ಆ ಕುರಿ ಭೂಮಿಗೆ ಬಂದು ಮೂರೇ ವರ್ಷವಾಗಿತ್ತು. ತಾಯಿಯೊಂದಿಗೆ ಅಡವಿಗೆ ಮೇಯಲು ಹೋಗಿ ಬರುತ್ತಿತ್ತು. ಹಸಿರು ತಪ್ಪಲು ಕಂಡರೆ ಉಲ್ಲಾಸದಿಂದ ಜಿಗಿದಾಡುತ್ತಿತ್ತು. ಹೊಟ್ಟೆ ತುಂಬ ತಿಂದು ತನ್ನ ವಾರಿಗೆಯವರೊಂದಿಗೆ ಚಕ್ಕಂದವಾಡುತ್ತಿತ್ತು. ಮನೆಗೆ ಬಂದರೆ ತಾಯಿಯ ಮಡಿಲು ಸೇರಿ ಮೊಲೆಗೆ ಬಾಯಿ ಹಾಕಿ ಹಾಲು ಕುಡಿಯುತ್ತಿತ್ತು. ಅದರ ಮೈತುಂಬ ಗುಂಗುರು ಕೂದಲು. ಬೆಳ್ಳಗೆ ಶುಭ್ರವಾಗಿ ಮಿಂಚುತ್ತ ಮುದ್ದುಮುದ್ದಾಗಿ ಕಾಣಿಸುತ್ತಿತ್ತು. ಮುಖದ ಮೇಲೆ ದೃಷ್ಟಿಯ ಬೊಟ್ಟು ಎನ್ನುವಂತೆ ಕಪ್ಪು ಚುಕ್ಕೆಗಳಿದ್ದು ಎಲ್ಲರನ್ನೂ ಅಕರ್ಷಿಸುತ್ತಿದ್ದವು. ಅದರ ಬ್ಯಾ… ಎನ್ನುವ ಧ್ವನಿಯಂತೂ ಸ್ನೇಹ, ಪ್ರೀತಿಯ ಸಂದೇಶದಂತೆ ಕೇಳಿಸುತ್ತಿತ್ತು. ಮಕ್ಕಳು, ದೊಡ್ಡವರು ಅದರ ಮಾಟಕ್ಕೆ ಸೋತುಹೋಗಿದ್ದರು. ಅದನ್ನು ತಮ್ಮ ಎದೆಯೊಳಗಿಟ್ಟುಕೊಂಡು ಮುದ್ದಿಸುತ್ತಿದ್ದರು. ಅದರ ತುಂಟಾಟದಿಂದ ಅತ್ಯಂತ ಖುಷಿ ಅನುಭವಿಸುತ್ತಿದ್ದರು. ಮಕ್ಕಳಂತೂ ಅದಕ್ಕೆ ತಪ್ಪಲು ತಿನ್ನಿಸುವರು. “ನಮ್ಮ ಜಾಣ ಮರಿ, ಕುರಿಮರಿ” ಎಂದು ಹಾಡಿ ನಲಿದಾಡುತ್ತಿದ್ದರು. ಮನುಷ್ಯಪ್ರೀತಿಯ ಸಂಬಂಧದಿಂದ ಕುರಿಮರಿಗೆ ಹಿತವೆನಿಸುತ್ತಿತ್ತು.
ಅದರ ದುರಾದೃಷ್ಟವೆನ್ನುವಂತೆ ಸಾಕಿದ ಒಡೆಯನಿಗೆ ಕಷ್ಟವೊದಗಿ ಬಂದು ಅವನು ಅದನ್ನು ಮಾರಲು ಸಂತೆಗೆ ಒಯ್ದು ಕಟುಕನೊಬ್ಬನಿಗೆ ಇನ್ನೂರು ರೂಪಾಯಿಗೆ ಮಾರಾಟ ಮಾಡಿ ಬಂದ.
ಕರುಳ ಬಳ್ಳಿಯ ಸಂಬಂಧದೊಂದಿಗೆ ನಂಟು ಕಡಿದುಹೋದಂತೆ ವಿಲಿವಿಲಿಸಿತ್ತು ಕುರಿಮರಿ. “ಬ್ಯಾ… ಬ್ಯಾ…” ಎಂಬ ಆರ್ತಸ್ವರ ಕೇಳಿಸಿಕೊಳ್ಳದಂತೆ ಒಡೆಯ ಹಣ ಎಣಿಸಿಕೊಳ್ಳುತ್ತ ಹೊರಟಹೋಗಿದ್ದ. ಕಟುಕ ಅದನ್ನು ತನ್ನ ಕಬಂಧಬಾಹುಗಳಲ್ಲಿ ಅಮುಕಿ ಹಿಡಿದುಕೊಂಡು ನಡೆದುಬಿಟ್ಟ.
ಕಸಾಯಿಖಾನೆ ಹತ್ತಿರ ಕಟುಕನ ಮನೆ. ಅವನು ಕುರಿಮರಿಯನ್ನು ಕಿಟಕಿಗೆ ಕಟ್ಟಿಹಾಕಿದ್ದ. ಅದರ ಮುಂದೆ ಹಿಡಿ ಹಿಡಿ ಮೇವು ಚೆಲ್ಲಿದ್ದ. ಅಹಿತಕರ ಪರಿಸರದಿಂದಾಗಿ ಕುರಿಮರಿ ನಿರುತ್ಸಾಹದಿಂದ ಮುಖ ಒಣಗಿಸಿಕೊಂಡು ನಿಂತಿತ್ತು. ಮೇವು ತಿನ್ನಲು ಅನಾಸಕ್ತಿ. ಅನಾಥ ಪ್ರಜ್ಞೆಯ ತಳಮಳ. ಒಳಸ್ತರದಲ್ಲಿ ಅವ್ಯಕ್ತವಾದ ದಿಗಿಲು.
ನಾಲ್ಕನೆಯ ದಿನ ಅದನ್ನು ಕಸಾಯಿಖಾನೆಗೆ ತಂದು ನಿಲ್ಲಿಸಿದ ಕಟುಕ.
ಅಲ್ಲಿ ಅದೆಷ್ಟೋ ಸಣ್ಣ-ದೊಡ್ಡ ಆಡು, ಕುರಿಗಳು ಬ್ಯಾ… ಬ್ಯಾ… ಎಂದು ಜೀವ ಭಯದಲ್ಲಿ ತತ್ತರಗೊಳ್ಳತೊಡಗಿದವು. ಅವು ಅಕ್ರಂದಿಸುತ್ತಿವೆ ಅನ್ನಿಸಿತ್ತು ಕುರಿಮರಿಗೆ. ಲುಂಗಿ-ಬನಿಯನ್ ಮೇಲಿದ್ದ ಬಿಳಿ ದಾಡಿಯ ಮುಲ್ಲಾನೊಬ್ಬ ಹರಿತವಾದ ಚೂರಿ ಹಿಡಿದುಕೊಂಡು “ಬಿಸ್ಮಿಲ್ಲಾ” ಎನ್ನುತ್ತ ಆಡು-ಕುರಿಗಳ ಕತ್ತು ಸೀಳುತ್ತಿದ್ದ. ಅದನ್ನು ನೋಡಿದ್ದೆ ಕುರಿಮರಿಯ ಪುಟ್ಟ ಹೃದಯ ಭೀತಿಯಿಂದ ಹೊಡೆದುಕೊಳ್ಳತೊಡಗಿತು. ಅದಕ್ಕೆ ತಾಯಿ ನೆನಪಾಗಿತ್ತು. ಸಾಕಿದ ಒಡೆಯ ನೆನಪಾಗಿದ್ದ. ತನ್ನನ್ನು ಸಾಕುವುದು ಕಷ್ಟವಾಗಿದ್ದರೆ ಅವನೇ ನನ್ನ ಕತ್ತು ಹಿಸುಕಿ ಕೊಂದಿದ್ದರೆ ಒಳ್ಳೆಯದಿತ್ತು ಎಂದು ಸ್ವಗತವಾಗಿ ಹೇಳಿಕೊಳ್ಳುತ್ತಿದ್ದ ಕುರಿಮರಿಯನ್ನು ಕಟುಕ ಮುಲ್ಲಾನ ಹತ್ತಿರಕ್ಕೆ ಎಳೆದುಕೊಂಡು ನಡೆದ. ಅವನೂ ಮನುಷ್ಯನೆ. ಮನಸ್ಸು ಮಾಡಿದರೆ ಅವನು ತನ್ನನ್ನು ಉಳಿಸಿಕೊಳ್ಳಬಹುದು ಎಂಬ ಆಸೆ ಚಿಗುರೊಡೆಯಿತು ಕುರಿಮರಿಗೆ. ಕೂಡಲೇ ಕಟುಕನ ಕೈಮೂಸಿ ನೋಡಿತು. ಅವನೊಂದಿಗೆ ಧೈರ್ಯದಿಂದ ಮಾತಾಡತೊಡಗಿತು.
“ನಾನಿನ್ನೂ ಬಹಳ ಚಿಕ್ಕವನು” ಎಂದಿತು ಕುರಿಮರಿ.
“ಹೌದು” ಎಂದ ಕಟುಕ.
“ನನಗೆ ಬದುಕುವ ಆಸೆ ಇದೆ. ಕನಸುಗಳಿವೆ.”
“ಗೊತ್ತು.”
“ನೀನು ಬಹಳ ಒಳ್ಳೆಯವನು.”
“ಹೇಗೆ?”
“ನಿನ್ನ ಕೈ ಒರಟಾದರೂ ಮನಸ್ಸು ಮೃದುವಾಗಿದೆ.”
“ಹೀಗೆಂದು ಇದುವರೆಗೂ ಯಾವ ಕುರಿ-ಆಡೂ ಹೇಳಿಲ್ಲ.”
“ಹೆದರಿಕೆ ಇರಬೇಕು.”
“ಹೌದು.”
“ಅಂಥ ಎಷ್ಟೋ ಅಮಾಯಕ ಪ್ರಾಣಿಗಳನ್ನು ನೀನು ಕಡಿದುಹಾಕಿರುವಿ.”
“ಅದು ನನ್ನ ದಿಗ್ವಜಯ” ಹೆಮ್ಮೆ ಅಭಿವ್ಯಕ್ತಿಸಿದ ಕಟುಕ.
“ಬದುಕುವ ಜೀವವನ್ನು ಕೊಲ್ಲುವುದು ಹೆಮ್ಮೆಯೇ?”
“ಅಂದರೆ?”
“ಕೊಲ್ಲುವುದು ಮನುಷ್ಯನ ಧರ್ಮವಲ್ಲ ಎಂದು ಪ್ರಾಣಿಯಾದ ನಾನು ಹೇಳಬೇಕೆ?”
“ನಿನ್ನ ಮಾತು ನನಗೆ ಸ್ಪಷ್ಟವಾಗಲಿಲ್ಲ.”
“ನಾನು ಬದುಕಬೇಕೆಂದರೆ ನೀನು ಸಾಯಬೇಕಲ್ಲ?” ನಿರಾವರಣ ಧಾಟಿಯಲ್ಲಿ ಹೇಳಿದ ಕಟುಕ.
“ನಿನಗೆ ಅಂತಃಕರಣ ಇಲ್ಲವೆ?” ಎಂದು ನಿಷಣ್ಣತೆಯಲ್ಲಿ ಪ್ರಶ್ನಿಸಿದ ಕುರಿಮರಿಯನ್ನು ಮುಲ್ಲಾನತ್ತ ದೂಡಿದ ಕಟುಕ ವಿಕಾರವಾಗಿ ನುಡಿದ “ಮಳ್ಳ ಕುರಿಮರಿಯೆ, ಚೂರಿಗೆ ಅಹಿಂಸೆಯ ಪಾಠ ಹಿಡಿಸುವುದಿಲ್ಲ.”
*****