ಸಾಕ್ಮಾಡೊ ಗಂಡಾ ಸಾಕ್ಮಾಡೋ ||ಪಲ್ಲ||
ಬೆಳಗಾತು ಹಳುವಾಗ ಬಿಸಿಲಾತು ಹಳದಾಗ
ಮಸರಾತು ಮೈಯಲ್ಲ ಸಾಕ್ಮಾಡೊ
ಕೆಸರಾತು ಕುಬಸೆಲ್ಲ ಹೆಸರಾತು ಹಾಸ್ಗೆಲ್ಲ
ತಗಣೀಗಿ ತಂಪಾತು ಸಾಕ್ಮಾಡೊ ||೧||
ಡೋಮಾರಿ ಛೀಮಾರಿ ಗಲ್ಲಾವ ಕಚ್ಯಾವ
ತಲಿಯಾಗ ಪಡಿಹೇನು ಮೇದಾವ
ಕಟ್ಟಿರಿವಿ ಹತ್ಯಾವ ಬೆಲ್ಲಂತ ತಿಳಿದಾವ
ಎದಿಗುಂಡು ಮನಗಂಡ ಕಡದಾವ ||೨||
ಕತ್ಲಾಗ ನನಪತ್ಲ ನೀನುಟ್ಟಿ ನೋಡಿಲ್ಲೆ
ನಿನಧೋತ್ರ ಸೀರೆಂತ ನಾನುಟ್ಟೆ
ನಂದೆಲ್ಲ ನಿಂದಾತ ನಿಂದೆಲ್ಲ ನಂದಾತ
ಎದಿಯಾಗ ಗಿಣಿಕೂಗಿ ಬೆಳಗಾತ ||೩||
ಗೆಳತೇರು ಗರತೇರು ಕೊಡಪಾನ ತುಂಬ್ಯಾರ
ಕಿಡಿಕ್ಯಾಗ ಇಣಿಕಿಣಿಕಿ ನೋಡ್ಯಾರ
ನನಕಂಡು ನಕ್ಕಾರ ನಿನಕಂಡು ಅತ್ತಾರ
ಪತ್ತಾರ ಸೂಳೇರು ಸತ್ತಾರ ||೪||
*****
ಗಂಡ = ಭಗವಂತ
ಬೆಳಗಾತು = ಜ್ಞಾನೋದಯವಾತು
ಗೆಳತೇರು = ಕಾಮ ಕ್ರೋಧ ಲೋಭ ಮುಂ.
ಪತ್ತಾರ ಸೂಳೇರು = ಹತ್ತು + ಆರು
ಸೂಳೇರು=ಮಾಯೆ