ಬೆಳಗದಿರು ಕದಿರ
ನನ್ನವಳು ಬಳಿಯಿಲ್ಲ
ನಿನ್ನ ಬೆಳಗು ಹಾಯಿ ತರುವುದಿಲ್ಲ.
ಯಾಕೆ ದಣಿಯುವೆಯೋ ಮಾರುತ
ನನ್ನವಳು ಬಳಿಯಿಲ್ಲ
ನೀನು ಹೇಗೆ ಬೀಸಿದರೂ
ನನ್ನ ಮನವರಳುವುದಿಲ್ಲ.
ತರುಲತೆಗಳೇ ನಿಮ್ಮದೇ ಭಾಗ್ಯ
ವಿರಹವೆಂಬುದಿಲ್ಲ
ಮುಕ್ಕಾಗದೆಂದೂ ನಿಮ್ಮ ಅಪ್ಪುಗೆ ಆನಂದ.
ಉಲಿಯದಿರು ಕೋಗಿಲೆ
ಮರೆಯಲ್ಲಿ ಹುದುಗಿ
ನನ್ನವಳು ಬಳಿಯಿಲ್ಲ
ಮೀಟದಿರು ನನ್ನ ನರನಾಡಿಗಳಲಿ ನೋವ.
ಏಕೆ ಬೀಳುವೆ ಮಲ್ಲಿಗೆ
ಎನ್ನ ಕಣ್ಣಿಗೆ
ಒತ್ತೊತ್ತಿ ಬರುವ ನೆನಪುಗಳು
ಚಿತ್ರ ನಿರಾಳವಿರಗೊಡವು.
ಏನು ಹೇಳಲಿ
ನನ್ನವಳು ಬಳಿಯಿಲ್ಲ
ನಾನು ನಾನಾಗಿ ಉಳಿದಿಲ್ಲ.
ಅವಳಿದ್ದರೇನೇ….
ಈ ಸೃಷ್ಠಿ ಇದು ಎಲ್ಲ
ಸೊಗ..! ಸೊಗ..!
*****