ಅದೇ ಆ ಕೆಂಪುಮಣ್ಣಿನ
ಗದ್ದೆಯ ತುಂಬಾ
ಪ್ರತಿಸಲದಂತೆ ಈ ಸಲವೂ
ಹೊಸ ಬೀಜಗಳದ್ದೇ ಬಿತ್ತು.
ಮೋಹನ ರಾಗದ ಮಾಲಿಕೆಗಳ
ಜೊತೆ ತರವೇಹಾರಿ
ತಳಿಬೀಜಗಳ ಊರಿಹೋಗುವ
ಆತನಿಗೋ ಪುರಸೊತ್ತಿಲ್ಲದ ದಣಿವು.
ಸೀಮೆಗೆ ತಕ್ಕಂತಿರುವ ಮಣ್ಣಿನ ಹದಕ್ಕೆ
ಬೀಜ ಹಾಕುವುದೇನು ಸಾಮಾನ್ಯವೇ?
ಆ ಮಣ್ಣಿನ ಹದ ಈ ನೆಲಕ್ಕಿಲ್ಲ.
ಈ ನೆಲದ ಗುಣ ಆ ಮಣ್ಣಿಗೆಲ್ಲಿ?
ನೆಲಮಣ್ಣಿನ ಕಾವು
ಆತನಿಗೆ ಮಾತ್ರ ಗೊತ್ತು.
ರಾಗ ಹೊರಡಿಸುವ, ಕೆರಳಿಸುವ
ಕೈಬೆರಳಿನಾಟವ ಹೂಡುವ ಆತನಿಗೋ
ಗದ್ದೆ ಗದ್ದೆಗಳ ಮೇಲೆಲ್ಲಾ ಮೋಹ.
ಲಾಗಾಯ್ತಿನಿಂದ ಸೀಮೆಗೊಪ್ಪುವ
ಬೀಜಗಳ ಹೊತ್ತು ಹೆತ್ತು
ಭಾರವಾದ ಗದ್ದೆಗಳಿಗೆ
ಈಗೀಗ ಉರಿ ನವೆಯ ಜಡ್ಡು.
ಹಾಗಾಗೇ ಬೀಜಕ್ಕೆ ತಕ್ಕ ಪೈರು
ಕೊಡುವ ಕೆಲಸ
ನೆನೆಗುದಿಗೆ ಬಿದ್ದಿದೆ.
ಮದುಮಗಳ ಹುಸಿ ಮೌನದಂತೆ
ತಣ್ಣಗೆ ಕುಳಿತು ಕಾಯುತ್ತಲೇ ಇವೆ
ಹೊಲಗದ್ದೆ ಬಯಲ ಮಹಲು.
ಮುಗಿಲು ಮುರಿದು ಬೀಳುವ
ಹೊತ್ತಿಗಾಗೇ ಹೊಂಚಿ ಕೂತಿದೆ.
ಕೇಳದ ಗಾನವನ್ನು ಎದೆಯಾಳದಿಂದಲೇ
ಮೀಟಿ ತೆಗೆಯುವ ಹುಕಿ ಹತ್ತಿಸಿಕೊಂಡ
ಗದ್ದೆಗಳ ಆಲಾಪ
ಬಾನಾಡಿಗಳಿಗಷ್ಟೇ ಶ್ರವಣಸಾಧ್ಯ.
ಗದ್ದೆಗಳೀಗ ಬಿತ್ತಿದ ಬೀಜಗಳ
ಫಸಲಿಗೆ ಪೈಪೋಟಿಗಿಳಿಯುತ್ತಿಲ್ಲ.
ಬೀಜದವನ ದಾರಿ ಕಾಯುತ್ತಲೂ ಇಲ್ಲ.
ಬೀಜಗಳನ್ನೆ ನಿರಾಕರಿಸುತ್ತಿವೆ.
ನೆಲಮಣ್ಣು ಮಣ್ಣನೆಲ
ಸ್ವಯಂ ಸ್ವಯಂವರದ ಸುಖ ಕಾಣುತ್ತಿವೆ.
ಅವಳೋ ಅವಳೆದೆಯ ಮೋಹನ ರಾಗಕ್ಕೆ
ಕಿವಿಯಾಗಿದ್ದಾಳೆ.
*****