ಕಣಕಿ ಕೊಬ್ಬರಿ ಆತು ಹೊಟ್ಟು ಹುಗ್ಗಿಯು ಆತು
ಏನ್ಕಾಲ ಬಂತವ್ವ ಕಂಗಾಲ ||ಪಲ್ಲ||
ರೊಟ್ಟೀಯ ಬೇಸಾಕ ಚಕಿಚೂರು ಇಲ್ಲಾತು
ಹ್ಯಾಂಗವ್ವ ಮುಂದವ್ವ ಈ ಕಾಲ
ಆರು ವರುಸಕ ಒಮ್ಮೆ ಬರಗಾಲ ಬರುತಿತ್ತು
ಈಗೀಗ ವರುವರುಸ ಬರಗಾಲ ||೧||
ಏನು ಇಲ್ಲಾ ಅಂದ್ರು ಕಲ್ಲು ಬೆಲ್ಲಾ ಅಂದ್ರು
ನಾಲಿಗಿ ಚಟ ಮಾತ್ರ ನಿಂತಿಲ್ಲ
ಹುಚನಾಯಿ ಹೊಟ್ಟೀಗೆ ಹಿಟುಬ್ಯಾಳಿ ಬೇಕಲ್ಲ
ಹೊಟ್ಟೀಯ ಹಾವ್ರಾಣಿ ಸತ್ತಿಲ್ಲ ||೨||
ದೊಡದೊಡ್ಡ ದೊಡ್ಡೋರು ದೊಡ್ಮಾತು ಆಡ್ಹ್ಯೋದ್ರು
ನನಹೊಟ್ಟೆ ತಿಪಿಗುಂಡಿ ತುಂಬಿಲ್ಲ
ಹಸುಗೂಸು ನನಮಕ್ಳು ಹಾಲ್ಗೂಸು ಸಣಮಕ್ಳು
ಎಂಜಲದ ಪತ್ರೋಳಿ ಬಿಟ್ಟಿಲ್ಲ ||೩||
ಮೂರು ಸಾವಿರ ದುಡ್ಡು ಗಾಳಿಗೋಪುರವಾತು
ಡಾಕ್ಟರ ಬಿಲ್ಮಾಡಿ ಕಿತ್ನಲ್ಲ
ಏನು ಮಾಡಿದರೇನು ನನಕೂಸು ನಿಲಲಿಲ್ಲ
ಕುಣಿಯಾಗ ಗೊಂಬ್ಯಾಗಿ ಕುಂತಲ್ಲ ||೪||
*****
ಕಣಿಕಿ = ಜೋಳದ ದಂಟು