ಕಾನೂನು ತಳವಿಲ್ಲದ ಮಹಾ ಪಾತಾಳ.
– ಜಾನ್ ಆರ್ಬುತ್ನಾಟ್
ವಿಶಾಲ ವಿಶ್ವದಲ್ಲಿ ಎಣಿಕೆಗೆಟುಕದ ತಾರಾಕೋಟಿಗಳೊಳಗೆ ಮನುಷ್ಯನ ಸೀಮಿತ ಬುದ್ಧಿಗೆ ಗೋಚರಿಸಿರುವ ಸೌರವ್ಯೂಹಗಳಲ್ಲಿ ಒಂದು ನಾವು ವಾಸಿಸುತ್ತಿರುವ ಈ ಭೂಮಂಡಲ. ಸೃಷ್ಟಿಯ ಇತರೆ ಮಾತಿರಲಿ ಈ ಭೂಮಂಡಲ ಒಂದರಲ್ಲೆ ಕೋಟ್ಯಾನುಕೋಟಿ ಜೀವರಾಶಿಗಳಿವೆ. ಅದರೊಳಗೆ ವಿವಿಧ ವರ್ಗಗಳು ಕವಲೊಡೆದುಕೊಂಡಿವೆ. ಇತರ ಪ್ರಾಣಿಗಳಂತೆ ಮನುಷ್ಯ ಕೂಡ ತನ್ನ ಕುಲದ ಜೀವಿತಕ್ಕೆ ಅನವರತ ಹೋರಾಡುತ್ತಿದ್ದಾನೆ. ಈ ಹೋರಾಟ ಆಗುತ್ತಿರುವುದು ಅಗತ್ಯಕ್ಕಿಂತ ಹೆಚ್ಚಾಗಿ ಅನಿವಾರ್ಯವಾಗಿರುವುದರಿಂದ.
ಸೃಷ್ಟಿಗೆ ತನ್ನದೇ ಆದ ನಿಯಮ ಇದೆ. ಅದು ಆ ನಿಯಮಕ್ಕೆ ಬದ್ಧ. ಅದರದು ಸೂತ್ರ ಬದ್ಧ ಜೋಡಣೆ. ಹಾಗೆಯೆ ಇತರ ಜೀವಕೋಟಿಗಳಂತೆ ಮಾನವ ಶರೀರ ಕೂಡ. ಇಲ್ಲಿ ಬಂಧ ಇದೆ; ಸೃಷ್ಟಿಯೊಂದಿಗೆ ಸಂಬಂಧ ಇದೆ. ಕಾನೂನಾದರೋ ಮಾನವನಿಂದ ನಿರ್ಮಿತವಾದದ್ದು. ಈ ಎರಡರ ಸ್ಪಷ್ಟವಾದ ಮತ್ತು ಪ್ರತ್ಯೇಕವಾದ ನಿಲುವು ಮತ್ತು ವ್ಯಾಪ್ತಿಯನ್ನು ಅರಿವುಮಾಡಿಕೊಳ್ಳಬೇಕು.
ಕಾನೂನು ಯಾರಿಂದ ಯಾರಿಗೆ ಏತಕ್ಕೋಸ್ಕರ ನಿರ್ಮಿಸಲ್ಪಟ್ಟಿತು? ಇದರ ಒಲವು ನಿಲುವುಗಳೇನು? ಇದರ ವ್ಯಾಪ್ತಿ ಎಷ್ಟರದು? ಮಾನವ ನಿರ್ಮಿತ ಕಾನೂನಿಗೂ, ನಿಸರ್ಗದ ನಿಯಮಗಳಿಗೂ ಏನಾದರೂ ಸಂಬಂಧ ಇದೆಯೆ ? ಯಾವುದಕ್ಕೆ ಯಾವುದು ಮೂಲ ? ಯಾವುದಕ್ಕೆ ಯಾವುದು ಮೇಲು? ಇತ್ಯಾದಿ ಪ್ರಶ್ನೆಗಳು ಈ ವಿಷಯವನ್ನು ಕುರಿತು ಆಲೋಚಿಸುವಾಗ ನಮ್ಮ ಎದುರಾಗುತ್ತವೆ.
ಜಗತ್ತಿನ ಮಿಕ್ಕೆಲ್ಲ ಜೀವಿಗಳಿಗಿಂತ ಮನುಷ್ಯ ಬಹು ಸ್ವಾರ್ಥ ಜೀವಿ. ಅವನ ಸ್ವಾರ್ಥಕ್ಕೆ ಇತಿಮಿತಿ ಇಲ್ಲ. ಸೃಷ್ಟಿಯ ಬೇರೆ ಜೀವಿಗಳೊಂದಿಗೆ ಹೋಲಿಸಿ ನೋಡಿದಾಗ ಮನುಷ್ಯ ತನ್ನ ಕುಲದಲ್ಲಿ ತನಗೇ ಪೂರ್ಣನಂಬಿಕೆ ಇರದವನು. ಅದಕ್ಕಾಗಿ ತನ್ನ ರಕ್ಷಣೆಗೆಂದು ತನ್ನ ಸುತ್ತ ಕಾನೂನಿನ ಬಲೆಯನ್ನು ಹೆಣೆದು ಅದಕ್ಕೆ ಬಲಿಯಾದ. ಅದಕ್ಕೆ ಸೃಷ್ಟಿಯ ಮತ್ತಾವ ಜೀವಿಗಳು ಬಂಧಿಯಾಗಿಲ್ಲ. ಅವು ಪೂರ್ಣ ಸ್ವತಂತ್ರ ಜೀವಿಗಳು.
ಮಾನವ ತನ್ನ ಸೌಖ್ಯಕ್ಕಾಗಿ, ಸುಖಕ್ಕಾಗಿ, ಶಾಂತಿಗಾಗಿ, ನೆಮ್ಮದಿಗಾಗಿ ಸೃಷ್ಟಿಸಿಕೊಂಡ ಕಾನೂನಿನ ಚೌಕಟ್ಟಿನೊಳಗೆ – ಹಾಗೆ ಸೃಷ್ಟಿಸಿಕೊಳ್ಳದ ಮಿಕ್ಕ ಜೀವಿಗಳಿಗಿಂತ – ಉತ್ತಮವಾಗಿದ್ದಾನೆಯೆ? ಸ್ವಲ್ಪ ಆಳವಾಗಿ ಒಳಹೊಕ್ಕು ನೋಡಿದರೆ ಸಿಗುವ ಉತ್ತರ ಸೊನ್ನೆ ಎಂದರೆ ಆಶ್ಚರ್ಯಪಡಬೇಕಾಗಿಲ್ಲ.
ಇಂದಿನ ಮನುಷ್ಯನೆಂದರೆ ಮನುಷ್ಯನೇ ನಿರ್ಮಿಸಿಕೊಂಡ ಮನುಷ್ಯ (Beyond Freedom and Dignity by B.F.Skinner) ಈ ಮನುಷ್ಯನಿಂದ ನಿರ್ಮಾಣಗೊಂಡದ್ದು ಕಾನೂನು. ಈ ಕಾನೂನಿನ ಕೇಂದ್ರವ್ಯಕ್ತಿ ಶಕ್ತಿ ಎಲ್ಲವೂ ಮನುಷ್ಯನೇ. ವ್ಯಕ್ತಿಯ ನಡುವಿನ ವ್ಯವಹಾರದ ಸುಗಮತೆಗಾಗಿ ಕಾನೂನು. ಇದರಲ್ಲಿ ಎರಡು ಮುಖ: ಒಂದು ವ್ಯವಹಾರಕ್ಕೆ ಸಂಬಂಧಪಟ್ಟದ್ದು (Civil law) : ಮತ್ತೊಂದು ದಂಡನೆಗೆ ಸಂಬಂಧಪಟ್ಟದ್ದು (Criminal law).
ನಮ್ಮ ಸಂವಿಧಾನದ ಮೂರು ಮುಖ್ಯ ಅಂಗಗಳೆಂದರೆ (೧) ಶಾಸಕಾಂಗ (The Legislature), (೨) ಕಾರ್ಯಾಂಗ(The Executive), (೩) ನ್ಯಾಯಾಂಗ (The judiciary). ಯಾವುದೇ ಸ್ವತಂತ್ರ ಸರ್ಕಾರ ಮಾಡುವ ಶಾಸನಗಳನ್ನು ಅಥವಾ ಕಾನೂನುಗಳನ್ನು ಸಂವಿಧಾನ ಬದ್ಧವಾಗಿ ಅನ್ವಯಿಸಿ ವ್ಯಾಖ್ಯಾನಿಸುವ ಹೊಣೆ ಈ ನ್ಯಾಯಾಂಗದ್ದು. ಸರ್ವತಂತ್ರ ಸ್ವತಂತ್ರವಾದ ನ್ಯಾಯಾಂಗ ಪ್ರಜಾಪ್ರಭುತ್ವ ಸರ್ಕಾರಗಳಿಗೆ ಅನಿವಾರ್ಯ. ಇದು ಶಾಸಕಾಂಗ ಮತ್ತು ಕಾರ್ಯಾಂಗಗಳು ಪ್ರಜೆಗಳ ಮೇಲೆ ಮಾಡುವ ಭ್ರಷ್ಟ ಅತಿರೇಕ ಅನ್ಯಾಯಗಳನ್ನು ತಡೆದು ನ್ಯಾಯದ ನೆಲೆಗಟ್ಟನ್ನು ರೂಪಿಸಿಕೊಡುತ್ತವೆ.
ಈ ನ್ಯಾಯಾಂಗ ಪದ್ಧತಿ- ನಮ್ಮ ದೇಶದ ಜನಜೀವನದ ರೀತಿನೀತಿಗೆ ಸಾಮರಸ್ಯವಾಗಿ ಹೊಂದುತ್ತದೆಯೋ ಇಲ್ಲವೋ. ಇದರಿಂದ ಜನ ಸಾಮಾನ್ಯನಿಗೆ ನ್ಯಾಯ ದೊರಕುತ್ತದೆಯೋ ಇಲ್ಲವೋ, ಅದು ಚರ್ಚಾಸ್ಪದ ವಿಷಯ- ಬ್ರಿಟಿಷರಿಂದ ಬಂದದ್ದು.
ನಮ್ಮ ದೇಶದ ಸದ್ಯದ ಪರಿಸ್ಥಿತಿಯಲ್ಲಿ ನ್ಯಾಯಾಲಯಗಳನ್ನು ನ್ಯಾಯಕ್ಕಾಗಿ ಉಪಯೋಗಿಸಿಕೊಳ್ಳುವುದು ಕಡಿಮೆ. ಕಾನೂನಿನ ದುರ್ಲಾಭ ಪಡೆಯುವ ಪಡೆಯೇ ಇಂದು ಎದ್ದು ನಿಂತಿದೆ.
ಇದು ಅಂತಃಸಾಕ್ಷಿಯನ್ನು ಕೊಲ್ಲುವ ಯುಗ. ಮನುಷ್ಯನಿಂದಲೆ ನಿರ್ಮಿಸಿಕೊಂಡ ಮನುಷ್ಯನ ಅಂತಃಸಾಕ್ಷಿ ಅಡಗಿ ಸ್ವಾರ್ಥದ ಪಿಡುಗಿಗೆ ಎಲ್ಲರೂ ತುತ್ತಾಗಿ ತತ್ತರಿಸುತ್ತಿದ್ದೇವೆ. ಪ್ರಕೃತಿಯಿಂದ ಪಡೆದು ಅರಳಬೇಕಾದ ತ್ಯಾಗದೃಷ್ಟಿ ಕಿಂಚಿತ್ತಾದರೂ ಇಲ್ಲ. ಹಿಂದಿನ ನಮ್ಮ ನ್ಯಾಯ ಕಟ್ಟೆಗಳು ಮಾಯವಾಗಿ ಇಂದು ಶೀಘ್ರನ್ಯಾಯ ಹಾಗೂ ಅದರಿಂದ ಆಗಬೇಕಾದ ಪ್ರೀತಿಯ ಬೆಸುಗೆ ಅಮಾವಾಸ್ಯೆಯಲ್ಲಿ ಅರಸುವ ಚಂದ್ರನಂತಾಗಿದೆ.
ಹಿಂದೆ ಆನ್ಯಾಯವಾದ ದಿನ ಆ ರಾತ್ರಿಯೆ ಗ್ರಾಮದ ಹಿರಿಯರು ಪಂಚಾಯ್ತಿಕಟ್ಟೆಯಲ್ಲಿ ಪಂಚಾಯ್ತಿ ಸೇರಿ ದೂರು ಕೊಟ್ಟವನನ್ನು ಮತ್ತು ಆರೋಪಿಯನ್ನು ಕರೆಸಿ ಎಲ್ಲರ ಸಮ್ಮುಖದಲ್ಲಿ ನ್ಯಾಯ ವಿತರಣೆ ಮಾಡುತ್ತಿದ್ದರು. ಬೆಳಗಾಗುವುದರೊಳಗೆ ಇದ್ದ ವೈಮನಸ್ಯವನ್ನ ಹಿರಿಯ ಪಂಚರು ಪ್ರೀತಿ ವಾತ್ಸಲ್ಯಗಳಿಂದ ತಿದ್ದಿ ಸರಿಪಡಿಸಿ ತಪ್ಪಿತಸ್ತನನ್ನು ತಮ್ಮ ಒಡಹುಟ್ಟಿದವನಂತೆ ಆತ್ಮೀಯತೆಯಿಂದ ಆಲಂಗಿಸಿಕೊಂಡು ಇನ್ನು ಮುಂದೆ ಒಳ್ಳೆಯವರಾಗಿ ಸರಿದಾರಿಯಲ್ಲಿ ಮುನ್ನಡೆಯುವಂತೆ ಹಿತವಚನಗಳನ್ನು ಹೇಳುತ್ತಿದ್ದರು. ಅಲ್ಲಿ ಅವರು ಹಾಕುತ್ತಿದ್ದ ದಂಡ ಅಪರಾಧಿಯಾದವನು ಸಮಾಜದಿಂದ ದೂರವಾಗದೆ ಅದರೊಂದಿಗೆ ಬೆಸೆದು ಬೆರೆತುಕೊಳ್ಳುವ ಪ್ರೀತಿಯ ಕಾಣಿಕೆಯಾಗಿತ್ತು. ದಂಡದ ಹಣ ಊರಿನ ಹಿತಕ್ಕೆ ಬಳಸಲಾಗುತಿತ್ತು. ಆದರೆ ಇಂದು ನ್ಯಾಯದ ಕಟ್ಟೆಯನ್ನು ಬಿಟ್ಟು ನ್ಯಾಯಾಲಯದ ಮೆಟ್ಟಲನ್ನು ಹತ್ತಿ ವರ್ಷಗಟ್ಟಲೆ ಅಲೆದು ಪರಸ್ಪರ ದ್ವೇಷಾಸೂಯೆಗಳನ್ನು ಬೆಳೆಸಿಕೊಂಡು ಮನೆಮನೆಗಳು ರಣರಂಗಗಳಾಗುತ್ತಿವೆ. ಇದರ ದುರ್ಲಾಭ ಆರಕ್ಷಕರಿಗೆ, ರಾಜಕೀಯ ಪುಡಾರಿಗಳಿಗೆ, ವಕೀಲರಿಗೆ, ನ್ಯಾಯಲಯಕ್ಕೆ. ಹೀಗಾಗಿ ನ್ಯಾಯ ಬೇಡಿ ಬಂದ ಕೈಗಳಿಗೆ ದಕ್ಕುವುದು ದ್ವೇಷದ ದಳ್ಳುರಿ.
ನ್ಯಾಯಲಗಳಲ್ಲಿ ನ್ಯಾಯ ವಿಳಂಬವಾಗುತ್ತಿರುವ ಕಾರಣ, ಅನೇಕ ವೇಳೆ ನ್ಯಾಯಲಯದಲ್ಲಿ ನ್ಯಾಯ ಅನ್ಯಾಯವಾಗಿ, ಅನ್ಯಾಯ ನ್ಯಾಯವಾಗುತ್ತಿರುವುದರಿಂದ ಜನಜೀವನದ ಸೌಖ್ಯದ ಸೇತುವಾದ ಸತ್ಯ ಸಾವನ್ನಪ್ಪುತ್ತಿದೆ. ಇದರಿಂದ ತಾಳ್ಮೆಗೆಟ್ಟ ಮನಸ್ಸುಗಳು ರೋಸಿ ಕ್ರೌರ್ಯಕ್ಕೆ ತೊಡಗಿಸಿಕೊಳ್ಳುತ್ತಿವೆ. ಒಂದು ಅರ್ಥದಲ್ಲಿ ವಿಳಂಬ ನ್ಯಾಯ ದುಷ್ಟ ಶಕ್ತಿಗಳು ತಲೆ ಎತ್ತಲು ಕಾರಣವಾಗುತ್ತಿದೆ. ಅದಕ್ಕೆಂದೆ ಕಾಣುತ್ತದೆ, ಕಾರ್ನೆಲಿಯಸ್ ವಿ. ಬಿಲ್ಟ್ “ಮಹಾಶಯ, ನೀನು ನನ್ನನ್ನೂ ನಾಶಮಾಡಲು ತೊಡಗಿದ್ದೀಯೆ. ಕಾನೂನು ದೀರ್ಘಕಾಲ ತೆಗೆದುಕೊಳ್ಳುವುದರಿಂದ ನಾನು ನಿನ್ನ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡುವುದಿಲ್ಲ; ನಾನೇ ನಿನ್ನನ್ನು ನಾಶಮಾಡುತ್ತೇನೆ” Gentleman: you have undertaken to ruin me. I will not sue you, for law takes too long. I will ruin you.” by Comelius Vanderbit: Letter to Associates
ಎಂದಿದ್ದಾನೆ. ಹೀಗೆ ಒಳಿತನ್ನು ಉಂಟುಮಾಡಬೇಕಾದ ಕಾನೂನು ಸೇಡಿನ ಕಿಡಿ ಸಿಡಿಯಲು ಹೇಗೆ ಕಾರಣವಾಗುತ್ತದೆ ಎಂಬುದನ್ನು ನಾವು ಎಚ್ಚರಿಕೆಯಿಂದ ಗಮನಿಸಬೇಕು. ಅದಕ್ಕೆ ಅಗತ್ಯವಾಗಿ ಆಗಬೇಕಾದುದನ್ನು ಶಾಸಕಾಂಗ ಚಿಂತಿಸಿ ಹೊಸ ಹೊಸ ವಿಧಾನಗಳನ್ನು ರೂಪಿಸಬೇಕು.
ನಮ್ಮ ದೇಶದ ಜನಜೀವನದಲ್ಲಿ ವಂಚನೆ, ಮೋಸ ಉಸಿರಿನಷ್ಟು ಸಹಜವಾಗಿ ಹೊಂದಿಕೊಂಡಿದೆ. ತುರ್ತು ಪರಿಸ್ಥಿತಿಯಲ್ಲಿ ನ್ಯಾಯಾಂಗ ನಡೆದುಕೊಂಡ ರೀತಿನೀತಿಗಳು ನ್ಯಾಯಾಂಗದ ಬಗ್ಗೆ ಎಲ್ಲರಲ್ಲೂ ಸಂಶಯವನ್ನು ಸೃಷ್ಟಿಸಿವೆ. ಇದರಿಂದಾಗಿ ನ್ಯಾಯಾಂಗದ ಬಗ್ಗೆ ಜನರಲ್ಲಿ ಭಯ ಬಿತ್ತಿಕೊಂಡಿದೆ. ಬಹಳಷ್ಟು ಸಂದರ್ಭಗಳಲ್ಲಿ ನ್ಯಾಯಾಧೀಶ ಮತ್ತು ಆರೋಪಿಗಳು ಕುಳಿತುಕೊಳ್ಳುವ ಸ್ಥಾನದಲ್ಲಷ್ಟೆ ವ್ಯತ್ವಾಸವಿದ್ದು ಇಬ್ಬರ ನಡುವೆ ಮತ್ತಾವ ಮೂಲಭೂತ ವ್ಯತ್ಯಾಸಗಳು ಇರದಿರುವ ಸ್ಥಿತಿ ನಮ್ಮದಾಗಿದೆ. ನ್ಯಾಯ ನುಡಿವ ನಾಲಿಗೆ ಆನೇಕ ಕಾರಣಗಳಿಗಾಗಿ ನಂದಿ ಬಂಧಿಯಾಗಿದೆ.
ಈ ಅನ್ಯಾಯ ಇಂದಿನದು ಎಂದು ಭಾವಿಸಿದರೆ ತಪ್ಪಾದೀತು. ಅದು ನಮ್ಮ ಸಂಸ್ಕೃತಿಯ ನರನಾಡಿಗಳಲ್ಲಿ ಬಿತ್ತಿಬೆಳೆದ ಹೀನಗುಣ. ಇಂದಿನ ನ್ಯಾಯವೂ ಹಿಂದಿನ ಹೀನ ಸಂಸ್ಕೃತಿಯ ಹಳಸಲನ್ನೆ ಬಳಸಿ ನಿಂತಿದೆ. ನಮ್ಮ ಸಂಸ್ಕೃತಿಯ ಅಡಿಗಲ್ಲುಗಳಲ್ಲಿ ಪ್ರಧಾನವಾದದ್ದು ಎನ್ನುವ ಮನುಸ್ಮೃತಿಯಲ್ಲಿ ಒಂದೆ ಅಪರಾಧಕ್ಕೆ ನೀಡುವ ಶಿಕ್ಷೆ ಹೇಗೆ ಬಗೆ ಬಗೆಯ ಜನರಿಗೆ ಬೇರೆ ಬೇರೆಯಾಗಿತ್ತು ಎನ್ನುವುದಕ್ಕೆ ಒಂದು ಉದಾಹರಣೆ ನೋಡಬಹುದು :-
ಶೂದ್ರನು ರಕ್ಷಣೆಗೆ ಒಳಪಟ್ಟ ಅಥವಾ ಅನಾಥ ಬ್ರಾಹ್ಮಣಸ್ತ್ರೀಯನ್ನು ಪ್ರೀತಿಸಿದರೆ ಅಂಗಹೀನತೆಯ ದಂಡಕ್ಕೆ ಅರ್ಹ.(೩೭೪)
ವೈಶ್ಯನು ಬ್ರಾಹ್ಮಣ ಸ್ತ್ರೀಯನ್ನು ದೂಷಿಸಿದರೆ ಒಂದು ವರ್ಷ ಬಂಧನದಲ್ಲಿಟ್ಟು ಬಳಿಕ ಅವನ ಸರ್ವ ಸೊತ್ತನ್ನು ರಾಜನು ವಶಪಡಿಸಿಕೊಳ್ಳಬೇಕು. ಕ್ಷತ್ರಿಯನು ಬ್ರಾಹ್ಮಣಿಯನ್ನು ದೂಷಿಸಿದರೆ ಅವನ ತಲೆಯನ್ನು ಕತ್ತೆ ಮೂತ್ರದಿಂದ ನೆನಯಿಸಿಬೋಳಿಸಬೇಕು.(೩೭೫)
ರಕ್ಷಿತ ಬ್ರಾಹ್ಮಣಿಯು ನಿರಾಕರಿಸುವಾಗ ಬಲಾತ್ಕರಿಸಿ ಬ್ರಾಹ್ಮಣನು ಸಂಭೋಗಿಸಿದರೆ ಸಾವಿರ ಪಣದಂಡವು.(೩೭೮)
ಬ್ರಾಹ್ಮಣನನ್ನು ತಲೆ ಬೋಳಿಸಿಬಿಡುವುದು ಲಜ್ಜಕಾರಕವಾಗಿ ಮರಣದಂಡನೆಗೆ ಸಮಾನ. ಇತರರಿಗೆ ಮರಣದಂಡನೆಯು.(೩೭೯)
ಯಾವತಪ್ಪಿಗೂ ಬ್ರಾಹ್ಮಣನಿಗೆ ಮರಣದಂಡನೆ ಇಲ್ಲ. ಅವನನ್ನು ಧನಸಹಿತವಾಗಿ ದೇಹವನ್ನು ಪೀಡಿಸದೆ ಓಡಿಸಿಬಿಡುವುದು ಪರಮಾವಧಿದಂಡವು(೩೮೦) (ಮನುಸ್ಮೃತಿ. ಅನುವಾದಕರು, ಚಕ್ರಕೋಡಿ ಈಶ್ವರ ಶಾಸ್ತ್ರಿ. ಅಧ್ಯಾಯ ೮ ಶ್ಲೋಕ ೩೭೪, ೩೭೫, ೩೭೮, ೩೭೯ ಮತ್ತು ೩೮೦. ಪುಟ ೩೬೧, ೩೬೨, ೩೬೩. ಪ್ರಕಟಣೆ :ಸಮಾಜ ಪುಸ್ತಕಾಲಯ ಧಾರವಾಡ, ದ್ವಿತೀಯ ಮುದ್ರಣ ೧೯೬೭. ಒತ್ತು ನನ್ನದು.) ಇಲ್ಲಿ ಶೂದ್ರನ ಪ್ರೀತಿಗೆ, ವೈಶ್ಯನ ಮತ್ತು ಕ್ಷತ್ರಿಯನ ದೂಷಣೆಗೆ ಹಾಗೂ ಬ್ರಾಹ್ಮಣನ ಬಲಾತ್ಕಾರದ ಸಂಭೋಗಕ್ಕೆ ಇರುವ ವ್ಯತ್ಯಾಸ ಹಾಗೂ ಶಿಕ್ಷೆಯ ವೈಪರೀತ್ಯಗಳನ್ನು ಗಮನಿಸಿ. ಯಾರಿಗೆ ಯಾವುದಾಗಬೇಕಿತ್ತು? ಮನುಷ್ಯ ಮನುಷ್ಯರ ನಡುವೆ ಸಹಜವಾಗಿ ಮೂಡಿ ಗರಿಗೆದರಬೇಕಾದ ಪ್ರೀತಿ ವಿಶ್ವಾಸಗಳು ಹೇಗೆ ಮುರುಟಿ ಬಿರುಕು ಬಿಟ್ಟು ಬತ್ತಿ ಹೋಗಿವೆ ಎಂದು ನೆನೆದರೆ ಮೈಜುಂ ಎನ್ನುತ್ತದೆ. ಇದು ನಮ್ಮ ಧರ್ಮ, ನ್ಯಾಯ, ಸಂಸ್ಕೃತಿ ನಿಂತು ನಡೆದು ಬಂದ ನೆಲೆಗಟ್ಟು. ಅದು ಇಂದಿಗೂ ಸೂಕ್ಷ್ಮಾತಿಸೂಕ್ಷ್ಮವಾಗಿ ತಾನು ಕ್ರಿಯಾತ್ಮಕವಾಗಿಯೆ ಇದೆ. ವಿದ್ಯೆ ನಾಯಕತ್ವ ಮತ್ತು ಪ್ರೀತಿಗಳಲ್ಲಿ ಕೆಳವರ್ಗದವರು(ಶೂದ್ರರು) ಮೇಲ್ವರ್ಗದ (ದ್ವಿಜರು) ವರೊಂದಿಗೆ ಸಮಾನರಾಗ ಹೊರಟಾಗ ಅದು ಅಪರಾಧ ಎಂದು ವ್ಯಾಖ್ಯಾನಿಸುವ ಮೇಲ್ವರ್ಗದ ನ್ಯಾಯಾಧೀಶರನ್ನು ನಾವು ನಮ್ಮ ದೇಶದಲ್ಲಿ ಕಾಣುತ್ತೇವೆ. Dr. Rammanohar Lohia : Notes and Comments Vol 1, First published 1972, page 346. Ref. The High-Caste Judge and murder.) (ಅಲ್ಲದೆ ಬ್ರಾಹ್ಮಣನೊಬ್ಬ ತಪ್ಪುಮಾಡಿ ನ್ಯಾಯಾಲಯಕ್ಕೆ ಪೊಲೀಸರು ಹಿಡಿದು ತಂದಾಗ ನ್ಯಾಯಾಲಯದಲ್ಲಿದ್ದ ಬ್ರಾಹ್ಮಣ ನ್ಯಾಯಾಧೀಶ ಉತ್ತಮರಾಗಿ ನೀವು ಹೀಗೆ ಮಾಡಬಹುದಾ? ಎಂದು ಕೇಳಿದ್ದನ್ನು. ನ್ಯಾಯಾಲಯದಲ್ಲಿ ನಾನು ನನ್ನ ಕಿವಿಯಾರ ಕೇಳಿದ್ದೇನೆ.) ಹೀಗೆ ಅಸಮಾನತೆಯನ್ನ ಬಿತ್ತಿ ಬೆಳೆಸುವ ಮನುಸ್ಮೃತಿ ಎನ್ನುವ ಧರ್ಮಗ್ರಂಥವನ್ನು ನಮ್ಮ ಸಂವಿಧಾನ ಶಿಲ್ಪಿಯಾದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಸುಡುವ ಕೆಲಸದಲ್ಲಿ ಮೊದಲಿಗರಾದರು. ನ್ಯಾಯದ ಹೆಸರಿನಲ್ಲಿ ಶ್ರೀ ಸಾಮಾನ್ಯನ ಶೋಷಣೆ ಆಂದಿನಿಂದ ಇಂದಿನವರೆಗೆ ಅವ್ಯಾಹತವಾಗಿ ನಡೆಯುತ್ತಾ ಬಂದಿದೆ. ರಾಬರ್ಟ್ ಎಫ್ ಕೆನಡಿ ೧೯೬೪ ರಲ್ಲಿ “ಶ್ರೀಸಾಮಾನ್ಯನಿಗೆ ಕಾನೂನಿನ ತಾಂತ್ರಿಕತೆ ಒಗಟಿನ ಸರಳಾಗಿದೆ. ಶ್ರೀಸಾಮಾನ್ಯ ಕಾನೂನನ್ನು ತನ್ನ ಶತ್ರುವಿನಂತೆ ಕಾಣುತ್ತಾನೆ; ಕಾರಣ ಅವನಿಗೆ ಕಾನೂನು ಕೊಡುವ ಬದಲು ಇದ್ದದ್ದನ್ನೂ ಅವನಿಂದ ಕಸಿದುಕೊಳ್ಳುತ್ತದೆ” ಎಂದಿದ್ದಾನೆ. ಆದ್ದರಿಂದಲೇ ಇಂದಿಗೂ ಶ್ರೀಸಾಮಾನ್ಯನಿಗೆ ನ್ಯಾಯಾಲಯ ಒಂದು ದೊಡ್ಡ ಕಾರಾಗೃಹವಾಗಿ, ನ್ಯಾಯಾಧೀಶರು ಕೊಲ್ಲುವ ಕಟುಕರಾಗಿ, ವಕೀಲರು ನುಂಗುವ ಪೆಡಂಭೂತಗಳಾಗಿ, ಪೋಲೀಸರು ಪೈಶಾಚಿಕ ಸ್ವರೂಪದಲ್ಲಿ ಕಾಣಿಸುತ್ತಾರೆ. ಇದಕ್ಕೆ ಕಾರಣ ಆಂದಿನಿಂದ ಇಂದಿನವರಗೆ ಧರ್ಮದ ಹೆಸರಿನಲ್ಲಿ ನಾವು ಕಾಪಾಡಿಕೊಂಡು ಬಂದಿರುವ, ಅಜ್ಞಾನವನ್ನುಳಿಸಿಕೊಳ್ಳುವ ಜಡಗಟ್ಟಿದ ವ್ಯವಸ್ಥೆ. ಇದಕ್ಕೆ ಯಾರು ಹೊಣೆ? ಯಾರನ್ನು ಅಪರಾಧಿಯನ್ನಾಗಿಸುವುದು?
ಎಲ್ಲ ಜೀವಿಗಳಿಗೆ ಹೋಲಿಸಿದರೆ ಮನುಷ್ಯ ಅತ್ಯಂತ ಹೇಡಿ. ಅವನು ತನ್ನ ಬದುಕಿನಲ್ಲಿ, ಬಚ್ಚಿಟ್ಟುಕೊಳ್ಳದೆ, ಮೊಗವಾಡ ಧರಿಸದೆ ಬದುಕಲು ಸಾಧ್ಯವೇ ಇಲ್ಲ. ಸೃಷ್ಟಿಯ ಮತ್ತಾವ ಪ್ರಾಣಿಗಳೂ ಹಾಗಿಲ್ಲ, ಪ್ರಕೃತಿಯೊಂದಿಗೆ ಹೊಂದಿಕೊಂಡು ಸಹಜವಾಗಿ ಬದುಕುತ್ತವೆ. ಜರ್ಮನಿಯ ತತ್ವಜ್ಞಾನಿಯೊಬ್ಬ ಮೊಗವಾಡ ಮನುಷ್ಯನ ಬದುಕಿಗೆ ಅನಿವಾರ್ಯ ಅಂಗವಾಗಿದೆ, ಎಂದಿದ್ದಾನೆ. ಆ ಅನಿವಾರ್ಯತೆಗೆ ಕಾರಣ ನಮ್ಮ ಅಜ್ಞಾನವೆ? ಸ್ವಾರ್ಥವೆ? ಸ್ವವಂಚನೆಯೆ?
ನಮ್ಮ ಸಾಮಾಜಿಕ ಬದುಕು ಎಷ್ಟು ಸೂಕ್ಷ್ಮವಾಗಿ ಬಂಧಿಯಾಗಿದೆ ಎನ್ನುವುದಕ್ಕೆ ಆಲ್ಬರ್ಟ್ ಕಾಮುವಿನ ಅನ್ಯ (The Outsider) ಕಾದಂಬರಿಯ ಉದಾಹರಣೆ ನೋಡಬಹುದು.
ತಂದೆಯನ್ನು ಕಳೆದುಕೊಂಡ ಕಾದಂಬರಿಯ ನಾಯಕ ಅನ್ಯ ತನ್ನ ತಾಯಿಯನ್ನು ಹಳ್ಳಿಯಲ್ಲಿ ಬಿಟ್ಟು ನಗರದಲ್ಲಿ ಕೆಲಸಕ್ಕೆ ಇರುತ್ತಾನೆ. ಒಂದು ದಿನ ತಾಯಿ ಸತ್ತ ಸುದ್ದಿ ಬರುತ್ತದೆ. ಊರಿಗೆ ಹೋಗುತ್ತಾನೆ. ಶವ ಪೆಟ್ಟಗೆಯಲ್ಲಿ ಇಟ್ಟಿದ್ದ ತಾಯಿಯ ಹೆಣ ನೋಡುತ್ತಾನೆ. ಸಿಗರೇಟ್ ಸೇದುತ್ತಾನೆ. ಆಂತ್ಯಕ್ರಿಯೆ ಮುಗಿಸಿ ಮರಳಿ ನಗರಕ್ಕೆ ಬಂದು ಕ್ಲಬ್ಬಿನಲ್ಲಿ ತನ್ನ ಪ್ರೇಯಸಿಯೊಂದಿಗೆ ಎಂದಿನಂತೆ ಕುಡಿದು ನೃತ್ಯ ಮಾಡುತ್ತಾನೆ.
ಒಂದು ಸಂಜೆ ಸಮುದ್ರ ತೀರಕ್ಕೆ ವಾಯುವಿಹಾರಕ್ಕೆಂದು ಒಬ್ಬನೇ ಹೋಗಿದ್ದಾಗ ಅಲ್ಲಿ ಒಂದು ಕೊಲೆಯಾಗುತ್ತದೆ. ಕೊಲೆಗೆಡುಕರು ತಪ್ಪಿಸಿಕೊಳ್ಳುತ್ತಾರೆ. ಯಾರೋ ಮಾಡಿದ ಕೊಲೆಗೆ ಪೋಲೀಸಿನವರು ಅನ್ಯನನ್ನು ಬಂಧಿಸುತ್ತಾರೆ. ನ್ಯಾಯಾಲಯದಲ್ಲಿ, ಧರ್ಮಗುರುವಿನ ಎದುರು ವಿಚಾರಣೆಯಾಗುತ್ತದೆ. ಎಲ್ಲರೂ ಇವನೇ ಅಪರಾಧಿ ಎಂದು ತೀರ್ಮಾನಿಸುತ್ತಾರೆ. ಅವರು ಹಾಗೆ ತೀರ್ಮಾನಕ್ಕೆ ಬರಲು ಕೊಟ್ಟ ಕಾರಣ ಇವನು ಕಟುಕ, ಏಕೆಂದರೆ ತಾಯಿ ಸತ್ತ ದಿನ ತೊಟ್ಟು ಕಣ್ಣೀರು ಹಾಕಲಿಲ್ಲ. ಬದಲಿಗೆ ಶವ ನೋಡಿ ಸಿಗರೇಟು ಹಚ್ಚಿದ, ಸಂಜೆ ಕುಡಿದು ಕ್ಲಬ್ಬಿನಲ್ಲಿ ಪ್ರೇಯಸಿಯೊಂದಿಗೆ ನೃತ್ಯ ಮಾಡಿದ. ಇಂಥ ಕಟುಕನಲ್ಲದೆ ಮತ್ತಾರು ಕೊಲೆಮಾಡಲು ಸಾಧ್ಯ? ಎಂದು.
ನೋಡಿ, ಸಾವಿನ ಬಗ್ಗೆ ನೀವು ನಿರ್ಲಿಪ್ತತೆಯನ್ನು ಸಾಧಿಸಿದ್ದರೆ ಜನಕ್ಕಾಗಿ ಸಮಾಜದ ತೋರಿಕೆಗಾಗಿಯಾದರೂ ನೀವು ಅಳಬೇಕು. ಇಲ್ಲವಾದರೆ ಅಪರಾಧಿಯಾಗುವ ಅಪಾಯಕ್ಕೆ ಗುರಿಯಾಗಬೇಕಾಗುತ್ತದೆ. ಹೀಗೆ ಮೊಗವಾಡದ ಬದುಕು ಅನಿವಾರ್ಯವಾಗಿ ಮನುಷ್ಯ ಹೇಡಿಯಾಗುತ್ತಾ ಅತ್ಯಂತ ಹೀನ ಕೆಲಸಕ್ಕೆ ತನ್ನನ್ನು ತಾನು ತೊಡಗಿಸಿಕೊಳ್ಳುತ್ತಿದ್ದಾನೆ. ಶೋಷಣೆ ಮಾಡುವುದು ಅವನ ಜೀವದ ಉಸಿರಾಗುತ್ತದೆ, ಊರಿಗೆ ಊರೇ ಬೆತ್ತಲಾಗಿದ್ದಾಗ ಬಟ್ಟೆ ಹಾಕಿಕೊಂಡವನನ್ನು ಕಂಡು ನಗುತ್ತಾರೆ, ಎಂದು ಎಲ್ಲಾ ಬೆತ್ತಲಾಗುವ ಅರ್ಥಾತ್ ಭ್ರಷ್ಟರಾಗುತ್ತಾ ಪಾಶವೀ ಬದುಕಿನತ್ತ ಪಾದಾರ್ಪಣೆ ಮಾಡುತ್ತಿದ್ದೇವೆ, ಮೇಲೆ ವೈಜ್ಞಾನಿಕ ಹೊಳಪನ್ನು ಕೊಟ್ಟು. ಹೀಗಾಗಿ ನಮ್ಮ ಗತಿ Might is right ಬಲವಿದ್ದವನಿಗೆ ನೆಲ ಎನ್ನುವ ಕಾಡುಜನರ ಸ್ಥಿತಿಯಾಗಿದೆ.
ಹೀಗಾಗಿ ಈ ದೇಶದಲ್ಲಿ ಪ್ರಾಮಾಣಿಕತೆಯ ಸ್ಥಾನವನ್ನು ಅಪ್ರಮಾಣಿಕತೆ ಆವರಿಸಿ ಅನ್ಯಾಯವನ್ನೆ ನ್ಯಾಯವೆಂದು ಭ್ರಮಿಸಿ ಆಲಂಗಿಸಿ ಆನಂದಿಸುವ ಹುಚ್ಚರ ಆಲಯದಲ್ಲಿ ಮಾನವೀಯತೆ ಮುರುಟಿ ಹೋಗುತ್ತಿದೆ. ಸಂಜಯ ಗಾಂಧಿಯ ಮಾರುತಿ ಕಾರ್ ಕಂಪೆನಿ ದೇಶದ ಕೋಟಿ ಕೋಟಿ ಹಣವನ್ನು ಲೂಟಿ ಹೊಡೆದರೂ, ನೂರಾರು ಜನರನ್ನು ಬಲಿತೆಗೆದುಕೊಳ್ಳುವ ವಿಷಪೂರಿತ ಕಳ್ಳ ಬಟ್ಟಿಯ ದಳ್ಳುರಿ ಮುಗಿಲನ್ನು ಮುಟ್ಟುತ್ತಿದ್ದರೂ ಕಾನೂನು ನಿಷ್ಕ್ರಿಯವಾಗುತ್ತಿರುವ ಈ ದೇಶದಲ್ಲಿ ಕೂಲಿ ಮಾಡಿ ಬೆವರು ಬಸಿದೂ ಅರೆಹೊಟ್ಟೆ ಉಂಡು ಮನೋರಂಜನೆಗಾಗಿ ಸಿನಿಮಾ ಮಂದಿರದ ಮುಂದಿನ ಸಾಲಿನಲ್ಲಿ ಬೀಡಿಹಚ್ಚಿದ ಬಡಹುಡುಗನ ಬೆನ್ನಹಿಂದೆ ಬಡಕಲು ಪೇದೆಯ ಲಾಟಿಯ ಕಾನೂನು ಕ್ರಿಯಾತ್ಮಕವಾಗುವುದನ್ನು ಕಂಡು ನನಗೆ ಆಶ್ಚರ್ಯ ದುಃಖ ಒಮ್ಮೆಗೇ ಆಗುತ್ತದೆ.
ಒಟ್ಟಿನಲ್ಲಿ ಮಾನವ ಸಮಾಜ ವೈವಿಧ್ಯತೆಯ, ಕ್ರಿಯಾತ್ಮಕ ಚಾಲನೆಯುಳ್ಳ ಸಮಾಜ. ಅಲ್ಲಿ ಈ ಎಲ್ಲ ಗೊಂದಲಗಳ ನಡುವೆಯೂ ನಾವು ಬದುಕುತ್ತಿದ್ದೇವೆ. ಅಂತಹ ಸಮಾಜಕ್ಕೆ ಸಮರ್ಥರಾದ, ಸ್ವತಂತ್ರ ಮನೋಧರ್ಮವುಳ್ಳ, ಸ್ಪರ್ಧಾಸ್ಫೂರ್ತಿಯ ನ್ಯಾಯವಾದಿಗಳು, ನ್ಯಾಯಾಧೀಶರು ಅನಿವಾರ್ಯ ಅಗತ್ಯವಾಗಿದ್ದಾರೆ.
ಮಾನವತೆ ಅರಸುತ್ತಿರುವುದು ಸ್ವಾರ್ಥಕ್ಕಾಗಿ ಕೊಳ್ಳೆಹೊಡೆವ, ತಿರುಚುವ, ಬಿಳಿಯದನ್ನು ಕರಿಯದನ್ನಾಗಿ ಮಾಡುವ, ಕರಿಯದನ್ನು ಬಿಳಿಯದನ್ನಾಗಿ ಮಾಡುವ ಕರಿಯ ಕೋಟುಗಳನ್ನಲ್ಲ; ಬದಲಿಗೆ ಆಂತಹ ಸಾಮಾಜಿಕ ಸಂದರ್ಭಗಳ ಸವಾಲಿಗೆ ಎದೆಯೊಡ್ಡಿ ಎಂಥ ಸಂದರ್ಭದಲ್ಲೂ ನ್ಯಾಯಕ್ಕಾಗಿ ನಿಲ್ಲಬಲ್ಲ ನಿಜದ ನಾಲಗೆಯ ನ್ಯಾಯುಶಿಲ್ಪಿಗಳನ್ನು.
*****
ಅಕ್ಟೋಬರ್, ೧೯೮೨