Home / ಲೇಖನ / ವಿಜ್ಞಾನ / ಆ ಬಾಂಬು ದುರಂತ…

ಆ ಬಾಂಬು ದುರಂತ…

೧೯೪೫ರ ಆಗಸ್ಟ್ ೬ರ ದಿನ. ಎರಡನೆಯ ಜಾಗತಿಕ ಮಹಾಯುದ್ಧ (೧೯೩೯-೪೫) ಮುಗಿಯುವ ಹಂತದಲ್ಲಿತ್ತು. “ಸೂರ್ಯೋದಯದ ನಾಡು” ಎಂದೇ ಕರೆಯಲ್ಪಡುವ ಜಪಾನಿನ ಪ್ರಮುಖ ಪಟ್ಟಣಗಳಲ್ಲೊಂದಾದ ಹಿರೋಷಿಮಾದಲ್ಲಿ ಸೂರ್ಯೋದಯವಾಗಿ ಅಷ್ಟೇನೂ ಹೊತ್ತಾಗಿರಲಿಲ್ಲ. ಜನರು ಎಂದಿನಂತೆ ತಮ್ಮ ಚಟುವಟಿಕೆಗಳಲ್ಲಿ ನಿರತರಾಗಿದ್ದರು. ಬೆಳಗಿನ ೮:೨೦ರ ಸಮಯ. ಅಣುಬಾಂಬೊಂದು ಆ ಪಟ್ಟಣದಲ್ಲಿ ಆಸ್ಪೋಟಿಸಿ ತತ್ತರಿಸುವಂತೆ ಮಾಡಿತು. “ಲಿಟಲ್ ಬಾಯ್” ಎಂಬ ಹೆಸರಿನ ಆ ಅಣು ಬಾಂಬನ್ನು ಅಮೆರಿಕವು ಜಪಾನಿನ ಮೇಲೆ ಮೊಟ್ಟಮೊದಲ ಬಾರಿಗೆ ಪ್ರಯೋಗಿಸಿತ್ತು. ಬಿ-೨೯ ಯುದ್ಧ ವಿಮಾನದಿಂದ ೫೮೦ ಮೀಟರ್ಗಳಷ್ಟು ಎತ್ತರದಿಂದ ಪ್ರಯೋಗಿಸಿದ್ದ ಆ ಬಾಂಬಿನ ಉದ್ದ ಮೂರು ಮೀಟರ್ ಮತ್ತು ಅಗಲ ೭೧ ಸೆಂಟಿಮೀಟರ್ ನಷ್ಟು ಆಗಿತ್ತು. ನಾಲ್ಕು ಟನ್ ತೂಕದ ಅದು ೧೨,೫೦೦ ಟನ್ ಟ್ರೈ-ನೈಟ್ರೋಟೊಲ್ವಿನ್ (TNT) ಸಿಡಿಮದ್ದಿನ ಸಾಮರ್ಥ್ಯ ಪಡೆದಿತ್ತು.

ಅದಾದ ಎರಡು ದಿನಗಳ ನಂತರ, ಅಂದರೆ ಆಗಸ್ಟ್ ೯ ರಂದು ಜಪಾನಿನ ಇನ್ನೊಂದು ಪ್ರಮುಖ ಪಟ್ಟಣವಾದ ನಾಗಸಾಕಿಯಲ್ಲಿ ಬೆಳಗಿನ ೧೧ರ ಸುಮಾರಿಗೆ ಮತ್ತೊಂದು ಅಣುಬಾಂಬ್ ಸಿಡಿದು ಅಲ್ಲೋಲಕಲ್ಲೋಲ ಉಂಟುಮಾಡಿತು. “ಫ್ಯಾಟ್ ಮ್ಯಾನ್” ನಾಮಾಂಕಿತ, ೨೨ ಕಿಲೋ ಟನ್ ಪ್ಲುಟೋನಿಯಂ ಅಣುಬಾಂಬನ್ನು ನಾಗಸಾಕಿಯಿಂದ ೫೦೦ ಮೀಟರ್ಗಳಷ್ಟು ಎತ್ತರದಿಂದ ಸಿಡಿಸಲಾಗಿತ್ತು. ಅದು ೩.೨೫ ಮೀಟರು ಉದ್ದ, ೧.೫ ಮೀಟರಿನಷ್ಟು ಅಗಲವಾಗಿತ್ತು. ನಾಲ್ಕುವರೆ ಟನ್ ನಷ್ಟು ಭಾರವಾಗಿದ್ದ ಅದು ೨೨,೦೦೦ ಟನ್ TNT ಸಿಡಿಮದ್ದಿನಷ್ಟು ಸಾಮರ್ಥ್ಯ ಹೊಂದಿತ್ತು.

ಈ ಅಣುಬಾಂಬುಗಳ ಸ್ಫೋಟದಿಂದಾಗಿ ಹಿರೋಷಿಮಾದಲ್ಲಿ ೧೩ ಚದರ ಕಿಲೋ ಮೀಟರು ಮತ್ತು ನಾಗಸಾಕಿಯಲ್ಲಿ ೬.೭ ಚದರ ಕಿಲೋಮೀಟರು ಪ್ರದೇಶದಲ್ಲಿ ಬೆಂಕಿ ಹೊತ್ತಿಕೊಂಡು ದಗದಗ ಉರಿದು ಮರುಭೂಮಿಯಾಗಿ ಮಾರ್ಪಟ್ಟಿತು. ಅಣು ಬಾಂಬಿನಿಂದ ಉತ್ಪತ್ತಿಯಾದ ಒಟ್ಟು ಶಕ್ತಿಯ ಮುಕ್ಕಾಲು ಭಾಗ ಶಾಖದ ರೂಪ ತಾಳಿತು. ಪರಿಣಾಮವಾಗಿ ಆ ಪ್ರದೇಶದ ಉಷ್ಣ ತಾಪಮಾನ ಹತ್ತಾರು ಲಕ್ಷ ಡಿಗ್ರಿ ಸೆಲ್ಸಿಯಸ್ ಗಳ ವರೆಗೆ ಏರಿತು! ಬೆಂಕಿಯ ಜ್ವಾಲೆಗಳು ಎರಡು ಪಟ್ಟಣಗಳನ್ನು ಪೂರ್ತಿಯಾಗಿ ಆಕ್ರಮಿಸಿದವು. ಹಿರೋಷಿಮಾದಲ್ಲಿ ಇದರ ಪ್ರತಾಪ ಹೆಚ್ಚಾಗಿದ್ದು ೬ ಗಂಟೆಗಳಲ್ಲಿ ಬೆಂಕಿ ಸಿಕ್ಕಿದ್ದನ್ನೆಲ್ಲಾ ಭಸ್ಮ ಮಾಡುತ್ತಾ ೨ ಕಿಲೋಮೀಟರ್ ಸುತ್ತಳತೆಯವರೆಗೂ ಚಾಚಿತ್ತು. ತೇವವು ಬೆಂಕಿಯ ಜ್ವಾಲೆ ಯಿಂದ ಉತ್ಪತ್ತಿಯಾದ ಬೂದಿಯ ಸುತ್ತ ದಟ್ಟ ಆವಿಯಾಗಿ, ತಂಪು ಹವೆಯೊಂದಿಗೆ ಕೂಡಿದ ಪರಿಣಾಮವಾಗಿ ಎರಡು ಪಟ್ಟಣಗಳ ಮೇಲೆ ಭಾರಿ ಮಳೆ ಸುರಿಯಿತು. ಅದು ಸಾಮಾನ್ಯ ಮಳೆಯಾಗಿರಲಿಲ್ಲ. ವಿಕಿರಣಶೀಲತೆ ಮತ್ತು ಎಣ್ಣೆಯಂತಹ ದ್ರವ ಆ ಮಳೆಯಲ್ಲಿತ್ತು.

ಹಿರೋಷಿಮಾದಲ್ಲಿ ಅಣುಬಾಂಬು ಸ್ಪೋಟಗೊಂಡಾಗ ಸುಮಾರು ಮೂರುವರೆ ಲಕ್ಷ ಜನರಿದ್ದರು. ಪರಿಣಾಮವಾಗಿ ೧೯೪೫ರ ಕೊನೆವರೆಗೂ ಮಡಿದ ಜನರ ಸಂಖ್ಯೆ ೧,೪೦,೦೦೦ಕ್ಕೇರಿತು. ನಾಗಸಾಕಿ ಯಲ್ಲಿ ಅಣುಬಾಂಬು ಸ್ಫೋಟಿಸಿದಾಗ ೨,೮೦,೦೦೦ ಜನರಿದ್ದರು. ೧೯೪೫ರ ಕೊನೆಯವರೆಗೆ ಅಲ್ಲಿ ಮಡಿದವರ ಸಂಖ್ಯೆ ಸುಮಾರು ೭೪,೦೦೦ದಷ್ಟಾಯಿತು.

ಬಾಂಬ್ ಸ್ಫೋಟದಿಂದ ಶೇಕಡ ೯೦ ರಷ್ಟು ಆಸ್ಪತ್ರೆಗಳು ಮತ್ತು ಸಿಬ್ಬಂದಿ ವರ್ಗ ಮರಣ ಹೊಂದಿದ್ದರಿಂದ ಇಲ್ಲವೇ ಗಾಯಗೊಂಡಿದ್ದರಿಂದ ದುರಂತ ಸಂಭವಿಸಿದಾಗ ಎರಡು ಪಟ್ಟಣಗಳ ಜನರಿಗೆ ತ್ವರಿತ ವೈದ್ಯಕೀಯ ಉಪಚಾರಗಳು ಲಭಿಸಲಿಲ್ಲ.

ಹಿರೋಷಿಮಾದಲ್ಲಿ ಸುಮಾರು ೭೬,೦೦೦ ಮತ್ತು ನಾಗಸಾಕಿಯಲ್ಲಿ ೫೦,೦೦೦ ಕಟ್ಟಡಗಳು ಧ್ವಂಸವಾದವು. ಅಣು ಬಾಂಬು ಸಿಡಿದಾದ ಕೆಲ ವರ್ಷಗಳ ನಂತರವೂ ಅಲ್ಲಿನ ಜನ ವಿಕಿರಣದ ಪರಿಣಾಮದಿಂದಾಗಿ ವಿವಿಧ ರೋಗಗಳಿಗೆ ತುತ್ತಾಗಿ ಸಾವಿಗೀಡಾದರು. ಈಗಲೂ ಅಲ್ಲಿ ಜನಿಸುವ ಮಕ್ಕಳು ಬದಲಾದ ಅನುವಂಶಿಕ ಗುಣ ಮತ್ತು ಶಾರೀರಿಕ ದೋಷಗಳನ್ನು ಪಡೆದುಕೊಂಡು ಹುಟ್ಟುತ್ತಿದ್ದರೆ.

ದುರಂತ ಸಂಭವಿಸಿ ಈಗ ೫೦ ವರ್ಷಗಳು ಕಳೆದಿವೆ. ಜಪಾನಿಯರ ಪಾಲಿಗೆ ಆ ಎರಡು ದಿನಗಳು ಕರಾಳ ದಿನಗಳೇ ಸರಿ. ಬಹುಶಃ ಅವರು ಆ ದುರಂತ ಮತ್ತು ದಿನಗಳನ್ನು ಎಂದೂ ಮರೆಯಲಾರರು. ದುರಂತ ಸಂಭವಿಸಿದ ಸ್ಥಳ ಈಗ ಕೂಡ ಉಪಯೋಗವಿಲ್ಲದಾಗಿದೆ. ಅಲ್ಲಿ ಶಾಂತಿ ಸ್ಮಾರಕಗಳನ್ನು ನಿರ್ಮಿಸಿರುವ ಅವರು ಈ ದಿನಗಳಲ್ಲಿ ವಿಶೇಷ ಶಾಂತಿ ಸಭೆಗಳನ್ನು ನಡೆಸಿ ದುರಂತದಲ್ಲಿ ಮಡಿದ ತಮ್ಮ ಬಂಧು-ಮಿತ್ರರನ್ನು ನೆನೆಯುತ್ತಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ದೇವರಲ್ಲಿ ಮೊರೆಹೋಗುತ್ತಾರೆ.

ಅಮೆರಿಕ ಜಪಾನಿನ ಮೇಲೆ ಹೀಗೆ ಎರಡು ಅಣು ಬಾಂಬುಗಳನ್ನು ಪ್ರಯೋಗಿಸಿ ಜಗತ್ತಿಗೆ ಇಂತಹ ಭೀಕರ ಅಸ್ತ್ರದ ಕಲ್ಪನೆಯನ್ನು ಮೊದಲ ಬಾರಿಗೆ ಮಾಡಿಕೊಟ್ಟಿತ್ತು. ಮಾನವನ ಇತಿಹಾಸದಲ್ಲಿ ಈ ದುರಂತವನ್ನು ಮಾನವನೇ ಎಸಗಿದ ಅತ್ಯಂತ ಭೀಕರ ನಾಶ ಎಂದೇ ಹೆಸರಿಸಬಹುದು. ಅಣು ಬಾಂಬಿನಿಂದ ಸಕಲ ಜೀವರಾಶಿಗಳ ಸರ್ವನಾಶ ಖಂಡಿತ ಎನ್ನುವುದು ತಿಳಿದಿದ್ದರೂ ಮಾನವ ಅದರ ಶಾಶ್ವತ ನಿವಾರಣೆಗೆ ಪರಿಣಾಮಕಾರಿಯಾದ ಮಾರ್ಗ ಅನುಸರಿಸುತ್ತಿಲ್ಲ ವೆನ್ನುವುದು ಈಗಿನ ಕಾಲದ ದುರಂತಗಳಲ್ಲೊಂದು.

ಪರಿಣಾಮ
ಅಣುಬಾಂಬು ಸ್ಪೋಟಗೊಂಡಾಗ ಏಕಕಾಲದಲ್ಲಿ ಅಪಾರ ಶಕ್ತಿ ಬಿಡುಗಡೆಯಾಗುವುದರೊಂದಿಗೆ ನ್ಯೂಟ್ರಾನ್, ಅಯೋಡಿನ್-೧೩೧ ಮತ್ತು ಸ್ಟ್ಯಾನ್ ಸಿಯಂಗಳು ಬಿಡುಗಡೆಯಾಗುತ್ತವೆ. ನ್ಯೂಟ್ರಾನುಗಳು ವಾಯುವೇಗದಲ್ಲಿ ಚಲಿಸುವಾಗ ದಾರಿಯಲ್ಲಿ ಸಿಕ್ಕ ಯಾವುದೇ ದೇಹವನ್ನು ಹೊಕ್ಕು ಜೀವಾಣುಗಳನ್ನು ನಾಶ ಪಡಿಸಬಲ್ಲವು. ಅಯೋಡಿನ್-೧೩೧ ಬಿಳಿಯ ರಕ್ತ ಕಣ, ಅಸ್ತಿಮಜ್ಜೆ, ಗುಲ್ಮಗಳನ್ನು ನಾಶಪಡಿಸುವುದಲ್ಲದೇ ದೇಹದಲ್ಲಿ ಗಂಟು ಬೆಳೆಯಲು ಕಾರಣವಾಗುತ್ತದೆ. ವಿಕಿರಣಶೀಲತೆಯ ಪರಿಣಾಮದಿಂದ ವಂಶವಾಹಿಗಳಲ್ಲಿ ಬದಲಾವಣೆ ಮತ್ತು ಜೀವಿಗಳಲ್ಲಿ ಆಕಸ್ಮಿಕ ಬದಲಾವಣೆ ಅಂದರೆ ಮ್ಯುಟೇಷನ್ ಕೂಡ ಆಗಬಹುದು. ಇದು ಮಾನವನ ಆಯುಷ್ಯವನ್ನು ಕ್ಷೀಣಿಸುವಂತೆ ಮಾಡಬಹುದಲ್ಲದೆ ಕ್ಯಾನ್ಸರನ್ನು, ಕಣ್ಣಿನ ಬೇನೆ, ಇತ್ಯಾದಿ ರೋಗಗಳನ್ನೂ ತರಬಲ್ಲದು.
*****

 

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...