಡೆ ತಟ್ಟಿದ. ಸುತ್ತಲೂ ಗುಡುಗಿದಂತಾಯಿತು. ಅಖಾಡ ಮೂರು ಸುತ್ತು ಬಂದು, ನೆಲಕ್ಕೆ ಹಣೆ ಹಚ್ಚಿದ. ಯಾರಿಗೂ ಅವನ ಗೆಲುವಿನಲ್ಲಿ ಭರವಸೆಯಿಲ್ಲದಿದ್ದರೂ ಸೋತು ಕೂತವರೂ ಎದ್ದು ಕೂತರು. ನಿಂತವರ ಕಾಲುಗಳಲ್ಲಿ ಶಕ್ತಿಯ ಸಂಚಾರ. ಈ ಬಡಪಾಯಿಗೆ ಇದೆಲ್ಲಾ ಬೇಕಿತ್ತಾ ಎಂದು ಮೂಗು ಮುರಿದವರೇ ಹೆಚ್ಚು. ಪಾಳೇಗಾರರ ಮನೆಯವರ ಉಸಿರಾಟದಲ್ಲಿ ಕಂಡುಬಂದಿದ್ದ ಆಮ್ಲಜನಕದ ಕೊರತೆ ಅಲ್ಪಸ್ವಲ್ಪ ನೀಗಿತ್ತಾದರೂ ಆ ಹುಡುಗ ಗೆದ್ದಾನೆ ಎಂಬ ಅಳುಕು. ಗೆಲ್ಲಲಿ ಎಂಬ ಹಾರೈಕೆ. ಕೆಳಗಳಹಟ್ಟಿ ಹೆಂಗಸರೂ ಈ ಮಗಾ ಗೆಲ್ಲಲಿ ಹಳ್ಳಿಮಾನ ಕಾಪಾಡ್ಲಿ ಅಂತಲೆ ದುಗ್ಗವ್ವ ಮಾರವ್ವರಿಗೆ ಮನದಲ್ಲೆ ಮುಡಿಪು ಕಟ್ಟಿದರು. ರಾಮೋಜಿ, ರಂಗ ಮುಖಾಮುಖಿಯಾದರು. ಇದುವರೆಗೂ ರಾಮೋಜಿಯ ಕುಸ್ತಿಯ ವೈಖರಿಯನ್ನು ಹದ್ದುಗಣ್ಣುಗಳಲ್ಲಿ ನೋಡಿದ್ದ ಅವನ ಬಲಾಬಲ ಗುಟ್ಟುಪಟ್ಟುಗಳನ್ನು ಗ್ರಹಿಸಿದ್ದ ರಂಗ, ಅವನ ಯಾವ ತಂತ್ರಗಳಿಗೂ ಮಣಿಯದೆ ಚೆಂಗನೆ ಎಗರಾಡುತ್ತಾ ಅಖಾಡ ಸುತ್ತುತ್ತಾ ಬಿಸಿಲಲ್ಲಿ ಒಣಗಿಸಿದ. ಸುತ್ತಲೂ ಏದುಸಿರು-ನಿಟ್ಟುಸಿರು ಸೋತುಸುಸ್ತಾದ ಉಸಿರುಗಳ ವಿನಹ ಸಂತಸದ ಉದ್ಗಾರವಿಲ್ಲ. ಶೀಟಿ-ಚಪ್ಪಾಳೆಗಳ ಹುರುಪಿಲ್ಲ. ಕುಸ್ತಿ ಮುಗಿದರೆ ಸಾಕಪ್ಪಾ ಎಂಬ ಖಿನ್ನತೆ ಮುಸುಗಿತ್ತು. ಪಾಳೇಗಾರರ ಮನೆಮಂದಿಯೆಲ್ಲಾ ರೆಪ್ಪೆ ಬಡಿಯದೆ ನೋಡುತ್ತಿದ್ದರೆ ಮೈಲಾರಿ ಮಾತ್ರ
‘ನನ್ನ ಕೈಲೇ ಕಿಸಿಯಾಕೆ ಆಗ್ಲಿಲ್ಲ. ಈ ಕಾಲೇಜ್ ಪಡ್ಡೆ ಕರಳು ಪಚ್ಚಿ ಎಲ್ಲಾ ಬಾಯಿಗೆ ಬರ್ತೆತಷ್ಟೆ. ತನ್ನ ಎದುರಾಳಿ ಸೋಲೋ ಹಂಗೆ ಮಲೆಯಾಳೇರ್‍ತಾವ ಮಾಟ ಮಾಡಿಸಿಕೊಂಡು ಬಂದಂಗೆ ಕಾಣ್ತಾನೆ ಆ ರಾಮೋಜಿ’ ಎಂದು ಬಡಬಡಿಸುತ್ತಲೇ ಇದ್ದ.
‘ಸುಮ್ನೆ ಕುಂದಿರ್ರಿ, ಕಂಡಿದೀನಿ ನಿಮ್ಮ ಪೈಲ್ವಾನಗಿರಿಯಾ. ಸುಮ್ನೆ ಮೈಮ್ಯಾಗೆ ಉಲ್ಡು ಆಡೋದಲ್ಲ. ಕೆಳೀಗೆ ಹಾಕ್ಕಂಡು ಹಣಿಬೇಕು ಅದು ಕುಸ್ತಿ’ ಕೆಂಚಮ್ಮ ಒಗರಾಗಿ ಜಾಡಿಸಿದಾಗ ಬೆಟ್ಟದಷ್ಟು ಕೋಪ ಉಕ್ಕೇರಿದರೂ ಬಜಾರಿಯ ಬಾಯಿಗೆ ಸಿಕ್ಕರೆ ರಾಮೋಜಿ ಮುಂದೆ ಹೋದ ಮಾನ ಮನೆಯಾಗೂ ಹೋದೀತಂತ ಸುಮ್ಮನಾದ. ಚಮನ್‌ಸಾಬಿ ಮಾತ್ರ ಕಸವು ತುಂಬಿಕೊಂಡು ಅಖಾಡದ ಬಳಿ ಸುತ್ತುತ್ತಾ,
‘ಹೊಡಿ ಮಗ ಎತ್ತಿ ಹಾಕು, ಭಾಳ ಟೇಂ ತಕ್ಕಾಬೇಡ್ಲಾ. ಅದು ಅದು ಆ ಪಟ್ಟುಹಾಕು’ ಹುರಿದುಂಬಿಸಹತ್ತಿದ. ಪರ ಊರಿಂದ ಬಂದ ರೆಫ್ರಿ ಹಳೆಉಸ್ತಾದ್ ನಂಜಪ್ಪ ಇವರಿಬ್ಬರ ಲಡತ್ ಮೇಲೆ ಹದ್ದಿನ ಕಣ್ಣಿಟ್ಟಿದ್ದ. ಯಾವ ಮಾಯದಲ್ಲೋ ರಂಗ ಹಾಕಿದ ಕತ್ತರಿಗಾಲಿಂದ ರಾಮೋಜಿಗೆ ಬಿಡಿಸಿಕೊಳ್ಳಲಾಗದಾಯಿತು. ಕ್ಷಣಕ್ಷಣವೂ ಬಾಧೆ, ಉಸಿರುಗಟ್ಟಿದ ಅನುಭವ. ಸುತ್ತ ನೆರದವರಲ್ಲೀಗ ಜೀವಕಳೆ, ಶೀಟಿ ಹೊಡೆಯುವಷ್ಟು ಉಸಿರು. ಕಳೆದುಹೋದ ನಗೆ ಈಗ ಮೋರೆಯಲ್ಲಿ ಉದಯ. ತಾನೇ ಪಟ್ಟು ಸಡಿಲಿಸಿದ ರಂಗ, ರಾಮೋಜಿ ಇನ್ನೂ ಚೇತರಿಸಿಕೊಂಡು ಏಳುವಾಗಲೇ ಅವನ ದೈತ್ಯದೇಹವನ್ನು ಅನಾಮತ್ತು ಎತ್ತಿ ಹೆಗಲಮೇಲೆ ನೊಗದಂತೆ ಹೊತ್ತು ಗಿರಗಿರನೆ ತಿರುಗಿಸಿ ಎಸೆದ ರಭಸಕ್ಕೆ ಅಖಾಡದ ಹೊರಗೆ ಬಿದ್ದ ರಾಮೋಜಿ ನರಳಾಡಿದ. ಎಲ್ಲೆಲ್ಲೂ ಕಿವಿಗಡಚಿಕ್ಕುವ ಶೀಟಿ-ಚಪ್ಪಾಳೆ ಮೊಳಗಿದವು. ಸಂತಸದ ಕೇಕೆ ಮುಗಿಲುಮುಟ್ಟಿತು. ಪಾಳೇಗಾರರ ಮನೆತನವೆ ಎದ್ದುನಿಂತು ಚಪ್ಪಾಳೆತಟ್ಟುವ ಮೂಲಕ ರಂಗನ ಗೆಲುವನ್ನು ಸ್ವಾಗತಿಸಿತು. ಚಮನ್‌ಸಾಬಿ, ರಾಜಯ್ಯನವರ ಕಣ್ಣುಗಳಲ್ಲಿ ಆನಂದಾಶ್ರು, ಭರಮಪ್ಪನವರ ಕಣ್ಣಲ್ಲಿ ಮಿಂಚು, ಗೆಲುವನ್ನು ನಿರ್ಲಿಪ್ತನಾಗಿ ಸ್ವೀಕರಿಸಿದ. ರಂಗ ಯಾವ ಅಬ್ಬರವನ್ನು ಮಾಡಿ ಕುಣಿದಾಡದೆ ಕೆಳಗೆ ಬಿದ್ದಿದ್ದ ರಾಮೋಜಿಯ ಕೈಹಿಡಿದೆತ್ತಿ ಅಖಾಡಕ್ಕೆ ಕರೆತಂದು ಅಪ್ಪಿಕೊಂಡಾಗ ನೆರೆದವರ ಹೃದಯಗಳು ಒದ್ದೆಯಾದವು. ಬಹುದೊಡ್ಡ ಅಪಮಾನದಿಂದ ಸಂಪಿಗೆಹಳ್ಳಿ ಪಾರಾಗಿತ್ತು. ಸಮಸ್ಯೆ ಬಗೆಹರಿಯಿತೆಂದು ಹೊರಡಲು ಅಣಿಯಾದವರು ಅಸಲಿ ಸಮಸ್ಯೆಯನ್ನೇ ಮರೆತಿದ್ದರು.
‘ಯಾರೂ ಹೋಗ್ಬೇಡ್ರಿ, ದಯವಿಟ್ಟು ನಿಲ್ಲಿ. ಜರಾ ಠಹೆರೋ ಗಾಂವ್ವಾಲೋ’ ಎಂದು ಕೂಗಿದ ರಾಮೋಜಿ ಎಲ್ಲರ ಗಮನ ಸೆಳೆದ. ಎಲ್ಲರ ಕಣ್ಣುಗಳೀಗ ಅಖಾಡದತ್ತ.
‘ನೋಡ್ರಿ, ಈಗ ನಿಮ್ಮ ಹುಡ್ಗ ಜಯಶಾಲಿ ಆಗವ್ನೆ. ಜೈಹೋ ರಂಗಾ… ಪಾಳೇಗಾರರ ಮನೆ ಹುಡ್ಗಿ ಈಗ ನಿಂದು… ನೀನು ಆಕಿನಾ ಲಗ್ನ ಆಗಬಹುದು. ನನ್ನನ್ನು ಗೆದ್ದ ನಿನಗೆ ಇದೇ ನನ್ನ ನಜರಾನ… ಉಡುಗೊರೆ’ ಎಂದು ಗಟ್ಟಿಯಾಗಿ ಕೂಗಿ ಹೇಳಿ ರಂಗನ ಕೈ ಕುಲುಕಿದ. ಜನ ತಂಡಾ ಹೊಡೆದರು. ಎಲ್ಲೆಲ್ಲೂ ಗುಸುಗುಸು.
‘ರಂಗ ಈಗ ಏನ್ ಮಾಡ್ತಾನ್ರಿ? ಎಂಥ ಚಾನ್ಸ್ ಹೊಡದ್ನಪ್ಪ’ ಎಂಬ ಪಿಸಪಿಸ ಅನೇಕರಲ್ಲಿ ಸಂತಸ ಬುಗಿಲೆದ್ದರೂ ಪಾಳೇಗಾರರ ಮೋರೆಯಲ್ಲಿ ಗೆಲುವಿಲ್ಲ, ಬಾಯಲ್ಲಿ ಮಾತಿಲ್ಲ. ಕ್ಷಣದಲ್ಲೇ ಅವರಲ್ಲುಂಟಾಗಿದ್ದ ಸಂತಸ ಬತ್ತಿ ಬರಿದಾಗಿತ್ತು. ಅವರ ಮನೆ ಚಿನ್ನವನ್ನು ಯಾವನೋ, ಯಾವನಿಗೋ ಮಾರುತ್ತಿದ್ದಾನೆ! ಆದರೂ ತಾವು ಅಸಹಾಯಕರು, ವಿಪತ್ತಿನಿಂದ ಪಾರಾದೆವೆಂದುಕೊಂಡಾಗಲೇ ವಿಪತ್ತು ಮತ್ತೊಂದು ರೂಪ ತಾಳಿತ್ತಾದರೂ ಪರಿಣಾಮ ಮಾತ್ರ ಒಂದೆ. ರಂಗ ಮತ್ತೊಮ್ಮೆ ಅಭಿಮಾನದಿಂದ ರಾಮೋಜಿಯನ್ನು ಬಿಗಿದಪ್ಪಿದಾಗ ಉಗ್ರಪ್ಪ ಸಹನೆ ಕಳೆದುಕೊಂಡು ತಂದೆಯನ್ನು ದುರುದುರು ನೋಡಿದ.
‘ಕ್ಷಮಿಸು ಬಯ್ಯಾ ರಾಮೋಜಿ. ನಾನು ಹುಡುಗಿಗೋಸ್ಕರ ನಿನ್ನ ಮೇಲೆ ಕುಸ್ತಿ ಮಾಡಲಿಲ್ಲ. ನನ್ನ ಹಳ್ಳಿಮಾನ ನನ್ನ ಗರಡಿ ಗೌರವ ಉಳಿಸಬೇಕಿತ್ತು. ನನ್ನ ಉಸ್ತಾದರು ಕುಸ್ತಿ ಮಾಡಂದರು. ಗಂಡಸುಮಗ ಯಾವನಾರ ಇದ್ದರೆ ಐದು ಮೀನಿಟ್ಟಾಗೆ ಬಾ ಅಂದೆ… ನಾನೂ ಬಂದೆ. ಈ ಊರಾಗೆ ನಾನಷ್ಟೇ ಅಲ್ಲ. ನನಗಿಂತ ಭಾರಿ ಗಂಡ್ಸು ಮಕ್ಳು ಅದಾರೆ. ಯಾವುಯಾವುದೋ ಕಾರಣಕ್ಕೆ ಅಖಾಡಕ್ಕಿಳಿಯಲ್ಲ. ನಾನೂ ಮೊದ್ಲೆ ಇಳಿದಿದ್ದರೆ ಇಷ್ಟೊಂದು ಡ್ರಾಮಾ ನಡಿತಿರಲಿಲ್ಲ.. ಆಡಿದರೆ ನಿನ್ನಂಥ ಪೈಲ್ವಾನರ ಮೇಲೆ ಕುಸ್ತಿ ಆಡಬೇಕು ಬಯ್ಯಾ, ಗೆದ್ದರೂ ಸೋತರೂ ಗೌರವ’ ರಂಗ ಮನ ತುಂಬಿ ಹೇಳುವಾಗ ಇಡೀ ಹಳ್ಳಿಯೇ ಮೌನವಾಗಿ ನಿಂತು ಕೇಳಿಸಿಕೊಂಡಿತು. ರಾಮೋಜಿ ಸೋಲಿನ ನೋವನ್ನೇ ಮರೆತ. ಭರಮಪ್ಪನವರು ಮೈಕ್ ಮುಂದೆ ಬಂದು ನಿಂತರು. ಎಲ್ಲರ ಕಣ್ಣಾಲಿಗಳೀಗ ಅತ್ತ.
‘ಈ ಅಮೋಘವಾದ ಕುಸ್ತಿಯಲ್ಲಿ ಗೆದ್ದು ಹಳ್ಳಿ ಗೌರವವನ್ನು ಎತ್ತಿಹಿಡಿದ ಪೈಲ್ವಾನ್ ರಂಗನನ್ನು ನಾವು ಅಭಿನಂದಿಸುತ್ತೇವೆ. ನಾಳಿನ ಅಮ್ಮನೋರ ರಥೋತ್ಸವವಾದ ನಂತರ ಜಯಶಾಲಿಗೆ ಬಂಗಾರದ ತೋಡಾ ತೊಡಿಸಲಾಗುವುದು. ಎಲ್ಲರಿಗೂ ನಮಸ್ಕಾರ’ ಭರಮಪ್ಪನವರು ಘೋಷಿಸಿದಾಗ ಮತ್ತೊಮ್ಮೆ ಚಪ್ಪಾಳೆ ಹರ್ಷೋದ್ಗಾರ ಕರಡಿಸಮಾಳ ಡೋಲು ಉರುಮೆಗಳ ಮೊರೆತ.
‘ನೋಡ್ರಿ ಮಾವಾರೆ, ಆ ಹುಡ್ಗ ಬರಿ ಹಳ್ಳಿಮಾನನಷ್ಟೇ ಉಳಿಸಿಲ್ಲ. ನಿಮ್ಮ ಮನೆಮಾನಾನೂ ಉಳಿಸ್ಯಾನೆ. ನೀವು ಅಲ್ಲಿಗಂಟ ಹೋಗಿ ತಬ್ಕೊಂಡು ಅಭಿನಂದಿಸಿದ್ದರೆ ಚಲೋ ಇರ್ತಿತ್ ನೋಡ್ರಿ’ ಕೆಂಚಮ್ಮ ಆಕ್ಷೇಪಿಸಿದಳು.
‘ಹೌದು ತಾತ… ರಂಗ ಆ ರಾಕ್ಷಸ ರಾಮೋಜಿಗೆ ಸಖತ್ ಫೈಟ್ ಕೊಟ್ಟ’ ಜಿಗಿದಾಡಿದವಳು ಚಿನ್ನು ‘ನೀವು ತಪ್ಪು ಮಾಡಿದ್ರಿ’ ಅಂತಲೂ ಅಂದಳು. ಗದ್ದಲದಲ್ಲಿ ತಮಗೆ ಯಾವುದೂ ಕೇಳಿಸಲೇಯಿಲ್ಲವೆಂಬಂತೆ ನಟಿಸಿದ ಭರಮಪ್ಪ,
‘ಮುದ್ದಿನ ಮೊಮ್ಮಗಳು ಅಂತ ನಿನ್ನ ಅಗ್ಲೆಲ್ಲಾ ಫೈಟಿಂಗ್ ಪಿಕ್ಚರ್ ಜೊತೆನಾಗೆ ಕರ್‍ಕೊಂಡು ಹೋಗಿ ತಪ್ಪು ಮಾಡ್ಡೆ… ನಿಜ ಕಣವ್ವ’ ಅಂತ ಒಳಗೇ ಹುಳ್ಳಗಾದರು.
‘ರಂಗ ಸಣ್ಣೋನಾದರೂ ದೊಡ್ಡಬುದ್ಧಿ ಇರೋ ಮನುಷ್ಯ’ ಮತ್ತೆ ಅಂದಳು ಕೆಂಚಮ್ಮ ಅಲಿಯಾಸ್ ಸುಮ.
‘ಸುಮ್ನೆ ನಡಿಯಲೆ ಬಿತ್ರಿ… ಮೂಗುಬೊಟ್ಟು ಉದುರಂಗೆ ಹೊಡ್ದೇನು’ ಮೈಲಾರಿ ಒದರಿದ್ದು ಮಾತ್ರ ವಾದ್ಯಗಳ ಮೊರೆತದಲ್ಲೂ ಕೇಳಿದಾಗ ಒಬ್ಬರು ಇನ್ನೊಬ್ಬರು ಮುಖಮುಖ ನೋಡಿಕೊಂಡರು. ಪಾಳೇಗಾರರು ಹೊರಡುತ್ತಲೇ ನೆರೆದ ಜನ ಕರಗಿತು. ಚಮನ್‌ಸಾಬಿ ಓಡಿಬಂದು ರಂಗನನ್ನು ಅಪ್ಪಿಕೊಂಡ.
*****