ಮಗನಿಗೆ ದೊಡ್ಡ ವಹಿವಾಟು
ಮುಂಬಯಿಯಲ್ಲಿ
ಮಗಳು ಮದುವೆಯಾಗಿ
ಮಕ್ಕಳೊಂದಿಗೆ ಕಲ್ಕತ್ತೆಯಲ್ಲಿ
ಹಣ್ಣು ಹಣ್ಣು ಮುದುಕ-ಮುದುಕಿ
ಸಾಗರದ ಒಂದು ಮೂಲೆ
ಚಿಕ್ಕ ಹಳ್ಳಿಯಲ್ಲಿ
ದೊಡ್ಡ ಮನೆ-
ಮಂಕಾಗಿ ಉರಿಯುವುದು ದೀಪ
ಭರವಸೆಯಲ್ಲಿ
ಸುಳಿದಾಡುವುದು
ನಿರೀಕ್ಷೆಯ ದೆವ್ವ
ದೊಡ್ಡ ತೋಟದಲ್ಲಿ
ಹೇಗಿರುವೆಯಮ್ಮ?
ವಿಚಾರಿಸಿಕೊಳ್ಳುವಳು
ಮಗಳು ತಪ್ಪದೇ ಫೋನಿನಲ್ಲಿ
ನಾನಿಲ್ಲದಿದ್ದರೆ ಮುಳುಗಿಯೇ
ಹೋಗುವುದು ಕಂಪನಿ
ಬರಲಾರೆ, ಗೀಚಿರುವನು
ಮಗ ಕಾಗದದಲ್ಲಿ
ತಪ್ಪದೇ ಬರುವುದು ಮನಿಯಾರ್ಡರು
ತಿಂಗಳ ಕೊನೆಯಲ್ಲಿ
‘ಮನೆ ಕಡೆ ಹುಶಾರು’
‘ಕೊಡಿ, ತೆಂಗು ಅಡಿಕೆಗೆ ನೀರು’
ಸಂದೇಶವಿರುವುದು ಮೂಲೆಯಲ್ಲಿ.
*****