ನಿನ್ನೆ ಹಾಕಿದ್ದೆ ಓಟು
ಮತ್ತೆ ಬಂದಿರಿ ಇವತ್ತು!
ಏನು ಆಟವೆ ಸ್ವಾಮಿ ?
ಮುಂದೆ ಹೋಗಿ,
ಬೇಡುವುದಕ್ಕೂ ಒಂದು ಹೊತ್ತು ಗೊತ್ತಿಲ್ಲವೆ?
ನಗುತ್ತಿದ್ದಾರೆ ಎಲ್ಲ, ಮುಂದೆ ಹೋಗಿ.
ಅಲ್ಲಿ ಕಾರ್ಗಿಲ್ಲಿನಲ್ಲಿ ಉತ್ತರದೆತ್ತರದಲ್ಲಿ
ಯಜ್ಞ ನಡೆಯುತ್ತಿದೆ ಗೊತ್ತೆ ತಮಗೆ ?
ನಮ್ಮ ಹುಡುಗರ ಜೀವ ಆಜ್ಯಧಾರೆಯ ಹಾಗೆ
ಒಂದೆ ಸಮ ಸುರಿಯುತಿದೆ ಯುದ್ಧದುರಿಗೆ;
ಕಾದುವ ಹುಡುಗರ ತಂದೆ ತಾಯಿ ಹೆಂಡಿರ ದುಃಖ-
ಜ್ವಾಲೆ ಹಬ್ಬುತ್ತಿದೆ ಎಲ್ಲ ಕಡೆಗೆ.
ಇಂಥ ಹೊತ್ತಲ್ಲೂ ನಿಮ್ಮ ಆಟವೆ ನಿಮಗೆ!
ಬೇಡುವುದಕ್ಕೂ ಒಂದು ಹೊತ್ತು ಗೊತ್ತಿಲ್ಲವೆ ?
ಗೊತ್ತಾದ ಅವಧಿಗೆ ಮಾತ್ರ ಬನ್ನಿರಿ ತಾವು
ಕಂಡ ಕಂಡಾಗ ಅಲ್ಲ
ಮುಂದೆ ಹೋಗಿ.
ಕರುಳನಿರಿಯುವ ಚಳಿಯ ಇರುಳು, ಶಿಖರಗಳನ್ನು
ಏರುತ್ತ ಹೋರುತ್ತ,
ಬಂಕರಿನಲ್ಲಿ ಅಡಗಿ ಕೂತು
ಛಕ್ಕನೆ ಎದ್ದು
ಹೊಂಚಿ ಹೊಡೆಯುತ್ತ,
ಚುಕ್ಕಿಗಳ ಬಯಲಲ್ಲಿ
ಪತಾಕೆಯಂತೆ ಸೆಟೆದು
ತುಪಾಕಿ ಸಿಡಿಸುತ್ತ
ಅಂಗುಲ ಆಂಗುಲಕ್ಕೂ ಇಂಗುತಿದೆ ಜೀವಸಿರಿ;
ಆದರೂ ತಗ್ಗದೆ ಮೇಲಕ್ಕೆದ್ದಿದೆ ಉರಿ.
ಇಂಥ ಹೊತ್ತಲ್ಲೂ ಬರುತ್ತೀರಲ್ಲ ಹೀಗೆ!
ಸಾಕು ನಿಲ್ಲಿಸಿ ಶಂಖ, ಹಿಂದೆ ಕೇಳಿದ್ದೇ,
ಊದಬೇಡಿ ಮತ್ತೆ, ಮುಂದೆ ಹೋಗಿ
ಮುಂದೆ ಹೋಗಿ ಸ್ವಾಮಿ ಮುಂದೆ ಹೋಗಿ.
ಬೇಡ ಸ್ವಾಮೀ ನಿಮ್ಮ
ಚುನಾವಣೆಯ ಮಾತು,
ನಿಮ್ಮ ಯೋಗ್ಯತೆ ನಮಗೆ ಲಾಗಾಯ್ತಿನಿಂದಲೂ
ಚೆನ್ನಾಗಿ ಗೊತ್ತು;
ಶಾಕಿನಿ ಡಾಕಿನಿಯರ ರಕ್ತದಾಹಕ್ಕಾಗಿ
ಚೆನ್ನಾಗಿ ನಡೆದಿದ್ದ ರಥ ಉರುಳಿ ಬಿತ್ತು.
ಸರಿಯಾದ ಸಮಯಕ್ಕೆ ಹೊಂಚಿದ್ದ ಹುಲಿರಾಯ
ಬೇಲಿಯನ್ನೇ ಜಿಗಿದ
ಯುದ್ಧ ಬಂತು.
ಹೇಳಬೇಕೇ ತಮಗೆ ? ಎಲ್ಲ ಗೊತ್ತಲ್ಲ,
ಎಲ್ಲದರ ಹಿಂದೆ ತಾವೆ ಇದ್ದೀರಲ್ಲ ?
ಆದರೂ ಹೀಗೆ
ಹೊಸ ವೇಷ ಹಾಕಿ
ಬರಬಹುದೆ? ದಯಮಾಡಿ ಮುಂದೆ ಹೋಗಿ,
ಮುಂದೆ ಹೋಗಿ ಸ್ವಾಮಿ ಮುಂದೆ ಹೋಗಿ.
ಯಾರಿಗೆ ಚುನಾವಣೆ,
ಯಾತಕ್ಕೆ ಚುನಾವಣೆ?
ಪೆದ್ದು ಕುರಿಗಳ ಹಿಂಡ ಕಾಯಲಿಕ್ಕಾಗಿಯೇ ?
ಕೊಬ್ಬಿದ ತೋಳಗಳನ್ನು ಆಯಲಿಕ್ಕಾಗಿಯೇ ?
ಪಾರ್ಲಿಮೆಂಟ್ ಹಾಲಲ್ಲಿ
ಕುರ್ಚಿ ಮೈಕು ಹಿಡಿದು
ಕಾದಲಿಕ್ಕಾಗಿಯೇ?
ಕಾಯುವುದಿದ್ದರೆ ಹೋಗಿ ಗಡಿಗಳನ್ನು ಕಾಯಿರಿ,
ಕಾದುವುದಿದ್ದರೆ ಹೋಗಿ ವೈರಿ ಜೊತೆ ಕಾದಿರಿ.
ಚುನಾವಣೆಗೆ ನಿಮಗೆ ಹಕ್ಕು ಎಲ್ಲುಂಟು?
ಎರಡು ಸಾವಿರ ಕೋಟಿ ಯರ ಮನೆ ಗಂಟು ?
ಹೋಗಿ ಹೋಗಿ ಸ್ವಾಮಿ ಮುಂದೆ ಹೋಗಿ.
ಎಲ್ಲ ಸರಿಯಾದಾಗ, ಹೊತ್ತು ಗೊತ್ತು ತಿಳಿದು
ಮತ್ತೆ ಬಂದೀರಂತೆ
ಮುಂದೆ ಹೋಗಿ.
*****