ಇಲ್ಲಿ
ದೂರದ ಪಶ್ಚಿಮಾರ್ಧದಲ್ಲಿ
ಅಮೆರಿಕದ ಪಲ್ಲಂಗದಲ್ಲಿ ನಟ್ಟಿರುಳಲ್ಲಿ
ಬಿಟ್ಟು ಬಂದದ್ದರ ಕನವರಿಕೆ,
ಭಾರತದ ಬೆಳಕಲ್ಲಿ ಹೊಳೆದ ಬಾಲ್ಯದ ಬೆರಗು
ಮಧುರ ಮರುಕಳಿಕೆ;
“ಅನುಭವವು ಸವಿಯಲ್ಲ ಅದರ ನೆನಪೇ ಸವಿಯು
ಅದ ಕದ್ದು ಮೇಯದೇ ಮನವು ?”
ಹಿಂದೆ ಅಲ್ಲಿ
ಬಂಗಾರ ಬಾಲ್ಯದ ಕೆನೆದಿನಗಳಲ್ಲಿ
ಅಜ್ಜಿ ಮಡಿಲಲ್ಲಿ
ಕೃಷ್ಣ ಲವಕುಶರ ಕಥೆ ಕೇಳುತ್ತ ಕೇಳುತ್ತ
ನಿದ್ದೆ ಹೋದದ್ದು;
ಕಿಟ್ಟ ರಂಗರ ಜೊತೆ
ಮನೆ ಮುಂದೆ ಹೊಂಗೆ ನೆರಳಲ್ಲಿ ನಿಂತು
ಕಡಲೆಪುರಿ ಮೆಲ್ಲುತ್ತ ಜಗಳ ಕಾದದ್ದು;
ತೀರ್ಥಳ್ಳಿ ತುಂಗೆಯ ನಿಗೂಢ ಆಳಕ್ಕೆ
ಬಂಡೆ ಮೇಲಿಂದ ದುಡುಮ್ಮನೆ ಜಿಗಿದೆದ್ದು
ಸಕ್ಕರೆ ಮರಳ ಹಾಸಿನಲ್ಲಿ ಹೊರಳುತ್ತ
ಬಿಸಿಲ ಕಾಸಿದ್ದು;
ಕಟ್ಟಿಗೆ ಕೋಲನ್ನೇ ವಿಕೆಟ್ಟಾಗಿ ನೆಟ್ಟು
ಹೆಡ್‌ಮಾಸ್ಟರ್ ಪೇಟಕ್ಕೆ ಟೆನಿಸ್ ಚೆಂಡು ಹೊಡೆದದ್ದು;
ವಿದ್ಯಾರ್ಥಿಭವನದ ಮಸಾಲೆದೋಸೆಗೆ ಕಾದು
ಗಿರಹತ್ತಿ ಎರಡೆರಡು ಚಪ್ಪರಿಸಿ ತಿಂದದ್ದು-
ನೆನಪಿನ ಗಾಳಕ್ಕೆ ಸಿಕ್ಕು ಚಡಪಡಿಸುತ್ತದೆ ಜೀವ
“ಗಿಳಿಯು ಪಂಜರದೊಳಿಲ್ಲ ಹರಿಯೆ
ಗಿಳಿಯು ಪಂಜರದೊಳಿಲ್ಲ”
ಈಗ ಇಲ್ಲಿ
ಇಬ್ಬರೂ ಕೂಡಿ ಕೈತುಂಬ ದುಡಿಮೆ
ಮೂವತ್ತು ಚದುರದ ಸ್ವಂತ ಮನೆ, ಎಲ್ಲಕಡೆ
ಮೆತ್ತೆ ಹಾಸು
ಅದ್ದೂರಿ ಸೋಫಾಸೆಟ್, ಬಣ್ಣ ಬಣ್ಣದ ಕರ್ಟನ್
ಫ್ರಿಜ್ಜು, ಮೈಕ್ರೋವೋವನ್
ಒಂದೊಂದು ರೂಮಿಗೂ ಒಂದೊಂದು ಟಿ. ವಿ.
ಕಂಪ್ಯೂಟರ್ ಸೆಟ್ಟು;
ಸ್ಕೈ ಸ್ಕ್ರೇಪರ್ ನಗರದ ವಿಶಾಲ ವೀಧಿಗಳಲ್ಲಿ
ಗಂಟೆಗರವತ್ತು ಮೈಲಿ ಈಜಿ ಹಾಯುವ ಮೋಜು,
ತಿಂದು ತೇಗಲು ಸಾಕು ಸಂಬಳದ ಸರಿಯರ್ಧ ಬ್ಯಾಂಕಿಗಿಟ್ಟೂ!
ಕೆಲವು ರಗಳೆಗಳೂ ಇಲ್ಲವೆಂದಲ್ಲ;
ಕನ್ನಡ ಕಲಿಸಿದ್ದರೂ ತನ್ನ ಇಂಗಿಷಿನಲ್ಲೆ
ಉತ್ತರ ನೀಡುವ ಮಗ,
ಬೆಳೆದ ಮಗಳನ್ನು ಡೇಟಿಂಗ್‌ಗೆ ಕರೆದನಂತೆ
ಮೆಕ್ಸಿಕನ್ ಹುಡುಗನೊಬ್ಬ!
ಹೇಗೋ ಸಂತೈಸಿ ಮಗಳ ಬೇಡ ಎಂದದ್ದಾಯ್ತು
ಕನ್ನೆಯ ಮುಗ್ಧತೆಯನ್ನು ಪರಚಿ ಹರಿದಿದ್ದಾಯ್ತು
ವರ್ಷಗಳೆ ದುಡಿದರೂ ಕೆಲಸದ ಭದ್ರತೆ ಇರದೆ
ಆತಂಕ ಭಯದಲ್ಲಿ ಬದುಕ ನೂಕಿದ್ದಾಯ್ತು
ನಲವತ್ತುxಒಂದು ಲೆಕ್ಕದ ಸ್ಪೂರ್ತಿ ಪಡೆದು
ಬ್ಯಾಂಕ್ ಬ್ಯಾಲೆನ್ಸ್ ಸಾಕಷ್ಟು ಬೆಳೆದಿದ್ದರೂ
ಅಲ್ಲಿಗೆ ಗುಡ್‌ಬೈ ಹೇಳಿ, ಇಲ್ಲಿಯ ಪ್ರಜೆಯೇ ಆಗಿ
ಭವಿಷ್ಯಕ್ಕೆ ಪಂಚಾಂಗ ಕಟ್ಟಿಸಿದ್ದರೂ
ಎದೆಯಾಳದಲ್ಲೇನೋ ಸಣ್ಣ ಚೀರು,
ಕೊಟ್ಟಂತೆ ಕೋರ್ಟಲ್ಲಿ ಯಾರೋ ದೂರು!
ಬರಿಭ್ರಮೆಯೆ ಹೇಗೆ, ಬೆರಗಾಗುತ್ತೇನೆ ಒಮ್ಮೊಮ್ಮೆ,
ಒಂದಲ್ಲ, ಎರಡು ಸಲ ಮನೆಮಂದಿಯೆಲ್ಲ
ಮಗನ ಉಪನಯನಕ್ಕೆ, ಮಗಳ ಹೆಸರಲ್ಲಿ ಹೊತ್ತ
ಹರಕೆ ಸಂದಾಯಕ್ಕೆ
ತುದಿಗಾಲ ಮೇಲೆ ತವರು ನೆಲಕ್ಕೆ ಹಾರಿದ್ದು!
ಇಲ್ಲಿಯೂ ಆಗಾಗ ಎಲ್ಲಿಯ ದೇವಸ್ಥಾನಕ್ಕೊ
ಹಣ್ಣು ಕಾಯಿ ಸಮೇತ ದುಡುಗುಟ್ಟಿ ಓಡುವುದು!
ಅರ್ಥವಿಲ್ಲದ ಚೇಷ್ಟೆ ಇದೆಲ್ಲ ಎಂದೆಷ್ಟೊ ಸಲ
ಅನ್ನಿಸಿದ್ದರು ಕೂಡ
ಮೊದಲ ಸಲ ಹೋಗಿ ಬರುವಾಗ ಸೂಟ್‌ಕೇಸಲ್ಲಿ
ಇಂಡಿಯಾದ ಒಂದು ಹಿಡಿ ಮಣ್ಣು ಅಡಗಿಸಿ ತಂದು
ಮನೆ ಹಿತ್ತಿಲಲ್ಲಿ ಬೆರಸಿದ್ದು ನೆನಪಾಗಿ
ಜುಮ್ಮೆನ್ನುತ್ತದೆ ಮೈ, ಜುಮ್ಮೆನ್ನುತ್ತದೆ ಎದೆ!
ಎಲ್ಲ ಇದ್ದೂ ಇಲ್ಲಿ ಏನೋ ಕೊರತೆ,
ಬಣ್ಣ ಬಣ್ಣದ ಭಾರೀ ಹಂಡೆಯಂಥ ಬಲೂನಿ-
ಗೆಲ್ಲೋ ಏನೋ ಸಣ್ಣ ಸೂಜಿ ತೂತು;
ಉಸಿರೆಷ್ಟೆ ತುಂಬಿದರು ಎರಡೇ ಕ್ಷಣದ ಹಿಗ್ಗು
ಎದೆ ತುಂಬ ಮಾತಿದ್ದೂ ಬಾಯಿ ಉಗ್ಗು.
ನಡು ರಾತ್ರಿಯಲ್ಲಿ ಚಿಗುರು ಮಂಪರಿನಲ್ಲಿ
ಚಿಕ್ಕೆಗಳು ಮುತ್ತಿಡುವ ಹೊತ್ತಿನಲ್ಲಿ
ಪೂರ್ವ ಸ್ವರ್ಗದ ಸ್ಟರ್ಣದ್ವಾರ ತರೆಯುತ್ತದೆ.
ದೂರದೆಲ್ಲಿಂದಲೋ ಗಾಳಿ ಬೆನ್ನನ್ನೇರಿ
ಏಳು ಪರ್ವತ ಏಳು ಕಡಲ ತಡೆ ಹಾರಿ
ಕೊಳಲು ವೀಣೆ ಮೃದಂಗ, ಲತಾದನಿಯ ಅಭಂಗ
ಎದೆಯ ಮರ್ಮವ ತೂರಿ ಹಾಯುತ್ತವೆ;
ಮಲ್ಲಿಗೆಯ ಬಳ್ಳಿ ಮಲೆನಾಡ ಹಳ್ಳಿ
ಕೊರಳುಬ್ಬಿ ಉಲಿವ ಕಾಜಾಣ ಕಾಮಳ್ಳಿ
ಬೆಪ್ಪು ಕವಿಸಿ ಕಣ್ಣು ಹೊಡೆಯುತ್ತವೆ.
*****