ಬರಲಿರುವ ಕಾಲದ ಯುವಕರೇ,
ಇನ್ನೂ ಕಟ್ಟದಿರುವ ನಗರಗಳಲ್ಲಿ
ಹುಟ್ಟದಿರುವ ಎಳೆಯ ಜೀವಗಳೇ,
ಕ್ಷುದ್ರವಾಗಿ ಸತ್ತ ಈ ಮುದುಕನ ಮಾತನ್ನು ಕೇಳಿ.
ತನ್ನ ಹೊಲವನ್ನು ಉತ್ತು ಬಿತ್ತದ ರೈತನಂತೆ.
ಮನೆಯ ಚಾವಣಿಗೆ ತೊಲೆ ಕೂಡಿಸಿವುದನ್ನು ಅರ್‍ಧಕ್ಕೇ ಬಿಟ್ಟು ಓಡಿದ ಬಡಗಿಯಂತೆ
ನಾನೂ ಕಾಲ ದಂಡಮಾಡಿದೆ,
ದಿನಗಳನ್ನು ಸುಮ್ಮನೇ ಕಳೆದೆ.
ಹೇಳದೆ ಉಳಿದಿರುವುದನ್ನೆಲ್ಲ ನೀವು ಹೇಳಿ.
ಮಾಡದೆ ಉಳಿದಿರುವುದನ್ನೆಲ್ಲ ನೀವು ಮಾಡಿ.
ನನ್ನನ್ನು ಮರೆತುಬಿಡಿ. ನನ್ನ ನಿದರ್ಶನ
ನಿಮ್ಮ ದಾರಿ ತಪ್ಪಿಸದಿರಲಿ.
ಬಿತ್ತದ ಬೆಳೆಯದ ಜನರೊಂದಿಗೆ ಕೂತು
ಅವರು ಬೇಯಿಸದ ಔತಣವನ್ನು ಮೆಚ್ಚಿಮೆಚ್ಚಿ ಉಂಡೆ, ಏಕೆ?
ನನ್ನ ಸುಂದರ ಸೂಕ್ತಿಗಳನ್ನು ಅವರ ಹರಟೆಗೆ
ಉಪ್ಪಿನಕಾಯಿ ಹಾಗೆ ಒದಗಿಸಿದೆ, ಏಕೆ?
ಅಕ್ಷರಕ್ಕಾಗಿ ಹಸಿದವರು, ಕವಿತೆಗೆ ಬಾಯಾರಿದವರು
ಬೀದಿಯಲ್ಲಿ ಸುಮ್ಮನೇ ಸುತ್ತುತ್ತಿದ್ದರು.
ಊರುಗಳನ್ನು ಕಟ್ಟುವ ಎಡೆಯಲ್ಲಿ ನನ್ನ ಕವಿತೆಯೇಕೆ ಚಿಗುರುವುದಿಲ್ಲ?
ವೇಗವಾಗಿ ಓಡುವ ಸಿಟಿಯ ರೈಲುಗಳ ಹೊಗೆ
ಆಕಾಶದಲ್ಲಿ ಒಂದಷ್ಟು ಕಾಲ ಉಳಿಯುವಂತೆ
ನನ್ನೆ ಕವಿತೆಯೇಕೆ ಉಳಿಯುವುದಿಲ್ಲ?
ದುಡಿವವರ ಪಾಲಿಗೆ ನನ್ನ ಮಾತು
ಬಾಯಿಗೆ ಹೊಯ್ದ ಬೂದಿಯಂತೆ,
ಕುಡುಕನ ತೊದಲಿನಂತೆ.
ಯುವಕರೇ, ನಿಮಗೆ ಒಂದು ನುಡಿಯನ್ನೂ ಕಲಿಸಲಾರೆ.
ನಡುಗುವ ಬೆರಳೆತ್ತಿ ಇಗೋ ಈ ದಾರಿ ಸರಿ ಎವ್ನಲಾರೆ.
ಎಂದೂ ಎಲ್ಲೂ ಹೋಗದವನು ದಾರಿ ಹೇಗೆ ತೋರಬಲ್ಲ?
ಬದುಕು ದಂಡ ಮಾಡಿದವನು ನಾನು ಹೇಳುವುದಿಷ್ಟೆ-
ನಮ್ಮ ಕೊಳೆತ ಬಾಯಿ ಮುಕ್ಕಳಿಸುವ ಯಾವ ಮಾತನ್ನೂ ಕೇಳಬೇಡಿ.
ಸೋತ ಬೇಸತ್ತ ನಮ್ಮ ಯಾವ ಆದೇಶವನ್ನೂ ಪಾಲಿಸಬೇಡಿ.
ನಾವು ಹಾಳು ಮಾಡಿದ ಹೊಲ ಮತ್ತೆ ವಸುಂಧರೆಯಾಗಲು,
ನಾವು ವಿಷ ತುಂಬಿದ ನಗರ ಜನ ಬದುಕಲು ಯೋಗ್ಯವಾಗಲು
ಏನು ಮಾಡಿದರೆ ಒಳಿತೆಂದು ನಿಮಗೆ ತೋರುವುದೋ ಹಾಗೆ ಮಾಡಿ.
*****
ಮೂಲ: ಬೆರ್ಟಾಲ್ಟ್ ಬ್ರೆಖ್ಟ್ / Bertolt Brecht