ತಾಯಿ ಹೆಂಡತಿ ಮಗಳು ಗೆಳತಿ ತೋರಿಕೆಯಲ್ಲಿ
ಒಂದೆ ವೃಕ್ಷದ ಬೇರೆ ಬೇರೆ ಕೊಂಬೆ
ಹಸಿಸೌದೆ ಬೆರಣಿ ಕಕ್ಕುವ ದಟ್ಟಹೊಗೆ ನಡುವೆ
ನಿಧಾನ ಹಣಿಕುವ ಬೆಂಕಿ ಕುಡಿಯಂತೆ ಚಿಗಿತವಳು;
ಇಷ್ಟಿಷ್ಟೆ ಗೆಲ್ಲುತ್ತ ಕುಡಿ ಕಾಂಡವಾಗುತ್ತ
ತುತ್ತಲಾರದ ಜ್ವಾಲೆಯಾಗಿ ಎದ್ದವಳು.
ಅಮ್ಮ ನಿನ್ನನ್ನು ನೆನೆವಾಗ ಈ ಕಣ್ಣು
ಹನಿವ ಬದಲಾಗಿ ಧೃತಿಗೊಂಡು ಜ್ವಲಿಸುತ್ತದೆ;
ಹೆಮ್ಮೆ ಉಕ್ಕುತ್ತದೆ, ನೆನಪಿನ ಗಾಲಿ ಉರುಳಿ
ಸಾಣೆ ಹಿಡಿಯುತ್ತದೆ ನಿನ್ನ ಬಾಳಿನ ಕೆಚ್ಚು
ತುಕ್ಕು ಮುತ್ತದ ಹಾಗೆ ಕುಸಿದ ಒಳಗನ್ನು,
ಹೊರಬರುತ್ತದೆ ಕತ್ತಿ ಒದ್ದು ಒರೆಯನ್ನು.
ಬರಿದೆ ಹಡೆದದ್ದಲ್ಲ ತೋಳಲ್ಲಿ ಮೇಲೆತ್ತಿ
ಬರಿದೆ ಕುಣಿಸಿದ್ದಲ್ಲ, ಹಾಲೂಡಿ ನೀರೆರೆದು
ಸಾಕಿದ್ದಷ್ಟೆ ಆಲ್ಲ, ವಿಧಿ ಊದಿದುಸಿರಿಗೆ
ಜೊತೆ ಬೆಳಕು ಆರಿ ಥಟ್ಟನೆ ನಿನ್ನ ಸುತ್ತಲೂ
ಅಮಾವಾಸ್ಯೆ ಕತ್ತಲು.
ದುಃಖ ದಿಗ್ಭ್ರಮೆ ಒಳಗೆ ಕುಸಿತ, ಪ್ರಾಣಕ್ಕೆ ನಡುಕ
ಸೆರಗನೆಳೆಯುತ್ತ
ಹೋಯೆಂದು ಹೊಯ್ಲಿಡುವ ನಾಲ್ಕು ಕಂದಮ್ಮಗಳ
ತಬ್ಬಿ ಸಂತೈಸುತ್ತ ಸಾವರಿಸಿಕೊಂಡು
ಗಟ್ಟಿ ಸಂಕಲ್ಪದಲ್ಲಿ ಎದ್ದು ನಿಂತವಳೆ,
ಬಳೆ ಒಡೆದ ಕೈಗೆ ಕಾಣದ ಕಂಕಣವ ತೊಟ್ಟು
ಪಗಡೆಯಾಡಿದ ನೆರೆಯ ಗೆಳತಿಯರ ಮನೆಯನ್ನು
ಹೂಸವೇಷದಲ್ಲಿ ಹೊಕ್ಕು
ಒಲೆ ಒರಳು ಬೀಸುಕಲ್ಲು ಹೂಡಿ ತುಟಿಕಚ್ಚಿ
ದಾಳವೆಸೆದವಳೆ, ಮತ್ತೆ ಬಾಳನ್ನು ಕರೆದವಳೆ!
ನೆನಪು ಹಸಿರಿನ್ನೂ
‘ಕೆಂಪು ಸೀರಯನ್ನುಟ್ಟು, ಬರಿತಲೆಗೆ ಸೆರಗಿಟ್ಟು
ಬತ್ತ ಕುಟ್ಟುವ ಕಲ್ಲುಬೀಸುವ ವಿಧವೆ ಹೆಣ್ಣು
ಅಲ್ಲೇ ಪಕ್ಕಕ್ಕೆ ಕೂತು
ಹರಕು ಜೇಬಲ್ಲಿ ಕೈಯ ಇಳಿಬಿಟ್ಟು ಅವಳನ್ನೇ
ಪೆಚ್ಚಾಗಿ ನೋಡುತಿದೆ ಆರೇಳರ ಎಳೆಗಣ್ಣು’.
ಒಂಬತ್ತು ಬಾರಿ ಕೊಂದರು ಬಿಡದೆ ಛಲದಲ್ಲಿ
ಹತ್ತನೆಯ ಸಲ ತಿರುಗಿ ಹುಟ್ಟಿಬಂದವಳೆ
ಸರಿಯಾದ ಗರ ಕರೆದು ಎಲ್ಲರಿಗಿಂತ ಮೊದಲೆ
ಕಾಯಿ ಹಣ್ಣಾಗಿ ಆಟವ ಗೆದ್ದು ಎದ್ದವಳೆ !
* * * * *
ಇಂಗಿ ಹೋಗಿದ್ಧ ಹೊಳೆ ಮೇಲುಕ್ಕಿ ಬಂದಂತೆ
ಮಳೆ ಬಿದ್ದು ಪಾತ್ರಕ್ಕೆ ನೆರೆಯ ಯೋಗ,
ದಡದ ಎರಡೂ ಕಡೆಗೆ ಕಾದು ದುಮುಗುಡುತಿದ್ದ
ನೆಲದ ಹಾಸಿಗೆ ಈಗ ಬೆಳೆವ ಭೋಗ.
ಮೈತುಂಬ ಬಣ್ಣದ ಪತಾಕೆ ಪತ್ತಲ ಉಟ್ಟು
ಉತ್ಸವದ ರಥ ರಸ್ತೆನಡುವೆ ಬಂತು.
ಬಳೆ ಗೆಜ್ಜೆ ಮಧುರವೀಣೆಯ ನಾದ ಮನೆತುಂಬ
ಪಿಸುಮಾತು ಹುಸಿಮುನಿಸು ಪಡೆವ ಸಂಚು.
ಮಂಗಳಾರತಿಗಿತ್ತ ಕಾಯಿ ತೊಟ್ಟಿಲ ಹೋಳು,
ಒಡಲಾಳದಲಿ ಕರೆವ ಜಿನ್ನದಗಣಿ.
ರಾತ್ರಿ ಹಗಲೂ ದೇವರೆದುರು ತುಪ್ಪದ ದೀಪ
ಮಂಡಿಯೂರಿದ್ದಾಳೆ ಸೀಮಂತಿನಿ.
ಮಾತು ಮಾತಿಗೆ ಹಿಂದೆ ಕೆಣಕಿ ಛೇಡಿಸಿದವಳು
ಇದ್ದಕಿದ್ದಂತೀಗ ಪೂರ ಬದಲು,
‘ಈಗ ಹೊರಳಿದೆ ಕರುಳು
ಮೊದಲ ಬಾರಿಗೆ ಬಸಿರ ಸವರಿದೆ ಯಶೋದೆಯ
ಬೆಣ್ಣೆ ಬೆರಳು’.
ಚೈತ್ರಾಗಮನದಲ್ಲಿ ಹರೆಹರೆಗು ಮಿರಿಚಿಗುರು
ಸಣ್ಣ ಎಲೆಗೂ ಹೊನ್ನ ರಸದ ಲೇಪ.
ತೊಡೆಯಿಂದ ತೊಡೆಗೆ ಜಿಗಿವ ಬೆಳಕಿನ ಕೇಕೆ
ಎಲ್ಲೆಲ್ಲು ಅಗರು ಚಂದನದ ಧೂಪ.
ಲಲ್ಲೆಗರೆವ ಯಶೋದೆ ತೋಳಿನಲಿ ಮಗು ಕೃಷ್ಣ,
ಮುದ್ದಿಸಿದ್ದಳೆ ಅಮ್ಮ ನನ್ನ ಹೀಗೆ!
ತಿರುಗುವುದೆ ಈ ವಿಶ್ವಚಕ್ರ ಬದಲಿಸಿ ಕೊಂಚ
ಮೂಲ ದೃಶ್ಯಗಳನ್ನೆ ಹಾಗೆ ಹೀಗೆ ?
ಇದ್ದಕ್ಕಿದ್ದಂತೆದ್ದ ಕಾಳ ಹೊಳೆ ನೆರೆಯೇರಿ
ಬಗೆಯುತ್ತ ಸಾಗಿದ್ದೆ ಗಂಡುಜೀವ,
ಕೈಸೋತು ಚಕ್ರಸುಳಿಯಲಿ ಸಿಕ್ಕು ದಿಕ್ಕೆಟ್ಟು
ಅಯ್ಯೊ ಅಮ್ಮಾ ಎಂದು ಚೀರುವಾಗ,
ಕೈಚಾಚಿ ಹಿಡಿದೆಳೆದು ಕಾಯ್ದ ಕರುಣೆಯ ಹಸ್ತ
ತನ್ನ ವೃತ್ತಕ್ಕೆಳೆದುಕೊಂಡ ಹೊತ್ತು
ಜೀವ ದಾಟಿತು ಮೇರೆ, ಮುಗಿಲು ಸುರಿಸಿತು ಧಾರೆ
‘ಒರೆ ಬೇರೆ ಒಳಬಾಳು ಬೇರೆ’ ಬೇರೆ.
ಪ್ರೀತಿಪ್ರಣತೆಗೆ ತನ್ನ ಬಾಳ ತೈಲವನೆರೆದು
ಬುತ್ತಿ ತುದಿಯೊಳಗೆದ್ದ ಸ್ನೇಹಕಿರಣ,
ಒಲಿದ ತೋಟದ ಗಡಿಯ ತೋಡಿನಲಿ ಹಾಯುತ್ತ
ಸುತ್ತಿ ಕಾಯುವ ಜೀವಜಲಕೆ ನಮನ.
* * * * *
ಮಗನ ಬಿಡಲಾರದೆ ಮತ್ತೆ ಬಂದಳೊ ತಾಯಿ
ಮಗಳ ಕಣ್ಣಿನೊಳವಳ ಜೀವಬಿಂಬ !
ಅಪ್ಪ ಎನ್ನುತ್ತ ಅವನ ಅಕ್ಕರೆಯ ಸಕ್ಕರೆಯ
ಮುಕ್ಕಿ ರುಚಿ ನೋಡುವ ತಾಯಜಂಬ
ಆಗ ಸಿಕ್ಕಿಲ್ಲದುದ ಈಗ ಪಡೆಯುವ ಹುರುಡು!
ಕೊಟ್ಟ ಪ್ರೀತಿಯನೆಲ್ಲ ಬಡ್ಡಿ ಸಹಿತ
ಪಡೆದುಕೊಳ್ಳುವ ಜಾಣ್ಮೆ, ಹೊಂದಿಕೊಳ್ಳುವ ತಾಳ್ಮೆ
ಗುಣ ವಿದ್ಯೆ ರೂಪ ಕಲ್ಯಾಣಿ ನುಡಿತ.
ಅಕ್ಕಿ ಹರಡಿದ ತಟ್ಟೆಯಲ್ಲಿ ಕಾಲಿಟ್ಟು ಮುಸಿ
ನಗುತ ಜೀರಿಗೆ ಬೆಲ್ಲ ಹಿಡಿದ ಬೆಡಗು,
ಆಂತಃಪಟದ ಆಚೆ ನಿಂತಿರುವ ಕಲ್ಪತರು
ಬಾಗಿ ಹಾರವ ಪಡೆದುದೆಂಥ ಬೆರಗು.
ಕೊಡುವ ನೋವಿಲ್ಲದೆ ಪಡೆವ ಸುಖ ಬರಿನೆರಳು
ಕೊಟ್ಟು ಸುಖ ಪಡೆಯದ ಜೀವ ವಿಫಲ,
ಕಾಳುಕೋದಿರುವ ತೆನೆ ಮಣಿಗಾಳುಗಳ ನೀಡಿ
ಸವಿಯುವುದ ಕಾಣುವುದೆ ಸುಖದ ಶಿಖರ.
* * * * *
ಮೂರು ಮುಖಗಳ ಹೆತ್ತ ಮೂಲ ನಕ್ಷೆಯ ಸುತ್ತ
ಧ್ಯಾನಿಸುತ್ತದೆ ಚಿತ್ತ; ಇರಬಹುದೆ ಅಂಥದು ?
ಗೊತ್ತಿರುವ ಉತ್ತರ ಒಂದೆ: ‘ಗೊತ್ತಿಲ್ಲ’.
ನಂಬಿಕೆಯ ದೋಣಿಯೋ ಕೊಂಚ ಮುಂದಕ್ಕೆ ಸಾಗಿ,
ಗಾಳಿ ತಳ್ಳಿದ ಹೊತ್ತು ಕೊಂಚ ಹಿಂದಕ್ಕೆ ತೂಗಿ
ಮೊದಲು ಇದ್ದಲ್ಲೆ ಉಳಿವ ವ್ಯರ್ಥತುಯ್ತ.
ಕಾಳರಾತ್ರಿಯಲಿ ಕತ್ತೆತ್ತಿ ನೋಡುತ್ತಿರಲು,
ಮುಗಿಲ ಪತ್ರವ ತೂರಿ ನಗುವ ಬೆಳಕಲ್ಲಿ,
ಹಗಲು ಹೊತ್ತಲ್ಲಿ ಮರೆಯಾಗಿದ್ದ ಮುಖಮಾಟ
ಫಕ್ಕನೇ ಮೂಡುವುದು!
ಗಾಳಿಗೈ ಅತ್ತಿತ್ತ ಸರಿಸಿ ಮುಗಿಲಿನ ಹಿಂಡು
ಕಂಡಂತೆ ಆಗುವುದು ಮೂಲ ಮುಖ ನಕ್ಷೆ;
ಕಿರುಹಾಸ, ಬರಿಭಾಸ
ಒಂದೆಕ್ಷಣ ಅಷ್ಟೆ.
ಕಂಡ ದೃಶ್ಯಕ್ಕೆ ಕಾಣದ ಅಂತರಂಗದಲಿ
ಇದ್ದೆ ಇರಬೇಕು ನೇಪಥ್ಯ ಮೂಲ,
ಹೂ ಚಿಕ್ಕೆ ಹೊತ್ತು ತೂಗುವ ದೃಶ್ಯಚೋದ್ಯಕ್ಕೆ
ಕಣ್ಣ ಮರೆಗಿದೆ ಬೇರ ಜಾಲ.
*****