ಮನದೊಳಗಣ
ಮನೆಯ ಕಟ್ಟಿದೆ
ಹೇ ದೇವ ಹೋ ದೇವ
ಎಂಥ ಚೆಂದವೋ
ಪಂಚ ತತ್ವವೆಂಬ
ಇಟ್ಟಿಗೆಯನಿಟ್ಟು
ಗೋಡೆಗಳ ಕಟ್ಟಿ ಭದ್ರಪಡಿಸಿ
ಮುತ್ತುಗಳ ಸೇರಿಸಿ ಒಳಗಣ
ನೂಲುಗಳ ಸುತ್ತಿಸಿ ಒಂಬತ್ತು
ಗೂಡುಗಳನಿರಿಸಿ ಉಸಿರಾಗಿಸಿದೆ
ಧಮನಿಗಳಲ್ಲಿ ಎಂಥ ಚೆಂದವೋ
ಹೇ ದೇವ ಹೇ ದೇವ
ಸತ್ಯಧರ್ಮವೆಂಬ
ಜ್ಯೋತಿಯನ್ನಿರಿಸಿ ಬಾಳಿಗೆ
ತುಲಾಭಾರವೆಂಬ ತೂಕವನ್ನಿರಿಸಿ
ಗೊಂಬೆಯಾಗಿಸಿದೆ
ಎಂಥ ಚೆಂದವೋ
ಹೇ ದೇವ ಹೇ ದೇವ
ಮೂರೇ ದಿನದ ಜೋಗುಳದಲಿ
ನೋವುನಲಿವುಗಳ
ತೊಟ್ಟಿಲ ಕಟ್ಟಿ ತೂಗಿಸಿ
ಆಟವಾಡಿಸುತಿಹೆ
ಹೇ ದೇವ ಹೇ ದೇವ
ಬಣ್ಣಿಸಲಸದಳವೂ
ಹೇಗಾದರೂ ಸರಿಯೇ
ನೀನೇ ಜೀವನವೋ ನಮ್ಮ ಬಾಳಿಗೆ.
ಶಿವನು ಆಡಿಸಿದ ಡಮರುಗ
ಢಂ ಢಂ ಢಂ ಢಮರುಗ.
ನರ್ತಿಸಿತು ಭಾವತರಂಗ
ರುದ್ರರೂಪ ತಾಳ ಹಿಮ್ಮೇಳ
ಜೀವ ನರನಾಡಿಗಳು
ಓಂಕಾರ ಹೂಂಕಾರ
ನಾದರೂಪ ಜಗವ
ಆವರಿಸಿತು
ಮನನ ತನನ ತೋಂ ತನನ ||
ಧರೆಗೆ ಇಳಿದ
ಜಟಾಧಾರಿ ಆನಂದ
ಮಹದಾನಂದ ತ್ರಿನೇತ್ರಧಾರಿ
ತ್ರಿಪುರಾರಿ ವಿಶ್ವರೂಪಧಾರಿ ||
ಗಜಚರ್ಮಾಂಬರಧಾರಿ
ಸಚ್ಚಿದಾನಂದ ಸ್ವರೂಪ
ಮಹದೇವ ಮೂರುವರ
ಕೊಟ್ಟು ಸಲಹೆನ್ನ ಮುಕ್ಕಣ್ಣ ||
ಬಾರನ್ನ ಬಾಳು ಬಂಗಾರವಾಗಿಸು
ಶಂಭೋ ಲಿಂಗೈಕ್ಯ ಹಂಸರೂಪ
ಎನ್ನಯ್ಯ ರಕ್ಷಿಸೈ ಮುದದಿ
ನೂರು ವರುಷದಾ ಹಾದಿಯಲಿ ||
ಸುಗಮವಾಗಿಸೋ ದೇವ
ನಾರಾಯಣಾ ಆತ್ಮಜನೆ
ಶಿವಲಿಂಗ ಎನ್ನ ಅಂತರಂಗದಲಿ ನಿಲ್ಲಯ್ಯ
ಬಾರಯ್ಯ ಬಾರೋ ಎನ್ನಯ್ಯ ||
*****