ಯಾಕೆ ಹಾಗೆ ನಿಂತಯೊ ದಿಗ್ಭ್ರಾಂತ?
ಯಾಕೆ ಕಂಬನಿ ಕಣ್ಣಿನಲಿ?
ನೆಚ್ಚಿದ ಜೀವಗಳೆಲ್ಲವು ಕಡೆಗೆ
ಮುಚ್ಚಿ ಹೋದುವೇ ಮಣ್ಣಿನಲಿ?
ಇದ್ದರು ಹಿಂದೆ ಬೆಟ್ಟದ ಮೇಲೇ
ಸದಾ ನೆಲೆಸಿದ್ದ ಗಟ್ಟಿಗರು,
ಹೊನ್ನು ಮಣ್ಣು ಏನು ಕರೆದರೂ
ಬೆಟ್ಟವನಿಳಿಯದ ಜಟ್ಟಿಗಳು.
ಹಳೆಯ ಮಾತಿರಲಿ ತೀರ ಈಚೆಗೂ
ಮುಗಿಲೊಳಗೆಷ್ಟೋ ಗರುಡಗಳು,
ಆಡುತ್ತಿದ್ದವು ಹಾಡುತ್ತಿದ್ದವು
ಅಕ್ಷರತತ್ವನಿಗೂಢಗಳು.
ಇದ್ದಕಿದ್ದಂತೆ ಬಾನೇ ಖಾಲಿ
ನಡುರಾತ್ರಿಯ ಜಿ.ಸಿ.ರೋಡು!
ಹೆಮ್ಮೆ ಕವಿಸಿದ್ದ ಪಕ್ಷಿರಾಜಗಳು
ಥಟ್ಟನೆಲ್ಲಿ ಹೋದುವು ಹೇಳು?
ಬಾನೊಳು ಈಜಿದ ಗರುಡ ಕೆಳಗೆ
ಹಾವಿನ ಹೆಣಕ್ಕೆ ಎರಗಿದವೆ ?
ಬಣ್ಣದ ಪಟಗಳ ಸೂತ್ರವೆ ಕಡಿದು
ಮಣ್ಣ ಹೊಂಡಕ್ಕೆ ಉರುಳಿದುವೆ ?
ಆಕೆಡೆಮಿ ಪೀಠ, ಕುಲಪತಿ ಪೇಟ
ದೇಶವಿದೇಶಕೆ ಹಾರಾಟ,
ನುಂಗಿಬಿಟ್ಟವೆ ದಿಟ್ಟರೆಲ್ಲರ
ಕುರ್ಚಿ, ಕಾಸು ಮನೆ, ಮಠ ತೋಟ ?
ಪುಸ್ತಕ ಪೆನ್ನು ಹೊಸ ಹೊಸ ಬರಹ
ಹಿಂದಿದ್ದವು ತೋಳ್ಚೀಲದಲಿ
ಈಗಲೊ ಪ್ರಶಸ್ತಿ, ವಿಮಾನ ಟಿಕೆಟ್ಟು
ನೋಟ ಕಟ್ಟು ಸೂಟ್‌ಕೇಸಿನಲಿ!
ಪೀತ ಪತ್ರಿಕೆ ಪಿಶಾಚಿ ಬಾಯಿ
ಎತ್ತುವ ಕುಕ್ಕುವ ತಂತ್ರಗಳು,
ಸತ್ಯದ ಕಳಕಳಿ ಬೆಳಗದ ಹಾದಿ
ದಿನನಿತ್ಯವು ಅಪಘಾತಗಳು
ಎಲ್ಲ ಚಿಕ್ಕೆ ಅಳಿದಿಲ್ಲ, ಆಳದಲಿ
ಹೊಳೆದಿವೆ ಧ್ರುವ ಸಪ್ತರ್ಷಿ ಕುಲ,
ಗಗನದಕ್ಷತೆ ದೀಕ್ಷೆ ತೊಟ್ಟವರ
ಆಶೀರ್ವದಿಸಿದೆ ಎಲ್ಲ ಸಲ.
*****