ನಾನು, ನನ್ನವಳ ಬಾಳು
ಏನು ಬೇರೆ ಅಂತ ಹೇಳಿ ಕೊಳ್ಳೋಣ.
ಸಂಸಾರ ವ್ರತದಲಿ
ನನ್ನನ್ನವಳು ನಾನವಳನ್ನು
ಹಂಗಿಸಿ, ಜಂಖಿಸಿ ನಡೆವುದು
ಉದ್ದಕ್ಕೂ ಇದ್ದದ್ದೆ !
ಇಬ್ಬರು ಬೇರೆ ಬೇರೆ ವ್ಯಕ್ತಿಗಳು ಕೂಡಿ ಬಾಳುವಾಗ
ಇದು ಸರ್ವೇ ಸಾಮಾನ್ಯತಾನೆ ?
ಎಲ್ಲದರಲಿ
ನನಗವಳು ನಾನವಳಿಗಿರಲಿ
ಅಂಕುಶವಿರಲಿ
ನ್ಯಾಯ, ಚಾರಿತ್ರ್ಯ ಕಡೆ ನಿಗಾ ಇರಲಿ
ಒಂದು ಮಾನದಂಡವಿರಲಿ ಸಿದ್ಧಾಂತ ಪಾಲಿಸುವೆವು.
ಸಮಯದಿ
ಇಬ್ಬರೂ ಕೋಣರಾಗದೆ
ಒಬ್ಬರಾದರೂ ಜಾಣರಾಗಿ
ಮೇಲು, ಕೀಳು ಸರಿ ಹೊಂದಿಸಿ
ಏರು ಇಳುವಿನಲ್ಲಿ ಮೋರೆ ತಿರುವದೆ
ಭಾವಾವೇಶದ ಹುಚ್ಚು ಹೊಳೆಯಲ್ಲಿ ಕೊಚ್ಚಿ ಹೋಗದೆ
ವಿವೇಕದಣೆಯಲ್ಲಿ… ನಿಂತು, ನಿಂತು, ಸಾಗುವೆವು.
ನಾವು
ಪರಸ್ಪರರ ಶಕ್ತಿ, ಯುಕ್ತಿಗಳ ಬಗ್ಗೆ ಬಹಳ ಆಡುವುದಿಲ್ಲ
ಉಬ್ಬಿ ಹೋಗುವುದು
ಕೀಳಿರಿಮೆಯಲ್ಲಿ ನರಳುವುದು
ಬೇಡವೆನ್ನುವೆವು
ಬದುಕಿನಲಿ
ಅನಿವಾರ್ಯವೆಂದು
ತ್ಯಾಗ, ಸೇವೆಗೆ ಮುಂದಾಗಿ
ರಾಜಿ ಮಾಡಿಕೊಳ್ಳುವೆವು.
ದೂರ, ದೂರ ಹೋಗಿ
ಎಲ್ಲಾ ರೀತಿಯ ಆರೋಗ್ಯಕ್ಕೆ ಎರವಾಗಿ
ದುರಂತಕ್ಕೆ ತಲೆಕೊಡುವ ಸಾಧ್ಯತೆಗಂಜಿ
ಯಾರಿಗೆ ತಾನೆ ಎಲ್ಲದರಲಿ ಸಮನಾಗಿರುವುದೆಂಬ
ವಾಸ್ತವವ ನಂಬಿ
ಕಳೆದು ಉಳಿದು ಕೊಳ್ಳುವ
ಛಲ, ಛಾತಿಯಲಿ ಮುಂದುವರಿಯುತಿಹೆವು
ಯಾವ ಮನ
ಇರುವುದರಲ್ಲಿ ಏನು ಕಾಣುವುದಿಲ್ಲ
ಅದ ಕಾಣದು ಇನ್ನಾವುದರಲ್ಲೂ…!
ಭೃಂಗದ ತೆರ
ಅದಕೆ, ಇದಕೆ, ಎದೆದಕೋ…
ಅಲೆದಲೆದು
ಬರಿದೆ ದಣಿವುದು; ಸಾವುದೆಂಬ
ಎಚ್ಚರಿಕೆ ಮನದಲಿರಿಸಿ ನಡೆಯುತಿಹೆವು.
*****