ಹತ್ತಾರು ರೂಪಾಯಿಗೆ ಸಿಗುವ ಇವು
ಸೀದಾ ಸಾದಾ ಬಳೆಗಳು
ಬರಿಯ ಬಳೆ ತೊಟ್ಟ ಕೈಗಳಲ್ಲಿ
ದೇವ ದೇವಿಯರ ಕೂಡ ಯಕ್ಷ, ವಾನರರೂ
ಹೇಗೆಲ್ಲಾ ಗಟ್ಟಿಗೊಳುತ್ತಾರೆ.
ನೀರೆತ್ತುವ ಅದೇ ಕೈಗಳು
ನೀರುಕ್ಕಿಸಿದವು, ನೀರು ಬಸಿದವು ಕೂಡ
ಬಾನಿಗೆ ಹೋಯ್ದ ನೀರಲ್ಲಿ ಪಕ್ಕನೆ
ಆ ಕೈ ದರ್ಶನವಾಗುತ್ತದೆ.
ಕೈಯೂಡಿದ ನೀರಲ್ಲದ್ದಿದ ಅಕ್ಕಿ
ಅನ್ನವಾಗಿ ಹದವಾಗಿ
ಪರಾತಕ್ಕೆ ಹರಡಿಕೊಂಡಷ್ಟು
ಹಸಿದ ಜೀವ ಸಂತೃಪ್ತ
ರೋಮಾಂಚನಗೊಳ್ಳುತ್ತದೆ ಕೈ.
ಸಂತೆ ಬದುಕಿನ ವ್ಯವಹಾರಗಳಲ್ಲೆಲ್ಲಾ
ಎಷ್ಟೊಂದು ಬಿಂಕದ ಹೊದಿಕೆ
ಬಳೆ ಹೊತ್ತ ಕೈಗಳು ತೂಗಿ ಕೊಡುವ
ತರಕಾರಿಗಳು ವಿಕ್ರಯಗೊಂಡಷ್ಟು
ದುಡ್ಡೆಣಿಸುವ ಕೈಗಳು ತೋಳೆರಿಸಿಕೊಳ್ಳುತ್ತವೆ.
ತೊಟ್ಟಿಲನ್ನು ತೂಗುವ ಆ ಕೈಗಳು
ಮುದಗೊಳ್ಳುತ್ತ ಮಲ್ಲಿಗೆ ಪೋಣಿಸುವುದು
ಮಾಲೆ ಮಾಲೆ ಹೂಗಳ ಕಟ್ಟುತ್ತ
ಕೈಯೇ ಹೂವಾಗುವುದು.
ಬಿಂಕ ಬಿನ್ನಾಣ ಮರೆತ
ಒನಪು ವೈಯಾರಗಳ
ಹಂಗು ಬದಿಗಿಟ್ಟ ಬಿರಿದ
ಭೂಮಿ ತೂಕದ ಹೆಣ್ಣು
ಜಡ್ಡುಗಟ್ಟಿದ ಕೈಗಳು ಮತ್ತು
ಒಂದೆರಡು ಮಾಸಿದ ಬಳೆಗಳು
*****