೧
ಮಿಂಚು ಸಂಚರಿಸುವುದಂತೆ
ಬೆಂಕಿ ಆವರಿಸುವುದಂತೆ
ಬಿರುಗಾಳಿ ಬೀಸುವುದಂತೆ
ಸಮುದ್ರ ಉಕ್ಕುವುದಂತೆ
ಜಲಪಾತ ಧುಮ್ಮಿಕ್ಕುವುದಂತೆ
ಭುವಿ ಕಂಪಿಸುವುದಂತೆ
ಸಹಸ್ರಾರ ಸಿಡಿಯುವುದಂತೆ
ಅಬ್ಬಬ್ಬಾ…
ಏನೆಲ್ಲಾ ಕಲ್ಪನೆಗಳು ಒಂದು
ಸಮಾಗಮದ ಹಿಂದೆ
ಹುಸಿಗೆ ಹಿರಿದಾದ ಅಲಂಕಾರ?!
ಆ ಕಾಮನೆಂಬುವವನು
ಬಲಹೀನನೇ ಇರಬೇಕು!
ಬೆದರು ಬೊಂಬೆಗೆ
ಹುಲ್ಲು ತುಂಬಿದ ಹಾಗೆ
ಅವನಿಗೆ ಉಸಿರು ತುಂಬಬೇಕು
ಉಸಿರು ತುಂಬಿ
ಸಜೀವಗೊಳಿಸಬೇಕು
ಅಷ್ಟು ಮಾಡಿದರೂ
ಎಷ್ಟು ಹೊತ್ತು ತಾನೆ ಉಳಿಯಬಲ್ಲ?
ಕಾಮನಬಿಲ್ಲಿನ ಹಾಗೆ
ಇದ್ದ ಎನ್ನುವಷ್ಟರಲ್ಲಿ ಇಲ್ಲ!
೨
ತಂಗಾಳಿಯ ಅಲೆಯೊಳಗೆ
ತೇಲಿ ಬರುತಿದೆ ಪ್ರೇಮ ಪುಷ್ಪ
ಪರಿಮಳಕೆ ಪಕ್ಕಾಗಿ
ನವಿರಾಗಿ ಕಂಪಿಸುತಿದೆ
ಮಿಡಿನಾಗರ
ಪರಮ ಪರಿಮಳದ ಹೂವು
ಕಣ್ಣಿಗೆ ಕಾಣಿಸದು
ಬಣ್ಣನೆಗೂ ಸಿಗದು
ಜೀವ ಅರಳುತಿದೆ
ದೇಹ ಹೊರಳುತಿದೆ
ಓ ಪ್ರೇಮ ಪುಷ್ಪವೇ
ವಿವಶಳಾಗಿಹೆನು
ನಿನಗೆ ನನ್ನನ್ನೇ
ಕೊಟ್ಟು-ಕೊಳ್ಳುವನು.
*****