ಜ್ಯೂಲಿಯೋ ಅಕುರ್‍ಜಿ ಊರಿನಲ್ಲಿ ಒಳ್ಳೆಯ ಯುವಕನೇ ಆಗಿದ್ದ ಬಿಡಿ. ಮೂವತ್ತರ ಹರೆಯದ ಅನುಕೂಲಸ್ಥ; ಅಲ್ಲದೆ ನೀಟಾಗಿ ಬಟ್ಟೆಧರಿಸುವ ಬುದ್ಧಿವಂತ ಕೂಡ. ಅವನ ಗೆಳೆಯರ ಪ್ರಕಾರ ಅವನಲ್ಲಿ ಇನ್ನೂ ಒಂದು ಇತ್ತು: ಅದೆಂದರೆ ತನ್ನ ಬಾಡಿಗೆದಾರರೊಂದಿಗೆ ಆತ ಯಾವಾಗಲೂ ಪ್ರೇಮದಲ್ಲಿ ಸಿಲುಕುವುದು.
ಅವನ ಮನೆಗೆ ಎರಡು ಮಹಡಿಗಳು: ಕೆಳಮಹಡಿಗೆ ತಾರಸಿಯಿದ್ದು, ಅದು ತೋಟಕ್ಕಿಂತ ಎತ್ತರದಲ್ಲಿತ್ತು. ಈ ತೋಟವನ್ನು ಮೇಲ್ಮಹಡಿಯ ಒಳಗಿಂದ ಸಾಗುವ ಕಡಿದಾದ ಮೆಟ್ಟಿಲುಗಳ ಮೂಲಕವೇ ಪ್ರವೇಶಿಸಬೇಕಿತ್ತು. ಅಲ್ಲಿ ಅವನು ಕೆಲವರ್ಷಗಳಿಂದ ಪಾರ್ಶ್ವವಾಯು ಬಡಿದು ಕುರ್ಚಿಗೆ ಅಂಟಿಕೊಂಡಿರುವ ತನ್ನ ತಾಯಿಯ ಜತೆ ವಾಸವಾಗಿದ್ದ.
ಜ್ಯೂಲಿಯೋ ಅಕುರ್‍ಜಿಯ ಗೆಳೆಯರಿಗೆ ಆತ ಸಮಯಕ್ಕೆ ಸರಿಯಾಗಿ ಸಿಗದೆ ನಂತರ, ಆತ ತನ್ನ ಕೆಳಮಹಡಿಯ ಬಾಡಿಗೆದಾರರೊಂದಿಗೆ ಪಟ್ಟಾಂಗ ಪ್ರಾರಂಭಿಸಿದ್ದಾನೆ ಎಂದು ಗೊತ್ತಾಯಿತು.
ಅವನ ಮಟ್ಟಿಗೆ, ಈ ಪ್ರಣಯ ಚೇಷ್ಟೆಗಳೆಲ್ಲ ಅವನ ಸ್ವಂತ ಆಸ್ತಿಯ ಸುಖ ಸೌಂದರ್ಯಗಳಲ್ಲಿ ಒಂದಾಗಿದ್ದವು. ಮನೆಯೊಡೆಯ ಅಕುರ್‍ಜಿಯ ಮೋಹಕ ನಡವಳಿಕೆ, ನಯವಾದ ಉಪಚಾರ ಇತ್ಯಾದಿಗಳಿಂದ ಬಾಡಿಗೆದಾರನಿಗೆ ಕೃತಜ್ಞತೆ ತುಂಬಿ ಬಂದರೆ, ಅತ್ತ ಅವನ ಮಗಳು ಮಾತ್ರ, ಇವೆಲ್ಲ ಅಸ್ವಾದಿಸುವಂತೆ ನಿಜಕ್ಕೂ ಮಾಲೀಕನ ಮೋಹಕ ನಡಾವಳಿಯ ಫಲವೋ ಅಥವಾ ತಾನು ನಂಬುವಂತೆ ಇದು ಪ್ರೇಮದ ಫಲವೋ ಎಂದು ಖಚಿತವಾಗಿ ಹೇಳಲಾರದೆ ಗೊಂದಲಿಸುವುದಿತ್ತು.
ಇಂಥ ವಿಷಯಗಳಲ್ಲೆಲ್ಲ ಜ್ಯೂಲಿಯೋ ಅಕುರ್‍ಜಿ ಗಣನೀಯ ಪ್ರತಿಭೆ ಪ್ರದರ್ಶಿಸುತ್ತಿದ್ದ.
ಗುತ್ತಿಗೆಗೆ ಕೊಟ್ಟ ಶುರುವಾತಿನ ತಿಂಗಳಲ್ಲಿ ಆತ ತನ್ನ ಬಾಲ್ಕನಿಯಲ್ಲಿ ನಿಂತುಕೊಂಡೇ ತಾರಸಿಯನ್ನು ನೋಡುತ್ತ ಪ್ರಣಯ ಚೇಷ್ಠೆ ನಡೆಸುತ್ತಿದ್ದ. “ಕೆಳಗಿನಿಂದ ಪ್ರೇಮಿಸುವುದು”
ಎಂದು ಕರೆಸಿಕೊಳ್ಳುವ ಇದು ಮೊದಲ ಹಂತವಾಗಿತ್ತು. ನಂತರ, ಎರಡನೆಯ ಹಂತಕ್ಕೆ ಮುಂದುವರೆಯುತ್ತಿದ್ದ. “ಮೇಲಿನಿಂದ ಪ್ರೇಮಿಸುವುದು” – ಅಂದರೆ, ತೋಟದ ಮೂಲಕ ತಾರಸಿಯನ್ನು ದಿಟ್ಟಿಸುವುದು. ಇದು ಸಾಮಾನ್ಯವಾಗಿ ವಸಂತಕಾಲ ಆರಂಭವಾಗುವಾಗ ನಡೆಯುತ್ತಿತ್ತು. ಈ ಸಮಯದಲ್ಲಿ, ಆತ ತನ್ನ ತೋಟದ ಮಾಲಿಯನ್ನು ಕರೆದು ಲಿಲ್ಲಿ, ಊದಾ, ಜರೇನಿಯಮ್ ಹೂಗಳ ಗೊಂಚಲನ್ನು ಮತ್ತೆ ಮತ್ತೆ ಕೆಳಮಹಡಿಗೆ ಕಳಿಸುತ್ತಿದ್ದ. ತೋಟದಲ್ಲಿ ಹರಡಿದ್ದ ಮರಳಿನ ಮೇಲೆ ಬೀಳುತ್ತಿದ್ದ ಆ ಹುಡುಗಿಯ ನೆರಳನ್ನು ಸ್ಪರ್ಶಿಸಲು ಆತ ಬಾಗುವುದಿತ್ತು. ಜೂಲಿಯೋ ಅಕುರ್‍ಜಿಯ ಇಂಥ ಚೇಷ್ಟೆಯ ದೃಶ್ಯಗಳನ್ನು ನೋಡಿ ಮುಗುಳ್ನಗುತ್ತಿದ್ದ ಚಂದಿರ ಸಾಕ್ಷಿದಾರನಾಗಿದ್ದ. ಆಗೆಲ್ಲ ಆ ಹುಡುಗಿ ಅಮೃತಶಿಲೆಯ ಮೆಟ್ಟಿಲುಗಳ ಮೇಲಿನಿಂದ ಮೆಲ್ಲನೆ ನಗುವುದೋ, ತಲೆಯಲ್ಲಾಡಿಸುವುದೋ ಅಥವಾ ತನ್ನ ನೆರಳು ಅವನ ಸ್ಪರ್ಶಕ್ಕೆ ಸಿಗದೆ ನಣುಚಿಕೊಳ್ಳುವಂತೆ ಸರಕ್ಕನೆ ಹಿಂದಕ್ಕೆ ಬರುವುದೋ ಮಾಡುತ್ತಿದ್ದಳು. ಇವಿಷ್ಟು ಬಿಟ್ಟರೆ ಇದಕ್ಕಿಂತ ಹೆಚ್ಚಿಗೇನೂ ನಡೆಯುತ್ತಿರಲಿಲ್ಲ. ಪಕ್ಕನೆ ಈ ಚೇಷ್ಟೆ ಮುಂದುವರಿದು, ಸಿಕ್ಕಿಬಿದ್ದರೆ ಅವನ ಬಳಿ ಹೊರಬರಲು ಉಪಾಯ ತಯಾರಿರುತ್ತಿತ್ತು. ಅಪ್ಪನ ಬಳಿ ಹೋಗಿ ತಣ್ಣಗೆ, ಕ್ಷಮೆಯಾಚಿಸಿ, “ಬರುವ ವರ್ಷದಿಂದ ಬಾಡಿಗೆ ಜಾಸ್ತಿ ಮಾಡಬೇಕಾಗುತ್ತದೆ” ಎಂದು ಹೇಳಿಬಿಡುತ್ತಿದ್ದ. ಬಾಡಿಗೆದಾರರ ಜತೆ ಅವನ ಒಪ್ಪಂದ ಬರೇ ಒಂದು ವರ್ಷದ ತನಕ ಮಾತ್ರ ಇರುತ್ತಿತ್ತು.
ಜ್ಯೂಲಿಯೋ ಅಕುರ್‍ಜಿ ತನ್ನ ತಾಯಿ ತೀವ್ರ ಅನಾರೋಗ್ಯಕ್ಕೆ ತುತ್ತಾಗುವ ಮುಂಚೆ ತನ್ನ ಮದುವೆಯ ಕುರಿತು ಯಾವತ್ತೂ ಗಂಭೀರವಾಗಿ ಯೋಚಿಸಿದವನೇ ಅಲ್ಲ.
“ನೀನೊಬ್ಬ ಆದರ್ಶ ಗಂಡನಾಗುತ್ತೀ ನೋಡು;” “ನೀನು ಪ್ರೀತಿಯಲ್ಲಿ ಸುಖನೆಮ್ಮದಿ ಬಯಸುವವನು. ಆ ಎರಡು ಮಹಡಿಗಳನ್ನು ಒಂದೇ ಮಹಡಿಯನ್ನಾಗಿ ಮಾಡಿಬಿಡು” ಎಂದೆಲ್ಲ ಗೆಳೆಯರು ಅವನಿಗೆ ಹೇಳುವುದಿತ್ತು.
–೨–
ಸಿಗ್ನೋರಾ ಸಾರ್‍ನಿ ತನ್ನ ಕೆಳಮಹಡಿಯಲ್ಲಿ ವಾಸಿಸಲೆಂದು ಬಂದಿದ್ದಾಗ ಆಗಾತಾ ಮತ್ತು ಮಾರಿಯೋ ಕೋರ್ವಾಜಾನ ನಿಶ್ಚಿತಾರ್ಥವಾಗಿ ಆಗಲೇ ಮೂರು ವರ್ಷವಾಗಿತು. ಆಗ ಅವನು ಜರ್ಮನಿಯಲ್ಲಿ ಭಾಷಾಶಾಸ್ತ್ರ ಕಲಿಯುತ್ತಿದ್ದ. ಈ ನಿಶ್ಚಿತಾರ್ಥಕ್ಕೆ ತನ್ನದೇ ಏಳುಬಿಳುಗಳಿದ್ದವು. ಆಗಾಗ ಗೊಂದಲಗಳು ಹುಟ್ಟಿ ಮದುವೆಯ ತಾರೀಕು ಖಚಿತವಾಗದೆ ಅಸ್ಪಷ್ಟವಾಗಿಯೇ ಇತ್ತು. ಮಾರಿಯೋ ಕೋರ್ವಾಜಾ ಜರ್ಮನಿಯಿಂದ ಬರುವವನಿದ್ದ ನಿಜ. ಆದರೆ ಯೂನಿವರ್ಸಿಟಿಯಲ್ಲಿನ ಭಾಷಾಶಾಸ್ತ್ರ ವಿಭಾಗದ ಹುದ್ದೆ ಖಾಲಿಯಾಗಿ ಆತ ಸೇರಿಕೊಳ್ಳಲು ಎಷ್ಟು ಸಮಯ ಬೇಕಾಗಬಹುದೆಂದು ಯಾರಿಗೂ ಗೊತ್ತಿರಲಿಲ್ಲ.
ಜ್ಯೂಲಿಯೋ ಅಕುರ್‍ಜಿಗೆ ಇದೆಲ್ಲ ಏನೂ ತಿಳಿದಿಲ್ಲ. ಹಾಗಾಗಿ ಸಿಗ್ನೋರಾ ಸಾರ್‍ನಿಯ ದುಃಖದ ಮೊರೆಗೆ ಕಾರಣವೇನೆಂದೂ ಅವನಿಗೆ ಹೊಳೆಯದು. ಮಾಸಿಹೋದ ಗುಲಾಬಿ ಬಣ್ಣದ ಶಾಲನ್ನು ಭುಜಗಳಿಗೆ ಸುತ್ತಿಕೊಂಡು, ಕಪ್ಪುಡ್ರೆಸ್ಸಿನಲ್ಲಿ, ಸಂಜೆಯ ಹೊತ್ತು, ತಾರಸಿಯ ಮೇಲೆ ಎಲ್ಲೋ ಅವನಿಗವಳು ಕಾಣಿಸಿಕೊಳ್ಳುತ್ತಿದ್ದಳು.
ಆತ ಬಾಲ್ಕನಿಯಲ್ಲಿ ನಿಂತು ಅವಳ ಚಿಕ್ಕಪುಟ್ಟ ಕ್ರಿಯೆಗಳನ್ನು ಗಮನಿಸುತ್ತಿದ್ದ. ತಾರಸಿಯ ಕಂಬಕ್ಕಿದ್ದ ಪಂಜರದಲ್ಲಿ ಎರಡು ಕ್ಯಾನರಿಹಕ್ಕಿಗಳು ದಿನವಿಡೀ ಖುಷಿಯಿಂದ ಹಾಡುವುದನ್ನು ಅವಳು ಬಹಳ ಇಷ್ಟಪಟ್ಟು ನಿಂತು ನೋಡುತ್ತಿದ್ದಳು. ಅಥವಾ ವಿರಾಮದ ವೇಳೆಯಲ್ಲಿ ತನ್ನ ಅಮ್ಮ ಡೊನ್ನಾ ಅಮಾಲಿಯಾ ಸಾರ್‍ನಿ ಬೆಳೆಸಿದ್ದ ಹೂಕುಂಡಗಳನ್ನು ಗಮನಿಸುತ್ತಿದ್ದಳು.
ಎರಡೋ ಮೂರೋ ಊದಾ ಹೂಗಳನ್ನು ಸಂಗ್ರಹಿಸುವಾಗಲೇ ಬೇರ್‍ಯಾವುದೋ ಯೋಚನೆ ಆವರಿಸಿಕೊಂಡುಬಿಟ್ಟ ಹಾಗೆ ತಟ್ಟನೆ ಹಿಂದೆಗೆದುಬಿಡುತ್ತಿದ್ದಳು. ಈ ಪ್ರಕ್ರಿಯೆಯಲ್ಲಿ ಅವಳು ಒಂದು ಕ್ಷಣಕ್ಕೂ ಕೆಳಗಿನ ತೋಟವನ್ನು ದಿಟ್ಟಿಸುವುದಾಗಲಿ, ಮೇಲ್ಗಡೆ ಬಾಲ್ಕನಿಯಲ್ಲಿ ನಿಂತಿದ್ದ ಜೂಲಿಯೋ ಅಕುರ್‍ಜಿ ಬೇಕೂಂತಲೇ ಆಗಾಗ ಸಣ್ಣಗೆ ಕೆಮ್ಮುವುದನ್ನೋ, ಕುರ್ಚಿ ಸರಿಸುವುದನೋ ಕಣ್ಣೆತ್ತಿಯೂ ನೋಡುತ್ತಿರಲಿಲ್ಲ. ಅವಳ ಈ ಉಪೇಕ್ಷೆಗೆ ಜೂಲಿಯೋ ಸಿಟ್ಟಿನಿಂದ ಉರಿಯುತ್ತಿದ್ದ.
ಆ ಬಡಪಾಯಿ ಊದಾ ಹೂಗಳು ಲಕೋಟೆಯಲ್ಲಿ ಬಂಧಿಯಾಗಿ ಅದೆಷ್ಟೋ ಅಂಚೆ ಮೂಲಕ ಹಾದು, ಠಸ್ಸೆಯ ಹೊಡೆತವನ್ನು ತಾಳಿಕೊಂಡು ಎಷ್ಟೋ ದೂರದಲ್ಲಿ, ಉತ್ತರ ಭಾಗದಲ್ಲಿರುವ ರೈನ್ ನದಿಯ ದಂಡೆಯ ಮೇಲಿರುವ ಹೈಡೆಲ್‍ಬರ್ಗ್‍ಗೆ ಹೋಗುತ್ತವೆ ಎಂದು ಜ್ಯೂಲಿಯೋ ಅಕುರ್‍ಜಿಗಾದರೂ ಹೇಗೆ ಗೊತ್ತಾಗಬೇಕು?
ಅವನಂತೂ ಮನೆಯ ಕೆಳಮಹಡಿಯನ್ನು ಆವರಿಸಿಕೊಂಡಿದ್ದ ತಾಜಹೂಗಳ, ಹಿತವಾದ ತಂಗಾಳಿಯ ಪ್ರಭೆಗೆ ಮರುಳಾಗಿಬಿಟ್ಟಿದ್ದ. ಅತ್ತ ಮನೆಯ ವ್ಯವಹಾರಗಳನ್ನೆಲ್ಲ ಡೊನ್ನಾ ಅಮಾಲಿಯಾ ನೋಡಿಕೊಳ್ಳುತ್ತಿದ್ದಳು. ಎತ್ತರವಾಗಿದ್ದು, ಗಂಭೀರಳಾಗಿದ್ದು ಅವಳ ಮುಖ ವಯಸ್ಸು ಅರವತ್ತು ದಾಟಿದರೂ ಪ್ರಶಾಂತವಾಗಿದ್ದು, ಸುಂದರವಾಗಿತ್ತು. ದೈವಭಕ್ತೆಯಾಗಿದ್ದ ಅವಳು ಬೆಳಗಿನ ಹೊತ್ತು ಹೇಗೆ ಧಾರ್ಮಿಕ ಕ್ರಿಯೆಯಲ್ಲಿ ತನ್ನನ್ನು ತೊಡಗಿಸಿಕೊಳ್ಳುತ್ತಿದ್ದಳೋ ಹಾಗೆಯೇ ಸಂಜೆಯಾಗುತ್ತಿದ್ದಂತೆ ಹೂಗಳ ಆರೈಕೆಯಲ್ಲಿ ಮುಳುಗಿಬಿಡುತ್ತಿದ್ದಳು.
ಆದರೆ ಅವಳ ಮಗಳು ಮಾತ್ರ ಭಿನ್ನವಾಗಿಯೇ ಬದುಕು ನಡೆಸಿದ್ದಳು. ಬೆಳಿಗ್ಗೆ ತಡವಾಗಿ ಏಳುತ್ತಿದ್ದಳು; ಪಿಯಾನೋವನ್ನು – ಅದು ಕೊಡುವ ಆನಂದಕ್ಕಿಂತ, ಅವಳಲ್ಲಿ ಹುಟ್ಟಿಸುತ್ತಿದ್ದ ಗೊಂದಲಕ್ಕೋಸ್ಕರವೇ ಸ್ವಲ್ಪಹೊತ್ತು ನುಡಿಸುತ್ತಿದ್ದಳು. ನಂತರ ತಿಂಡಿಯಾಗಿದ್ದೇ, ಓದುವುದೋ, ಕಸೂತಿ ಹೊಲಿಯುವುದೋ ಮಾಡುತ್ತಿದ್ದಳು. ಸಂಜೆಯ ಹೊತ್ತು, ತಾಯಿಯ ಜತೆ ತಿರುಗಾಡಲು ಹೋಗುವುದೋ ಅಥವಾ ಮನೆಯಲ್ಲೇ ಉಳಿದು ಓದುವುದೋ, ಪಿಯಾನೋ ನುಡಿಸುವುದೋ ಮಾಡುತ್ತಿದ್ದಳು. ಅವಳು ಯಾವತ್ತೂ ಚರ್ಚ್‍ಗೆ ಹೋದವಳಲ್ಲ.
ಮನೆಯ ವ್ಯವಹಾರಗಳಲ್ಲೂ ಯಾವತ್ತೂ ತಲೆಹಾಕಿದವಳಲ್ಲ. ತಾಯಿ ಮತ್ತು ಮಗಳ ನಡುವೆ ಹುಟ್ಟುತ್ತಿದ್ದ ಮೌನದಲ್ಲೇ ಅದ್ಭುತ ಹೊಂದಾಣಿಕೆಯಿತ್ತು; ಪರಸ್ಪರ ಅರ್ಥೈಸಿಕೊಳ್ಳುತ್ತಿದ್ದರು.
ಆಗಾಗ ತನ್ನ ಆಗಮನದಿಂದ ಈ ಮನೆಯ ಮೌನ ಮುರಿಯುತ್ತಿದ್ದವಳೆಂದರೆ ಮಾರಿಯೋನ ಸೋದರ ಸೇಸಾರ್ ಕೋರ್ವಾಜಾನನ್ನು ಮದುವೆಯಾಗಿದ್ದ ಆ ಇನ್ನೊಬ್ಬ ಮಗಳು ಸಿಗ್ನೋರಾ ಅಮಾಲಿಯಾ ಮಾತ್ರ. ಅವಳು ಯಾವಾಗಲೂ ಪುಟ್ಟಪುಟ್ಟ ಹೆಜ್ಜೆಯಿಕ್ಕುವ ತನ್ನೆರಡು ಮಕ್ಕಳನ್ನು ಕರಕೊಂಡೇ ಬರುತ್ತಿದ್ದಳು. ಆ ಮಕ್ಕಳ ಚಿಕ್ಕಮ್ಮನಿಗೆ ಇದು ಬಹಳ ಖುಷಿಕೊಡುತ್ತಿತ್ತು.
ಆಗೆಲ್ಲ, ಯಾಕೋ ಗೊತ್ತಿಲ್ಲ, ಜ್ಯೂಲಿಯೋ ಅಕುರ್‍ಜಿ ಬಾಗಿಲು ಮುಚ್ಚಿಕೊಂಡು ಮನೆಯೊಳಗೇ ಉಳಿಯುತ್ತಿದ್ದ. ಆಗ ಅವನ ಹೃದಯ ಸಂತಸದಿಂದ ತುಂಬಿ ತುಳುಕುವುದು. ಬಾಲ್ಕನಿಯಿಂದಲೇ ಸಿಗ್ನೋರಿನಾ ಸಾರ್‍ನಿ ನಗುನಗುತ್ತ ಮಕ್ಕಳ ಜತೆ ತಾರಸಿಯಲ್ಲಿ ಓಡಾಡುವುದನ್ನು ನೋಡುತ್ತಿದ್ದ. ಅವರ ಮುಗುಳ್ನಗುವನ್ನು ಆನಂದಿಸುತ್ತಿದ್ದ. ಅವರ ಪಿಸುಮಾತುಗಳನ್ನು ಸುಮ್ಮನೆ ಆಲಿಸುತ್ತಿದ್ದ. ಆಕೆ ಬಾಗಿದಾಗ ಮಕ್ಕಳಿಬ್ಬರೂ ತಮ್ಮ ತೋಳುಗಳನ್ನು ಚಾಚುತ್ತ ಅವಳ ಕುತ್ತಿಗೆಗೆ ಜೋತುಬೀಳುವುದನ್ನು ಅವನು ನೋಡುತ್ತಿದ್ದ. ನಂತರ ಒಂದು ತೆರನ ಧನ್ಯತೆಯಿಂದ ಮುಗುಳ್ನಗುತ್ತಿದ್ದ.
“ರೋರೋ, ನಿನ್ನಪ್ಪ ಎಲ್ಲಿ?”
“ದೂರದೂರಿನಲ್ಲಿದ್ದಾನೆ…. ತುಂಬಾ ದೂರ” ಎಂದು ಮುಖ ಮುಂದಕ್ಕೊತ್ತಿ ಪದಗಳನ್ನು ಎಳೆದಾಡುತ್ತ ರೋರೋ ಕಣ್ಮುಚ್ಚಿ ಉತ್ತರಿಸಿದ.
ಸೇಸಾರ್ ಕೋರ್ವಾಜಾ, ಜನರಲ್ ಇಟಾಲಿಯನ್ ಶಿಪ್ಪಿಂಗ್ ಕಂಪೆನಿಯ ಹಡಗುಗಳಲ್ಲಿ ಮೊಟ್ಟಮೊದಲ ಇಂಜಿನಿಯರನಾಗಿದ್ದು ಆಗಾಗ ಸಮುದ್ರಯಾನ ಮಾಡುತ್ತಿದ್ದ.
“ಮಿಮಿ…. ಅಪ್ಪ ವಾಪಾಸಾಗುವಾಗ ನಿಂಗೇನು ತರ್‍ತಾನೆ?”
“ತುಂಬಾ ವಸ್ತುಗಳನ್ನು ತರ್ತಾನೆ….” ಎಂದು ಮಿಮಿ ಸೌಮ್ಯವಾಗಿ ಉತ್ತರಿಸುತ್ತಿದ್ದಳು.
ಈ ನಡುವೆ, ಮನೆಯಲ್ಲಿ, ತಾಯಿ ಮತ್ತು ಹಿರೀಮಗಳು, ಆಗಾತಾಳ ಕುರಿತೇ ಮಾತಾಡುತ್ತಿದ್ದರು. ಮದುವೆಗೆ ಮಾತುಕೊಟ್ಟ ಬಳಿಕ ಆಕೆ ಹೇಗೆ ಬದಲಾದಳೆಂದೂ, ಅದರಲ್ಲೂ ಆ ಭೀಕರ ಕಾಯಿಲೆಯಿಂದ ಬಹಳ ಚೇತರಿಸಿಕೊಂಡಿದ್ದನ್ನು, ಮಾರಿಯೋ ಕೋರ್ವಾಜಾನ ಹೆತ್ತವರ ಆರೈಕೆ ಪಡಕೊಂಡಿದ್ದನ್ನು ಮಾತಾಡುತ್ತಿದ್ದರು.
“ಶುದ್ಧ ಹಠಮಾರಿ! ಎಷ್ಟು ಬುದ್ಧಿವಾದ ಹೇಳಿದರೂ ಕೇಳುವುದಿಲ್ಲ. ಆಕೆ ಇದನ್ನೆಲ್ಲ ಅರ್ಥಮಾಡಿಕೊಳ್ಳಲೂ ತಯಾರಿಲ್ಲ…. ಇಷ್ಟಾಗಿಯೂ ಅವನು ಪ್ರೀತಿಸುವುದಿಲ್ಲ. ಎಂದೂ ಅವಳಿಗೆ ಅರಿವಿದೆ! ರಾತ್ರಿ ಮಲಗಿಕೊಂಡೇ ಮೌನವಾಗಿ ಬಿಕ್ಕುವುದನ್ನು ನಾನೇ ಕೇಳಿದ್ದೇನೆ…. ಇದರಿಂದೆಲ್ಲ ನನಗಂತೂ ಎದೆಯೊಡೆದೇ ಹೋದಂತೆ ಅನಿಸುತ್ತದೆ…. ನನ್ನ ನಂಬು…. ಅವಳಿಗೇನು ಹೇಳಬೇಕು ಅಂತ ನನಗೂ ಗೊತ್ತಾಗುವುದಿಲ್ಲ. ಆ ಭೀಕರ ಕಾಯಿಲೆ ಮತ್ತೆಲ್ಲಿ ವಾಪಾಸಾಗುವುದೋ ಎಂದು ನನಗೂ ಹೆದರಿಕೆ….” ಎಂದು ಅವಳ ತಾಯಿ ನಿಟ್ಬುಸಿರಿಟ್ಟಳು.
“ಎಂಥ ಹುಚ್ಚು ಹುಡುಗಿ! ಇದೆಂಥ ದುರಂತವಪ್ಪಾ!” ಅಕ್ಕ ಕೂಗಿದಳು. ಅವಳಂತೂ ಶುರುವಿನಿಂದಲೇ ಈ ಮದುವೆಗೆ ವಿರುದ್ಧವಾಗಿದ್ದಳು.
ಅಗಾತಾ ಮಕ್ಕಳನ್ನು ಮುದ್ದಿಸುವುದನ್ನು, ಮಕ್ಕಳು ಆಕೆಯ ಕುತ್ತಿಗೆಗೆ ಜೋತು ಬೀಳುವುದನ್ನು ತನ್ನ ಬಾಲ್ಕನಿಯಿಂದ ನೋಡಿ ಸಂತೋಷಪಟ್ಟು ಕೊಳ್ಳುತ್ತಿದ್ದ ಜ್ಯೂಲಿಯೋ ಅಕುರ್‍ಜಿಗೆ ಇದೆಲ್ಲ ಹೇಗೆ ಗೊತ್ತಾಗಬೇಕು?
-೩-
ಬೇಸಿಗೆ ಮುಗಿಯುವ ಹೊತ್ತಿಗೆ ಅಗಾತಾ ಗಂಭೀರ ಖಾಯಿಲೆಗೆ ತುತ್ತಾದಳು. ಚಿಕ್ಕ ಪುಟ್ಟ ಕೆಲಸಕ್ಕೂ ಸುಸ್ತಾಗಿ ಬಿಡುತ್ತಿದ್ದಳು. ಅವಳಲ್ಲಿ ಹುದುಗಿದ್ದ ಸಂಕಟ, ಖಿನ್ನತೆ ಎಲ್ಲವೂ ಕ್ರಮೇಣ ಅವಳಿಗೇ ಬೇಸರ ಹುಟ್ಟಿಸತೊಡಗಿದವು. ಮನಸ್ಸಲ್ಲಿ ಶೂನ್ಶ ಆವರಿಸಿದ್ದು ಹಾಗೇ ಹಾಸಿಗೆಯಲ್ಲೇ ಅದೆಷ್ಟೋ ಹೊತ್ತು ಎಚ್ಚೆರವಾಗಿರುತ್ತಿದ್ದಳು. ಹಸಿವೆಯಂತೂ ಕಮರಿಹೋಗಿತ್ತು. ಮನೆಯಲ್ಲಿ ತಾಯಿ-ಅಕ್ಕ ದೂರಿದರೂ, ಯಾರೆಷ್ಟೇ ಪ್ರೋತ್ಸಾಹದ, ಸಮಾಧಾನದ ಮಾತನ್ನಾಡಿದರೂ ಅವಳು ಕೇಳುತ್ತಿರಲಿಲ್ಲ.
ಈ ಆಘಾತಕಾರಿ ಸುದ್ದಿಯನ್ನು ತೋಟದಾಳು ತಂದಾಗ ಜೂಲಿಯೋ ಅಕುರ್‍ಜಿ ಬೆಚ್ಚಿ ಬಿದ್ದ. ಅವಳಿಗೆ ಚೆಕಿತ್ಸೆ ನೀಡುವ ವೈದ್ಯನನ್ನೇ ತಡೆದು ಪ್ರಶ್ನಿಸಲು ಮುಂದಾದ. ವೈದ್ಯನ ಪ್ರತಿಕ್ರಿಯೆ ಅವನಲ್ಲಿ ಎರಡು ರೀತಿಯ ಗೊಂದಲವೆಬ್ಬಿಸಿತು; ಒಂದು, ಸಿಗ್ನೋರಿಕಾ ಸಾರ್‍ನಿಗೆ ಆಗಲೇ ಮದುವೆ ನಿಶ್ಚಯವಾಗಿ ಶೀಘ್ರದಲ್ಲೇ ಮದುವೆಯಾಗಲಿದ್ದಾಳೆಂದೂ, ಎರಡು, ತೀವ್ರ ಅಸ್ವಸ್ಥಳಾಗಿರುವ ಅವಳನ್ನು ಮದುವೆಯಾಗಲಿರುವ ಗಂಡು ಕೆಲವೇ ದಿನದಲ್ಲಿ ಆಗಮಿಸಲಿದ್ದಾನೆಂದೂ ಗೊತ್ತಾಯಿತು.
“ಅಯ್ಯೋ! ಹಾಗಾದರೆ ಅವಳಿಗೆ ನಿಶ್ಚಿತಾರ್‍ಥವಾಗಿದೆ ಎಂದಾಯಿತು!”
ಆ ದಿವಸದಿಂದ ಜ್ಯೂಲಿಯೋ ತನ್ನ ನೆಮ್ಮದಿಯನ್ನೇ ಕಳಕೊಂಡುಬಿಟ್ಟ. ‘ತನ್ನ ಬಾಡಿಗೆದಾರರ ಆರೋಗ್ಯದ ಬಗ್ಗೆ’ ಇಷ್ಟೊಂದು ಆಸ್ಥೆವಹಿಸುವುದು, ನಿಜಕ್ಕೂ ಮೂರ್ಖತನ ಎಂದು ತನಗೆ ತಾನೇ ಹೇಳಿಕೊಳ್ಳಲು ಹೆಣಗಾಡಿದ. ಎಲ್ಲಿಗಾದರೂ ಹೊರಡೋಣವೆಂದು ಬಟ್ಟೆಧರಿಸಿ ತಯಾರಾಗಲಿಕ್ಕೇ ಅವನಿಗೆ ಎರಡುಗಂಟೆ ಹಿಡಿಯುತ್ತಿತ್ತು. ನಡುನಡುವೆ ಬಾಲ್ಕನಿಗೆ ಹೋಗಿ ಕೆಳಗಡೆ ತಾರಸಿಯಲ್ಲಿ ಯಾರಾದರೂ ಇದ್ದಾರೆಯೋ ಎಂದು ಇಣುಕುತ್ತಿದ್ದುದರಿಂದ ಇಷ್ಟು ಹೊತ್ತು ತಯಾರಾಗಲು ಬೇಕಾಗುತ್ತಿತ್ತು. ಹೀಗೆಲ್ಲ ಯಾಕಾಗುತ್ತಿದೆಯೆಂದು ಸ್ವತಃ ಅವನಿಗೇ ಗೊತ್ತಿರಲಿಲ್ಲ. ನೇರ ಹೋಗಿ ಅವಳ ಕುರಿತು ಕೇಳಿಯೇ ಬಿಡೋಣವೆಂದುಕೊಂಡರೂ ಅದು ಸರಿಹೋಗಲಿಕ್ಕಿಲ್ಲ ಅನಿಸಿತು. ಬಹುಶಃ ಅವನಿಗೆ ಅವಳ ಹೆತ್ತವರು ವ್ಯಕ್ತ ಪಡಿಸುವ ಭಾವನೆಗಳಿಂದಲೇ ಅವಳ ಖಾಯಿಲೆಯ ತೀವ್ರತೆ ಎಷ್ಟಿದ್ದಿರಬಹುದೆಂದು ಕಂಡುಹಿಡಿಯುವ ಉದ್ದೇಶವಿದ್ದಿರಬಹುದು. ಪ್ರತಿಬಾರಿ ತನ್ನ ಈ ಕ್ಲುಲ್ಲಕ ಅಪೇಕ್ಷೆಯನ್ನು ಹತ್ರಿಕ್ಕಲೆಂದು ಅವನು ಇನ್ನೊಂದು ಕ್ಷುಲ್ಲಕ ಕ್ರಿಯೆಯಲ್ಲಿ ತೊಡಗಿದ. ಅದೆಂದರೆ ಒಂದರಿಂದ ನೂರರ ತನಕ ಎಣಿಸುವುದು.
ಈ ನಡುವೆ, ಯಾರೂ ಕಾಣಿಸದಿದ್ದರೆ ಮೆಲ್ಲ, “ಒಂದು…. ಎರಡು…. ಮೂರು” ಅಂತ ಶುರುಮಾಡುತ್ತಿದ್ದ.
ನಂತರ, ಎಣಿಸುತ್ತಿರುವಾಗಲೇ, ಅವನ ಮನಸ್ಸು ಎಲ್ಲೆಲ್ಲೋ ಬರತೊಡಗಿ ಬರೇ ತುಟಿಗಳು ಮಾತ್ರ ಅಂಕೆಗಳನ್ನು ಯಾಂತ್ರಿಕವಾಗಿ ಗೊಣಗುತ್ತಿದ್ದವು. ಕೆಲವೊಮ್ಮೆ ಟೊಪ್ಪಿ ಧರಿಸಿ ಹೊರಡಲು ತಯಾರಾಗಿದ್ದಾಗಲೇ ಮೂವತ್ತರ ತನಕ ಎಣಿಸುತ್ತ, ಕೊನೆಗೆ ಸುಸ್ತಾಗಿ ಬಾಗಿಲು ದಾಟಿ ಎಲ್ಲೋ ಹೊರಗಡೆ ಹೋಗಿಬಿಡುತ್ತಿದ್ದ. ಆದರೂ ಅವಳ ಕೋಣೆಯ ಕಡೆ ಕಣ್ಣುಕೂಡ ಹಾಯಿಸದೆ ನೇರ ಹೋಗಿಬಿಡಬೇಕಾದರೆ ಬಹಳ ಶ್ರಮ ಪಡಬೇಕಾಗುತ್ತಿತ್ತು. ಒಮ್ಮೆಯಂತೂ ಗೆಳೆಯರಿಂದ ತಪ್ಪಿಸಿ ಹೊರಹೋಗಿದ್ದಾಗ ಮನಸ್ಸು ದಿಕ್ಕೆಡದಂತೆ ಜಾಗ್ರತೆವಹಿಸಲು ಎಷ್ಟು ಪ್ರಯತ್ನಿಸಿದರೂ ಸ್ವಲ್ಪವೇ ನಡೆಯುವಷ್ಟರಲ್ಲಿ ಬೋರೆನಿಸಿಬಿಟ್ಟಿತು. ಕೊನೆಗೆ ಇದ್ದಕ್ಕಿದ್ದಂತೆ, ಏನೋ ಹೊಳೆದವನಂತೆ ಮತ್ತೆ ವಾಪಾಸು ಹೆಜ್ಜೆ ಹಾಕಿಬಿಟ್ಟ.
“ಬಹುಶಃ ಇಷ್ಟರೊಳಗೆ ಅವನು ಬಂದಿರಬೇಕು!”
ಅಗಾತಾಳ ಮದುವೆಯಾಗುವ ಹುಡುಗನಿಗಾಗಿ ಆತ ಆತಂಕದಿಂದ ಕಾದ. ಯಾಕೆ ತಾನು ಅವನಿಗಾಗಿ ಕಾಯುತ್ತಿದ್ದೇನೆ; ಅವನ ಮುಖ ನೋಡಲು ಯಾಕೆ ಇಷ್ಟೊಂದು ಕಾತರನಾಗಿದ್ದೇನೆಂಬ ಪ್ರಶ್ನೆಗೆ ಅವನಿಗೆ ಸ್ಪಷ್ಟ ಕಾರಣ ಗೊತ್ತಿರಲಿಲ್ಲ.
ಅವನ ತಾಯಿಗಂತೂ ಅಷ್ಟು ಹೊತ್ತಿಗಾಗಲೇ ಎಲ್ಲದರ ಮೇಲೂ ಬರಲಿರುವ ಸಾವಿನ ಮೇಲೂ – ಆಸಕ್ತಿ ಹೊರಟು ಹೋಗಿದ್ದರೂ ತನ್ನ ಮಗನಲ್ಲಿ ಉಂಟಾದ ಬದಲಾವಣೆಯ ಕುರಿತು ಆಗಲೇ ಅರಿವಾಗಿತ್ತು. ಒಂದು ಬೆಳಿಗ್ಗೆ ಎದ್ದವಳೇ ಕೇಳಿಯೇಬಿಟ್ಟಳು: “ಜೂಲಿಯೋ, ಪೆದ್ದನ ಥರ ಮಾಡಬೇಡ!”
“ಪೆದ್ದನ ಥರ ಅಂದರೇನಮ್ಮಾ?” ಎಂದು ತಿರುಗಿ ಕೇಳಿದ ಜೂಲಿಯೋಗೆ ತಾಯಿ ಮಾತಾಡಿದ ರೀತಿ, ದನಿಯ ಏರಿಳಿತ, ತಲೆಯಾಡಿಸಿದ ರೀತಿ ಎಲ್ಲವೂ ಅನುಕಂಪಕ್ಕಿಂತಲೂ ಹೆಚ್ಚಾಗಿ ಕಿರಿಕಿರಿ ಹುಟ್ಟಿಸಿತು.
ಹಾಗೆ ನೋಡಿದರೆ, ಅವನಿಗೂ ಅಷ್ಟರಲ್ಲಿ, ತಾನೊಂದು ಪೆದ್ದು ಕೆಲಸ ಮಾಡಿಯೇ ಮನಶ್ಶಾಂತಿ ಕಳಕೊಂಡಿದ್ದೇನೆ ಎಂದು ಮನದಟ್ಟಾಗಿತ್ತು. ಹಿಂದೊಮ್ಮೆ, ಅಗಾತಾಳ ಸೋದರಿ ಎರ್ಮಿನಿಯಾಳನ್ನು ಮಹಡಿ ಮೆಟ್ಟಲಿನಲ್ಲೇ ತಡೆದು ಮಾತಾಡಿಸಿದ್ದ. ಅದಾಗಲೇ ಬೇರೊಬ್ಬನೊಂದಿಗೆ ನಿಶ್ಚಯವಾಗಿದ್ದ ಅವಳ ತಂಗಿಯ ಕುರಿತು ತಾನು ಇಂಥ ಪೆದ್ದು ಯೋಚನೆಗೆ ಇಳಿದಿದ್ದಾದರೂ ಹೇಗೆ ಎಂದವನು ಮನಸ್ಸಲ್ಲೇ ಅಂದುಕೊಂಡಿರಬಹುದು.
“ಯಾರಿಗೊತ್ತು ಅವಳು ತನ್ನ ಬಗ್ಗೆ ಏನಂದುಕೊಂಡಿದ್ದಾಳೋ!”
ತೀರಾ ಆಳದಲ್ಲಿ, ಸಿಗ್ನೋರಿನಾ ಸಾರ್‍ನಿಯೊಂದಿಗೆ ಪ್ರೇಮಪಾಶದಲ್ಲಿ ಬಿದ್ದಿದ್ದೇನೆಂದು ಒಪ್ಪಿಕೊಳ್ಳಲು ಅವನೇ ತಯಾರಿರಲಿಲ್ಲ.
“ನನಗೂ ಅವಳಿಗೂ ನಡುವೆ ಅಂಥದೇನೂ ಇರಲಿಲ್ಲಪ್ಪ…!”
ಇದಾದ ನಂತರ, ಎಲ್ಲರೂ ಅಗಾತಾಳ ಅನಾರೋಗ್ಯದೆಡೆ ಸಹಜ ಅನುಕಂಪ ತೋರಿಸುವಂತೆ ತಾನೂ ಹಾಗೇ ಮಾಡತೊಡಗಿದ.
‘ಪಾಪ…. ಇನ್ನೂ ಚೆಕ್ಕವಳು! ಎಷ್ಟು ಒಳ್ಳೆಯ ಹುಡುಗಿ! ಆ ಬುದ್ದಿಗೇಡಿ ಇನ್ನೂ ಬರುವುದಿಲ್ಲವೋ ಏನೋ! ಅತ ಇನ್ನೂ ತಡಮಾಡಿದರೆ ಬಹುಶಃ ಅವಳನ್ನು ನೋಡಲಾರನೇನೋ….”
-೪-
ಮನೆಯಲ್ಲೀಗ ಮಹಡಿಹತ್ತಿ ಬರುವವರ, ಹೋಗುವವರ ಸಂಖ್ಯೆ ಆಗ್ಗಿಂದಾಗ್ಗೆ ಹೆಚ್ಚುತ್ತ ಹೋಯಿತು. ಜ್ಯೂಲಿಯೋ ಮೇಲೆ ಕಟಕಟೆಗೆ ಒರಗಿನಿಂತು ಯಾರ್‍ಯಾರು ಬಂದು ಹೋದರೆಂದು ಗಮನಿಸತೊಡಗಿದ. ಅನಾಥಾಲಯದ ಇಬ್ಬರು ನರ್ಸುಗಳು, ಕೆಲವು ವೈದ್ಯರು, ಅಲ್ಲದೆ ಉದ್ದನೆ ಬಿಳಿಗಡ್ಡವಿದ್ದು ಎತ್ತರಕ್ಕಿದ್ದ ಹಳಬ ಡಾನ್ಗಿಯಾಶಿಯೋ ಕೋರ್ವಾಜಾ ಕೂಡಾ ರೋಗಿಯನ್ನು ಕಾಣಲೆಂದೇ ಧಾವಿಸಿಬಂದಿದ್ದರು. ಕಾಯಿಲೆ ಈಗ ತನ್ನೋ ಮೊದಲ ಹಂತ ದಾಟಿದೆ ಎಂದು ಜೂಲಿಯೋ ಪತ್ತೆ ಹಚ್ಚಿದ್ದ. ಅತ್ತ ಆ ಹುಡುಗಿಗಂತೂ ತೀವ್ರ ಬಳಲಿಕೆಯಿಂದ ಚಿತ್ತ ಕೆರಳಿದಂತಾಗಿ ಸಣ್ಣಗೆ ಹುಚ್ಚೆ ಹಿಡಿದಂತಿತ್ತು…
“ಅವಳ ಕೂದಲು ಕತ್ತರಿಸಿ ಹಾಳುಮಾಡಿಬಿಟ್ಟಿದ್ದಾರೆ! ಅವಳ ಗುರುತು ಹಿಡಿಯುವುದೇ ಕಷ್ಟ. ನೀವೊಮ್ಮೆ ಅವಳನ್ನು ನೋಡಬೇಕು. ಪದೇಪದೇ ಮದುವೆ ಗಂಡಿನ ಕುರಿತೇ ಕೇಳುತ್ತಿರುತ್ತಾಳೆ…. ನೋಡಿದರೆ ಅವನಿಗೂ ವಾಪಾಸಾಗುವ ಮನಸ್ಸಿಲ್ಲವೇನೋ….” ಎಂದು ಜೂಲಿಯೋಗೆ ಅಡಿಗೆಯಾಕೆ ಬಂದು ತಿಳಿಸಿದ್ದಳು.
“ಅವನಿಗೆ ವಾಪಾಸಾಗುವ ಮನಸಿಲ್ಲವೆ? ಏನು ಹಾಗಂದರೆ? ಅವಳನ್ನು ಹೀಗೆಯೇ ಸಾಯಲು ಬಿಟ್ಟಿದ್ದಾನೆಯೆ?” ಜ್ಯೂಲಿಯೋ ಚಡಪಡಿಸಿದ.
ಆಗಾಗ ಕೆಳಮಹಡಿಯ ಬಾಗಿಲಕಡೆ ಯಾರಾದರೂ ಧಾವಿಸುವುದು, ಅದು ಸದ್ದು ಹೊರಡಿಸುತ್ತ ತೆರೆದುಕೊಳ್ಳುವುದು ನಡೆಯುತ್ತಿತು. ಈ ಸದ್ದಿಗೆ ಇದ್ದಕ್ಕಿದ್ದಂತೆ ಜೂಲಿಯೋ ಬೆಚ್ಚಿಬಿದ್ದು ಕನಸಿನಿಂದ ಹೊರಬಂದವನಂತೆ ಮಂಕಾಗಿಬಿಡುತ್ತಿದ್ದ.
“ಏನಾಗಿರಬಹುದು ಅಲ್ಲಿ? ಅವಳು ಸಾಯಲು ಹೊರಟದ್ದಾಳೆಯೆ?”
ಅಲ್ಲಿ ಡೊನ್ನಾ ಅಮಾಲಿಯಾ, ಎರ್ಮಿನಿಯಾರು ಸಪ್ಪೆಮೊರೆ ಹಾಕಿಕೊಂಡು ನಿಂತಿಲ್ಲವೆ…. ಅವರೆಲ್ಲ ಯಾರನ್ನು ನಿರೀಕ್ಷಿಸುತ್ತಿದ್ದಾರೆ? ಈಗ ಮುಖ್ಯದ್ವಾರದ ಎದುರು ಗಾಡಿಯೊಂದು ಬಂದು ನಿಂತಿತು. ….ಅದೋ ಅವಳ ಗಂಡನಾಗುವಾತ – ಮಾರಿಯೋ ಕೋರ್ವಾಜಾ. ಹೌದು ಅವನೆ! ಆ ಎತ್ತರಕ್ಕಿರುವ ಮುದುಕನ ಜತೆಗಿದ್ದಾನೆ. ಆತ ಅವನಪ್ಪ. ಅಂತೂ ಕೊನೆಗೂ ಬಂದೇಬಿಟ್ಟ!
“ಸರಿ…. ಈಗವಳು ಹೇಗಿದ್ದಾಳೆ?” ಮಾರಿಯೋ ಉದ್ವೇಗದಲ್ಲೇ ಕೇಳುತ್ತಿದ್ದಾನೆ. ಅವನ ಮುಖ ಬಿಳಿಚಿಕೊಂಡು ಹುಬ್ಬುಗಳು ಗಂಟಿಕ್ಕಿವೆ. ಅವರೆಲ್ಲ ಒಳಹೋಗಿದ್ದೇ ಬಾಗಿಲು ಮತ್ತೆ ಮುಚ್ಚಿಕೊಂಡಿದೆ.
ಜ್ಯೂಲಿಯೋ ಇದಕ್ಕೂ ಮುಂಚೆ ಮಾರಿಯೋ ಕೋರ್ವಾಜಾನ ಸ್ವರ ಕೇಳಿದ್ದಾದರೂ ಎಲ್ಲಿ? ಆತನನ್ನು ನೋಡಿದ್ದಾನೆ ನಿಜ. ಆದರೆ ಆಗಲೇ ಅವನಿಗೆ ಅಗಾತಾಳೊಂದಿಗೆ ನಿಶ್ಚಯವಾಗಿತ್ತೆ?
ಕೆಳಗಡೆ, ಬೆಡ್ರೂಮಿನಲ್ಲಿ – ಆ ಹೆಂಗಸಿನ ಕೋಣೆಯಲ್ಲೀಗ ಏನು ನಡೆಯುತ್ತಿದೆ? ಅವರ ಸಮಾಲೋಚನೆಯನ್ನು ಮನಸ್ಸಲ್ಲೇ ಊಹಿಸಿಕೊಳ್ಳಲು ಜೂಲಿಯೋ ಹೆಣಗಾಡಿದ. ಒಂದು ಗಂಟೆಯ ನಂತರ ಅವನಿಗೆ ಮಾರಿಯೋ ಕೋರ್ವಾಜಾ ತಂದೆಯೊಂದಿಗೆ ವಾಪಾಸು ಹೊರಟಿರುವುದು ಕಾಣಿಸಿತು. ರಸ್ತೆಯಲ್ಲಿ ಹೋಗುತ್ತಿರುವ ಅವರಿಬ್ಬರನ್ನು ಜ್ಯೂಲಿಯೋನ ಕಣ್ಣುಗಳು ಬಾಲ್ಕನಿಯಿಂದಲೇ ಹಿಂಬಾಲಿಸಿದವು. ಆತ ಈಗ ಎತ್ತ ಸಾಗಿದ್ದಾನೆ? ತಂದೆಯ ಜತೆ ಮಾತಾಡುವಾಗ ಯಾಕೆ ಹೀಗೆಲ್ಲ ಕೈಬಾಯಿ ಆಡಿಸುತ್ತಿದ್ದಾನೆ? ರೋಗಿ ಹೆಂಗಸನ್ನು ಬಿಟ್ಟು ಇಷ್ಟು ಬೇಗನೆ ಹೊರಟನೆ? ಈಗ ಆಕೆ ಎಂಥ ಸ್ಥಿತಿಯಲ್ಲಿದ್ದಾಳೆ?
ಸಂಜೆಯ ಹೊತ್ತು, ಡಾನ್ ಗಿಯಾಕೋಮೊ ಕೋರ್ವಾಜಾ ಮಗನಿಲ್ಲದೆ ಒಬ್ಬನೇ ವಾಪಾಸಾಗುವುದನ್ನು ಜ್ಯೂಲಿಯೋ ನೋಡಿದ. ಮಾರಿಯೋ ಕೋರ್ವಾಜಾ ತಾನು ಬಂದ ದಿನವೇ ರೋಮ್ಗೆ ಪ್ರಯಾಣ ಬೆಳಸಿದ್ದಾನೆಂದು ಅವನಿಗೆ ಗೊತ್ತಾಗಿದ್ದು ಮಾತ್ರ ನಂತರವೇ. ಅವನ ಆಗಮನವೇ ಒಂಥರಾ ದೆವ್ವ ಪ್ರತ್ಯಕ್ಷವಾಗಿ ಹಠಾತ್ತನೆ ಮಾಯವಾದಂತೆ ಇತ್ತು. ಮಾರನೇ ದಿವಸವೇ ಅಗಾತಾ ತನ್ನ ತಾಯಿ ಮತ್ತು ಡಾನ್ ಗಿಯಾಕೋಮೋ ಕೋರ್ವಾಜಾನೊಂದಿಗೆ ಊರಿನತ್ತ ಪ್ರಯಾಣ ಬೆಳಸಿದಳು.
ಇತ್ತ, ಜ್ಯೂಲಿಯೋ, ಅವರಿಬ್ಬರ ಮದುವೆಯ ಯೋಜನೆ ಮುರಿದುಬಿದ್ದಿರಬಹುದೆಂದು ಊಹಿಸಿದ. ಅವರೊಳಗೆ ಏನಾಗಿರಬಹುದು ? ಅವಳು ಅವನಿಂದಾಗಿಯೇ ಕಾಯಿಲೆ ಬಿದ್ದು ನಂತರ ಏಕಾಏಕಿ ಆತ ಕೈಕೊಟ್ಟಿರಬಹುದೆ? ಆದರೆ ಯಾಕಾಗಿ? ಆ ಮುಠ್ಠಾಳನಿಗೆ ಇನ್ನೇನು ಬೇಕಂತೆ? ಜ್ಯೂಲಿಯೋ ಪ್ರಕಾರ ಆಕೆ ಪ್ರೇಮಕ್ಕೆ ಎಷ್ಟೊಂದು ಅರ್ಹಳಾಗಿದ್ದಾಳೆ; ಅವಳನ್ನು ಪ್ರೇಮಿಸುವುದರಲ್ಲಿ ಆತ ಸೋಲುವುದಾದರೂ ಹೇಗೆ? ಎಂದೆಲ್ಲ ಅನಿಸಿತು. ಅವನನ್ನು ಕಳಕೊಂಡದ್ದಕ್ಕಾಗಿ ಅವಳು ಅದೆಷ್ಟೊಂದು ವ್ಯಥೆ ಪಡುತ್ತಿರಬಹುದೋ ಏನೋ ಎಂದನಿಸಿತು.
ಈ ಯೋಚನೆಗಳು ತಲೆಯಲ್ಲಿ ಸುಳಿದಾಡಿದ್ದೇ, ಒಂದು ರೀತಿಯ ಅಸೂಯೆ, ಪಶ್ಚಾತ್ತಾಪದಿಂದ ಮತ್ತು ಕಟು ಮತ್ಸರದಿಂದಲೂ ಒಳಗೊಳಗೇ ನರಳಿದ…. ತಾನು ಹಾಗಾದರೆ ಈ ಕುರಿತು ಏನೂ ಮಾಡಲಾರೆನೆ? ಆ ಮುಕಠ್ಠಾಳನ ಇಂಥ ಕೆಲಸ ಜ್ಯೂಲಿಯೋನನ್ನು ಸಿಟ್ಟಿಗೆಬ್ಬಿಸಿತು. ತಾನು ನಡುವೆ ಮೂಗು ತೂರಿಸಿಯೇ ಬಿಟ್ಟರೆ ಹೇಗೆ ಎಂದೂ ಒಮ್ಮೆ ಅನಿಸಿತು. ಮೂಗುತೂರಿಸುವುದೇ? ಆದರೆ ಹೇಗೆ?
‘ಅವರೆಲ್ಲ ಸೇರಿ ಅವಳನ್ನಂತೂ ಬೇರೆ ಕಡೆ ಕರಕೊಂಡು ಹೋಗಿಬಿಟ್ಟದ್ದಾರಲ್ಲ…. ಶುದ್ಧ ಮೂರ್ಖರು! ಅವರ್‍ಯಾಕೆ ಹಾಗೆ ಮಾಡಬೇಕಿತ್ತು? ಈ ಘಟನೆಯಿಂದ ಅವಳ ಮನಸ್ಸನ್ನು ಬೇರೆ ಕಡೆಗೆ ತಿರುಗಿಸಲು ಅಲ್ಲಿ, ಆ ಊರಿನಲ್ಲಿ, ಅವರಿಂದ ಸಾಧ್ಯವೆ?’ ಆವೇಶದ ನಡುವೆಯೂ ಅವನಿಗೆ, ‘ಆಕೆ ಅಲ್ಲೇ ಸತ್ತರೆ ಒಳ್ಳೆಯದಿತ್ತು’ ಎಂದೂ ಅನಿಸಿತು.
-೫-
ಸುಮಾರು ಒಂದು ತಿಂಗಳ ನಂತರ, ಒಂದು ದಿನ ಜ್ಯೂಲಿಯೋ ತನ್ನ ಮಹಡಿ ಮೆಟ್ಟಲು ಇಳಿಯುತ್ತಿರುವಾಗ, ಕೋರ್ವಾಜಾನ ಊರಿನಿಂದ ಬಂದ ಗಾಡಿಯೊಂದು ಮನೆಬಾಗಿಲಿನೆದುರೇ ಬಂದು ನಿಂತಿತು. ತಾಯಿಯ ಸಹಾಯ ಪಡೆಯುತ್ತ ಅಗಾತಾ ಗಾಡಿಯಿಂದ ಕಳಗಿಳಿಯುವುದನ್ನು ನೋಡಿದ ಜ್ಯೂಲಿಯೋಗೆ ಆಶ್ಚರ್ಯ ಗಾಬರಿ, ಎರಡೂ ಉಂಟಾದವು; ಮನಸ್ಸು ಕಲಕಿ ಬಿಟ್ಟಿತು. ಕಂಪಿಸುವ ಕೈಗಳಿಂದಲೇ ಆ ಇಬ್ಬರು ಹೆಂಗಸರ ಸಹಾಯಕ್ಕೆಂದು ಧಾವಿಸಿದ. ಚೇತರಿಸಿಕೊಳ್ಳುತ್ತಿದ್ದವಳ ಕೈಹಿಡಿದು ಆಧರಿಸುತ್ತ ಮಹಡಿಯ ಪ್ರತಿಮೆಟ್ಟಿಲು ಹತ್ತಿಸುವಾಗಲೂ ‘ಮೆಲ್ಲ ಸಿಗ್ನೋರಿನಾ…. ಹೀಗೆ” ಬಾ…. ಮೆಲ್ಲಮೆಲ್ಲ…. ನನ್ನ ಮೇಲೆ ಒರಗಿಬಿಡು ಮೆಲ್ಲ” ಎಂದುಲಿದ.
ಇಬ್ಬರೂ ಬಾಗಿಲಬಳಿ ಬಂದಾಗ, ಅವಳು ತಲೆ ತಗ್ಗಿಸಿ ಕೆಳನೋಡುತ್ತ ತುಸು ನಾಚಿಕೆಯಿಂದ “ಥ್ಯಾಂಕ್ಸ್” ಎಂದಳು. ಗಲಿಬಿಲಿಗೊಂಡ ಅವನ ಮುಖ ಈಗ ಕೆಂಪೇರಿತು.
ಬಾಗಿಲು ಮುಚ್ಚಿಕೊಂಡ್ಡಿದ್ದೇ, “ಎಷ್ಟು ದರ್ಬಲಳಾಗಿಬಿಟ್ಟದ್ದಾಳೆ!” ಎಂದು ಪಿಸುಗುಟ್ಟಿದ.
ನಂತರದ ಕ್ಷಣವೇ, “ಅವನನ್ನು ಎಷ್ಟೊಂದು ಪ್ರೀತಿಸಿದ್ದಳು!” ಎಂದೂ ಹೇಳಿಕೊಂಡ.
ತಾನು ಹೊರಗೆಲ್ಲೋ ಹೊರಟದ್ದೆ ಎಂಬುದನ್ನು ಮರೆತೇಬಿಟ್ಟ ಆತ, ಕೈಯಲ್ಲಿದ್ದ ಗ್ಲೋವ್ಸ್ ಗಳಿಂದ ಕಾಲುಗಳನ್ನು ಬಡಿದುಕೊಳ್ಳುತ್ತ ಮೆಲ್ಲನೆ ಮೆಟ್ಟಿಲು ಹತ್ತಿದ.
ಬಾಗಿಲ ಬಳಿ ಬಂದವನೇ, “ಛೆ, ಎಷ್ಟು ದರ್ಬಲಳಾಗಿಬಿಟ್ಟಿದ್ದಾಳೆ! ಎಂದು ಸಣ್ಣಗೆ ಪುನರುಚ್ಚರಿಸುತ್ತ ಕಿಸೆಯಿಂದ ಬೀಗದ ಕೈ ಹೊರತೆಗೆದವನೇ ತನಗರಿವಿಲ್ಲದೆ ಮನೆಯೊಳಗಡೆ ಹೋದ.
ಈಗ ಅವನಿಗೆ, ತನ್ನ ತಾಯಿ ಕರೆಯುತ್ತಿರುವುದು ಕೇಳಿಸಿತು. ತಕ್ಷಣವೇ ಅವಳ ಬಳಿ ಧಾವಿಸಿದವನಿಗೆ ತಾನಿನ್ನೂ ತನ್ನ ಮನೆಯಲ್ಲೇ ಉಳಕೊಂಡಿದ್ದೀನಾ ಎಂದು ನೆನೆದು ಅಶ್ಚರ್ಯವಾಯಿತು.
ಒಂದು ಪಕ್ಕಕ್ಕೆ ವಾಲಿಸಿದ್ದ ತಲೆಗೆ ಕಪ್ಪುಬಟ್ಟೆಯ ಸ್ಕಾರ್ಫನ್ನು ಧರಿಸಿದ್ದ ಅವನ ತಾಯಿ ತುಸುಬೇಸರದಿಂದಲೇ, ತನ್ನ ಅನುನಾಸಿಕದನಿಯಲ್ಲಿ, ‘ಏನಪ್ಪಾ ಏನಾದರೂ ಮರೆತೆಯಾ?’ ಎಂದು ಕೇಳಿದಳು.
‘ಇಲ್ಲಮ್ಮ …. ಏನೂ ಇಲ್ಲ…. ಸುಮ್ಮನೆ ಬೋರ್ ಆಯ್ತು, ಅಷ್ಟೇ. ಅಂದ ಹಾಗೆ ನಿಂಗೊತ್ತಾ? ನಮ್ಮ ಕೆಳಮಹಡಿಯ ಬಾಡಿಗೆದಾರರು ವಾಪಸು ಬಂದಿದ್ದಾರೆ….”
“ಓಹೋ! ಹೌದಾ!” ಎಂದು ನಿಟ್ಟುಸಿರುಬಿಡುತ್ತಾ ಬೇಜಾರಿನಲ್ಲೇ ಹೇಳಿದ ತಾಯಿ ತನ್ನ ತಲೆಯನ್ನು ಇನ್ನೊಂದು ಪಕ್ಕಕ್ಕೆ ವಾಲಿಸಿ ಕಣ್ಣುಮುಚ್ಚಿಕೊಂಡಳು.
ಅವಳ ಉಡಾಫೆಯ ಮಾತು ಮತ್ತು ಆ ಕ್ಷಣದ ಭಂಗಿಯಿಂದ ಜ್ಯೂಲಿಯೋಗೆ ಉರಿದು ಹೋಯಿತು.
“ಆ ಯುವತಿಗೆ ಪಾಪ…. ಇನ್ನೂ ಹುಷಾರಿಲ್ಲ” ಎಂದು ಅಸಮಾಧಾನದ ದನಿಯಲ್ಲಿ ತುಸು ಗಡಿಬಿಡಿಯಲ್ಲೇ ಹೇಳಿದ.
“ಅವಳು ಇನ್ನೂ ಚಿಕ್ಕವಳು ಮಾರಾಯಾ….. ಹೆದರಬೇಡ…. ಹುಷಾರಾಗುತ್ತಾಳೆ” ಮುಚ್ಚಿದ್ದ ಕಣ್ಣುಗಳನ್ನು ತೆರೆಯದೆ ಅದೇ ಹಿಂದಿನ ದನಿಯಲ್ಲೇ ಹೇಳಿದಳು.
ಜೂಲಿಯೋ ಪುನಃ ತನ್ನ ರೂಮ್ಗೆ ಹೋಗಿ ಈಸಿಚೇರಿನಲ್ಲಿ ಕುಕ್ಕರಿಸಿದ. ಆಗವನಿಗೆ ತನ್ನ ಟೋಪಿ ತೆಗೆಯಬೇಕೆಂದಾಗಲೀ, ಗ್ಲೋವ್ಸ್ ಮತ್ತು ವಾಕಿಂಗ್‍ಸ್ಟಿಕ್ಕನ್ನು ತೆಗೆದಿಡ ಬೇಕೆಂದಾಗಲೀ ಹೊಳೆಯಲೇ ಇಲ್ಲ.
‘ಛೆ. ಅವನನ್ನು ಅವಳು ಎಷ್ಟೊಂದು ಪ್ರೀತಿಸಿದ್ದಳು? ಎಂದು ಬಹಳ ಹೊತ್ತು ತಲೆಯಾಡಿಸುತ್ತ ಪುನಃ ತನ್ನಲ್ಲೇ ಪಿಸುಗುಟ್ಟಿದ. ‘ಥತ್…. ಅವನೊಬ್ಬ ಮುಠ್ಠಾಳ!”
ಕರ್ಚೆಯಿಂದೆದ್ದು, ತಲೆತಗ್ಗಿಸಿಕೊಂಡೇ ಕೋಣೆಯಲ್ಲಿ ಅತ್ತಿಂದಿತ್ತ ಶತಪಥ ಹಾಕತೊಡಗಿದ. ಹೌದು. ಅವಳನ್ನು ಆತ ಮತ್ತೆ ನೋಡಿದ್ದ; ಅವಳನ್ನು ಆಧರಿಸಲೆಂದು ಕೈಚಾಚಿದ್ದ. ಪ್ರೀತಿಗಾಗಿ ಅದೆಷ್ಟೊಂದು ಹಂಬಲಿಸುವ ಆ ಜೀವದ ಹಗುರನ್ನು ಮುಚ್ಚಿ ಅನುಭವಿಸಿದ್ದ; ತನ್ನ ಹಿಂದಿನ ಕಹಿಯನ್ನೆಲ್ಲ ಮರೆತುಬಿಡಲೆಂದು ಅವಳನ್ನು ಆತ ತನ್ನ ತೋಳಿನಲ್ಲೆತ್ತಿ ಕೊಂಡೊಯ್ಯಲು ಇಚ್ಛಿಸಿದ್ದ ಕೂಡ. ಅವಳ ಆ ಕಳೆಗುಂದಿದ ಮುಖ, ತನ್ನ ನಿಶ್ಯಕ್ತಿಯಲ್ಲೂ ಅವನಿಗೆ ಅತ್ಯಂತ ಸುಂದರವಾಗಿ ಕಂಡಿತ್ತು!
ಮೇಲಾಗಿ ಅವಳು ಅವನಿಗೆ ಥ್ಯಾಂಕ್ಸ್ ಹೇಳಿದ್ದಳು….
-೬-
ನಂತರದ, ಎರಡು ವಾರಗಳ ಕಾಲ, ನಿರಂತರ, ಜೂಲಿಯೋ ಅಕುರ್‍ಜಿಯ ಮನನ್ಸು ಕ್ಷೋಭೆ ಗೊಂಡಿತ್ತು. ತಾರಸಿಯ ಮೇಲೆಲ್ಲೂ ಅಗಾತಾ ಕಾಣಿಸಿರಲಿಲ್ಲ. ಮನೆಯಾಚೆಗೂ ಅವಳು ಹೋಗಿರಲಿಲ್ಲ. ಕೆಲಸದಾಳುಗಳಿಗೆ, ‘ಈಗ ಹೇಗಿದ್ದಾಳೆ ಹುಡುಗಿ?’ ಎಂದು ಕೇಳಿದರೆ, ‘ಆರಾಮಾಗಿದ್ದಾಳ ಒಡೆಯಾ…. ಈಗ ಪರವಾಗಿಲ್ಲ’ ಎಂದಷ್ಟೆ ಉತ್ತರಬರುತ್ತಿತ್ತು. ತಾನು ವಿವೇಚನೆಯಿಲ್ಲದವನಂತೆ ವರ್ತಿಸುತ್ತಿದ್ದೇನೆ ಎಂದಾತ ತೋರಿಸಿಕೊಳ್ಳಲು ಸಿದ್ಧನಿರಲಿಲ್ಲ. ಈ ನಡುವೆ ಆತ ಕೆಲಸಕ್ಕೇನೂ ಹೋಗುತ್ತಿರಲಿಲ್ಲ. ಹಾಗೆ ನೋಡಿದರೆ ಮೊದಲಿನಿಂದಲೂ ಆತ ಕೆಲಸ ಮಾಡುತ್ತಿದುದೇ ಕಮ್ಮಿ. ಹಿಂದೆಲ್ಲ, ಓದುವ, ಅಭ್ಯಾಸಮಾಡುವ ಆಸಕ್ತಿಯಾದರೂ ಅವನಿಗಿತ್ತು. ಹೀಗಾಗಿ ಆತ ವಿಭಿನ್ನ ಸಂಸ್ಕ್ರತಿಗಳನ್ನು ತಿಳಿದವನಾಗಿದ್ದ… ಈಗಂತೂ ಅವನಿಗೆ ತಾನು ಓದುತಿರುವುದು ಕಾದಂಬರಿಯೇ ಆಗಲಿ ಬೇಕಾದರೆ ಒಂದು ಪುಟವನ್ನು ಓದಲೂ ಸಾಧ್ಯವಾಗುತ್ತಿರಲಿಲ್ಲ. ಬದಲಿಗೆ, ಅವನೀಗ ತನ್ನ ಅಂದಚೆಂದಕ್ಕೇ ಹೆಚ್ಚು ಗಮನ ಕೊಡತೊಡಗಿದ. ಕನ್ನಡಿಯೆದುರು ನಿಂತು ಹುಬ್ಬುಗಳನ್ನು ತುಸುವೇ ಹಾರಿಸುತ್ತ ನೋಡಿದರೆ ಎಡಬದಿಯ ತನ್ ಕೆಂಬಣ್ಣದ ಕೂದಲುಗಳು ಕ್ರಮೇಣ ತೆಳ್ಳಗಾಗುತ್ತಿರುವುದು ತಿಳಿದು ಕಂಗೆಟ್ಟ. ತನ್ನ ಹೇರ್‍ಸ್ಟೈಲ್ಗೆ ಸಂಬಂಧಿಸಿದ ಎಲ್ಲ ವಿಷಯಗಳಲ್ಲೂ ಅನಾವಶ್ಯಕ ಗಮನಕೊಡತೊಡಗಿದ. ಅವನಿಗೆ ತನ್ನಿಂದ ಯಾವ ತಪ್ಪೂ ಘಟಿಸಬಾರದು ಎಂದಿತ್ತು. ಆದರೆ ಇಷ್ಟೆಲ್ಲ ಗಮನಕೊಟ್ಟೂ ಆರೈಕೆ ಮಾಡಿದರೂ ಆತ ಒಮ್ಮೆಕೂಡ ಮನೆಯಾಚೆ ಹೆಜ್ಜೆ ಹಾಕಲೇ ಇಲ್ಲ. ಸುಮ್ಮನೆ ಕೂತುಕೊಳ್ಳುವುದೋ ಅಥವಾ ಬಾಲ್ಕನಿಯ ಕಬ್ಬಿಣದ ಅಡ್ಡಪಟ್ಟಿಗೆ ಒರಗಿ ಕಾಯುವುದೋ ಮಾಡುತ್ತಿದ್ದ. ಸಂಜೆಯಾಗುತ್ತಿದ್ದ ಹಾಗೆ ಡೊನ್ನಾ ಅಮಾಲಿಯಾ ಸಾರ್‍ನಿ ತಾರಸಿಗೆ ಬಂದು ಗಿಡಗಳಿಗೆ ನೀರುಣಿಸುವುದನ್ನು ನೋಡುತ್ತ ನಿಲ್ಲುತ್ತಿದ್ದ. ಪ್ರತಿಯೊಂದು ಮಡಕೆಗೂ ನೀರಿನ ಪಾತ್ರೆಯನ್ನೆತ್ತಿ ಗಿಡಗಳಿಗೆ ನೀರುಹನಿಸುವಾಗ ಈ ಪಾತ್ರೆಯನ್ನೇ ಸೂಕ್ಷ್ಮವಾಗಿ ಗಮನಿಸುತ್ತಿದ್ದ. ನೀರಿನ ಪಾತ್ರೆ ಮಡಕೆಯ ಮೇಲಿದ್ದಷ್ಟೂ ಹೊತ್ತು ಅದನ್ನೇ ದಿಟ್ಟಿಸುತ್ತಿದ್ದ. ಈ ರೀತಿ ಸುತ್ತುತ್ತ ತಾನು ಒರಗಿನಿಂತ ಕಂಬಕ್ಕೆ ಸುತ್ತು ಬರುತ್ತಿದ್ದ. ಕೆಲವೊಂದು ಸಲ, ಹೀಗೆ ಗೊತ್ತು ಗುರಿಯಿಲ್ಲದೆ ಬದುಕು ಜಿಗುಪ್ಸೆ ಹುಟ್ಟಿಸುತ್ತಿತ್ತು. ಎಲ್ಲಾದರೂ ಸುತ್ತಾಡಿ ಬರುವಾ ಎಂದು ಅನಿಸಿಬಿಡುತಿತ್ತು. ಆದರೆ, ಹಾಗೇನಾದರೂ ಹೋಗಿಯೇ ಬಿಟ್ಟರೆ ಇಲ್ಲಿ ಅಮ್ಮನನ್ನು ನೋಡಿಕೊಳ್ಳುವವರು ಯಾರು?
ಒಂದು ದಿನ, ಅನಿರೀಕ್ಷಿತವಾಗಿ ಎರ್ಮಿನಿಯಾ ಕೋರ್ವಾಜಾಳ ಮಕ್ಕಳಿಬ್ಬರೂ ಎಂದಿನಂತೆ ತಾರಸಿಯ ಮೇಲೆ ಕೇಕೆ ಹಾಕುವುದನ್ನು ನೋಡಿದ. ಆ ನಗುವಿನ ಸದ್ದಿಗೆ ಅವಳಿನ್ನೇನು ಬಂದೇ ಬಿಡುತ್ತಾಳೆ ಎನ್ನುವವಷ್ಟರಲ್ಲಿ ಜೂಲಿಯೋ ಅಕುರ್‍ಜಿಯ ಎದೆ ಭಯಂಕರ ವೇಗದಲ್ಲಿ ಬಡಿದುಕೊಳ್ಳತೊಡಗಿತು. ಕೊನೆಗೂ ಆತ ಅವಳನ್ನು ನೋಡುವವನಿದ್ದ. ಅವಳು ನಗುತ್ತಿದ್ದಳು! ಈ ಬಾರಿ ಅವನಿಗೆ ಆಕೆ ಬೇರೆಯೇ ವ್ಯಕ್ತಿಯಾಗಿ ಕಂಡಳು.
“ಅವಳೇ ಹೌದು ತಾನೆ…. ಅವಳೇ ತಾನೆ” ಎಂದು ತನಗೆ ತಾನೇ ಕಂಪಿಸುತ ಹೇಳಿಕೊಂಡ, ಮತ್ತು ಬಾಲ್ಕನಿಯಿಂದ ಈಚೆ ಬಂದುಬಿಟ್ಟ. ನಂತರದ ಕ್ಷಣವೇ ವಾಪಾಸು ತಿರುಗಿ ಬಂದು ನೋಡಿದರೆ ಅವಳಾಗಲೇ ಮಕ್ಕಳ ಜತೆ ತಾರಸಿಯಿಂದ ಹೋಗಿಯಾಗಿತ್ತು.
ಮನೆಯೊಳಗೆ ಈಗವನಿಗೆ ಒಬ್ಬನೇ ಇರಲು ಕಷ್ಟವಾಯಿತು. ತನ್ನೊಳಗೆ ಹುಟ್ಟಿಕೊಂಡ ಸಂತೋಷವನ್ನು ಹಂಚಿಕೊಳ್ಳಲು ಯಾರಾದರೂ ಬೇಕೆನಿಸಿತು. ಏನು ಹೇಳಬೇಕೆಂದು ತಿಳಿಯದೆ ನೇರ ಆಮ್ಮನ ಬಳಿ ಓಡಿದ. ಅವನ ಅಮ್ಮ, ಎಂದಿನಂತೆ ಮುಚ್ಚಿದ ಕಂಗಳಲ್ಲಿ, ತಲೆಯನ್ನು ಒಂದು ಬದಿಗೆ ವಾಲಿಸಿದ ಭಂಗಿಯಲ್ಲಿದ್ದಳು. ಫಕ್ಕನೆ ನೋಡಿದರೆ ಸತ್ತು ಹೋದವಳಂತೆ ಕಾಣುತ್ತಿದ್ದಾಳೆ! ಕೋಣೆಯಲ್ಲಿ ಅರ್ಧ ತೆರದಿಟ್ಪ ಕಿಟಕಿಗಳಿಂದಾಗಿ ಮಂದವಾದ ಬೆಳಕಿತ್ತು.
ಕೈಗಳನ್ನು ಮೆಲ್ಲನೆ ಎತ್ತಿಡುತ್ತ, ಅವಳೆಡೆ ತುಸುಬಾಗಿ, ‘ಏನಮ್ಮ ಮಲಗಿದ್ದೀಯಾ?’ ಎಂದು ಕೇಳಿದ.
ಕಣ್ತೆರೆಯದೆ, ಮಲಗಿದ್ದಲ್ಲಿಂದಲೇ, ‘ಇಲ್ಲ ಮಾರಾಯಾ’ ಎಂದು ನಿಟ್ಟುಸಿರಿಟ್ಟಳು.
ಅಮ್ಮ ಆಡಿದ ಈ ಒಂದು ಮಾತಿನ ದನಿ ಕೇಳಿಸಿದ್ದೇ, ಜೂಲಿಯೋನ ಮನಸ್ಸು ಇದ್ದಕ್ಕಿದ್ದಂತೆ ಬದಲಾಗಿ ಹೋಯಿತು. ಅಮ್ಮ ಎಂಥ ಸಂಕಷ್ಟದಲ್ಲಿ ನರಳುತ್ತಿದ್ದಾಳಲ್ಲ ಎಂದು ಮೊದಲ ಬಾರಿ ಅನಿಸಿತು. ಥಟ್ಟನೆ ಅವನ ಕಣ್ಮುಂದೆ, ಅಪ್ಪನ ಸಾವಿನ ನಂತರ ಯಾವತ್ತೂ ಕಪ್ಪು ಬಟ್ಚೆಯುಟ್ಟುಕೊಂಡು ಚುರುಕಿನಿಂದ ಒಡಾಡುತ್ತ, ಮನೆಗೆಲಸಗಳನ್ನೆಲ್ಲ ನಿರ್ವಹಿಸುತ್ತ ಇರುವ ಅಮ್ಮ ಕಂಡಳು. ಅವನ ಸ್ಮೃತಿಪಟಲದಲ್ಲಿ ಹಿಂದೊಮ್ಮೆ ಸಂಜೆಯ ಹೊತ್ತು ದೊಡ್ಡ ಕನ್ನಡಿಯೆದುರು ನಿಂತುಕೊಂಡಿದ್ದ ಅಮ್ಮನ ನೆನಪು ಮರುಕಳಿಸಿತು. ಈಗಿರುವ ಅಮ್ಮ ಅವನೆದುರು ಬೇರೆಯೇ ಆಗಿ ಕಂಡಳು. ಅವಳ ಕೊರಳಿಗೆ ವ್ಯಕ್ತಿಯೊಬ್ಬ ಸುಂದರ ನೆಕ್ಲೇಸನ್ನು ತೊಡಿಸುತ್ತಿದ್ದ. ಆತ ಬೇರಾರೂ ಅಲ್ಲ; ಜೂಲಿಯೋ ಅಕುರ್‍ಜಿಯ ಅಪ್ಪನಾಗಿದ್ದ. ಆಗ ಜ್ಯೂಲಿಯೋ ಪುಟ್ಟ ಹುಡುಗ, ತನ್ನ ಅಪ್ಪನ ಕುರಿತು ಅವನಿಗಿದ್ದ ಅಸ್ಪಷ್ಟ ನೆನಪೆಂದರೆ ಇದೊಂದೇ. ಇದಾದ ನಂತರ ಇಬ್ಬರೂ ಕೂತು ಊಟಮಾಡುವಾಗ ಇದ್ದಕ್ಕಿದ್ದಂತೆ ಅವನು ತನ್ನ ತಾಯಿ ಹಠಾತ್ತನೆ ಪಾರ್ಶ್ವವಾಯು ಬಡಿದು ಮೇಜಿನ ಮೇಲುರುಳುವುದನ್ನು ಕಂಡ. ಈಗ, ಅವನ ಅಮ್ಮ ಕಳೆದ ಆರುವರುಷಗಳಿಂದ ಈ ಸ್ಥಿತಿಯಲ್ಲಿದ್ದಾಳೆ. ಬದುಕು ಅವಳನ್ನು ಕೈಕೊಟ್ಟರೆ ಅತ್ತ ಸಾವು ಅವಳನ್ನು ಮರೆತೇಬಿಟ್ಟಂತಿತ್ತು.
ಮರಗಟ್ಟಿಹೋಗಿರುವ ಅವಳ ತಣ್ಣಗಿನ ಕೈಗಳನ್ನು ಚುಂಬಿಸುತ್ತ, ‘ಛೆ….ಪಾಪ’ ಎಂದು ನಿಟ್ಟುಸಿರುಬಿಟ್ಟ. ಅವಳ ಸ್ವರ ಅವನಲ್ಲಿ ಕಣ್ಣೀರು ಉಕ್ಕಿಸಿತು.
ತನ್ನ ಮಗ ತನಗೇನನ್ನೋ ನಿವೇದಿಸಲು ಬಂದಿದ್ದಾನೆ ಎಂದುಕೊಂಡ ಅವಳು, ‘ಏನೋ? ಏನು ಹೇಳಬೇಕಂತ ಬಂದೀ? ಎಂದು ಕೇಳಿದಳು.
“ಅಮ್ಮಾ…. ಅದೂ….”
“ಶ್ ಶ್…. ನಂಗೊತ್ತು ಮಾರಾಯಾ….. ಮದುವೆಯಾಗಿಬಿಡು ಅವಳನ್ನು…. ಅವಳು ಒಳ್ಳೆಯ ಹುಡುಗಿಯಾದ್ದರೆ ಮದುವೆಯಾಗಿಬಿಡು. ನನಗಂತೂ ಸಂತೋಷ” ಎಂದಳು.
ಇಷ್ಟು ಹೇಳಿ ನಿಟ್ಟುಸಿರುಬಿಡುತ್ತ ತಲೆಯನ್ನು ಆಚೆತಿರುಗಿಸಿದಳು.
“ಏನು ಹೇಳ್ತಾ ಇದ್ದೀ ಅಮ್ಮಾ?”
“ನಾನು ಹೇಳ್ತಾ ಇರೋದು ಏನಂದ್ರೆ… ಅವಳನ್ನು ಮದುವೆಯಾಗು ಅಂತ…. ಇದೇ ಸರಿಯಾದ ಕಾಲ…. ನನಗಂತೂ ಇದರಿಂದ ಸಂತೋಷ.”
“ಆದರೆ ಅವಳು ಯಾರೆಂದು ನಿನಗೊತ್ತಾ ಅಮ್ಮಾ?”
“ಹೌದಪ್ಪ…. ಎಲ್ಲಾ ಗೊತ್ತಿದೆ ಬಿಡು.”
“ನಾನವಳನ್ನು ಪ್ರೀತಿಸುತ್ತಿದ್ದೇನೆ….” ಎಂದ ಜ್ಯೂಲಿಯೋಗೆ ಇದ್ದಕ್ಕಿದ್ದಂತೆ ಈ ಸತ್ಯವನ್ನು ತನಗೇ ಹೇಳಿಕೊಳ್ಳುತ್ತಿರುವಂತೆ ಅನಿಸಿತು.
“ಸರಿ…. ಖಿಷಿಯಾಗಿರಪ್ಪ” ಎಂದಳು, ಅಮ್ಮ ಮಾತು ಮುಗಿಸುವವಳಂತೆ.
ಈಗವನಿಗೆ ಗಲಿಬಿಲಿಯಾಯಿತು. ಅಗಾತಾ ಕೂಡ ತನ್ನನ್ನು ಪ್ರೀತಿಸುತ್ತಿದ್ದಾಳೆ ಅಂತ ಅಮ್ಮ ಅಂದುಕೊಂಡಿದ್ದಾಳಯೇ? ಈಗ ಮತ್ತೊಮ್ಮೆ ಹಿಂದಿನಂತೆ ಅನಿಶ್ಚಿತತೆ ಕಾಡತೊಡಗಿತು.
“ನನ್ನನ್ನೊಮ್ಮೆ ಪರಿಚಯಿಸುತ್ತೀಯಾ?” ಎಂದು ಕೇಳಿದಳು.
“ಓಹೋ…. ಖಂಡಿತಾ” ಎಂದು ಕಳವಳದಿಂದಲೇ ಹೇಳಿದ ಜ್ಯೂಲಿಯೋ ತುಸು ಕಡುವಾಗಿಯೇ ನಿಡುಸುಯ್ಯುತ್ತ ಅಮ್ಮನಿಗೆ ಗುಡ್ಬೈ ಹೇಳಿ ಹೊರಟುಹೋದ.
ಇದ್ದಕ್ಕಿದ್ದಂತೆ ಅವನನ್ನೀಗ ದುಃಖ ಆವರಿಸಿಕೊಂಡಿದ್ದಾದರೂ ಹೇಗೆ? ಅವನ ಅಮ್ಮ ಕಾಯಿಲೆ ಬಿದ್ದಾಗಿನಿಂದಲೂ ಹಾಗೇ ಇದ್ದಳಲ್ಲ?
ತನಗುಂಟಾದ ದುಃಖಕ್ಕೆ ಸ್ಪಷ್ಟಕಾರಣ ಏನೆಂದು ಅವನಿಗೇ ಗೊತ್ತಾಗಲಿಲ್ಲ. ಈ ಹಿಂದಿನ ಸಂದಿಗ್ಧ ಸ್ಥಿತಿಯಿಂದ ಹೊರಬರದೆ ಹೋದರೆ ಅವನನ್ನು ಯಾವುದರಿಂದಲೂ ಸಮಾಧಾನ ಪಡಿಸಲು ಸಾಧ್ಯವಿರಲಿಲ್ಲ.
ಈತ ಮನೆಯೊಳಗೆ ಕಾಲಿಡುತ್ತಿದ್ದಂತೆಯೇ, ಅಗಾತಾಗೆ ತನ್ನ ಮುಂದಿನ ಬದುಕು ಎಷ್ಟು ಕಷ್ಟಕರವಾದ್ದು; ಎಷ್ಟೊಂದು ಅರ್ಥವಿಲ್ಲದ್ದು ಅನಿಸಿಬಿಟ್ಟಿತು. ಅವಳ ತಾಯಿ ಮಾತ್ರ ತಕ್ಷಣ ಕಾರ್ಯ ಪ್ರವೃತ್ತಳಾಗಿ ಅಸ್ತಯಸ್ತವಾಗಿದ್ದ ಮನೆಯನ್ನು ಸರಿಪಡಿಸತೊಡಗಿದಳು.
ಅಗಾತಾ ಮನೆಯಲ್ಲೇ ಸುಮ್ಮನೆ ಅಡ್ಡಾಡಿದಳು. ಆದರೆ ಒಂದು ಕ್ಷಣ ಕೂಡ ಎಲ್ಲೂ ಕೂರಲಾಗದು ಎನಿಸಿತು. ಮುಂದೆ ಬೋರ್ ಹೊಡೆಸುವ ದಿನಗಳಲ್ಲಿ ತನಗೆ ಮಾಡಲು ಏನೂ ಕೆಲಸವಿರುವುದಿಲ್ಲವಲ್ಲ ಎಂದೂ ಅನಿಸಿತು. ನಿಂತೇ ಇದ್ದವಳು, ಪಿಯಾನೋ ಸದ್ದನ್ನು ಕೇಳಬೇಕೆಂದೆನಿಸಿ ಅದರ ಒಂದು ಕೀಲಿಯನ್ನು ಒತ್ತಿದಳು. ಅದು ಮೈಮೇಲೆ ಬಂದಂತೆ ಭಾಸವಾಗಿ ಹಿಂದೆ ಸರಿದಳು. ತಾಯಿಯ ಹಾಗೆ ಪೀಠೋಪಕರಣಗಳ ಧೂಳು ಒರೆಸುತ್ತ, ಮನೆಯನ್ನು ಓರಣವಾಗಿಡುತ್ತ ತಾನೂ ಕೆಲಸದಲ್ಲಿ ತೊಡಗಿದ್ದರೆ ಎಷ್ಟು ಒಳ್ಳೆಯದಿತ್ತು!
‘ಮಾರಿಯೋ ಕೋರ್ವಾಜಾನ ಕುರಿತು ಈಗ ತಾನೇನೂ ಯೋಚೆಸುತ್ತಿಲ್ಲ; ಅವನ ಜತೆ ಮದುವೆ ತಪ್ಪಿಹೋದದ್ದರ ಕುರಿತು ತನಗೆ ಎಳ್ಳಷ್ಟೂ ಚೆಂತೆಯಿಲ್ಲ’ ಎಂಬುದು ಎಲ್ಲರಿಗೂ ಮನವರಿಕೆಯಾಗಲಿ ಎಂದು ಅಗಾತಾ ಅಸೆಪಟ್ಟಿದ್ದಳು.
ಏನೇ ಇರಲಿ, ಅವಳು ಮರುಕಳಿಸಿಕೊಂಡ ವಿವರಗಾಳಿ ಮಾತ್ರ ತೀಕ್ಷ್ಣವಾಗಿದ್ದವು. ಎಷ್ಟೆಲ್ಲ ವಿವರಗಳನ್ನು ನೆನಪಿಸಿಕೊಳ್ಳುವುದಿತ್ತೋ, ನಾಲ್ಕು ವರ್ಷ ಸುಮ್ಮನೆ ಕಾಯಬೇಕಾಗಿ ಬಂದದ್ದಕ್ಕೆ ಪಶ್ಚಾತ್ತಾಪವೂ ಅಷ್ಟೇ ಇತ್ತು. ಇಷ್ಟೆಲ್ಲ ಆಗಿಯೂ ಕೂಡ, ಅವಳಿಗೆ ತಾನು ಅನಾರೋಗ್ಯದಿಂದ ಬಿದ್ದುಕೊಂಡಿದ್ದಾಗ ಅವನ್ಯಾಕೆ ತನ್ನಿಂದ ತಪ್ಪಿಸಿಕೊಳ್ಳುತ್ತಿದ್ದ, ಯಾಕೆ ತನ್ನನ್ನು ದೂರವೇ ಇರಿಸಿದ ಎಂದು ಮಾತ್ರ ಗೊತ್ತಾಗಲಿಲ್ಲ! ಅವನ ಕಾಗದಗಳೆಲ್ಲವನ್ನೂ ಪುಟ್ಟಡಬ್ಬಿಯಲ್ಲಿ ಇನ್ನೂ ಜೋಪಾನವಾಗಿರಿಸಿಕೊಂಡಿದ್ದಳು. ಈಗ ಕೋಣೆಯನ್ನು ಮುಚ್ಚಿ, ಅವೆಲ್ಲವನ್ನೂ ಪುನಃ ಓದ ತೊಡಗಿದಳು. ಮೋಂಬತ್ತಿಯನ್ನು ಹತ್ತಿಸಿ, ನೆಲದ ಮೇಲೆ ಕೂತು ಒಂದೊಂದೇ ಪತ್ರವನ್ನು ಮುಗಿಸಿದ್ದೇ, ಉರಿಯುವ ಜ್ವಾಲೆಗೆ ಕೊಡುತ್ತಿದ್ದಳು.
ನಾಲ್ಕು ಕಟ್ಟುಗಳಲ್ಲಿ, ವರ್ಷಕ್ಕನಗುಣವಾಗಿ, ಆ ಪತ್ರಗಳನ್ನೆಲ್ಲ ತಾರೀಕಿಗೆ ಹೊಂದಿಕೆ ಯಾಗುವನಂತೆ ಕ್ರಮಪ್ರಕಾರ ಇಡಲಾಗಿತ್ತು. ಮೊದಲ ಕಟ್ಟು ದೊಡ್ಡದಿದ್ದರೆ, ಕೊನೆಯದು ಸಣ್ಣದಿತ್ತು. ಪತ್ರ ಓದಿಯಾದ ಮೇಲೆ ಬಾತುಕೊಂಡ ಕಣ್ಣುಗಳಿಂದ ಉರಿಯುವ ಜ್ವಾಲೆಯನ್ನೇ ದಿಟ್ಟಿಸುತಿದ್ದಳು. ಅವಳ ಮನಸ್ಸು ಹಿಂದಕ್ಕೋಡುತ್ತ ಪತ್ರ ಬರೆದ ತಾರೀಕಿನ ಆ ದಿವಸವನ್ನು ನೆನಪಿಸಿಕೊಳ್ಳುತಿತು. ನಂತರ ಹಾಳೆಯನ್ನು ಕಂಪಿಸುವ ಕೈಗಳಿಂದ ಮೋಂಬತ್ತಿಯ ತನಕ ಒಯ್ದು ಓಮ್ಮೆ ನಿಟ್ಟುಸಿರುಬಿಟ್ಟು ಅದು ಪೂರ್ತಿ ಬೂದಿಯಾಗುವ ತನಕ ಕಾಯುತ್ತಿದ್ದಳು.
ಈ ನಡುವೆ, ಜೂಲಿಯೋ ಅಕುರ್‍ಜಿಯ ಮನಸ್ಸು ರಾತ್ರಿಯಿಡೀ ಅನುಮಾನ, ಹಿಂಜರಿಕೆಯಲ್ಲೇ ಗಿರಕಿಹೊಡೆಯುತ್ತಿತ್ತು. ಹಿಂದೊಮ್ಮೆ ಅವಳ ತಂಗಿಯನ್ನು ಭೇಟಿಯಾದಾಗ ತನ್ನೊಳಗನ ಭಾವನೆಗಳನ್ನು ಹೆಚ್ಚೂ ಕಮ್ಮಿ ಹೊರಗೆಡಹಿಯೇ ಬಿಟ್ಟಿದ್ದ. ಈಗ ಕೊನೆಗೂ, ಅವಳನು ಕಂಡುಬರುವುದೆಂದು ನಿರ್ಧರಿಸಿಬಿಟ್ಟ.
ಒಬ್ಬನೇ ಯೋಚಿಸಿದ: ಅವಳ ಸಂಬಂಧೀಕರೆಲ್ಲ ನನ್ನನ್ನು ಸಂತೋಷದಿಂದ ಒಪ್ಪಿಕೊಳ್ಳುವದರಲ್ಲಿ ಅನುಮಾನವೇ ಇಲ್ಲ. ಆದರೆ ಅಗಾತಾಳದ್ದೇ ಚಿಂತೆ! ಅವಳು ಇದುವರೆಗೂ ನನನ್ನು ಗಮನಿಸಿಯೇ ಇಲ್ಲವಲ್ಲ. ನಾನು ಇರುವೆನೆಂದೂ ಕೂಡ ಅವಳಿಗೆ ಗೊತ್ತಿಲ್ಲ…. ಈ ಕ್ಷಣರಲ್ಲಿ ಯಾರೋ ಬೇರೊಬ್ಬನನ್ನೇ ಅವಳು ಯೋಚಿಸುತ್ತಿದ್ದಾಳೆ.
ತಾನು ಅವರಲ್ಲಿ ಈ ಕುರಿತು ಬಿನ್ನವಿಸಿಕೊಳ್ಳುವ ಮುನ್ನ ಇನ್ನೂ ಸ್ವಲ್ಪ ಕಾಲ ಕಾಯಬೇಕೆಂಬ ಅರಿವು ಅವನಿಗಿತ್ತು. ಆದರೆ ಮತ್ತೊಂದೆಡೆ, ಅಷ್ಟೊಂದು ಕಾಯುತ್ತ ಕೂರಲು ಅವನೊಳಗಿನ ಅಸೂಯೆ, ಸ್ವಾಭಿಮಾನಗಳು ಅವನನ್ನು ಬಿಡುತ್ತಿರಲಿಲ್ಲ. ಆ ಯಾವನೋ ಬೇರೊಬ್ಬನ ನೆನಪು ಅಗಾತಾಳ ಒಳಗಡೆ ಇರುವಷ್ಟೂ ಕಾಲ ಜ್ಯೂಲಿಯೋಗೆ ನೆಮ್ಮದಿಯಿರಲಿಲ್ಲ, ಮತ್ತೊಂದೆಡೆ, ಮಾರಿಯೋ ಕೋರ್ವಾಜಾನಿಗೆ ಅವಳನ್ನು ಕೊಡುವುದೆಂದು ಆಗಲೇ ಮಾತುಕೊಟ್ಟಾಗಿದೆ ಎಂಬ ಸತ್ಯ ತನಗೇನೂ ಗೊತ್ತೇ ಇಲ್ಲ ಎಂದು ನಟಿಸುವ ಅಗತ್ಯವೂ ಅವನಿಗಿತ್ತು. ಅವಳು ಅವನನ್ನು ನಿರಾಕರಿಸಿದ್ದೇ ಹೌದಾದರೆ ಆತ ತಕ್ಷಣ ಅವಳನ್ನು ದ್ವೇಶಿಸತೊಡಗುತ್ತಾನೆ ಮತ್ತು ಅದು ತಂತಾನೆ ಹೊರಬೀಳುವುದು ಎಂದು ಜ್ಯೂಲಿಯೋಗೆ ಅನಿಸಿತು. “ಅದರೂ ಒಂದು ವಿಚಾರ ಮಾತ್ರ ಅವನ ಉತ್ಸಾಹ ಕುಗ್ಗಿಸುತ್ತಿತ್ತು :. ಮುಂದೊಂದು ದಿವಸ ಅವನೆಲ್ಲಿಯಾದರೂ ನನ್ನನ್ನು ಅವಳ ಜತೆ ನೊಡಿಬಿಟ್ಟರೆ ಖಂಡಿತ ಅವನು ಅನುಕಂಪದಿಂದಲೇ ನನ್ನನ್ನು ಕಾಣುತ್ತಾನೆ. “ಒಂದು ಕಾಲದಲ್ಲಿ ಆ ಹುಡುಗಿ ನನ್ನನ್ನು ಪ್ರೀತಿಸುತ್ತಿದ್ದಳು. ನನಗವಳ ಅಗತ್ಯವಿರದೆ ಅವಳಿಗೆ ಕೈಕೊಟ್ಟು ಈಗ ನೋಡಲ್ಲಿ, ಅವಳಿಗೆ ಯಾವನೋ ಒಬ್ಬ ಪೆದ್ದ ಸಿಕ್ಚಿಬಿಟ್ಟಿದ್ದಾನೆ.”
ಎರ್ಮಿನಿಯಾ ಕೋರ್ವಾಜಾ, ಜ್ಯೂಲಿಯೋ ಅಕುರ್‍ಜಿಯ ಆಗಮನದಿಂದ ಆಶ್ಚರ್ಯಗೊಂಡಳು. ಬಿಳಿಚಿಕೊಂಡ ಮುಖದಲ್ಲಿ ನಡುಗುತ್ತ ಅದೂ ಇದೂ ಮಾತಾಡುತ್ತ ಶುರುಮಾಡಿದ ಜ್ಯೂಲಿಯೋ ಹಠಾತ್ತನೆ ಆವೇಶ ನುಗ್ಗಿ ಬಂದವನಂತೆ; “ಸಿಗ್ನೋರಾ, ನಾನು ಬಂದ ಕಾರಣ ಏನಪ್ಪಾ ಅಂದ್ರೆ….” ಎಂದು ಹೇಳಿ ನಂತರ ಇದ್ದಕ್ಕಿದ್ದಂತೆ ಸುಮ್ಮನಾದ. “ನವಗವಳ ಕೈಹಿಡಿಯುವ ಆಸೆಯಾಗಿದೆ” ಎಂದೂ ಹೇಳಿಬಿಟ್ಟ.
ಮುಖ ಕೆಂಪೇರಿ, ‘ಸ್ವಲ್ಲ ವಿವರಿಸಿ ಹೇಳುತ್ತೇನೆ’ ಎಂದೇನೋ ಹೇಳಲು ಹೊರಟವ ಗಲಿಬಿಲಿಯಲ್ಲೇ, “ನೋಡಿ ನನ್ನ ತಾಯಿ ಒಬ್ಬಳೇ ಮನೆಯಲ್ಲಿರುತ್ತಾಳೆ ಎಂದು ನಿಮಗೂ ಗೊತ್ತಿದೆ. ಸಿಗ್ನೋರಾಳ ಒಳ್ಳೆಯ ಗುಣಗಳನ್ನು ನಾನೆಷ್ಟು ಪ್ರಶಂಸಿಸುತ್ತೇನೋ ಅಷ್ಟೆ ಸಿಗ್ನೋರಾಳ ಅಪರೂಪದ ಗುಣಗಳನ್ನು ಅವಳೂ ಪ್ರಶಂಸಿಸುತ್ತಾಳೆ. ಇಷ್ಟರಲ್ಲಿ ಅವಳು ಹುಷಾರಾಗಿರಬಹುದು ಎಂದುಕೊಂಡಿದ್ದೇನೆ. ನಿನ್ನೆಯಷ್ಟೇ ನೋಡಿದೆ ಅವಳನ್ನು… ಬಹುಶಃ ನೀವು ಮಕ್ಕಳನ್ನು ಕರಕೊಂಡು ಬಂದಾಗ ಅಂತ ಕಾಣುತ್ತದೆ…. ಅದೂ ನಿನ್ನೆ ಅಂತ ಕಾಣುತ್ತದೆ…. ಅಲ್ಲವಾ?”
“ಓಹ್…. ಹೌದೌದು…. ಈಗವಳ ಆರೋಗ್ಯ ತುಸುವಾದರೂ ಸುಧಾರಿಸಿದೆ” ಎಂದು ಆತಂಕದಲ್ಲೇ ಮಾತುಮುಗಿಸಿದ ಎರ್ಮಿನಿಯಾ ಕೋರ್ವಾಜಾ ದೃಷ್ಟಿ ಕೆಳಗಡೆ ನೆಟ್ಟಳು.
ಜ್ಯೂಲಿಯೋ ಅಕುರ್‍ಜಿ ಅವಳ ಮಾತಿನಲ್ಲಿ ಅಡಕವಾಗಿದ್ದ, ಆ ‘ತುಸುವಾದರೂ’ ಪದವನ್ನು ಗಮನಿಸಿದ. ಪುನಃ ಚರ್ಚೆಯನ್ನು ಹೇಗೆ ಪುನರಾರಂಭಿಸುವುದೆಂದು ಗೊತ್ತಾಗದೆ ಕುರ್ಚಿಯಲ್ಲಿ ಚಡಪಡಿಸತೊಡಗಿದ.
“ಹೌದು…. ಅವಳಿಗೆ ಆರಾಮಿರಲಿಲ್ಲ ಅಂತ ಗೊತ್ತಿತ್ತು. ಹಿಂದೊಮ್ಮೆ ನಾನವಳನ್ನು ಕೇಳಿದ್ದು ನಿಮಗೆ ನೆನಪಿದೆಯಾ? ದುರಾದೃಷ್ಟಕ್ಕೆ ಅದೀಗ ಮುಗಿದುಹೋದ ವಿಷಯ. ಅವಳು ಆ ದಿವಸ ನಿಮ್ಮ ಮಾವನಮನೆಯಿಂದ ತಿರುಗಿ ವಾಪಾಸಾದಾಗ ನಾನು ಮತ್ತೆ ಹಾಜರಾಗಿದ್ದೆ ಹೌದಲ್ಲವೆ? ಪಾಪ…. ಹುಡುಗಿ ಅವತ್ತು ತುಂಬಾ ನರಳುತ್ತಿದ್ದಳು!”
“ಹೌದು, ಬಹಳ ಕಷ್ಠವನ್ನೇ ಅನುಭವಿಸಿದ್ದಾಳೆ ಪಾಪ” ಎಂದು ತಲೆಯಾಡಿಸಿದ ಎರ್ಮಿನಿಯಾ ಕೋರ್ವಾಜಾ ಅವನ ಮಾತನ್ನೊಪ್ಪಿದಳು.
ಮತ್ತೆ ಪುನಃ ಕುರ್ಚಿಯಲ್ಲಿ ಕುಕ್ಕರಿಸಿದ್ದ ಜೂಲಿಯೋಗೆ ಚಡಪಡಿಕೆಯಾಯಿತು.
“ಅದೆಲ್ಲ ಹಳೇ ಸಂಗತಿ….” ಎಂದು ಪುನರುಚ್ಚರಿಸಿದ ಜೂಲಿಯೋ ಮುಂದುವರೆದು. “ಕಾಯಿಲೆಯ ಒಗ್ಗೆ ಮಾತಾಡುವಾಗೆಲ್ಲ ಬಹಳ ಬೇಜಾರಾಗುತ್ತದೆ…. ಛೇ…. ನಿಮ್ಮ ಕಷ್ಟಕಾಲದಲ್ಲಿ ನನಗೆ ಬರಲಾಗಲಿಲ್ಲವಲ್ಲ. ನನ್ನ ತಾಯಿ ಪಾಪ…. ಅವಳಿಗೂ ಹುಷಾರಿಲ್ಲ … ನಿಮಗ್ಗೊತ್ತಿರಬಹುದು.”
“ಹೌದೌದು…. ಗೊತ್ತು ಬಡಪಾಯಿ ಹಂಗಸು” ಎಂದು ಎರ್ಮಿನಿಯಾ ವ್ಯಥೆಯಿಂದ ನಿಟ್ಟುಸಿರುಬಿಟ್ಟಳು.
ಜ್ಯೂಲಿಯೋ ಉದ್ಗರಿಸಿದ; “ಈಗಾಗಲೇ ಆರುವರ್ಷಗಳಾಗಿವೆ!” ಹೀಗೆ ಯಾವು ಯಾವುದೋ ತಿರುವು ಪಡಕೊಳ್ಳುತ್ತ ಹೋದ ಸಂಭಾಷಣೆ ನಂತರ ಸುಗಮವಾಗಿ ಸಾಗಿತು. ಹೀಗೆ, ತನ್ನ ತಾಯಿಯ ಬಗ್ಗೆ, ಅವಳ ಅನಾರೋಗ್ಯದ ಬಗ್ಗೆ, ಅದರಿಂದಾಗಿ ಮನೆಯಲ್ಲಿ ತುಂಬಿಕೊಂಡಿದ್ದ ವಿಷಣ್ಣತೆ, ಕವಿದಿದ್ದ ಮಂಕು, ಅಸಾಧ್ಯ ಒಂಟಿತನದಲ್ಲೇ ವ್ಯರ್ಥವಾಗುತ್ತ ಸಾಗುತ್ತಿದ್ದ ತನ್ನ ಯೌವನದ ಬಗ್ಗೆ ಹೇಳುತ್ತ ಹೇಳುತ್ತ ತಾನು ಬಂದ ಅಸಲಿ ಕಾರಣ ತಿಳಿಸಲು ಸೂಕ್ತವಾತಾವರಣವೊಂದನ್ನು ನಿರ್ಮಿಸುತ್ತಿದ್ದೇನೆ ಎಂದವನಿಗೆ ಅರಿವಾಗಲೇ ಇಲ್ಲ. ಇವೆಲ್ಲ ವಿವರಗಳು ಇದ್ದಕ್ಕಿದ್ದಂತೆ ಸ್ವಯಂಪ್ರೇರಣೆಯಿಂದ ಅವನ ಬಾಯಿಂದ ಹೊರಬಿದ್ದವು.
ಅವನ ಮಾತನ್ನು ಕೇಳಿ ಎರ್ಮಿನಿಯಾ ಕೊರ್ವಾಜಾ ಮುಗುಳ್ನಕ್ಕು ಸಂತೋಷ ವ್ಯಕ್ತಪಡಿಸಿದರೂ ಒಂದು ಕ್ಷಣದ ಮಟ್ಟಿಗೆ ಪೇಚಿಗೆ ಸಿಕ್ಕಳು. ಅವನ ದೃಷ್ಟಿಯನ್ನು ತಪ್ಪಿಸಿ ಕೊಳ್ಳುತ್ತ ಯೊಚನಾಮಗ್ನಳಾಗಿ ಏನೋ ಮಹತ್ವದ ನಿರ್ಧಾರ ಹೇಳುವವಳ ಹಾಗೆ ಎರಡೂ ಕೈಗಳನ್ನು ಒಟ್ಟಿಗೇ ಜೋಡಿಸಿದಳು. ಆ ಕ್ಷಣದ ಮೌನದಲ್ಲಿ ಜ್ಯೂಲಿಯೋಗೆ ಅಸಹನೀಯ ವೇದನೆಯಾಯಿತು. ತನಗವಳು ಮಾರಿಯೋ ಕೋರ್ವಾಜಾನ ಬಗ್ಗೆ, ಅವಳ ತಂಗಿಯ ಮನಸ್ಥಿತಿಯ ಬಗ್ಗೆ ಹೇಳಿಯೇಬಿಡುತ್ತಾಳೆ ಎಂದು ನಿರೀಕ್ಷಿಸಿದ್ದ. ಆದರೇಕೋ ತನ್ನೊಳಗಿನ ಚಡಪಡಿಕೆಗೊಂದು ಪರಿಹಾರ ದೊರಕಿಸಿಕೊಳ್ಳುವ ನಿಟ್ಟಿನಲ್ಲಿ ತನ್ನ ಬಗ್ಗೆಯೇ ಎಲ್ಲ ಹೇಳಿಬಿಟ್ಪ. ತನ್ನ ನಿವೇದನೆಯಿಂದ ಅವಳಿಗೆ ಸಂತೋಷವಾಗಿದೆ ಎಂದಾಗಲೇ ಗೊತ್ತಾಗಿತ್ತು ಅವನಿಗೆ. ಈಗವಳ ಬಳಿ ಹೇಳಲು ಇನ್ನೇನು ಉಳಿದಿದೆ? ಎಂದೂ ಅನಿಸಿತು. ಸದ್ಯಕ್ಕಂತೂ ಅತ್ಯಂತ ಕಠಿಣ ಹಂತವೊಂದನ್ನು ದಾಟಿದ್ದ. ಈ ಮಧ್ಯೆ, ಅಗಾತಾಗೆ ಕೆಲತಿಂಗಳ ಹಿಂದಿನವರೆಗೂ ಮದುವೆ ನಿಶ್ಚಯವಾಗಿತ್ತು ಎಂಬ ಸುದ್ದಿ ತನಗೆ ಗೊತ್ತೇ ಇರಲಿಲ್ಲ ಎಂದು ನಟಿಸಬೇಕೆಂದು ಕೊಂಡಿದ್ದ. ಆದರೆ ಆ ಸುದ್ದಿಯನ್ನೇ ಉಪೇಕ್ಷೆ ಮಾಡುತ್ತ, “ಹೌದೌದು ಅದು ನನಗ್ಗೊತ್ತಿತ್ತು” ಎಂದ.
“ಬರೇ ಹುಡುಗಾಟಿಕೆ ಅವಳಿಗೆ…. ಇಂಥ ಸೂಕ್ಷ್ಮ ವಿಷಯಗಳನ್ನು ಏನಂತ ವಿವರಿಸಲಿ? ಹುಡುಗಿಯ ಹೃದಯ ಕಲಕಿಬಿಡುತ್ತವೆ. ಆದರೆ, ಕಾಲಾಂತರದಲ್ಲಿ, ಅಗಾತಾಗೂ ಅದು ಮೂರ್ಖತನದ ನಿರ್ಧಾರ, ಮರೆತುಬಿಡುವಂಥದ್ದು ಎಂದು ಮನವರಿಕೆಯಾಗುವುದಂತೂ ಖಂಡಿತ. ಅವನು ಹೀಗೆಲ್ಲ ಕೈಕೊಡಬಹುದೆಂದು ನಾನವಳಿಗೆ ಮೊದಲೇ ಸೂಚನೆ ಕೊಟ್ಟಿದ್ದೆ. ಇಷ್ಟಕ್ಕೂ, ಅವರ ಮಧ್ಯೆ ದೂರವಿದ್ದೇ ಪತ್ರವ್ಯವಹಾರ ನಡೆದದ್ದು ಬಿಟ್ಟರೆ ಬೇರೇನೂ ಇರಲಿಲ್ಲ…. ಮೊದಲು ರೋಮ್ನಿಂದ, ನಂತರ ವಿದೇಶದಿಂದ” ಎಂದು ಎರ್ಮಿನಿಯಾ ಚುರುಕಾಗಿಯೇ ಉತ್ತರಿಸಿದಳು.
ಜೂಲಿಯೋ ಅಕುರ್‍ಜಿ ಬಾಡಿದ ಮುಖದಲ್ಲೇ ಎರ್ಮಿನಿಯಾಳ ಮಾತುಗಳನ್ನು ಕೇಳಿಸಿಕೊಂಡ. ಅವನ ತುಟಿಗಳ ಮೇಲೆ ಸಣ್ಣ ನಗುವಿತ್ತು. “ನನ್ನ ಮಟ್ಟಿಗೆ ಈ ಮುರಿದುಬಿದ್ದಿರುವ ಸಂಬಂಧ ಯಾವ ರೀತಿಯಲ್ಲೂ ಅಡ್ಡಿಯುಂಟು ಮಾಡುವುದಿಲ್ಲ ಎಂದುಕೊಂಡಿದ್ದೇನೆ” ಎಂದು ಕೊನೆಗೂ ತಡವರಿಸುತ್ತ ಹೇಳಿದ.
ಈ ಮದುವೆಯ ಕುರಿತು ಅಮ್ಮನಿಗೆ ಪ್ರಸ್ತಾಪಿಸುವ ಜವಾಬ್ದಾರಿ ತನ್ನದೆಂದು ಗೊತ್ತಾಗಿದ್ದೇ ಎರ್ಮಿನಿಯಾ ಹಿರಿಹಿರಿ ಹಿಗ್ಗಿದಳು.
ಎಲ್ಲ ಮುಗಿದ ನಂತರ, ಅವಳ ಅಮ್ಮ ಅಗಾತಾಳೊಂದಿಗೆ ಮಾತಾಡುವವಳಿದ್ದಳು. ಕೆಲದಿನಗಳಲ್ಲಿ ಅವಳ ಪ್ರತಿಕ್ರಿಯೆ ಸಿಗುವುದು ಮತ್ತು ಅಲ್ಲೀತನಕ ತಾಳ್ಮೆಯಿಂದಿರುವುದು ಎಂದು ಇಬ್ಬರೂ ನಿರ್ಧರಿಸಿಕೊಂಡರು. ಆದರೆ ಮನೆಯಿಂದ ಹೊರಬಿದ್ದ ಜ್ಯೂಲಿಯೋಗೆ ಯಾಕೋ ಮನಸ್ಸು ಸಿಟ್ಚಿನಿಂದ ಕೆರಳಿಬಿಟ್ಟಂತೆ, ಭಾಸವಾಯಿತು. ಆಳದಲ್ಲಿ ನಿರುತ್ಸಾಹವುಂಟಾದ ಹಾಗೆ ಅನಿಸಿ ತನ್ನ ಮೇಲೆ ಜಿಗುಪ್ಸೆ ಹುಟ್ಟಿತು.
ಯಾಕಿರಬಹುದು?
-೮-
ಅಗಾತಾ, ಮಲಗಿದ್ದಲ್ಲಿಂದಲೇ ತನ್ನ ಕೈಗಳನ್ನು ನೋಡಿಕೊಂಡಳು. ಇತ್ತೀಚೆಗೆ ಖಾಯಿಲೆಯಿಂದಾಗಿ ಸೊರಗಿಹೋಗಿದ್ದಳು. ಬಿಳಿಚಿಕೊಂಡಿದ್ದ ಅವಳ ಮೃದುವಾದ ಚರ್ಮದಲ್ಲಿ ನೀಲಿ ನರಗಳು ಗೋಚರಿಸುತ್ತಿದ್ದವು.
ಹಗಲಿನ ಶುಭ್ರ ಬೆಳಕು ಹಸಿರುಗಾಜಿನ ಕೋಣೆಯೊಳಗೆ ಬಂದು ಬೀಳುತ್ತಿತ್ತು. ಅಲ್ಲಿ, ಮೂಲೆಯಲ್ಲಿದ್ದ ಬೀರುವಿನ ಪಾರದರ್ಶಕ ಪರದೆಯ ಆಚೆ ಕತ್ತಲು ಕರಗುತ್ತಿತ್ತು.
ಸಿಗ್ನೋರಾ ಅಮಾಲಿಯಾ ಆಗಷ್ಟೇ ಕೋಣೆಯಿಂದ ಹೊರಹೋಗಿದ್ದಳು. ಅನಿರೀಕ್ಷಿತವಾಗಿ ನಡೆದ ಚಿಕ್ಕ ಮಾತುಕತೆಯಿಂದ ಅಗಾತಾಳ ಹುಬ್ಬು ಗಂಟಿಕ್ಕಿದ್ದು, ಈಗ ನಿಧಾನ ಸಡಿಲಾಗತೊಡಗಿತ್ತು. ಮೊದಮೊದಲು ಹಿಂಜರಿಕೆಯಿಂದಲೇ ಮಾತನ್ನಾರಂಭಿಸಿದ ಅವಳ ತಾಯಿ ನಂತರ ಬಹಳ ಆಸಕ್ತಿಯಿಂದ ಜ್ಯೂಲಿಯೋ ಅಕುರ್‍ಜಿಯ ಬಗ್ಗೆ ತಿಳಿಸುತ್ತ ಹೋದಳು. ಇದಕ್ಕೂ ಹಿಂದೆ, ಅಗಾತಾ, ಅವನತ್ತ ಯಾವ ಗಮನವನ್ನೂ ಹರಿಸಿರಲಿಲ್ಲ. ಈಗ ಅವನಿಗೆ ಎಲ್ಲವೂ ತಿಳಿದಿದ್ದೇ ಅವಳ ಕೈಯನ್ನು ಕೇಳುತ್ತಿದ್ದಾನೆಯೆ? ಅವಳು ಮದುವೆಗೆ ಒಪ್ಪಿದರೆ ತಾಯಿ ಮತ್ತು ಎರ್ಮಿನಿಯಾ ಸಂತೋಷಪಡುವರೆ? ಈಗ ಮತ್ತೊಬ್ಬನನ್ನು ಪ್ರೇಮಿಸುವುದು ದುಸ್ಸಾಧ್ಯ ಎಂಬ ಸಂಗತಿ ಅವರಿಗೆ ಗೊತ್ತೇ ಇಲ್ಲವೆ? ಅವಳ ಮಟ್ಟಿಗೆ ಎಲ್ಲವೂ ಮುಗಿದುಹೋದ ಅಧ್ಯಾಯ ಅಲ್ಲವೆ!
ತಟ್ಟನೆ, “ಸಾಧ್ಯವಿಲ್ಲ ಅಂತ ಹೇಳು…. ಅವನಿಗೆ!” ಎಂದಳು. ಆದರೆ ನಂತರದ ಕ್ಷಣವೇ ಎಲ್ಲಿ ತಾನು ಮತ್ತೆ ಆ ‘ಇನ್ನೊಬ್ಬ’ನ ಕುರಿತೇ ಆಲೋಚಿಸುತ್ತಿದ್ದೇನೆ ಎಂದು ತಾಯಿ ಸಂಶಯ ಪಟ್ಟರೆ ಎಂದುಕೊಂಡು ತನ್ನ ಮಾತನ್ನು ತಿದ್ದಿ ಕೊಂಡಳು.
“ಇಲ್ಲ…. ಖಂಡಿತ ಇಲ್ಲ…. ನೋಡಿ, ನೀವು ಏನು ಬೇಕಾದ್ರೂ ಮಾಡ್ಕೊಳ್ಳಿ…. ಬೇಕಾದ್ರೆ ನನಗೆ ಒಪ್ಪಿಗೆ ಇದೆ ಅಂತಲೂ ಅವನಿಗೆ ತಿಳಿಸಿಬಿಡಬಹುದು” ಎಂದು ಹೇಳುತ್ತ ಚಾದರನ್ನು ಭುಜದ ಮೇಲೆ ಎಳೆದುಕೊಂಡು ಬೆನ್ನು ತಿರುಗಿಸಿದಳು.
ಆದರೆ, ಅವಳ ತಾಯಿ ಮಾತ್ರ ತುಸು ಕಟುವಾಗಿಯೇ ಗದರಿಸಿದಳು:
“ನೋಡು, ಈ ರೀತಿ ಮಾಡಬಾರದು. ಹೀಗೆಲ್ಲ ಹೇಳುವುದು ತಪ್ಪಾಗುತ್ತದೆ. ಅಯ್ಯೋ ದೇವರೇ! ನಿನ್ನ ಜೀವನದ ಪ್ರಶ್ನೆ ಇದು. ಸ್ವಲ್ಪ ಯೋಚನೆ ಮಾಡು. ಚೆನ್ನಾಗಿ ಈ ಬಗ್ಗೆ ಆಲೋಚನೆ ಮಾಡಿದ ನಂತರ ನಿನ್ನ ಉತ್ತರ ಏನಂತ ಹೇಳು…. ನಾವವನಿಗೆ ಹೇಳಿಬಿಡೋಣ…. ನಮ್ಮ ಪ್ರೀತಿ ನಮ್ಮ ಪಾಲಿಗೆ ಬಂದೇ ಬರುತ್ತದೆ. ಸಂಶಯವೇ ಬೇಡ.”
“ಇಲ್ಲ…. ಅದು ಬರುವುದೇ ಇಲ್ಲ…. ಬರಲು ಸಾಧೃವೂ ಇಲ್ಲ”” ಎಂದನಿಸಿತು ಅಗಾತಾಗೆ. ಇದೇ ಹೊತ್ತಿಗೆ, ತನಗುಂಟಾದ ಖಿನ್ನತೆಯ ಜತೆ ತಾಯಿ ವಿವೇಚನೆಯಿಂದ ಕೊಟ್ಟ ಸಲಹೆ ಮತ್ತು ತನ್ನದೇ ಸದ್ಯದ ಸ್ಥಿತಿಯನ್ನು ಮನಸ್ಸಲ್ಲೇ ತೂಗಿ ಪರೀಕ್ಷಿಸಿದಳು. ಜ್ಯೂಲಿಯೋ ಅಕುರ್‍ಜಿ ಇನ್ನೂ ಯುವಕ. ಮೃದುಸ್ವಭಾವದವನು; ಶ್ರೀಮಂತ – ಅಲ್ಲದೆ, ಅವಳೀಗಾಗಲೆ ತನ್ನ ಯೌವನಕ್ಕಿಂತ ಎಷ್ಟೋ ವರ್ಷ ಬೌದ್ಧಿಕವಾಗಿ ಮುಂದಿದ್ದಳು ಕೂಡ.
“ಸರಿ ಹಾಗಾದರೆ… ನೀವೆಲ್ಲ ಏನಂತ ನಿರ್ಧರಿಸಿದಿರಿ?” ಆ ಸಂಜೆ ಅಗಾತಾ ತನ್ನ ತಾಯಿಯನ್ನು ಕೇಳಿದಳು.
“ಏನೂ ಇಲ್ಲ…. ನಿನಗೆ ಹೇಳಿದ್ದೆನಲ್ಲ…. ನೀನೇನು ಯೋಚನೆ ಮಾಡಿದ್ದೀ?”
“ಹೌದು…. ನನಗೆ ಒಪ್ಪಿಗೆಯಿದೆ” ಎಂದಳು ಅಗಾತಾ.
ಡೊನ್ನಾ ಅಮಾಲಿಯಾ ತುಸು ಭಾವುಕಳಾಗಿ ಮಗಳನ್ನು ಚುಂಬಿಸಿದಳು.
ಮಾರನೇದಿನ, ಸಂಜೆ, ಜೂಲಿಯೋ ಅಕುರ್‍ಜಿ ಮೊಟ್ಟಮೊದಲಬಾರಿ, ಸಾರ್‍ನಿ ಕುಟುಂಬ ದವರ ಮನೆಗೆ ಹೋದ. ಪರಸ್ಪರ ಪರಿಚಯ ಮಾಡಿಕೊಳ್ಳುವಾಗ, ಎರ್ಮಿನಿಯಾ ಕೋರ್ವಾಜಾ ತನ್ನೆರಡು ಮಕ್ಕಳ ಜತೆ ಅಲ್ಲಿದ್ದಳು. ಕುಳ್ಳಗೆ ಬಾಗಿದ ಬೆನ್ನಿನಲ್ಲಿ ಅಗಾತಾಳ ಮುದುಕಿ ಆಂಟಿಯೂ ಇದ್ದಳು. ಅವಳ ಕಣ್ಣುಗಳಿಂದ ಯಾವಾಗಲೂ ನೀರು ಸುರಿಯುತ್ತಿತ್ತು. ಹಳದಿಗೆ ತಿರುಗಿದ ಅವಳ ಚರ್ಮ ನೆರಿಗೆಗಟ್ಟಿತ್ತು. ಮಗಳು ಆಂಟೋನಿಯಾ ಜತೆಗೆ, ಕಟ್ಟಿಗೆಯಿಂದ ಮಾಡಲ್ಪಟ್ಟಿದ್ದಾಳೋ ಎಂದನಿಸುವ ಅವರ ಕೆಲಸದಾಕೆಯೂ ಅಲ್ಲಿದ್ದಳು. ಯಾವತ್ತೂ ಬಾಯಿ ತೆರೆಯದ ಅವಳು ತನ್ನ ತಾಯಿ ಶಬ್ದಗಳಿಗೆ ಹೆಣಗಾಡುತ್ತಿರುವಾಗ ವಾಕ್ಯದ ಕೊನೇಪದವನ್ನಷ್ಟೇ ಹೇಳಿ ಅದನ್ನು ಕೊನೆಗೊಳಿಸುತ್ತಿದ್ದಳು. ತಾಯಿ-ಮಗಳು ಸಂದರ್ಭಕ್ಕೆ ಚೂರೂ ಒಗ್ಗದ ಬಟ್ಟೆ ತೊಟ್ಟಿದ್ದರು. ಅದು ಅವರಿಗೆ ಆತಂಕ ಕಸಿವಿಸಿಯುಂಟುಮಾಡುತ್ತಿತ್ತಾದರೂ ಅವರಿಬ್ಬರಿಗೂ ಅಗಾತಾಳ ಮೇಲಿನಿಂದ ದೃಷ್ಟಿತೆಗೆಯಲಾಗಲೇ ಇಲ್ಲ.
ಡ್ರಾಯಿಂಗ್‍ರೂಂ ಪ್ರಕಾಶಮಾನವಾಗಿತ್ತು. ತಾಜಾ ಹೂಗಳನ್ನು ತೆಳುವಾಗಿ ಹರಡಲಾಗಿತ್ತು. ಹಗಲುಗನಸೋ ಎಂಬಂತೆ ಅಗಾತಾ ಕಳೆಗುಂದಿದ ಮುಖದಲ್ಲಿ ಒಮ್ಮೆ ತಾಯಿಯತ್ತ, ಒಮ್ಮೆ ಅಕ್ಕನತ್ತ ನೋಡಿದಳು. ಜೂಲಿಯೋ ಅಕುರ್‍ಜಿ ಮಾತಾಡುವುದನ್ನು ಇಬ್ಬರೂ ಕಿವಿಗೊಟ್ಜು ಆಲಿಸುತ್ತಿದ್ದರು. ಅವನೇನು ಹೇಳುತ್ತಿದ್ದಾನೆ ಎಂದು ಕೇಳದೆ ಬಹುಶಃ ಸಮ್ಮತಿ ಸೂಚಿಸುತ್ತಿದ್ದಾರೋ ಎಂಬಂತೆ ಆಗಾಗ ಇಬ್ಬರೂ ತಲೆಯಾಡಿಸುತ್ತ ಮುಗುಳ್ನಗುತ್ತಿದ್ದರು. ಅತ್ತ ಮುದಿ ಆಂಟಿ ಮತ್ತವಳ ಮಗಳು ಉಳಿದ ನಾಲ್ವರನ್ನೂ ಗಮನವಿಟ್ಟು ನೋಡುತ್ತ ತಮಗೆಲ್ಲ ಅರ್ಥವಾದವರಂತೆ ನಿಟ್ಟುಸಿರುಬಿಡುತ್ತಿದ್ದರು.
ಜೂಲಿಯೋ ಅಕುರ್‍ಜಿ ಪೇಚೆಗೆ ಸಿಕ್ಕಿಕೊಳ್ಳದಿರಲು ಹರಸಾಹಸ ಪಡುತ್ತಿದ್ದ. ಮೊದಲೇ ತೀರ್ಮಾನಿಸಿಕೊಂಡವರಂತೆ, ಡೊನ್ನಾ ಅಮಾಲಿಯಾ ಮತ್ತವಳ ಹಿರಿಮಗಳು ಅವನ ಸಹಾಯಕ್ಕೆ ನಿಂತಿದ್ದರು. ಯಾವುದೋ ವಿಷಯದಿಂದ ಮಾತನ್ನು ಆರಂಭಿಸಿದ ಅವನು ಯಥೇಚ್ಛ ಮಾತಾಡಿದ. ನಡುನಡುವೆ ವಿವೇಕವುಳ್ಳ ಮಾತುಗಳನ್ನೂ ಆಡಿದ; ಸ್ವಲ್ಪವೂ ಹಮ್ಮು ಬಿಮ್ಮು ಗಳನ್ನು ಪ್ರದರ್ಶಿಸದೆ, ಆಗಲೇ ಬದುಕಿನೆಲ್ಲ ಏಳುಬೀಳು ಕಷ್ಟನಷ್ಟಗಳನ್ನು ಎದುರಿಸಿ ದಣಿದ ಅನುಭವಿಯಂತೆ ನಿರರ್ಗಳ ಮಾತುಗಳನ್ನು ಹರಿಯಬಿಟ್ಟ. ನಂತರ ತನ್ನ ತಾಯಿಯ ಕುರಿತು ಮಾತಾಡತೊಡಗಿದ. ಅಗಾತಾಳೆದುರು ಬಲು ಹಿಗ್ಗಿನಿಂದಲೇ ತನ್ನ ಮಾತೃಪ್ರೇಮವನ್ನು ಅರುಹಿದ. ತನ್ನ ಮುದ್ದಿನ ತಾಯಿಯ ಅನಾರೋಗ್ಯದಿಂದ ತಾನೆಷ್ಟು ಖಿನ್ನನಾಗಿದ್ದೇನೆ ಎಂದೂ ಸೂಕ್ಷ್ಮವಾಗಿ ಸೂಚಿಸಿದ.
ಅಗಾತಾಳತ್ತ ತಿರುಗಿ, ‘ಆಮೇಲೆ, ನೀನೇ ಅವಳನ್ನು ಭೇಟಿಯಾಗುತ್ತಿ ಬಿಡು’ ಎಂದು ಮಾತು ಮುಗಿಸಿದ.
ಅಗಾತಾ ಒಂದು ಕ್ಷಣ ಉಸಿರು ಬಿಗಿಹಿಡಿದವಳು ಅವನ ಕಣ್ತಪ್ಪಿಸುತ್ತ ನೆಲ ದಿಟ್ಟಿಸಿದಳು. ಸಂಭಾಷಣೆ ಅಲ್ಲಿಗೆ ನಿಂತಿತು. ಈಗ ಜೂಲಿಯೋ ಅಕುರ್‍ಜಿ ಕಣ್ಣುಗಳು ಕೋಣೆಯನ್ನೇ ಸುತ್ತುತ್ತ ತೆರೆದೇ ಇಟ್ಟಿದ್ದ ಪಿಯಾನೋದ ಮೇಲೆ ನೆಟ್ಟವು.
“ತುಂಬಾನೇ ನುಡಿಸುತ್ತಿ ಅಂತ ಕಾಣುತ್ತದೆ ಅಲ್ವಾ?” ಅವನೀಗ ಅಗಾತಾಳನ್ನು ಕೇಳಿದ.
“ಎಲ್ಲೋ ಅಪರೂಪಕ್ಕೊಮ್ಮೆ…. ಅಷ್ಟೆ.” ಚಿಕ್ಕಸ್ವರದಲ್ಲಿ ಅವಳು ಹಿಂಜರಿಕೆಯಿಂದಲೇ ಉತ್ತರಿಸಿದಳು.
“ಸರಿ…. ಈಗ ಏನಾದರೂ ನುಡಿಸು….” ಎಂದು ಎರ್ಮಿನಿಯಾ ಹೇಳಿದ್ದೇ ಮುದುಕಿ ಮತ್ತವಳ ಮಗಳೂ ಹಾಡುವಂತೆ ಒತ್ತಾಯಿಸುತ್ತ ತಮ್ಮ ದನಿಗೂಡಿಸಿದರು. ಡೊನ್ನಾ ಅಮಾಲಿಯಾ ಮಗಳತ್ತ ನೋಡಿದಳು. ತುಸು ಕಟುವಾಗಿಯೇ ನಿರಾಕರಿಸಿದ ಅವಳ ಗಲ್ಲ ನಾಚಿಕೆಯಿಂದ ಕೆಂಪೇರಿತ್ತು –
“ನಿನಗೇನೂ ಅಭ್ಯಂತರವಿಲ್ಲ. ಎಂದಾದರೆ… ದಯವಿಟ್ಟು ನುಡಿಸು” ಜ್ಯೂಲಿಯೋ ಮೆಲ್ಲನೆ ಒತ್ತಾಯಿಸಿದ.
“ನನಗೆ ಚೆನ್ನಾಗಿ ನುಡಿಸಲು ಬರುವುದಿಲ್ಲ…. ನೀವೇ ಕೇಳಿ ಬೇಕಾದರೆ” ಎಂದು ಅವನತ್ತ ನಿಷ್ಕರುಣೆಯ ನೋಟ ಬೀರುತ್ತ ಕೂತಲ್ಲಿಂದೆದ್ದಳು.
ಅವಳು ಪಿಯಾನೋ ನುಡಿಸುವಷ್ಟೂ ಹೊತ್ತು ಆತ ಒಮ್ಮೆಯೂ ಅವಳ ಮೇಲಿನ ದೃಷ್ಟಿ ಕೀಳಲಿಲ್ಲ. ಅಂದವಾಗಿ ಬಾಚಿಕೊಂಡ ಅವಳ ಸುಂದರ ಕೂದಲರಾಶಿ, ಕೊರಳಿನ ಹಿಂಭಾಗ, ಅವಳ ಭುಜಗಳು, ಅವಳ ತೆಳ್ಳಗಿನ ನಡು…. ಎಲ್ಲವೂ ಎಷ್ಟೊಂದು ಚೆಂದ, ಆರಾಧನೀಯ! ಆ ಪುಣ್ಯಾತ್ಮ ಇವಳನ್ನು ತಿರಸ್ಕರಿಸಿಬಿಟ್ಟನಲ್ಲ! ಯಾಕೆ ತಿರಸ್ಕರಿಸಿರಬಹುದು ? ಈಗವಳು ಯಾವುದೋ ಹಳೇ ರಾಗವನ್ನು ಬಾರಿಸುತ್ತಿರುವುದನ್ನು ಗಮನಿಸಿದ. ಯಾರಿಗ್ಗೊತ್ತು? ಬಹುಶಃ ಮಾರಿಯೋ ಕೋರ್ವಾಜಾ ಕೂಡ ಆಕೆ ಇದೇ ಕೈಗಳಿಂದ ಪಿಯಾನೋ ನುಡಿಸುತ್ತಿದ್ದುದ್ದನ್ನು ಕೇಳಿರಬೇಕು! ಈ ಪಿಯಾನೋ ಅವನೇ ಕೊಟ್ಟ ಉಡುಗೊರೆಯೂ ಆಗಿರಬಹುದು. ಈ ಕ್ಷಣ ಅವಳ ಮನಸ್ಸಲ್ಲಿ ಏನು ನಡೆಯುತ್ತಿರಬಹುದು? ಎಂದೆಲ್ಲ ಯೋಚಿಸಿದ.
ಅಗಾತಾ, ನುಡಿಸುವುದನ್ನು ಮುಗಿಸಿದಾಗ, ಜೂಲಿಯೋ ಮನಸ್ಸು ಕ್ಷೋಭೆಗೊಂಡಿತ್ತು – ಆದರೂ ನುಡಿಸಿದವಳನ್ನು ಶ್ಲಾಘಿಸುತ್ತ, ಸಂಗೀತದ ಕುರಿತು ಮಾತಾಡಿದ….
“ನನಗೆ ನುಡಿಸಲು ಗೊತ್ತಿದ್ದಲ್ಲಿ ಬಹುಶಃ ಬದುಕಿನಿಂದ ನಾನು ಇನ್ನೇನನ್ನೂ ಅಪೇಕ್ಷಿಸುತ್ತಿರಲಿಲ್ಲ. ಸಂಗೀತದಿಂದ ಎಲ್ಲವನ್ನೂ ಮರೆತುಬಿಡಬಹುದು….” ಎಂದ.
ಈ ಕೊನೇ ಮಾತನ್ನು ಹೇಳುತ್ತ, ಹೇಳುತ್ತ ಅವನ ಮುಖ ಕೆಂಪೇರಿತು. ಇದ್ದಕಿದ್ದ ಹಾಗೆ, ಇತ್ತೀಚಿನ ದಿನಗಳಲ್ಲಿ, ಅಗಾತಾ ದಿನದ ಬಹುಪಾಲು ಹೊತ್ತು, ಪಿಯಾನೋ ಬಾರಿಸುವುದರಲ್ಲೇ ಕಳೆಯುತ್ತಿರುವುದು ಅವನಿಗೆ ನೆನಪಾಯಿತು.
ಮತ್ತು, ಸಂಭಾಷಣೆ ಅಲ್ಲಿಗೇ ಮುಗಿದು, ಸ್ವಲ್ಪಹೊತ್ತಿನಲ್ಲಿ ಆತ ಹೊರಟುಹೋದ.
-೯-
“ಪ್ರೀತಿಸ್ತಾಳೆ…. ಕ್ರಮೇಣ ನನ್ನನ್ನು ಪ್ರೀತಿಸಿಯೇ ಪ್ರೀತಿಸ್ತಾಳೆ!” ಎಂದು ತನಗೆ ತಾನೇ ಹೇಳಿಕೊಳ್ಳುತ್ತ ಮದುವೆಯಾಗಲಿರುವವಳ ಮನೆಯಿಂದ ಹೊರನಡೆದ.
ಕ್ರಮೇಣ ಅವಳನ್ನು ಗೆಲ್ಲಬಲ್ಲೆ, ಮೌನದಲ್ಲೇ ಅವಳ ಹೃದಯವನ್ನು ಮೆಲ್ಲ ಮೆಲ್ಲ ಆಕ್ರಮಿಸಬಲ್ಲೆ ಎಂದುಕೊಂಡ. ಅವಳ ಆಳದ ಬಯಕೆಯ ಕುರುಹುಗಳನ್ನೂ ಅವಳ ತುಟಿ ಕಣ್ಣುಗಳಲ್ಲಿ ಅರಸತೊಡಗಿದ. ಅವಳ ಭಾವನೆಗಳಿಗೆ ತುಸುವೂ ನೋವಾಗದ ಹಾಗೆ, ಒಳಗಡೆ ಬಚ್ಚಿಟ್ಟುಕೊಂಡ ರಹಸ್ಯಗಳ ಒಳಹೊಕ್ಕು ನೋಡಲು ತುಸುವೂ ಪ್ರಯತ್ನಿಸದೆ ಅವಳೆದುರು ಬಗ್ಗಿನಡೆಯತೊಡಗಿದ. ಬಿಳಿಚಿ, ಬಾಡಿಹೋದ ಆ ಮುಖವನ್ನು ತನ್ನ ಪ್ರೀತಿ ಉತ್ಸಾಹಗಳಿಂದಲೇ ಮತ್ತೆ ಹಿಂದಿನ ಹಾಗೆ ಉಲ್ಲಾಸದಿಂದ, ಕಾಂತಿಯಿಂದ ಕ್ರಮೇಣ ಬೆಳಗುವಂತೆ ಮಾಡುತ್ತೇನೆ ಎಂದುಕೊಂಡ. ಅವಳನ್ನು ಗೆದ್ದೇ ತೀರುತ್ತೇನೆ ಎಂದು ನಿರ್ಧರಿಸಿಕೊಂಡ.
ಸದ್ಯಕ್ಕೆ ತಾನೀಗ ತಾಳ್ಮೆಯಿಂದಿರಬೇಕು. ಅವಳ ಹೃದಯದ ಮೇಲೆ ಕೋರ್ವಾಜಾ ಮೂಡಿಸಿಹೋದ ಛಾಪನ್ನು ತನ್ನ ಪ್ರೀತಿ, ಆರೈಕೆಯಿಂದಲಾದರೂ ಅಳಿಸಿಹಾಕುವೆ ಎಂದೆಲ್ಲ ಅಂದುಕೊಳ್ಳತೊಡಗಿದ.
ಅಗಾತಾಳ ಈ ಇರಿಯುವ ಮೌನ ಅವನನ್ನು ಯಾವಾಗಲೂ ಬಾಧಿಸುತ್ತಿತ್ತು; ಒಳಗೊಳಗೇ ನರಳುತ್ತಿದ್ದ, ಇಷ್ಟಾಗಿಯೂ ಮುಖ ಸೆಟೆದುಕೊಂಡು ಮೌನಿಯಾಗಿದ್ದ. ಅವಳನ್ನು ಸುಮ್ಮನೆ ಅವಳ ಪಾಡಿಗೆ ಬಿಟ್ಟು ಬಿಡುತ್ತಿದ್ದ.
ಹಿಂದೊಮ್ಮೆ, ಅವಳ ಅಕ್ಕನಲ್ಲಿ ನಿವೇದಿಸಿಕೊಂಡಾಗ ಹುಟ್ಟಿಕೊಂಡಿದ್ದ ಸಂಕೋಚ ಈಗ ಈ ಮೊದಲಸಂಜೆ, ಅಗಾತಾಳ ಉಪಸ್ಥಿತಿಯಲ್ಲಿ ಅವನಿಗೆ ಅನುಭವವಾಗಲೇ ಇಲ್ಲ. ಅಗಾತಾ ಸ್ವಾಗತಿಸಿದ ರೀತಿಯಲ್ಲೇ ಅವಳ ಈ ಸಂಬಂಧವನ್ನೂ ಒಪ್ಪಿಕೊಳ್ಳುವಂತೆ ಎಲ್ಲರೂ ಹೇಗೆ ಅವಳನ್ನು ಒಲಿಸಿರಬಹುದು ಮತ್ತು ತಾನವಳನ್ನು ಸಾಧ್ಯವಾದಷ್ಟು ಬೇಗ ಒಲಿಸಿಕೊಳ್ಳ ಬೇಕಾದರೆ ಯಾವ ಹಾದಿ ಆಯ್ದು ಕೊಳ್ಳಬೇಕು ಎಂದೆಲ್ಲ ಮನಸ್ಸಲ್ಲೇ ತರ್ಕಿಸಿದ. ಆದರೆ, ಆತ ಈ ನಿಟ್ಟಿನಲ್ಲಿ ಹೆಚ್ಚು ಹೆಚ್ಚು ಯೋಚಿಸುತ್ತ ಹೋದಹಾಗೆ, ಒಳಗೊಳಗೇ ಕುಸಿಯುತ್ತ ಹೋದ; ನರಳಿದ. ಮಾರಿಯೋ ಕೋರ್ವಾಜಾನೆಡೆಗೆ ಅವನಿಗಿದ್ದ ದ್ವೇಷ ಹೃದಯವನ್ನು ಹಿಂಡಿ ಹಿಪ್ಪೆ ಮಾಡಿಸುವಷ್ಟು ತೀವ್ರವಾಗಿತು. ತಾನೀಗ ತನ್ನ ಪ್ರೇಮದಿಂದ ಮುತ್ತಿಗೆ ಹಾಕಲು ಹೊರಟ ಅಭೇದ್ಯ ಕೋಟೆಗೆ ಮಾರಿಯೋ ಕೋರ್ವಾಜಾ ಅಧಿಪತಿಯಾಗೇನೂ ಉಳಿಯದಿದ್ದರೂ ಅದನ್ನು ಮೌನವಾಗಿ, ಭೇದಿಸಲಸಾಧ್ಯವಾಗುವಂತೆ ಮಾಡಿದ್ದಂತೂ ಅವನೇ ತಾನೆ! ಈಗ, ಜೂಲಿಯೋ, ನಿತ್ಯ ಬೆಳಿಗ್ಗೆ ಅಗಾತಾ ಹಾಸಿಗೆಯಿಂದೇಳುವ ಮುಂಚೆಯೇ ಹೂಗಳನ್ನು ಕಳಿಸಿದ. ಬಿಡಿಬಿಡಿ ಗುಲಾಬಿಗಳ ದೊಡ್ಡ ಗುಚ್ಛವನ್ನೇ ಕಳಿಸಿದ; ರೇಷ್ಮೆಯ ಕರವಸ್ತ್ರವನ್ನೂ ಕಳಿಸಿದ; ಪರಿಮಳ ಭರಿತ ಹಳದಿಹೂಗಳನ್ನು ಕಳಿಸಿದ; ಇನ್ನೊಮ್ಮೆ ವಿಚಿತ್ರ ಹೂಗಳಿಂದ ಅಲಂಕೃತಗೊಂಡ ರೈತರು ಧರಿಸುವ ದೊಡ್ಡ ಹುಲ್ಲು ಟೊಪ್ಪಿಗೆ ಕಳಿಸಿದ; ಇದಾದ ನಂತರ ಅವಳಿಗೆ ಉಡುಗೊರೆಗಳನ್ನು ಕಳಿಸತೊಡಗಿದ: ಉಂಗುರ, ಸರ, ಕೈಬಳೆ…. ಹೀಗೆ ಅವಳು ಆ ಉಡುಗೊರೆಗಳನ್ನೆಲ್ಲ ಕೃತಜ್ಞತೆ, ಪ್ರಶಂಸೆ ಅಥವಾ ಯಾವ ನೈಜಭಾವನೆಯನ್ನೇ ವ್ಯಕ್ತಪಡಿಸದೆ ಒಂದು ರೀತಿಯ ದಿಗ್ಭ್ರಮೆಯಲ್ಲೇ
ಸ್ವೀಕರಿಸುತ್ತಿದ್ದಳು. ಕಂಪಿಸುವ ಕೈಗಳಿಂದ ಅವನ್ನೆಲ್ಲ ಅತ್ಯಂತ ಬೆಲೆಬಾಳುವ ಪೆಟ್ಟಿಗೆಗಳಿಂದ ಸುಮ್ಮನೆ ಇಸಕೊಳ್ಳುತ್ತಿದ್ದಳೇ ಹೊರತು ಇದಕ್ಕೆ ಪ್ರತಿಯಾಗಿ ಜೂಲಿಯೋನನ್ನು ಹೊಗಳುತ್ತಿದ್ದುದು, ಆಶ್ಚರ್ಯವ್ಯಕ್ತಪಡಿಸುತ್ತಿದ್ದುದೆಲ್ಲ ಅವಳ ತಾಯಿಯೆ. ಅವನನ್ನು ಅಗಾತಾ ಇಷ್ಟಾಗಿಯೂ ಔಪಚಾರಿಕವಾಗಿಯೇ ಸಂಬೋಧಿಸುತ್ತಿದ್ದಳು.
“ಈ ರೀತಿ ಥ್ಯಾಂಕ್ಸ್ ಹೇಳುವುದಾದರೆ ಅದನ್ನು ವ್ಯಕ್ತಪಡಿಸುವುದೇ ಬೇಡ” ಎಂದು ಕಡೆಗೂ ಕಷ್ಟಪಟ್ಟು ಹೇಳಿಯೇಬಿಟ್ಟ.
ಅವಳು ತನ್ನ ತಲೆಯನ್ನು ತುಸುಬಾಗಿಸಿ ಹೌದೋ ಅಲ್ಲವೋ ಎನ್ನುವಂತೆ ನಕ್ಕು, “ಸರಿ…. ಗೆಳೆಯಾ… ಹಾಗಾದರೆ ನಿನಗೆ ತುಂಬಾ ಥ್ಯಾಂಕ್ಸ್” ಎಂದು ನಕ್ಕಳು.
“ಹಾಂ…. ಈಗ ಸರಿಯಾಗಿದೆ” ಎಂದ ಜ್ಯೂಲಿಯೋ ನಿರುತ್ಸಾಹದಿಂದ. ಹೀಗೆ ಅವಳನ್ನು ಒತ್ತಾಯದಿಂದ ಒಪ್ಪಿಸಿದ್ದು ಅವನಿಗೆ ಸ್ವಲ್ಪವೂ ಇಷ್ಟವಾಗಲಿಲ್ಲ.
ಈ ನಡುವೆ, ಮನೆಯ ಮೇಲ್ಮಹಡಿಯನ್ನು ಸಜ್ಜುಗೊಳಿಸುವ ಕೆಲಸದಲ್ಲಿ ಚುರುಕಿನಿಂದ ಓಡಾಡಿದ. ಖರೀದಿಗೆಂದು ಹೊರಹೋದಾಗೆಲ್ಲ ಅವನಿಗೆ ಅಗಾತಾ ಮತ್ತು ಡೊನ್ನಾ ಅಮಾಲಿಯಾ ಜತೆ ಕೊಡುತ್ತಿದ್ದರು. ಅವಳ ಕಣ್ಣುಗಳು ಯಾವುದೇ ವಸ್ತುವಿನ ಮೇಲೆ ಕ್ಷಣಮಾತ್ರ ಬಿದ್ದರೂ ಸಾಕು, ಅದನ್ನಾತ ತಕ್ಷಣ ಖರೀದಿಸಿಬಿಡುತ್ತಿದ್ದ.
ತನ್ನ ತಾಯಿಯೊಂದಿಗೆ ಅಗಾತಾ, ಹಾಸಿಗೆ ಹಿಡಿದಿರುವ ಮುದುಕಿಯನ್ನು ಭೇಟಿಯಾಗಲು, ಹಾಗೇ, ತನ್ನನ್ನು ಮದುಮಗಳಾಗಿ ಸ್ವಾಗತಿಸಲಿರುವ ಹೊಸಮನೆಯನ್ನು ನೋಡಲೆಂದು ಬಂದಳು. ಮನೆಯೊಳಗಡೆ ಕೆಲಸದಾಳುಗಳು ಅತ್ತಿತ್ತ ಓಡಾಡುತ್ತ ದೊಡ್ಡ ಹುಯಿಲೆಬ್ಬಿಸಿದ್ದರು. ಅಸ್ವಸ್ಥಳಾಗಿ ಮಲಗಿದ್ದ ಮುದುಕಿಯ ಕೋಣೆಯಲ್ಲಿ ಮಾತ್ರ ಮೌನ ತುಂಬಿಕೊಂಡಿತ್ತು. ತನ್ನ ಭಾವೀ ಸೊಸೆಯನ್ನು ನಿಷ್ಠುರವಾಗಿ ಸಾದಗತಿಸಿದರೆ ಏನು ಗತಿ ಎಂದುಕೊಂಡು ಜೂಲಿಯೋ ಆ ದಿವಸ ತಾನೇ ಖುದ್ದು ಉಪಸ್ಥಿತನಿದ್ದು ತಾಯಿಯನ್ನೇ ದಿಟ್ಟಿಸುತ್ತಿದ್ದ.
ಕಳೆದ ಕೆಲದಿನಗಳಿಂದ ತನ್ನ ತಾಯಿಯಲ್ಲಿ ಒಂದು ಗಂಭೀರ ಬದಲಾವಣೆಯನ್ನು ಅವನು ಗಮನಿಸಿದ್ದ. ಕಾಯಿಲೆಯಿಂದ ಇಷ್ಟುಕಾಲ ಸುಮ್ಮನೆ ಮಲಗಿರುತ್ತಿದ್ದವಳು ಈಚೆ ಕೆಲಸದವರು ಎಬ್ಬಿಸುತ್ತಿದ್ದ ಶಬ್ದಕ್ಕೆ ನಿರಂತರ ಗೊಣಗುತ್ತಲೇ ಇರುತ್ತಿದ್ದಳು. ಆಚೆಕೋಣೆಯಲ್ಲಿ ಏನಾಗ್ತಾ ಇದೆ, ಎಂದು ಕುತೂಹಲ, ಅಸಹನೆಯಿಂದಲೇ ಕೇಳುತ್ತಿದ್ದಳು. ವಿನಾಕಾರಣ, “ಜ್ಯೂಲಿಯೋ! ಜೂಲಿಯೋ!” ಎಂದು ಗೋಗರೆಯುತ್ತಿದ್ದಳು. ಅವನು ಬರುವುದು ಸ್ವಲ್ಪ ತಡವಾದರೆ ಅಥವಾ ಅವಳು ಕೇಳುವ ಬಾಲಿಶ ಪ್ರಶ್ನೆಗಳನ್ನು ಉತ್ತರಿಸುವುದರಲ್ಲಿ ಆತ ಕಿರಿಕಿರಿ ವ್ಯಕ್ತಪಡಿಸಿದರೆ ಸಾಕು, “ಅಯ್ಯೋ ದೇವರೆ…. ಸಾವಾದರೂ ನನ್ನನ್ನು ಕೊಂಡೊಯ್ದಿದ್ದರೆ…. ನಾನು ಯಾರಿಗೂ ಭಾರವಾಗುತ್ತಿರಲಿಲ್ಲ” ಎನ್ನುತ್ತ ಅತ್ತುಬಿಡುತ್ತಿದ್ದಳು. ಆತ ಬಾಗಿ, ಅವಳನ್ನು ನೇವರಿಸುತ್ತ ತನ್ನ ಹತಾಶೆಯನ್ನು ವ್ಯಕ್ತಪಡಿಸುತ್ತಿದ್ದ.
“ನಿಜ ಹೇಳು…. ಜೂಲಿಯೋ…. ನನಗಾದರೂ ಹೇಳು…. ನೀನೀಗ ದುಃಖದಲ್ಲಿರುವುದು ಅವಳಿಂದಲೇ ತಾನೆ? ಹೌದು ಜೂಲಿಯೋ ನಂಗೊತ್ತು…. ಅವಳಿಂದಾಗಿಯೇ” ಎಂದು ಪೀಡಿಸುವ ದನಿಯಲ್ಲಿ ಹೇಳಿದಳು.
“ಇಲ್ಲಮ್ಮಾ…. ಹಾಗ್ಯಾಕೆ ಯೋಚಿಸುತ್ತೀ?”
“ಹಾಗಾದರೆ…. ನನ್ನಿಂದಾಗಿ ಅಂತಾಯಿತು…. ಅಯ್ಯೋ ನನಗ್ಯಾಕೆ ಸಾವು ಬರುವುದಿಲ್ಲವೋ? ನಾನಿಲ್ಲೇನು ಮಾಡುತ್ತ ಬಿದ್ದು ಕೊಂಡಿದ್ದೇನೆ?”
ಇಷ್ಟಾಗಿಯೂ, ಅವಳು ಅಗಾತಾಳನ್ನೂ ಮೃದುಮನಸ್ಸಿನಿಂದಲೇ ಸ್ವಾಗತಿಸಿದಳು. ತನ್ನ ಪಕ್ಕಕ್ಕೇ ಕೂಡ್ರಿಸಿಕೊಂಡಳು. ಬಹಳ ಹೊತ್ತಿನವರೆಗೆ ಅವಳನ್ನೇ ದಿಟ್ಟಿಸುತ್ತ ನಂತರ ಒಪ್ಪಿಗೆ ಯೆಂಬಂತೆ ತಲೆಯಾಡಿಸಿದಳು. ಈಗ ಮಗನೆಡೆ ತಿರುಗುತ್ತ, “ಜ್ಯೂಲಿಯೋ…. ನೀನೇ ಅದನ್ನು ಕೊಟ್ಟುಬಿಡು” ಎಂದಳು.
ಅಸ್ಪಷ್ಟವಾಗಿ ತನ್ನ ತಂದೆಯನ್ನು ನೆನಪಿಸುವ ಚೆಂದದ ಮುತ್ತಿನ ನೆಕ್ಲೆಸನ್ನು ಪೆಟ್ಟಿಗೆಯಿಂದ ಹೊರತೆಗೆದ ಜೂಲಿಯೋ, ಅಗಾತಾಳಿಗೆ ಕೊಟ್ಟ.
“ಅವಳ ಕುತ್ತಿಗೆಗೆ ಅದನ್ನು ಕಟ್ಟೋ ಮಾರಾಯಾ.” ಎಂದು ಮುದುಕಿ ಒಪ್ಪಿಗೆ
ಸೂಚಿಸುತ್ತ ಅಗಾತಾಳತ್ತ ತಿರುಗಿದಳು.
ನಂತರ, ಅಗಾತಾ, ಮತ್ತವಳ ತಾಯಿ ಹೊರಟುಹೋದ ಮೇಲೆ ಜ್ಯೂಲಿಯೋ ತಿರುಗಿ ಬಂದ.
“ನೋಡು…. ನಾನ ಸರಿಯಾದ ಕೆಲಸವನ್ನೇ ಮಾಡಿದೆ ಅಲ್ಲವಾ?” ಚಿಕ್ಕಮಗುವಿನಂತೆ ಕೇಳಿದಳು.
“ಹೌದಮ್ಮಾ ಖಂಡಿತ” ಅಂತಂದ ಮಗ.
“ಸರಿಯಪ್ಪ, ನನ್ನಿಂದ ನಿನಗೆ ಖುಷಿಯಾದರೆ ನನಗಷ್ಟೇ ಸಾಕು” ಎಂದು ತುಟಿಗಳನ್ನು ಬಿಗಿಹಿಡಿಯುತ್ತ ಮಾತು ಮುಗಿಸಿದಳು, ಪುನಃ ಮೌನವಾಗಿ ಅಳಲು ಶುರುಮಾಡಿದಳು.
-೧೦-
ಮದುವೆಯ ಹಿಂದಿನ ರಾತ್ರಿ ಜ್ಯೂಲಿಯೋ ಅಕುರ್‍ಜಿಗೆ ನಿದ್ದೆ ಹತ್ತಲೇ ಇಲ್ಲ. ಕಳೆದ ಕೆಲ ದಿನಗಳಿಂದ ಮದುವೆಯ ತಯಾರಿ, ಮನೆಯನ್ನು ಬಟ್ಟೆ ಬರೆಗಳನ್ನು ಸಜ್ಜು ಗೊಳಿಸಿಡುವುದು, ಅಗತ್ಯವಾದ ಕಾಗದಪತ್ರಗಳ ತಯಾರಿಯಲ್ಲೇ ಮುಳುಗಿದ್ದರಿಂದ ತನ್ನ ಪ್ರೇಮದ ಕುರಿತು ತನ್ನೊಳಗೇ ಏಳುತ್ತಿದ್ದ ವೈರುಧ್ಯದ ದನಿಗೆ ಯಾಕೋ ಸಂಪುರ್ಣ ಕಿವುಡನಾಗಿ ಬಿಟ್ಟಿದ್ದ. ಹಠಹಿಡಿದ ಕುಡುಕನ ಹಾಗೆ ಎಲ್ಲ ಕೆಲಸಗಳನ್ನೂ ಬೇಗ ಬೇಗ ಮಾಡಿ ಮುಗಿಸುವ ಗಡಿಬಿಡಿಯಲ್ಲಿದ್ದ. ಎಲ್ಲ ಸಿದ್ಧತೆಗಳೂ ಯಶಸ್ವಿಯಾಗಿ ಮುಗಿದಿದ್ದವು. “ನಾಳೆ ಇಷ್ಟರಲ್ಲಿ ನಿನ್ನ ಮದುವೆ ಕುಣಿತ ಎಲ್ಲ ಮುಗಿದಿರುತ್ತದೆ” ಎಂದು ಅವನ ಗೆಳೆಯರು ತಮಾಷೆ ಮಾಡುತ್ತಿದ್ದರು.
ಅವನ ಮತ್ತು ಅಗಾತಾಳ ನಡುವೆ ಒಂದು ರೀತಿಯ ಸಹಾನುಭೂತಿಯಲ್ಲೇ ಪರಸ್ಪರ ಅರ್ಥ್ಯಸಿಕೊಳ್ಳುವಂಥ ಸಂಬಂಧ ಸ್ಥಾಪಿತಗೊಂಡಿತ್ತು. ಕನಿಷ್ಠಪಕ್ಷ ಕಳೆದ ಮೂರು ತಿಂಗಳಿಂದ, ಅಂದರೆ, ಅವರ ನಿಶ್ಚಿತಾರ್ಥವಾದಂದಿನಿಂದ, ಅವನು ಈ ಭ್ರಮೆಯಲ್ಲಿದ್ದ. ಅಗಾತಾಳಂತೂ ಅವನ ಮೇಲೆ ಪ್ರೀತಿ ತೋರಿಸಲಿಲ್ಲ. ಅವನು ಕೂಡ ಅದು ತನ್ನದೆಂದು ಯಾವತ್ತೂ ವಾದಿಸಲಿಲ್ಲ. ಹಿಂದಿನಿಂದಲೂ ಅಗಾತಾಳ ಮೌನ, ಕೃತಜ್ಞತೆ, ಒಲವು ಇತ್ಯಾದಿ ಸೂಸುತ್ತಿದ್ದುದರಿಂದ ಆತ ಅದರಿಂದಲೇ ತೃಪ್ತನಾದವನಂತೆ ತೋರುತ್ತಿದ್ದ. ಅವರಿಬ್ಬರೂ ಮುಕ್ತವಾಗಿ ಮಾತಾಡಿಕೊಳ್ಳಲಿ ಎಂಬಾಸೆಯಿಂದ ಸಂಜೆಯ ಹೊತ್ತು ಅವನ ತಾಯಿ ಶಾಂತಳಾಗಿ ಮೋಂಬತ್ತಿ ಯೆದುರು ‘ಸ್ವರ್ಗಕ್ಕೆ ದಾರಿ’ ಎಂಬ ದೊಡ್ಡ ಧರ್ಮ ಗ್ರಂಥವೊಂದನ್ನು ಓದುತ್ತ ಕೂತಿರುತ್ತಿದ್ದಳು. ಬೆಳಕಿಗಿಂತ ತುಸುದೂರ ನೆರಳಿರುವ ಜಾಗದಲ್ಲಿ ಅವರಿಬ್ಬರೂ ಕೂತು ಪರಸ್ಪರ ಅನ್ಯೋನ್ಯತೆ, ಭರವಸೆಗಳಿಂದ ತಪ್ಪಿಸಿಕೊಳ್ಳುವವರಂತೆ ಕಾಣುತ್ತಿದ್ದರು. ಒಂದು ಸಂಜೆ, ಅವಳ ಸುದೀರ್ಘ ಮೌನವನ್ನು ತಾಳಿಕೊಳ್ಳಲಾರದೆ, ಜೂಲಿಯೋ, “ಯಾಕೆ, ಯಾವಾಗಲೂ ದುಃಖದಲ್ಲಿರುತ್ತೀಯಲ್ಲ?” ಎಂದು ಕೇಳಿಯೇಬಿಟ್ಟ.
“ಇಲ್ಲವಲ್ಲ…. ನಾನು ಯಾಕೆ ದುಃಖಪಡಲಿ?” ಎಂದು ತನ್ನ ಬಟ್ಟೆಯ ಲಾಡಿಯ ಮೇಲೆ ಕೈಯಾಡಿಸುತ್ತ, ಸಣ್ಣ ಸ್ವರದಲ್ಲಿ ಉಸುರಿದಳು.
ಇದು ಅವನು ಅವಳನ್ನು ಪ್ರೇಮಿಸುವ ರೀತಿಯಾಗಿತ್ತು; ಇದೇ ರೀತಿ ಅವನವಳನ್ನು ಯಾವಾಗಲೂ ಪ್ರೇಮಿಸಬೇಕೆಂದು ಇಚ್ಛಿಸಿದ್ದ ಕೂಡ.
ಬೆಳಗು ಮೂಡುತ್ತಿತ್ತು. ಧಾರ್ಮಿಕ ಆಚರಣೆಗಳು ಬೆಳಗಿನ ಎಂಟಕ್ಕೆ ನಡೆಯಲಿದ್ದವು. ಸಾರ್ವಜನಿಕ ಸಮಾರಂಭ ಒಂಬತ್ತು ಗಂಟೆಗೆ. ನಂತರ ನೂತನ ವಧೂವರರು, ಸಂಬಂಧಿಕರೊಡ ಗೂಡಿ ಪೇಟೆಯಿಂದ ಕೆಲವೇ ಕಿಲೋಮೀಟರು ದೂರದಲ್ಲಿದ್ದ ಜ್ಯೂಲಿಯೋನ ಹುಟ್ಟೂರಿಗೆ ಹೋಗುವವರಿದ್ದರು. ಮದುವೆಯ ಬೆಳಗಿನ ಉಪಾಹಾರ ಆ ಊರಿನಲ್ಲಿ ಅಲ್ಲಿದ್ದ ಭವ್ಯ ಫಾರ್ಮ್ ಹೌಸಿನಲ್ಲಿ ನೂತನ ವಧೂ-ವರರನ್ನು ಬಿಟ್ಟು, ಸಂಬಂಧಿಕರು ಮರಳಿ ಪೇಟೆಗೆ ಬರುವವರಿದ್ದರು. ಅಗಾತಾಳ ಇಚ್ಛೆಯಂತೆ ಕೆಲವೇ ಮಂದಿಯನ್ನು ಆಮಂತ್ರಿಸಲಾಗಿತ್ತು; ಸಂಬಂಧಿಕರು ಬಿಟ್ಟರೆ ಒಂದಿಷ್ಟು ಹತ್ತಿರದ ಸ್ನೇಹಿತರು ಮಾತ್ರ.
ಜೂಲಿಯೋ ಬಟ್ಟೆ ಧರಿಸಿಕೊಂಡವನೇ, ಇನ್ನೂ ಹಾಸಿಗೆಯಲ್ಲೇ ಮಲಗಿಕೊಂಡಿದ್ದ ತಾಯಿಯನ್ನು ಚುಂಬಿಸಲೆಂದು ಹೋದ.
“ಎಷ್ಟು ಚೆಂದ ಕಾಣ್ತಾ ಇದೀಯ!…. ಇಲ್ಲಿ ಬಾ…. ಒಮ್ಮೆ ನಿನ್ನನ್ನು ನೋಡುತ್ತೇನೆ. ಈಗಲೇ ಹೊರಟೆಯಾ? ಸರಿ…. ಹೋಗು ಹೋಗು…. ನನ್ನ ಆಶೀರ್ವಾದ ಯಾವತ್ತೂ ನಿನ್ನ ಮೇಲಿದೆ…. ಹೋಗಿ ಬಾ ಮಗಾ!” ಕಣ್ಣುಗಳಲ್ಲಿ ನೀರು ತುಂಬಿಕೊಂಡು ಬಾಗಿಲತನಕ ಮಗನನ್ನು ಬೀಳ್ಕೊಟ್ಟಳು.
“ಮೇಲ್ಗಡೆ ನನಗೂ ಸ್ವಲ್ಪ ಸ್ವೀಟ್ ಕಳಿಸು…. ಮರೆಯಬೇಡ!” ಎಂದೂ ಹೇಳಿದಳು.
ಕೆಳಮಹಡಿಯಲ್ಲಿ ಎರ್ಮಿನಿಯಾಳ ಗಂಡ ಸೇಸಾರ್ ಕೋರ್ವಾಜಾ ಅವನನ್ನು ಬರಮಾಡಿ ಕೊಂಡ. ಕಪ್ಪಗಿದ್ದು ದಟ್ಟಗಡ್ಡವಿರುವ ದೊಡ್ಡ ದೊಡ್ಡ ಕಣ್ಣುಗಳ ಈ ಧಡೂತಿ ಮನುಷ್ಯ ತನಗೆ ರೂಢಿಯಿರದ ಮದುವೆ ಧಿರಿಸಿನಲ್ಲಿ ವಿಚಿತ್ರವಾಗಿ ಕಾಣುತ್ತಿದ್ದ.
“ನಿಮ್ಮ ಕೈ ಇಲ್ಲಿ ಕೊಡಿ ಭಾವಾ! ನಾನಿನ್ನೂ ಪರಸ್ಪರ ಭೆಟ್ಟಿಯಾಗೇ ಇಲ್ಲ…. ನನ್ನ ಹೆಸರು ಸೇಸಾರ್ ಕೋರ್ವಾಜಾ ಅಂತ.”
ತನ್ನ ಕೈಚಾಚುತ್ತ ಜ್ಯೂಲಿಯೋ ಅವನನ್ನು ದಿಗ್ಭ್ರಮೆಯಲ್ಲೇ ನೋಡಿದ.
“ನೀನ ಮಾರಿಯೋನ ಅಣ್ಣ ಅಲ್ವಾ” ಎಂದು ಹೇಳಬೇಕೆಂದವನು ಸಣ್ಣಗೆ ಮುಗುಳ್ನಕ್ನ.
“ಇದು ಆಶ್ಚರ್ಯವಲ್ಲದೆ ಇನ್ನೇನು? ಎಂಥ ಅದೃಷ್ಟ! ನಾನಾಗಲೇ ನಿಮ್ಮ ಮದುವೆಯಾಗಿದೆ ಅಂತ ತಿಳಕೊಂಡಿದ್ದೆ. ನನ್ನ ಹೆಂಡತಿ, ‘ಅವರಿಬ್ಬರೂ ಬೇಗ ಮದುವೆ ಯಾಗುವವರಿದ್ದಾರೆ!’ ಎಂದು ಕಾಗದ ಬರೆದ ಮೇಲೆಯೇ ಗೊತ್ತಾಗಿದ್ದು, ಒಳ್ಳೆದಾಯ್ತು ಬಿಡಿ…. ನಾನು ನಿನ್ನೆ ಸಂಜೆಯಷ್ಟೇ ಬಂದೆ. “ನೀನಿದನ್ನು ನಂಬುತ್ತೀಯಾ? ಅಗಾತಾಗೆ ನಾಳೆ ಮದುವೆಯಂತೆ” ಎಂದು ಎರ್ಮಿನಿಯಾ ನನಗೆ ಹೇಳಿದ್ದೇ ಧಾವಿಸಿಬಂದೆ ನೋಡಿ. ನಾನು ಬಂದಿರುವ ವಿಷಯ ಅಗಾತಾಗೂ ಗೊತ್ತಿಲ್ಲ…. ಓ…. ಅಲ್ಲಿ ಎರ್ಮಿನಿಯಾ ಅವಳ ಸಹಾಯಕ್ಕೆ ನಿಂತು ಸಿಂಗರಿಸುತ್ತಿದ್ದಾಳೆ…. ನಾನಲ್ಲಿ ಉಗ್ರಾಣದಲ್ಲಿದ್ದೆ. ಇರಲಿ…. ಎಂಥ ಆಶ್ವರ್ಯ ಇದೆಲ್ಲ! ಓಹ್…. ಅಂದಹಾಗೆ ಕಂಗ್ರಾಚ್ಯುಲೇಶನ್ಸ್!”
ಜೂಲಿಯೋ ಮುಖ ಕೆಂಪೇರಿತು.
“ಥ್ಯಾಕ್ಯೂ” ಎಂದಷ್ಟೇ ಹೇಳಿ, ಆ ಧಡೂತಿ ಮನುಷ್ಯನ ಕೈಕುಲುಕಿ ಭಾರೀ ಗಡಿಬಿಡಿಯಲ್ಲಿದ್ದವನಂತೆ ಗಡಿಯಾರವನ್ನು ನೋಡಿದ.
“ನಾವು ಹೊರಡಬೇಕು…. ಆಗಲೇ ಎಂಟಾಯಿತು….”
“ಓಹ್…. ಹೌದೌದು…. ಹೆಂಗಸರು ಬರ್ತಿದಾರೆ….” ಎಂದ ಸೇಸಾರ್ ಕೋರ್ವಾಜಾ ಬಾಗಿಲು ತೆರೆಯುತ್ತಿದ್ದಂತೆ ಅದರ ಹಿಂದೆ ಅಡಗಿಕೊಂಡ.
ಆಗಲೇ, ಮದುವೆ ದಿರಿಸಲ್ಲಿ, ಬಾಡಿದ ಮುಖ ಹೊತ್ತ ಅಗಾತಾ, ಎರ್ಮಿನಿಯಾ ಜತೆ ಬಂದಳು. ರಾತ್ರಿಯಿಡೀ ಅವಳೂ ನಿದ್ದೆ ಮಾಡಿರಲಿಲ್ಲ ಎಂಬುದು ನೋಡಿದರೆ ಗೊತ್ತಾಗುತ್ತಿತ್ತು.
“ಗುಡ್ಮಾರ್ನಿಂಗ್….” ಎಂದು ಜ್ಯೂಲಿಯೋ ಸ್ವಾಗತಿಸುತ್ತ, ಅವಳನ್ನು ನಗಿಸಲು ಸಂತೋಷವನ್ನು ನಟಿಸಿದ.
ಅವಳು ವಿಷಾದದ ನಗೆ ನಕ್ಕಳು.
“ನಾವಾಗಲೇ ತಡವಾಗಿದ್ದೇವೆ…. ತಾಯಿ ಇನ್ನೂ ಬಟ್ಟೆ ಧರಿಸುತ್ತಿದ್ದಾಳೆ ಅಷ್ಟೇ.” ಈಗ ಬಾಗಿಲಿನ ಹಿಂಬದಿಯಿಂದ ನಗುವಿನ ದೊಡ್ಡ ಭೋರ್ಗರೆತ ಕೇಳಿಸಿತು. ಅಗಾತಾ ಬೆಚ್ಚಿ ಬಿದ್ದಳು. ನೋಡಿದರೆ ಸೇಸಾರ್ ಕೋರ್ವಾಜಾ ಎದುರಿಗೇ ನಿಂತಿದ್ದ.
“ನೀನು… ನೀನಿಲ್ಲಿ…. ಹೇಗೆ! ನನ್ನನ್ನು ಹೆದರಿಸಿಬಿಟ್ಟೆ ನೋಡು…. ಅಡಗಿ ಕೂತಿದ್ದೀಯಲ್ಲ…. ಹೇಗೆ ಬಂದೆ?”
ಎರಡೂ ಕೈಗಳನ್ನೆತ್ತಿ ಅವನ ಹತ್ತಿರ ಒಯ್ದವಳು ಅವನನ್ನು ಅಡಿಯಿಂದ ಮುಡಿಯವರೆಗೆ ಆಶ್ಚರ್ಯದಿಂದ ನೋಡುತ್ತ ದೊಡ್ಡದಾಗಿ ನಕ್ಕಳು; ಮುಖ ಕೆಂಪೇರಿತ್ತು.
“ಅಯ್ಯೋ ದೇವರೇ…. ಎಷ್ಟು ಕೆಟ್ಟದಾಗಿ ಕಾಣುತ್ತಿದ್ದೀ!”
“ಅಗಾತಾ ನಾವೀಗಲೇ ತಡವಾಗಿದ್ದೇವೆ….” ಎಂದು ಜೂಲಿಯೋ ಒತ್ತಾಯಪೂರ್ವಕ ನಕ್ಕ.
ಇವರು ನನ್ನ ಗಂಡ!” ಎಂದುಸುರಿದ ಅಗಾತಾ ಮುಖ ಸಣ್ಣದು ಮಾಡಿಕೊಳ್ಳುತ್ತ ಸೆಸಾರ್ ಕೋರ್ವಾಜಾನೆದುರು ತಾನು ಸಂತೋಷವಾಗಿದ್ದೇನೆಂದು ತೊರಿಸಿಕೊಳ್ಳುವ ಪ್ರಯತ್ನದಲ್ಲಿರುವಂತೆ ಕಂಡಳು.
ಅವಳು ಈ ರೀತಿ ಮಾಡಿದ್ದನ್ನು ಜೂಲಿಯೋ ಯಾವತ್ತೂ ನೋಡಿದ್ದಿಲ್ಲ.
“ಜ್ಯೂಲಿಯೋ…. ಪ್ಲೀಸ್ ಈ ಗ್ಲೋವ್ಸ್‍ನ ಗುಂಡಿ ಹಾಕುತ್ತೀಯಾ?” ಎಂದಳು. .
ಬಂದ ಅತಿಥಿಗಳೆಲ್ಲರೂ ಶಿಸ್ತಿನಿಂದ ನಡಕೊಂಡೇ ಚರ್ಚಿಗೆ: ಹೋಗತೊಡಗಿದರು. ದೇವರೆದುರು ಇಟ್ಟಿದ್ದ ಮೆತ್ತಗಿನ ಮರಳುಗಲ್ಲಿನಲ್ಲಿ ಮಂಡಿಯೂರಿ ನಿಂತ ಜ್ಯೂಲಿಯೋ, ಕಂಪಿಸುತ್ತಿದ್ದ ಅಗಾತಾಳ ಕೈಯನ್ನು ಪಾದ್ರಿಯ ಅಪ್ಪಣೆಯಂತೆ ಹಿಡಿದುಕೊಂಡು ಅವಳನ್ನೊಮ್ಮೆ ನೋಡಿದ. ಅವಳು ಕಷ್ಟಪಟ್ಟು ಕಣ್ಣೀರನು ತಡೆಹಿಡಿದಿದ್ದಾಳೆ ಎನಿಸಿತು. ಅವಳ ಕೈಗಳನ್ನು ಮೃದುವಾಗಿ ಅಮುಕಿದ.
ಈ ನಡುವೆ, ಪಾದ್ರಿ ತನ್ನ ಅನುನಾಸಿಕಧ್ವನಿಯಲ್ಲಿ ಚಿಕ್ಕಪುಸ್ತಕ ಹಿಡಿದು ವೇಗವಾಗಿ ಏನೇನೋ ಮಣಮಣಿಸುತ್ತ ತನ್ನ ಕೈಯಿಂದ ಅವರ ತಲೆ ಮೇಲೆಲ್ಲ ಏನೋ ಸನ್ನೆ ಮಾಡುತ್ತಿದ್ದ. ನಂತರ ತನ್ನ ಎಂದಿನ ವಾಡಿಕೆಯ ಸೂತ್ರವನ್ನು ಪಠಿಸಿದ.
“ಹೌದು” ಎಂದು ದೃಢಚಿತ್ತದಿಂದ ಹೇಳಿದ ಜೂಲಿಯೋ ಕಾತರದಿಂದ ಅಗಾತಾಳ ಪ್ರತಿಕ್ರಿಯೆಗಾಗಿ ಕಾದ. ವಿವಾಹದುಂಗುರ ಬೆರಳಿಗೆ ತೊಡಿಸುವಾಗ ತುಸುಬೆದರಿದವಳಂತೆ ಅವನಿಗವಳು ಕಂಡು ಬಂದರೂ ತಕ್ಷಣ ಸಾವರಿಸಿಕೊಂಡಳು. ಈಗ ಇಬ್ಬರೂ ಅಲ್ಲಿಂದೆದ್ದರು. ಸಮಾರಂಭದ ಸಾಂಪ್ರದಾಯಿಕ ಭಾಗ ಮುಗಿದಿತ್ತು.
‘ಈಗ ಇನ್ನೊಂದು ಸಮಾರಂಭ ಉಳಿದಿದೆ’ ಎಂದು ಅವನು ಮದುಮಗಳ ಕಿವಿಯಲ್ಲುಸುರಿದ.
ಫಾರ್ಮ್ ಹೌಸಿನಲ್ಲಿ ಊಟದ ನಡುವೆ ಅತಿಯೆನಿಸುವಷ್ಟು ಮದ್ಯ ಸರಬರಾಜಾಗಿತ್ತು. ಜೂಲಿಯೋ, ಅಗಾತಾಳಿಗಾಗಲೀ ಚೂರೂ ಬರಲು ಸಾಧ್ಯವಾಗಲಿಲ್ಲ. ಅನೇಕರು ಕುಡಿದು ಕುಪ್ಪಳಿಸಿದರು; ಶುಭ ಹಾರೈಸಿದರು ಕೂಡ.
ಮದುವೆಯ ದಿನದ ಭಾವದೊತ್ತಡದಿಂದಾಗಿ ಜೂಲಿಯೋ ದಣಿದು ಸುಸ್ತಾಗಿ ಬಿಟ್ಟಿದ್ದ. ಕಾರ್ಯಕ್ರಮಕ್ಕೆ ಬಂದವರ ವಟಗುಟ್ಟುವಿಕೆ, ಕರಿಕಿರಿಸದ್ದುಗಳೆಲ್ಲ ಬೇಗನೆ ಮುಗಿದುಹೋಗಿದ್ದರೆ ಒಳ್ಳೆಯದಿತ್ತು. ಎಂದೆನಿಸಿತು. ಅತ್ತೆ, ತನ್ನನ್ನು ಮತ್ತು ಅಗಾತಾಳನ್ನು ಈಗ ಒಂಟಿಯಾಗಿಬಿಡುತ್ತಾರೆ ಎಂಬ ಯೋಚನೆಯೇ ಬಳಲಿದ್ದ ಅವನ ಮನಸ್ಸನ್ನ ಮತ್ತಷ್ಟು ಕುಗ್ಗಿಸಿಬಿಟ್ಟಿತು.
ಈ ಮಧ್ಯೆ, ಅದುವರೆಗೂ ಶುಭ್ರವಾಗಿದ್ದ ಆಕಾಶದಲ್ಲಿ ಈಗ ಮೆಲ್ಲಮೆಲ್ಲ ಮೋಡಗಳು ದಟ್ಟೈಸತೊಡಗಿ, ಬಂದ ಅತಿಥಿಗಳು ಧಾರಾಕಾರ ಸುರಿಯಲಿರುವ ಮಳೆಗೆ ಹೆದರಿ ತಕ್ಷಣ ಪಟ್ಟಣಕ್ಕೆ ವಾಪಸಾಗಲು ನಿರ್ಧರಿಸಿದರು. ಗುಡ್ಬೈಗಳ ಈ ಸರಭರದ ವಿನಿಮಯಗಳ ನಡುವೆಯೂ ಜ್ಯೂಲಿಯೋ ಕೃತಜ್ಞತೆ ಹೇಳಲೆಂದೇ ಎಲ್ಲರ ಕೈಕುಲುಕತೊಡಗಿದ. ಅತ್ತ, ತಾಯಿಯನ್ನು ತಬ್ಬಿಕೊಂಡ ಅಗಾತಾ ಮುಖಮುಚ್ಚಿಕೊಂಡು ಅಳುತ್ತಿದ್ದಳು.
ತಾಯಿಯ ಹಿಂಬದಿ ನಿಂತಿದ್ದ ಎರ್ಮಿನಿಯಾ, “ನಗುನಗುತ್ತ ಇರು….” ಎಂದು ಮೆಲ್ಲಗೆ ಉಸುರಿದಳು.
ಜೂಲಿಯೋ ಆಚೆ ತಿರುಗಿದ.
“ನೀನು ಯೋಚಿಸಿದಕ್ಕಿಂತಲೂ ತಂಬಾ ಸುಲಭ ಮಾರಾಯಾ….. ನಿನಗೇ
ಗೊತ್ತಾಗುತ್ತದೆ” ಎಂದು ಯಾರೋ ಅವನ ಕೈಕುಲುಕುತ್ತ ಹೇಳುತ್ತಿದ್ದರು. ಅವನಾಡುತ್ತಿದ್ದ ಮಾತನ್ನಾಗಲೀ, ಸೇಸಾರ್ ಕೋರ್ವಾಜಾನ ಕೈಕುಲಕುತ್ತಿರುವುದನ್ನಾಗಲೀ ಆತ ಗಮನಿಸಲೇ ಇಲ್ಲ. ಈ ಕೃಕುಲುಕುಗಳಿಂದ ರೋಸಿಹೋಗಿ ಸರಕ್ಕನೆ ಕೈಯನ್ನು ಹಿಂದಕ್ಕೆಳೆದುಕೊಂಡ. ಸೇಸಾರ್ ಕೋರ್ವಾಜಾ ತನ್ನ ಪಕ್ಕ ನಿಂತವನ ಜತೆ ಮಾತಾಡುತ್ತಲೇ ಇದ್ದ: “ನಾವು ಮಾಡುವ ಕೆಲಸಗಳೆಲ್ಲ ಯಾರಿಗೆ ಗೊತ್ತಾಗುತ್ತದೆ ಮಹಾ ಅಂತ ಈಗ ಅನಿಸಬಹುದು. ಆದರೆ, ಎಷ್ಟೋ ವರ್ಷಗಳ ನಂತರವೂ ನಮಗೆ ಎಲ್ಲವೂ ನೆನಪಿರುವುದು ಖಂಡಿತ…. ಯಾಕೆಂದರೆ ಬದುಕುವುದೇ ಹೀಗೆ!….”
-೧೧-
ಅಗಾತಾ ಬಿಳಿಗೌನಿನಲ್ಲಿದ್ದಳು. ಬಾಗಿಲು ತೆರೆದವಳೇ, ಹೊರಗಿಣುಕಿ ಉಲ್ಲಾಸದಿಂದ, “ಜ್ಯೂಲಿಯೋ, ಜ್ಯೂಲಿಯೋ….. ನೋಡಲ್ಲಿ…. ಪುಟ್ಟ ಆಡಿನಮರಿ, ಎಷ್ಟು ಮುದ್ದಾಗಿದೆ” ಎಂದು ಕೂಗಿದಳು. ಕೈಯಲ್ಲೊಂದು ಬಾಚಣಿಕೆ ಹಿಡಿದಿದ್ದು ತಲೆಕೂದಲು ಕದರಿಕೊಂಡಿತ್ತು.
ರಾತ್ರಿಯ ಗಾಳಿಮಳೆ, ಎಲ್ಲ ಮುಗಿದು, ವಾತಾವರಣ ಸಂಪೂರ್ಣ ತಿಳಿಯಾಗಿತ್ತು.. ವಸಂತ ಋತುವಿನಂತೆ, ಇದೇ ವಾತಾವರಣ ಮುಂದಿನ ಎರಡು ತಿಂಗಳ ತನಕ ಮುಂದುವರೆಯಿತು.
ಬೆಚ್ಚಗೆ ಬಿಸಿಲು ಹರಡಿತ್ತು. ಹುಬ್ಬುಗಂಟಿಕ್ಕಿಕೊಂಡು ಬಾಲ್ಕನಿಯ ಕಂಬಿಗೆ ಆತ ನಿಂತಿದ್ದ ಜೂಲಿಯೋ ಶಾಂತ ಬೀದಿಯನ್ನೇ ದಿಟ್ಟಿಸುತ್ತಿದ್ದ. ಈಗ ಅಗಾತಾಳ ಸ್ವರ ಬಂದತ್ತ ತಿರುಗಿದ. ಅವಳ ಉತ್ಸಾಹವನ್ನು ಈಗಾಗಲೇ ನಿರೀಕ್ಷಿಸಿದವನಂತೆ ತುಸು ಆಲಸ್ಯದಿಂದಲೇ ಅವಳಿದ್ದ ಕೋಣೆಗೆ ಹೋದ.
“ನೋಡಲ್ಲಿ…. ನೋಡಿದೆಯಾ ಅದನ್ನು?” ಎಂದು ಕಿಟಕಿಯಿಂದ ಹೊರಗೆ ಬೊಟ್ಟುಮಾಡಿ ಅಲ್ಲೇ ಬಿಸಿಲಿಗೆ ಮೈಚಾಚಿಕೊಂಡಿದ್ದ ಮುದಿಕಾವಲುನಾಯಿಯೊಂದಿಗೆ ಆಡಿನಮರಿ ಆಟವಾಡುವುದನ್ನು ತೋರಿಸಿದಳು. “ನಿನಗೆ ಕಾಣ್ತಾ ಇದೆಯಾ? ನೋಡಿಲ್ಲಿ” ಎಂದು ಹೇಳುತ್ತ ಹೇಳುತ್ತ ಆ ಪುಟ್ಟ ಜೀವಿಯ ಪ್ರತಿಚಲನೆಯನ್ನು ಆನಂದಿಸುವವಳಂತೆ ದೊಡ್ಡದಾಗಿ ನಕ್ಕಳು.
“ಪಾಪ…. ಮುದಿ ಪ್ರಾಣಿ!” ಎಂದು ವಿಷಾದದ ನಗೆನಕ್ಕ ಜ್ಯೂಲಿಯೋ. ಅವನ ಅನುಕಂಪ ತೊಂದರೆಪಡುತ್ತಿದ್ದ ನಾಯಿಯೆಡೆಗಿತ್ತು. ತಲೆಗೂದಲನ್ನು ಬಾಚಿ, ಬಟ್ಟೆಧರಿಸಿಕೊಂಡು ತಯಾರಾಗಿ ಇಬ್ಬರೂ ಈಗ ಕೈಕೈಹಿಡಿದು ವಾಕಿಂಗ್ಗೆಂದು ಹೊರಟರು.
“ಏನು ವಿಷಯ? ನಿನಗೇನಾದರೂ ಹೇಳುವುದಿದೆಯೇ?” ಕೇಳಿದಳು.
“ಎಷ್ಟೊಂದು ಪ್ರಶಾಂತವಾಗಿದೆ…. ಅದನ್ನು ನೀನು ಗಮನಿಸಿದೆಯಾ?”
ಇಬ್ಬರೂ ಮೌನವಾಗಿ ಬೀದಿಸುತ್ತಿದರು. ತಂಗಾಳಿಯಿಂದ ಅವಳ ಬಣ್ಣಮಿನುಗುತ್ತಿತ್ತು. ತುಟಿಗಳು ಹೊಳೆಯುತ್ತಿದ್ದವು. ಬೀದಿಸುತ್ತುವಾಗ ತನ್ನ ಗಂಡನಿಗೆ ಹೆಚ್ಚುಹೆಚ್ಚು ಹತ್ತಿರವಾಗುತ್ತ ತನ್ನ ತಲೆಯನ್ನು ಅವನ ತೋಳಿಗೆ ಆತುಕೊಂಡೇ ನಡೆದಳು. ಮತ್ತೆ ಮತ್ತೆ ಜೂಲಿಯೋಗೆ ನಿಲ್ಲುವಂತೆ ಆಗ್ರಹಿಸಿದಳು. ಆ ದಿವಸ ಜಗತ್ತಿನ ಎಲ್ಲ ಜೀವಿಗಳ ಮೇಲೂ ಅವಳಿಗೆ ಅಕ್ಕರೆ ಉಕ್ಕಿ ಬಂದಂತ್ತಿತ್ತು.
“ನೋಡಲ್ಲಿ…. ನೋಡಲ್ಲಿ…. ಫೆಬ್ರವರಿಯಲ್ಲಿ ಅರಳುವ ಈ ಚೆಕ್ಕಹೂಗಳು ಎಷ್ಟು ನಾಚಿಕೊಂಡಿವೆ….”
ಆತ ಅವುಗಳನ್ನತ್ತಿಕೊಳ್ಳಲು ಬಾಗಿದ.
‘ಏಯ್…. ಬೇಡಾ…. ಏನು ಮಾಡ್ತಾ ಇದೀಯ? ಅವು ನಮಗೋಸ್ಕರ ಸೃಷ್ಟಿಯಾಗಿದ್ದಲ್ಲ….. ಅವರ ಇಷ್ಟದಂತೆ ಹುಟ್ಟಿಕೊಂಡಿರುವುದು ಅವೆಲ್ಲ….”
ಈಗವರು ಗದ್ದೆಯ ತುದಿಗೆ ಬಂದರು. ಚೆಕ್ಕಗೋಡೆಯಿದ್ದು, ರಕ್ಷಣೆಗಾಗಿ ಅದರ ಮೇಲೆ ಮುಳ್ಳುಪೊದೆಗಳಿದ್ದವು.
“ನೋಡು…. ಇದರ ಮೇಲಿನಿಂದ ನಾವು ಹಾರಬಹುದು…. ಬಾ ಹಾರಿ ಬಿಡೋಣ!” ಎಂದಳು. ‘ಇಲ್ಲ ಅಗಾತಾ…. ಆಗುವುದಿಲ್ಲ. ಈ ಡ್ರೆಸ್ಸಿನಲ್ಲಿ ನಿನಗೆ ಸಾಧ್ಯವಿಲ್ಲ…. ಬಾ ನಾವು ವಾಪಾಸ್ಸು ಹೋಗೋಣ’ ಅಂದ.
“ನನಗೆ ಸಾಧ್ಯವಿಲ್ಲವೆ? ನೋಡುತ್ತ ಇರು…. ತೋರಿಸ್ತೇನೆ” ಎಂದು ಹೇಳಿದ್ದೇ, ತಡೆಯಲು ಬಂದ ಜೂಲಿಯೋನನ್ನೌ ಬಿಟ್ಟು ಪ್ರಯಾಸದಿಂದ ಗೋಡೆಹತ್ತಿಯೇ ಬಿಟ್ಟಳು. ಮೇಲೆ ಹತ್ತಿದವಳು, ಮತ್ತೆ ತಿರುಗಿದಾಗ ಅವಳ ಬಟ್ಟೆ ಮುಳ್ಳುಪೊದೆಯಲ್ಲಿ ಸಿಕ್ಕಿಕೊಂಡಿತು. ಬೀಳುವಂತಾದಳು. ಜೂಲಿಯೋ ಧಾವಿಸಿ ಅವಳನ್ನು ಹಿಡಿದುಕೊಂಡ. ಸಂತಸದ ನಗೆನಕ್ಕ ಅವಳೀಗ ಜೂಲಿಯೋನ ಭುಜಗಳನ್ನು ತೋಳಿನಿಂದ ಬಳಸಿಕೊಳ್ಳುತ್ತ ಮತ್ತು ಮುಂದಕ್ಕೆ ಬಾಗಿ, ತನ್ನ ಹಣೆಯನ್ನು ಅವನ ತಲೆಗೆ ತಿಕ್ಕಲು ಪ್ರಯತ್ನಿಸಿದಳು.
“ತಡಿ…. ಅಗಾತಾ! ಈಗ ನೀನು ಕೆಳಗೆ ಹೇಗೆ ಇಳಿಯುತ್ತೀಯ?”
“ಮೊದಲು ನೀನು ನನ್ನನ್ನು ಈ ಮುಳ್ಳುಪೊದೆಗಳಿಂದ ಬಿಡಿಸು. ಆಮೇಲೆ ನೋಡು. ನನಗೆ ನಾನೇ ಆಧಾರಕೊಟ್ಟುಕೊಂಡು ಇಲ್ಲಿಂದ ಹೇಗೆ ಜಿಗಿದುಬಿಡುತ್ತೇನೆ ಅಂತ.”
“ನಾನು ಹೇಳಿದ್ದೇನೆಂದರೆ…..”
ಅವಳು ಮತ್ತೆ ನಗತೊಡಗಿದಳು. ಈ ಬಾರಿ ಮತ್ತಷ್ಟು ಖುಷಿಪಟ್ಟುಕೊಂಡು ನಕ್ಕಳು. ಬಟ್ಟೆಯನ್ನು ಹೇಗೆ ಬಿಡಿಸುವುದೆಂದೇ ಅವರಿಗೆ ಗೊತ್ತಾಗಲಿಲ್ಲ. ಕೊನೆಗೂ ತುಸುಸಿಟ್ಟಿನಲ್ಲಿ ಸ್ವಲ್ಪ ಹರಿದುಬಿಟ್ಟ….”
ಕೆಳಹಾರಿದ ಅಗಾತಾ, “ಅಯ್ಯೋ ಎಂದು ಕೂಗಿದಳು, ತನ್ನ ಹರಿದ ಬಟ್ಟೆ ಯನ್ನೇ ನೋಡುತ್ತ.
“ಛೆ…. ಸಾರಿ…. ನಾನೆಂಥ ಕೆಲಸ ಮಾಡಿಬಿಟ್ಟ! ಬೇರೆ ದಾರಿಯೂ ಇರಲಿಲ್ಲ….” ಎಂದು ಜೂಲಿಯೋ ಹೇಳಿದಾಗ ಮುಖ ಕೆಂಪೇರಿತ್ತು.
“ವಾಪಾಸು ಹೋಗೋಣವೆ?” ಎಂದ.
ಅಗಾತಾ ಈಗ ನಗುತ್ತಿರಲಿಲ್ಲ. ಇಬ್ಬರೂ ಹೆಜ್ಜೆಹಾಕುತ್ತ ಮನೆಗೆ ವಾಪಾಸಾದರು.
ಆ ಸಂಜೆ, ಜೂಲಿಯೋ, ಮಾರನೇದಿನವೇ ನಾವು ಮನೆಗೆ ವಾಪಾಸು ಹೋಗಬೇಕು ಅಂದ.
“ಏನು? ಇಷ್ಟು ಜಲ್ದಿ ವಾಪಾಸು ಹೋಗುವುದೇ? ಇಲ್ಲಿ ಹಳ್ಳಿಯಲ್ಲಿ ಎಷ್ಟೊಂದು ಸ್ವಾತಂತ್ರ್ಯವಿದೆ. ಎಷ್ಟು ಸುಂದರವಾಗಿದೆ. ನಿನಗೆ ಆಗಲೇ ಬೋರ್ ಬಂದು ಬಿಡ್ತಾ?”
“ಇಲ್ಲ…. ಇಲ್ಲ…. ಬೋರ್! ಅದೂ ನಿನ್ನ ಜೊತೆ? ಇಲ್ಲ…. ಆದರೆ ಅಲ್ಲಿ ನನ್ನ ತಾಯಿ ಒಬ್ಬಳೇ ಇದ್ದಾಳೆ…. ನಿನಗ್ಗೊತ್ತಲ್ಲ….”
“ಓಹ್! ಹೌದು…. ಸರಿ ಹಾಗಾದರೆ ನಾವು ನಾಳೆಗೇ ಹೋಗೋಣ.”
ಮಾರನೇ ದಿವಸ, ಬೆಳಗಾಗುತ್ತಲೇ ಅವಳು ಬಲು ಜಾಗರೊಕತೆಯಿಂದ ಹಾಸಿಗೆಯಿಂದೆದ್ದಳು. ಆತ ದಣಿದು ಮಂಕಾಗಿದ್ದು, ಇನ್ನೂ ಮಲಗಿಯೇ ಇದ್ದ. ಚೂರೂ ಸದ್ದು ಮಾಡದೆ, ಬಟ್ಟೆ ಧರಿಸಿಕೊಂಡ ಅವಳು ದೀಪ ಉರಿಯುತ್ತಿದ್ದ ಬೆಚ್ಚಗಿನ ತನ್ನ ಕೋಣೆಬಿಟ್ಟು ಹೊರನಡೆದಳು. ಹೊರಗಡೆ ಮಂಜು ಮುಸುಕಿತ್ತು. ಹಕ್ಕಿಗಳು ಆಗಲೇ ಹಾಡತೊಡಗಿದ್ದವು. ಹಾಡಿಗೆ ಸ್ಪಂದಿಸುವವಳಂತೆ ತೆಳುವಾದ ಶಾಲನ್ನು ಹೊದ್ದುಕೊಂಡು ಚಳಿಗೆ ನಡುಗುತ್ತ ಹೊರಟಳು.
ಮಂಜುಮುಸುಕಿದ್ದ ಗದ್ದೆ-ತೋಟಗಳಲೆಲ್ಲ ಸುತ್ತಾಡಿದಳು. ಸೂರ್ಯನ ಕಿರಣ ಸುತ್ತಚೆಲ್ಲಿತ್ತು. ಎಷ್ಟು ಸಾಧ್ಯವೋ ಅಷ್ಟು ಹೂಗಳನ್ನು ಆರಿಸಿದಳು. ತಿರುಗಿ ಮನೆಗೆ ಬಂದವಳೇ ಬಾಗಿಲು ತೆರೆದು ಆರಿಸಿದ ಹೂಗಳನ್ನೆಲ್ಲ ಜೂಲಿಯೋನ ಮುಖ; ಎದೆ, ಕೈಗಳ ಮೇಲೆಲ್ಲ ಚೆಲ್ಲಿದಳು. ಬೆಚ್ಬಿಬಿದ್ದು ಅವನ ಎಚ್ಚೆತ್ತ.
“ಅಯ್ಯೋ…. ಬೇಡ ಬೇಡ…. ಏನು ಮಾಡ್ತಾ ಇದೀಯ? ಆ ಹೂಗಳೆಲ್ಲ ಒದ್ದೆಯಾಗಿವೆ!”
“ಇಬ್ಬನಿ ಅದು…. ವಸಂತ ಋತುವನ್ನೇ ನೇರ ನಿನ್ನ ಹಾಸಿಗೆಗೆ ತಂದು ಚೆಲ್ಲುತ್ತಿದ್ದೇನೆ…. ಆನಂದಿಸು ಅದನ್ನು” ಎಂದಳು.
ಅವಳನ್ನು ಮೆಲ್ಲನೆ ತನ್ನತ್ತ ಸೆಳೆದುಕೊಂಡು ಅವನು ಗಟ್ಟಿಯಾಗಿ ಅಪ್ಪಿಕೊಂಡ. ಬಹಳ ಹೊತ್ತಿನವರೆಗೆ ಅವಳ ಕತ್ತಿಗೆ, ಬಟ್ಟೆಗಳಿಂದ ಹೊರಸೂಸುತ್ತಿದ್ದ ಬೆಳಗಿನ ಕುಳಿರ್ಗಾಳಿಯನ್ನು ಹೀರತೊಡಗಿದ.
‘ಮೊದಲೇ ಯಾಕೆ ನನ್ನನ್ನು ಎಬ್ಬಿಸಲಿಲ್ಲ ? ಒಟ್ಟಿಗೇ ವಾಕಿಂಗ್ ಹೋಗಬಹುದಿತ್ತಲ್ಲ…. ವಾಪಾಸು ಊರಿಗೆ ಹೋಗುವಾಗ ನೆನಪಿಗಾಗಿ ಈ ಹೂಗಳನ್ನು ಕೊಂಡೊಯ್ಯುವಾ…. ಆಯಿತಾ?” ಎಂದ.
“ಹೌದೌದು…. ಅರ್ಧಗಂಟೆಯಲ್ಲೇ ಅವೆಲ್ಲ ಸತ್ತುಬಿದ್ದಿರುತ್ತವೆ!” ಎಂದು ಅವನ್ನೆಲ್ಲ ಆರಿಸುತ್ತ ಉದ್ಗರಿಸಿದಳು. ಅವನು ಆ ಹೂಗಳ ಕ್ಷಣಿಕ ಸಾವಿನ ಕುರಿತು ಯೋಚಿಸುತ್ತಿದ್ದರೆ, ಅವಳು ಇದ್ದಕ್ಕಿದ್ದ ವಾಪಾಸು ಊರಿಗೆ ಹಿಂದಿರುಗುವ ಆಲೋಚನೆಯಲ್ಲಿದ್ದಳು. ಇದರಿಂದ ಇಬ್ಬರೂ ಮೌನವಾಗಿಬಿಟ್ಟರು.
-೧೨-
“ಬಾ…. ಇಲ್ಲಿ ಕೂತ್ಕೋ…. ಹ್ಞಾಂ. ಸರಿಸರಿ…. ಈಗ ಹೇಳು ಏನಾಯಿತು ಅಂತ?”
“ಏನೂ ಇಲ್ಲ…. ಅಗಾತಾ…. ನಿನಗೇನನ್ನಿಸುತ್ತೆ?”
“ನೀ ಹೇಳು…. ನಿನ್ನನ್ನು ನೋಡಿದರೇ ತಿಳಿಯುತ್ತದೆ – ನೀನು ಸಂತೋಷವಾಗಿಲ್ಲ ಅಂತ.”
“ಇಲ್ಲ…. ನಾನು ತುಂಬ ಸಂತೋಷದಿಂದಿದ್ದೇನೆ! ನೀನು ನನ್ನನ್ನು ಪ್ರೀತಿಸುವ ಮೊದಲೇ ನಾನು ನಿನ್ನನ್ನು ಪ್ರೀತಿಸುತ್ತಿದ್ದೆ….”
“ಆದರೆ, ಆಗ ನಿನ್ನ ಪರಿಚಯವಿರಲಿಲ್ಲ ನನಗೆ!”
“ಹೌದೌದು…. ಅದು ನಿಜವೇ… ನಿನಗಿದರ ಅರಿವೇ ಇರಲಿಲ್ಲ ಬಿಡು!”
“ಖಂಡಿತ ಇರಲಿಲ್ಲ…. ಬೇಕಾದರೆ ಆಣೆಮಾಡಿ ಹೇಳುತ್ತೇನೆ.”
“ನನಗ್ಗೊತ್ತಿದೆ, ಆ ಸಮಯದಲ್ಲಿ ನೀನು….”
“ಪ್ಲೀಸ್, ಜ್ಯೂಲಿಯೋ. ದಯವಿಟ್ಟು ಆ ಸಮಯದ ಬಗ್ಗೆ ಮಾತಾಡಬೇಡ”
“ಸರಿಬಿಡು…. ಒಳ್ಳೆಯದೇ ಆಯ್ತು…. ಬಹುಶಃ ನನಗೆ ಹೊಟ್ಚೆಕಿಚ್ಚು ಅಂತ ನಿನಗನಿಸುತ್ತಿರಬಹುದು ಅಲ್ವಾ? ಖಂಡಿತಾ ಇಲ್ಲ! ನೀನೀಗ ನನ್ನವಳು. ಅಗಾತಾ…. ಸಂಪೂರ್ಣ ನನ್ನವಳು.”
“ಹಾಗಾದರೆ ಮತ್ತೆ ಯಾಕಿಷ್ಟು…..?” ಎಂದೇನೋ ಕೇಳುವಷ್ಟರಲ್ಲಿ ಅವಳ ಕಣ್ಣಿನಿಂದ ಧಾರಾಕಾರ ನೀರು ಸುರಿಯತೊಡಗಿತು. ಜ್ಯೂಲಿಯೋ ಉತ್ತರಿಸಲು ಆತುರಪಟ್ಟ.
“ಎಲ್ಲಾ ನಿನ್ನ ಮನಸ್ಸಿನ ಭ್ರಮೆ! ನಾನು ಸಂತೋಷವಾಗಿಲ್ಲ ಅಂತ ನೀನು ಮತ್ತೆಮತ್ತೆ ತಿಳಿಯುತ್ತಿದ್ದೀ…. ಎಲ್ಲಾ ಹೊತ್ತಿನಲ್ಲೂ ನಗುನಗುತ್ತ ಇರಬೇಕು ಅಂದರೆ ಹೇಗೆ ಸಾಧ್ಯ? ಅದರಲ್ಲೂ ನಿನ್ನ ಈ ಸ್ಥಿತಿಯಲ್ಲಿ ….”
ಜ್ಯೂಲಿಯೋ ಹೀಗೆ ಇದ್ದಕ್ಕಿದ್ದಂತೆ ಖಿನ್ನವಾಗಿ ಬಿಟ್ಟಿದ್ದು ಬಹುಶಃ ತನ್ನ ಹಿಂದಿನ ಪ್ರೇಮಿ ಮಾರಿಯೋನೆಡೆಗಿನ ಅಸೂಯೆಯಿಂದಿರಬಹುದು ಎಂದು ಅಗಾತಾ ತರ್ಕಿಸಿದಳು. “ಹಿಂದೆಲ್ಲ ಅವನೊಡನೆ ತಾನು ನಿರ್ಭಾವುಕಳಾಗಿದ್ದೆ…. ಬಹುಶಃ ಆತ ತಾನು ಸೂಚಿಸುತ್ತಿರುವುದು ಬರೇ ಗೌರವ, ಮತ್ತು ಕೃತಜ್ಞತೆಗಳೆರಡು ಮಾತ್ರ ಅಂತಂದುಕೊಂಡಿದ್ದಾನೆ. ಆದರೆ ಈಗ….” ಎಂದೆಲ್ಲ ಯೋಚಿಸುತ್ತ ಅವನ ಮೇಲಿನ ಪೇಮವನ್ನು ಸಾದರ ಪಡಿಸಲು ತನ್ನಿಂದ ಸಾಧ್ಯವಾದ ಎಲ್ಲ ರೀತಿಯಲ್ಲೂ ಪ್ರಯತ್ನಿಸಿದಳು. ಅದರಲ್ಲೂ, ತನ್ನ ಹಿಂದಿನ ನಿರ್ಭಾವುಕತೆಯನ್ನು ತೊಡೆದುಹಾಕಲು ಉಲ್ಲಾಸ ವ್ಯಕ್ತ ಪಡಿಸತೊಡಗಿದಳು. ಈ ಮಧ್ಯೆ, ಮನಶ್ಯಾಂತಿಯನ್ನು ಕೆಡಿಸಲೆಂದೇ ಮನಸ್ಸಲ್ಲಿ ಮರುಕಳಿಸುತ್ತಿದ್ದ ಕೋರ್ವಾಜಾನ ನೆನಪನ್ನು ಮನಸಾರೆ ಶಪಿಸಿದಳು. ಆದರೆ, ಜ್ಯೂಲಿಯೋಗೆ ಇಂಥಹದ್ದರಲ್ಲೆಲ್ಲ ನಂಬಿಕೆಯಿತ್ತೇ? ಕೆಲವು ಸಲ ತಾನು ನಗುನಗುತ್ತ ಸಂತಸದಿಂದ ಇರುವುದರಿಂದಲೇ ಆತ ಒಳಗೊಳಗೇ ಕ್ಷೋಭೆಗೊಳಗಾಗಿರಬಹುದೇ ಎಂದನಿಸುತ್ತಿತ್ತು. ಇನ್ನು ಕೆಲವೊಮ್ಮೆ ತಾನು ತೃಪ್ತಿ, ಸಂತೋಷ ವ್ಯಕ್ತಪಡಿಸುವುದು ಕೂಡಾ ಅವನಿಗಿಷ್ಟವಿಲ್ಲವೆ ಎಂದೂ ಆನಿಸುತ್ತಿತ್ತು. ಆ ದಿನ ಎಷ್ಟು ನೀರಸವಾಗಿ ಹೇಳಿಬಿಟ್ಟಿದ್ದ. “ನೀನೀಗ ನನ್ನವಳು, ಸಂಪೂರ್ಣ ನನ್ನವಳು” ಅಂತ. ಈಗ ಅವನನ್ನು ಯಾವ ಸಂಗತಿ ಬಾಧಿಸುತ್ತಿರಬಹುದು? ಮಗುವಿನ ಬಟ್ಟೆಗಳನ್ನು ಆರಿಸುತ್ತಿದ್ದಾಗ ಇಂಥ ಪ್ರಶ್ನೆಗಳೆಲ್ಲ ಅವಳಲ್ಲೆದ್ದು ಅಶ್ಚರ್ಯ ಹುಟ್ಟಿಸಿದವು. ಆ ಹೊತ್ತಿಗೆ, ಅವಳು ಮುದುಕಿಯ ಕೋಣೆಯಲ್ಲಿದ್ದಳು. ಜ್ಯೂಲಿಯೋ ಎಲ್ಲೋ ಹೊರಗಡೆ ಹೋಗಿದ್ದು ಮದುವೆಯಾಗಿ ಆಗಲೇ ಐದು ತಿಂಗಳಾಗಿ ಅವಳೀಗ ಎರಡು ತಿಂಗಳ ಬಸುರಿಯಾಗಿದ್ದಳು. ಖಂಡಿತವಾಗಿಯೂ, ಜ್ಯೂಲಿಯೋ ಆಕ್ಷೇಪಿಸುವಂಥದ್ದೇನೂ ಮಾಡಿರಲಿಲ್ಲ. ಆದರೆ, ಅಗಾತಾ ಮಾತ್ರ, ಅವನು ಮಾಡದೆ ಇದ್ದ ಎಲ್ಲದಕ್ಕೂ ಒಳಗೊಳಗೇ ನಿಂದಿಸುತ್ತಿದ್ದಳು. ಯಾವಕಾರಣಕ್ಕೂ ತಾನು ಮಾತುಕೊಟ್ಟಿರುವುದಕ್ಕಿಂತ ತುಸುವೂ ತನ್ನ ಪ್ರೀತಿ ಕಡಿಮೆಯಾಗಬಾರದು ಎಂದವನಿಗೆ ಮನಸ್ಸಲ್ಲಿದ್ದಿರಬಹುದು ಎಂದನಿಸಿತು ಅಗಾತಾಗೆ. ಆದರೆ ವ್ರತ ಈಡೇರಿಸುವ ಹಾಗೆ, ಅದೊಂದು ತೀರಾ ನೀರಸವಾದ ಬಯಕೆಯಲ್ಲವೆ ಎಂದೂ ಅನಿಸಿತು. ಹೌದೌದು…. ಅವನಿಗೆ ತನ್ನ ನಿರೀಕ್ಷೆಯನ್ನು ಮುಟ್ಟಲಾಗಲ್ಲ ಎಂದನಿಸಿರಬೇಕು. ಹಾಗಾಗಿ ತಾನು ವಂಚನೆಗೊಳಗಾದೆ ಎಂಬ ಭಾವನೆ ಅವನಿಗೆ ಬಂದಿರಬೇಕು ಎಂದನಿಸಿತು….
ಆಗಾಗ ಕಾಯಿಲೆಬಿದ್ದಿದ್ದ ಮುದುಕಿ, ತಲೆ ಓಲಾಡಿಸುತ್ತ ಹೃದಯವಿದ್ರಾವಕವಾಗಿ ರೋದಿಸುತ್ತಿದ್ದಳು. ದೀಪ ಹಚ್ಚಿಟ್ಟಲ್ಲಿ ಹೊಲಿಯುತ್ತಿದ್ದಳು. ಅದನ್ನು ಅಲ್ಲಿಯೇ ನಿಲ್ಲಿಸಿ, ಅಗಾತಾ ಆ ಅರೆಬೆಳಕಿನಲ್ಲೇ ಮುದುಕಿಯನ್ನು ಬಲುಹತ್ತಿರದಿಂದ ನೋಡಿದಳು.
“ಏನಾದರೂ ಬೇಕಿತ್ತೇ…. ಅಮ್ಮಾ?”
“ಬೇಡ”
ಈಗ ಇನ್ನೊಮ್ಮೆ, ಕಣ್ಣೆತ್ತಿನೋಡಿದರೆ, ಮುದುಕಿ ತನ್ನ ಮೇಲೆಯೇ ತಣ್ಣಗಿನ ದೃಷ್ಟಿನೆಟ್ವಿರುವುದು ಕಂಡಿತು.
“ಇನ್ನೂ ಹೊಲಿಯುತ್ರಿದ್ದೀಯಾ?”
“ಹೌದಮ್ಮಾ”
“ಬಹಳ ಹೊತ್ತಾಯಿತು. ಜ್ಯೂಲಿಯೋ ಇನ್ನೂ ಬಂದಿಲ್ಲ.”
“ಹೊರಗಡೆಯೇ ಇರಲಿಬಿಡಿ…. ಇಲ್ಲಿ ಬಂದು ನಮ್ಮ ಜತೆ ಮಾಡುವುದಕ್ಕೇನಿದೆ?”
“ಆದರೆ, ನನಗೆ ಹಾಸಿಗೆ ಮೇಲೆ ಮಲಗಿಸುವವರು ಯಾರು?”
“ನಾನು ಕೆಲಸದ ಹುಡುಗಿಯನ್ನು ಕರೆಸಲೆ?”
“ಬೇಡ…. ಬೇಡ…. ಅವನು ನನ್ನ ನೋಡಿಕೊಳ್ಳುವಂತೆ, ನೋಡಿಕೊಳ್ಳಲು ನಿಮಗ್ಯಾರಿಗೂ ಗೊತ್ತಿಲ್ಲ…. ನಿಮ್ಮಿಬ್ಬರ ನಡುವೆ ಏನಾದರೂ ಮಾತಾಗಿದೆಯೆ? ಹಿಂದೆಲ್ಲ ಸರಿಯಾದ ಟೈಮಿಗೆ ಬಂದುಬಿಡುತ್ತಿದ್ದ. ಈಗ ಇಷ್ಟೊಂದು ಕಾಯುವಂತೆ ಮಾಡುತ್ತಿದ್ದಾನೆ?”
“ನಿಮ್ಮ ಹಾಗೇ ನಾನೂ ಅವನನ್ನು ಕಾಯುತ್ತಿದ್ದೇನೆ ಅಮ್ಮಾ …. ನಮ್ಮಿಬ್ಬರ ಮಧ್ಯೆ ಯಾವ ಜಗಳವೂ ನಡೆದಿಲ್ಲ.”
ಅಷ್ಟರಲ್ಲಾಗಲೇ, ಜ್ಯೂಲಿಯೋ ಸಣ್ಣಗೆ ಅಸಂತುಷ್ಟನಾಗಿದ್ದ. ಅವಳನ್ನು ನೋಡಿಕೊಳ್ಳುವುದರಲ್ಲಿ ತಾನೇನೂ ವಿಫಲನಾಗಿಲ್ಲ ಎಂದು ರುಜುವಾತು ಪಡಿಸುವುದರ ಬೆನ್ನಿಗೇ ಅನೇಕ ಕ್ಷಮಾಪಣೆ, ವಾದವಿವಾದಗಳು ನಡೆದುಹೋದವು. ಅಗಾತಾಗೆ ಆತ ಎದುರೆದುರೇ ಸೋತರೆ ಒಳ್ಳೆಯದಿತ್ತು ಎಂದಿತ್ತಾದರೂ ಹಾಗಾಗಲಿಲ್ಲ. ಕೊನೆಗೂ, ಅವಳ ತುಟಿಗಳ ಮೇಲೆ ಅಪರೂಪಕ್ಕೆ ಸುಳಿದಾಡುತ್ತಿದ್ದ ನಗು, ಅವಳೊಳಗಿದ್ದ ಚೂರುಪಾರು ಉಲ್ಲಾಸವನ್ನು ಕೂಡಾ ಸಂಪೂರ್ಣ ಸುಟ್ಟೇ ಹಾಕಿದ.
-೧೩-
ಅಗಾತಾ, ತುಸುಖಿನ್ನಳಾಗಿರುವುದು ಗಮನಿಸಿದ ಜ್ಯೂಲಿಯೋ ಹಿಂದಿನಂತೆ ಮನೆಯಲ್ಲೇ ಇರತೊಡಗಿದ; ಎಂದಿನ ತನ್ನ ಪ್ರೀತಿ, ಮಮತೆಯನ್ನು ಪ್ರದರ್ಶಿಸತೊಡಗಿದ.
“ನನ್ನವಳು ಎಂಬ ಸಂಗತಿಯೇ ನಿನಗೆ ಖೇದವುಂಟು ಮಾಡಿದೆಯೋ ಹೇಗೆ?”
“ಇಲ್ಲ. ಜ್ಯೂಲಿಯೋ…. ನನ್ನ ಸಂಕಷ್ಟಗಳೆಲ್ಲ ನಿನ್ನ ಪರವಾಗಿಯೇ ಇವೆ.”
ತುಸುತುಸುವೇ, ಹಿಂಜರಿಕೆಯಿಂದ ಆರಂಭಿಸಿದ ಅವಳು ಅವನ ಪ್ರೀತಿಯ ಉತ್ತೆಜನಕ್ಕೆ ಪುನಃ ಉಲ್ಲಸಿತಳಾದಳು. ಆದರೂ ಅದು ಹೆಚ್ಚು ಕಾಲ ಉಳಿಯಲಿಲ್ಲ. ಜ್ಯೂಲಿಯೋ ಪುನಃ ದುಃಖದಲ್ಲಿ ಮುಳುಗಿಬಿಟ್ಟ.
ಇತ್ತ ತೋಟದ ದೇಖರೇಖೆ ಮಾಡಲಾಗದೆ ಈ ಸಲ ಗಿಡಗಳು ಹೂ ಬಿಡಲೇ ಇಲ್ಲ. ಅದರ ಮಾಲೀಕರಾದ ಜ್ಯೂಲಿಯೋ ಕೂಡ ಹಿಂದೊಮ್ಮೆ ನೋಡಿಕೊಳ್ಳುತ್ತಿದ್ದ ಮಾಲೀಕರೂ ಆಗಿರಲಿಲ್ಲ.
ಅಗಾತಾ, ತನ್ನ ತಾಯಿಗೆ ಬೇಜಾರಾಗದಿರಲೆಂದು ಆಗಾಗ ಗಾಡಿಹತ್ತಿ ನೋಡಿಬರುತ್ತಿದ್ದಳು. ನಡುವೆ ಅಕ್ಕನನ್ನು ಮಾತಾಡಿಸಿ ಸಲಹೆ ಪಡೆದುಕೊಂಡು ತನ್ನನ್ನೇ ಸಂತೈಸಿಕೊಳ್ಳುವಳು.
“ಎಲ್ಲ ಗಂಡಸರೂ ಹಾಗೆಯೇ…. ಮದುವೆಗೆ ಮುಂಚೆ ಬೆಂಕಿಯುಂಡೆಯಂತಿರುತ್ತಾರೆ…. ಆಮೇಲೆ ಬರೇ ಬೂದಿರಾಶಿ.” ಎಂದು ಎರ್ಮಿನಿಯಾ ಸಮಾಧಾನಪಡಿಸುವುದಿತ್ತು.
ಆದರೆ, ಅಗಾತಾಗೆ ಇಂಥ ಮಾತು ತೃಪ್ತಿ ಕೊಡುತ್ತಿರಲಿಲ್ಲ.
“ಇಲ್ಲ…. ಇಲ್ಲ…. ಇದನ್ನೂ ಮೀರಿದ ಏನೋ ಒಂದು ಕಾರಣವಿದೆ! ಬಹುಶಃ ನನ್ನ ನಸೀಬೇ ಹಾಗಿರಬೇಕು. ನಾಮ ಪ್ರೇಮಿಸದೇ ಇದ್ದಾಗ ನನ್ನನ್ನು ಪ್ರೇಮಿಸುವುದು; ನಾನು ಪ್ರೇಮಿಸುವಾಗ ನನ್ನನ್ನು ಪ್ರೇಮಿಸದೇ ಇರುವುದು…. ಅಲ್ಲದೆ ಇದು ನನ್ನ ಎರಡನೇ ಪ್ರಯತ್ನ ಕೂಡ.”
“ಸುಮ್ಮನೆ ನೀನೆಲ್ಲವನ್ನೂ ಕ್ಲಿಷ್ಣವಾಗಿಸುತ್ತಿದ್ದೀ! ಸಮಯ ಹೇಗೂ ಸರಿಯುವಂಥದ್ದೇ…. ನನ್ನನ್ನು ನೋಡಿದೆಯಾ? ಹೇಗೆ ನಾನು ಏಲ್ಲದಕ್ಕೂ ಹೊಂದಿಕೊಂಡಿದ್ದೇನೆ ಅಂತ….”
ಅಗಾತಾ ನಿಟ್ಟುಸಿರುಬಿಡುತ್ತ, “ನೀನು ಸಂತೊಷವಾಗಿದ್ದೀಯಾ?” ಕೇಳಿದಳು.
“ನಾನು ಸಂತೋಷವಾಗಿರುವುದೆ? ನನ್ನ ಗಂಡ ನನ್ನ ಬಳಿ ಇದ್ದರೆ ತಾನೆ!”
“ಕರೆಕ್ಟ್! ಅಂದರೆ ವಿನಾಕಾರಣ ಖಿನ್ನನಾಗಿ, ಬೆಪ್ಪನಂತೆ ಸದಾಮನೆಯಲ್ಲೇ ಕೂತಿರುವ ಗಂಡನಿದ್ದರೆ ಒಳ್ಳೆಯದು ಅಂತ ನಿನ್ನ ಲೆಕ್ಕಾಚಾರ! ನನ್ನ ದುಃಖ ನಿನಗೆ ಹೇಗೆ ಅರ್ಥವಾಗಬೇಕು? ಗಂಡನಿಗಾಗಿ ತಿಂಗಳುಗಟ್ಪಲೆ ಕಾದುಕಾದು ಯಾವುದೇ ಕಿರಿಕಿರಿಯಿಲ್ಲದ ಶಾಂತ ಬದುಕಿಗೆ, ನೀನು ಹೊಂದಿಕೊಂಡಿದ್ದೀ…. ನಿನ್ನ ಮಕ್ಕಳನ್ನು ನೋಡಿಕೊಳ್ಳುತ್ತಾ… ನಿನಗೆ ಬೇರೆಯಾರ ಚಿಂತೆಯೂ ಇಲ್ಲ…. ಆತ ಬಂದಿದ್ದೇ ಒಂದುವಾರ ಖುಷಿಯಲ್ಲಿ ಮುಳುಗಿಬಿಡುತ್ತೀ…. ನಿನ್ನೊಳಗಿರುವ ಪ್ರೀತಿಗೆ ದಣಿದು ಸುಸ್ತಾಗಲು ಸಮಯವಾದರೂ ಎಲ್ಲಿದೆ?”
“ಅಂದರೆ, ಜ್ಯೂಲಿಯೋ ನಿನ್ನನ್ನು ಪ್ರೀತಿಸುತ್ತಿಲ್ಲ ಅಂತ ಅರ್ಥವೆ?”
“ನನಗ್ಗೊತ್ತಿಲ್ಲ, ನನಗೇನು ಗೊತ್ತಿಲ್ಲಪ್ಪ…. ನೋಡು ನನ್ನ” ಎನ್ನುತ್ತ ತನ್ನ ಒಂಟಿ ಬದುಕಿನ ಕಥನವನ್ನು ಅಕ್ಕನಿಗೆ ಹೇಳುತ್ತ ಹೋದಳು.
ಒಂದು ದಿವಸ, ಜ್ಯೂಲಿಯೋ ಊಟವಾದ ನಂತರ ಎಂದಿನಂತೆ ಪೇಪರು ಹಿಡಿದು ಕೂತಿದ್ದಾಗ ವಿಚಿತ್ರವಾಗಿ, ಗಹಗಹಿಸಿದ.
“ಏನಾಯ್ತು?” ಅಗಾತಾ ಕೇಳಿದಳು.
“ನೋಡಿಲ್ಲಿ…. ಇಲ್ಲಿ ಬಾ…. ನೋಡು” ಎಂದು ಉದ್ದರಿಸುತ್ತ, ಪೇಪರನ್ನು ಅವಳಿಗೆ ತೋರಿಸುತ್ತ ತನ್ನ ನಗು ಮುಂದುವರೆಸಿದ.
“ಏನು?”
“ನೋಡಿಲ್ಲಿ…. ಇದನ್ನು ಓದು…. ಹಸ್ತಾಕ್ಷರ ಗಮನಿಸಿದೆಯಾ?”
ಅಗಾತಾ, ನೋಡಿದವಳೇ, ಮೆಂಕಾಗಿಬಿಟ್ಟಳು. ಜ್ಯೂಲಿಯೋ ಮಾತ್ರ ತನ್ನ ನಗುನಿಲ್ಲಿಸಲಿಲ್ಲ. ಪೇಪರಿನಲ್ಲಿ ಮಾರಿಯೋ ಕೋರ್ವಾಜಾನ ’ದಿ ಡೆಸರ್ಶನ್’ (ಪರಿತ್ಯಜಿಸುವುದು) ಎಂಬ ಹೆಸರಿನ ಕವಿತೆಯೊಂದು ಪ್ರಕಟವಾಗಿತ್ತು.
‘ಓದಿದೆಯಾ? ನೀನು ಅದನ್ನು ಓದಲಿ ಎಂಬ ಕಾರಣದಿಂದಲೇ ಅವನು ಅದನ್ನು ಈ ಪೇಪರಿನಲ್ಲಿ ಅಚ್ಚುಹಾಕಿಸಿದ್ದು. ಕಾಣ್ತಾ ಇಲ್ವಾ? ಕಳ್ಳಬಡ್ಡೀಮಗ! ಪಾಪ ಬಹಳ ಸಂಕಟಪಡುತ್ತಿದ್ದಾನೆ! ಓದು ಓದು! ಕಲೆ ಅವನನ್ನು ಕಂಗೆಡಿಸಿದೆ. ಧೈರ್ಯಗಳೆಲ್ಲ ಅವನ ಕೈಕೊಟ್ಟಿವೆ…. ನೀನು ಮತ್ತೆ ಅವನ ಹೃದಯದೊಳಗೆ ಪ್ರವೇಶಪಡದಿದ್ದೀ…. ಆತ ಮತ್ತೊಮ್ಮೆ ನಿನ್ನನ್ನು ಪ್ರೀತಿಸಲು ಆರಂಭಿಸಿದ್ದಾನೆ? ಅವನು ಹೇಳುವುದನ್ನು ಕೇಳಿಸಿಕೊಂಡೆಯಾ?’
“ನನ್ನೊಳಗಿನ ಪ್ರೇಮಾಗ್ನಿ ನಿನಗೆ ಕಾಣಿಸಿದರೆ ಮಾತ್ರ”
ಪೇಪರನ್ನು ಕೈಯಿಂದ ಕೆಳಬೀಳಲು ಬಿಟ್ಟು, ಅಗಾತಾ ಈಗ ಸ್ತಬ್ಧಳಾಗಿ ಜ್ಯೂಲಿಯೋನನ್ನೇ ನೋಡಿದಳು. ಆತ ಬಾಗಿ ಅವಳನ್ನು ಅಪ್ಪಿಕೊಂಡು, ತಲೆಯನ್ನು ತನ್ನೆದೆಗೆ ಒತ್ತಿಕೊಳ್ಳುತ್ತ, ಅವಳ ಕೂದಲನ್ನು ಚುಂಬಿಸಿದ.
“ಜ್ಯೂಲಿಯೋ…. ಪ್ಲೀಸ್!”
“ಓಹ್…. ಸಾರಿ ನಾನು ಯೋಚೆಸಲೇ ಇಲ್ಲ…. ಛೆ ನಾನು ನಿನ್ನ ಮನಸ್ಸನ್ನು ನೋಯಿಸಿಬಿಟ್ಟೆ!”
ಆತ ಈಗ ಅವಳೆದುರು ಮೊಣಕಾಲೂರಿ, ಕೈಗಳನ್ನೆತ್ತಿ ಕೊಂಡು ಅವಳ ಕಣ್ಣಲ್ಲಿ ಬಲು ಅಕ್ಕೆರೆಯಿಂದ ಮಾತಾಡತೊಡಗಿದ.
“ಆ ಮೂರ್ಖನನ್ನು ನೋಡಿ ಬೇಜಾರಾಗುತ್ತಿದೆ…. ತಾನು ಮಾಡಿದ ಕೆಲಸಕ್ಕೆ ಅವನಿಗೆ ಈಗ ಸಾರಿ ಎನಿಸುತ್ತಿದೆ? ನಿನ್ನಂಥ ಒಳ್ಳೆ ಹುಡುಗಿಯನ್ನು ಬಿಟ್ಟು ಬಿಡುವುದೆಂದರೆ.”
ತುಸುಗೊಂದಲಕ್ಕೊಳಗಾದ ಅಗಾತಾ ವಿಷಾದದ ನಗೆನಕ್ಕಳು.
“ಒಳ್ಳೆ ಹುಡುಗಿಯಾ? ಈಗಲೂ ಸಹ ?”
ನಡುವೆ ತಡೆದಿದ್ದಕ್ಕೆ ಜ್ಯೂಲಿಯೋಗೆ ಸಿಟ್ಟು ಬಂದು, “ನಾನು ನಿನ್ನ ಮನಸ್ಸನ್ನು ನೋಯಿಸಿಲ್ಲ…. ಹೇಳು ನೋಯಿಸಿದ್ದೀನಾ?” ಎಂದು ಕೇಳಿದ.
-೧೪-
ಇದ್ದಕ್ಕಿದ್ದಂತೆ ಆಕಾಶ ಕಪ್ಪಾಗಿ ಆ ಸಂಜೆ ಮಳೆಯಾಗುವುದು ಖಾತರಿಯಾಯಿತು. ಸಮುದ್ರ ತೀರದ ಉಪನಗರದಲ್ಲಿ ವಾಸಿಸುತ್ತಿದ್ದ ಎರ್ಮಿನಿಯಾಳ ಮನೆಗೆ ಅಗಾತಾ ಹೊರಟಿದ್ದಳು. ತರಗೆಲೆಯಂತೆ ಅತ್ತಿತ್ತ ವಾಲುವ ಎತ್ತರದ ಮರಗಳಡಿ ಕುದುರೆಗಾಡಿ ಸಾಗುತ್ತಿರುವಾಗ, ಕುದುರೆಗೆ ಮಳೆಯ ಸುಳಿವು ಹತ್ತಿರಬೇಕು ಎಂಬಂತೆ ಅದು ಹೇಷಾರವ ಮಾಡುತ್ತಿತ್ತು.
ಗಾಡಿ ಓಡಿಸುವ ಕೋಚ್‍ಮನ್ಗೆ ಅಗಾತಾ ಇನ್ನೇನು ತಿರುಗಿ ವಾಪಸು ಹೋಗುವಾ ಎಂದು ಹೇಳುವವಳಿದ್ದಳು. ಆದರೆ, ಆ ಸಂಜೆ ಅಮೆರಿಕಾದಿಂದ ಸೇಸಾರ್ ಕೋರ್ವಾಜಾ ಆಗಮಿಸುವವನಿದ್ದ. ಎರ್ಮಿನಿಯಾ ಅವಳನ್ನು ಮತ್ತು ಜ್ಯೂಲಿಯೋನನ್ನು ಮನೆಗೆ ಕರೆದಿದ್ದಳು.
ಪೇಪರಿನ ಈ ಫಟನೆಯ ನಂತರ ಜ್ಯೂಲಿಯೋನಲ್ಲಿ ಇನ್ನೊಂದು ಬದಲಾವಣೆ ಆಗಿತ್ತು. ಈಗ ಆತ ಅಗಾತಾಳ ಪ್ರೇಮಕ್ಕೆ ಪ್ರತಿಯಾಗಿ ಬೇಸರಗೊಂಡವನಂತೆ ವರ್ತಿಸುತ್ತಿರಲಿಲ್ಲ. ಬದಲಿಗೆ, ಅವಳ ಒಲುಮೆ-ವಯ್ಯಾರಗಳು ಅವನಿಗೂ ಇಷ್ಟವಾಗತೊಡಗಿದವು. ಆಗೆಲ್ಲ, ಅವನು ಮುಗುಳ್ನಗುತ್ತಿದ್ದ. ಆದರೆ, ಇಂಥ ನಗುವಿಗೆಲ್ಲ ಹಿರೀಕನ, ಅನುಗ್ರಹತೆ ತೋರುವವನ ಛಾಪಿರುತ್ತಿತ್ತು.
‘ಸರಿ… ಸರಿ ನಿನಗೇನು ಬೇಕೋ ಅದು ಸಿಗುವುದು. ಈ ಸಂಜೆ ಎಂದಿಗಿಂತ ಹತ್ತು ನಿಮಿಷ ಬೇಗ ಬಂದರೆ ಆಯ್ತು. ಅಷ್ಟೇ ತಾನೆ ನಿನಗೆ ಬೇಕಾಗಿರುವುದು?’
ಅವಳು ತನ್ನನ್ನು ಪ್ರೀತಿಸುತ್ತಿದ್ದಾಳೆ ಎಂದು ಗೊತ್ತಾಗಿ ಅವನಿಗೂ ಸಂತೋಷವಾಯಿತು; ಅಲ್ಲದೆ, ಈಗವಳು ತನ್ನಿಂದಾಗಿ ಒಳಗೊಳಗೇ ನರಳುತ್ತಿದ್ದಾಳೆ ಎಂಬ ಸಂಗತಿ ಗೊತ್ತಾಗಿ ಖುಷಿಯೂ ಆಯಿತು.
ಅಗಾತಾ, “ಅವನೇನು ಪ್ರತೀಕಾರ ಬಯಸುತ್ತಿದ್ದಾನೆಯೆ?” ಎಂದು ನೆನೆದು ಆಶ್ಚರ್ಯ ಚಕಿತಳಾದಳು. ‘ಆತ ಹೀಗೆಲ್ಲ ಮಾಡುವುದು ನೋಡಿದರೆ ಅವನ ಕಷ್ಟಗಳಿಗೆಲ್ಲ ನಾನೇ ಕಾರಣಳು ಎಂಬಂತಿದೆ.’ ಈ ನಡುವೆ ಜ್ಯೂಲಿಯೋ ಅವಳ ಪ್ರೀತಿಯ ಮಾತಿಗೆಲ್ಲ ನಟಿಸುವುದು ತನ್ನ ಹಕ್ಕು ಎಂಬಂತೆ ತಾಳ್ಮೆಯಿಂದಿರುವ ನಟನೆ ಮಾಡುತ್ತಿದ್ದ. ಅವನ ಈ ತಾಳ್ಮೆಯ ಡಾಂಭಿಕ ಪ್ರದರ್ಶನಕ್ಕೆ ಅವಳು ಕೃತಜ್ಞತೆ ಹೇಳಲೇಬೇಕು ಎನ್ನುವಂತೆ ಮಾಡುತ್ತಿದ್ದ. ಬಟ್ಟೆ ಧರಿಸುವಾಗ ತುಸು ಜಾಸ್ತಿಯೇ ಜಾಗರೂಕಳಾಗಿರುವಂತೆ ಅವಳಿಗೆ ಸೂಚಿಸಿದ. ಮನೆಯಲ್ಲಿ ಇಷ್ಟೊಂದು ಗಲೀಜಾಗಿರುವುದು ತನಗಿಷ್ಣವಿಲ್ಲ ಎಂದೂ ಅವಳಿಗೆ ಸೂಚಿಸಿದ….
“ಹೆಂಗಸರೆಲ್ಲ ಒಂದೇ ಥರ! ಒಮ್ಮೆ ಗಂಡ ಸಿಕ್ಕಿದ್ದೇ ತಮ್ಮ ಬಾಹ್ಯರೂಪದ ಬಗ್ಗೆ ಜಾಸ್ತಿ ಕಾಳಜಿವಹಿಸುವುದೇ ಇಲ್ಲ – ಅವನಿಂದ ಯಾವ ತೊಂದರೆಯೂ ಇಲ್ಲ ಎಂಬಂತೆ ಇದ್ದುಬಿಡುತ್ತಾರೆ! ಬಡಪಾಯಿ ಗಂಡ ಮಾತ್ರ ಎಲ್ಲದಕ್ಕೂ ಕುರುಡನಾಗಿದ್ದು- ಇಷ್ಟವಿರಲಿ, ಇಲ್ಲದಿರಲಿ-ಗುಲಾಮನಂತೆ ಶರಣಾಗಿಬಿಡಬೇಕು….”
ದೇಹ ತನ್ನ ರೂಪ ಕಳೆದುಕೊಂಡು, ಮುಖ ನಿರಾಸಕ್ತಿ ಸೂಸುತ್ತಿದ್ದುದರಿಂದ ಅಗಾತಾಗೆ ಕನ್ನಡಿಯೆದುರು ನಿಂತಾಗೆಲ್ಲ ತುಸು ಧೈರ್ಯಗುಂದಿದಂತೆ ಅನಿಸುತ್ತಿತ್ತಾದರೂ ಗಂಡನನ್ನು ತೃಪ್ತಿ ಪಡಿಸುವುಕ್ಕಾಗಿ ಅವಳು ಉಡುಗೆತೊಡುಗೆಯ ಬಗ್ಗೆ ಹೆಚ್ಚು ಕಾಳಜಿವಹಿಸತೊಡಗಿದಳು.
ಗಾಡಿ ಎರ್ಮಿನಿಯಾಳ ಮನೆಯೆದುರು ನಿಂತಿತು. ಅಗಾತಾ ಭಾರವಾದ ಹೆಜ್ಜೆ ಗಳನ್ನಿಡುತ್ತ ಮೆಲ್ಲನೆ ಇಳಿದಳು. ಮೆಟ್ಟಿಲ ತುದಿ ತಲುಪಿದವಳಿಗೆ ನಿಲ್ಲುವುದೇ ಕಷ್ಟವಾಗಿ ಎದುಸಿರು ಬಿಡತೊಡಗಿದಳು. ಅವಳ ಕಣ್ಣುಗಳು ಅರ್ಧ ಮುಚ್ಚಿದ್ದವು.
ಬೆಲ್ಲನ್ನು ಅದುಮಿದವಳು ತನ್ನ ಹಣೆಯನ್ನು ಕೈಗೆ ಆಧಾರವಾಗಿಟ್ಟುಕೊಂಡು ಬಹಳ ಹೊತ್ತಿನವರೆಗೂ ಬಾಗಿಲಲ್ಲೇ ನಿಂತಿದ್ದಳು.
ಬಾಗಿಲನ್ನು ತೆರೆಯಲು ಯಾರೂ ಬರುತ್ತಿರಲಿಲ್ಲವೆ?
ಕೊನೆಗೂ ಬಾಗಿಲು ತೆರೆಯಿತು.
‘ಯಾರದು?’ ಎಂಬ ಸ್ವರ ಕೇಳಿದ್ದೇ ಅವಳ ಎದೆ ಧಸಕ್ಕೆಂದಿತು.
ಮಾರಿಯೋ ಕೋರ್ವಾಜಾ ತಲೆಯನ್ನು ಹೊರಹಾಕಿ, ‘ಅಗಾತಾ’ ಎಂದು ಭಯದಿಂದಲೇ ಉದ್ಗರಿಸಿದ. ಅವಳಿನ್ನೂ ಬಾಗಿಲಿಗೆ ತಲೆಯಾನಿಸಿ ನಿಂತೇ ಇದ್ದಳು. ಒಳಗಡೆ ಹಾಲ್ನಲ್ಲಿ ಕತ್ತೆಲೆಯಿತ್ತು.
‘ಅವನಿಲ್ಲಿದ್ದಾನೆಯೆ? ಆತ ಇಲ್ಲಿಗೆ ಹೇಗೆ ಬಂದ?’ ಒಂದು ಕ್ಷಣ ಏನೊಂದೂ ನಿರ್ಧರಿಸಲಾಗದೆ ಅಗಾತಾ ಈಗ ಮೆಲ್ಲ ಒಳಪ್ರವೇಶಿಸಿದಳು. ಒಳಗೆ, ಯಾವ ಕೋಣೆಯಲ್ಲೂ ದೀಪ ಹಚ್ಚಿರಲಿಲ್ಲ. ಕೊನೆಯ ಕೋಣೆಯಾಚೆಗಿದ್ದ ಬಾಲ್ಕನಿಯ ಕನ್ನಡಿಯಲ್ಲಿ ಸಮುದ್ರ ಕಾಣಿಸುತ್ತಿತ್ತು.
ಆ ಕೊಣೆಯತ್ತ ಹೋದಳು. ಮಾರಿಯೋ ಅವಳನ್ನು ಹಿಂಬಾಲಿಸಿದ.
ಮಧ್ಯಕೋಣೆಯಲ್ಲಿದ್ದ ಟೇಬಲ್ಲನ್ನು ಗಟ್ಟಿಯಾಗಿ ಹಿಡಿದುಕೊಂಡು, ‘ಎರ್ಮಿನಿಯಾ?’ ಎಂದು ಉದ್ವೇಗದಿಂದ ಕರೆದಳು.
“ಅವಳು ಇಲ್ಲಿಲ್ಲ” ಎಂದು ಮಾರಿಯೋ ಥಟ್ಟನೆ ಉತ್ತರಿಸಿದ. ಅಗಾತಾ ಮುಂದಕ್ಕೆ ಹೆಜ್ಜೆ ಇಟ್ಟಿದ್ದೇ, ‘ಬೇಡಾ… ಬೇಡಾ! ಅಲ್ಲೇ ನಿಲ್ಲು…. ನಾನೇ ಹೋಗುತ್ತೇನೆ…. ನೀನು ಇಲ್ಲೇ ಕೂತುಕೋ…. ಎರ್ಮಿನಿಯಾ. ಮಕ್ಕಳ ಜತೆ ಹಡಗುಕಟ್ಟೆಯಲ್ಲಿದ್ದಾಳೆ…. ಹಡಗು ಆಗಲೇ ಬಂದರಿನಲ್ಲಿ ಸಜ್ಜಾಗಿ ನಿಂತಿದೆ….”
ಅಗಾತಾ ಡೈನಿಂಗ್ ಕುರ್ಚಿಯಲ್ಲಿ ಕೂತಳು. ‘ಛೆ…. ಯಾಕೆ ಇವನು ಹೋಗುತ್ತಿಲ್ಲ?’ ಎಂದು ಯೋಚಿಸಿದ ಅವಳು ಆಗಷ್ಟೆ ಹುಟ್ಟಿಕೊಂಡ ಮೌನದಲ್ಲಿ ಎದುಸಿರುಬಿಡತೊಡಗಿದಳು. ಆ ಕತ್ತಲಲ್ಲೂ ಅವನು ತನ್ನತ್ತಲೇ ನೋಡುತ್ತಿದ್ದಾನೆ, ತನ್ನ ಈ ಪರಿಸ್ಥಿತಿಯನ್ನು ನೆನೆದು ಆಶ್ಚರ್ಯಗೊಂಡಿದ್ದಾನೆ ಎಂದು ಅವಳಿಗನಿಸಿತು.
ಆದರೆ ಅವನಿಗೆ ಮಾತ್ರ, ಅವಳ ಜತೆ ಮಾತಾಡಬೇಕೋ, ಅಲ್ಲಿಂದೆದ್ದು ಹೊರಡಬೇಕೋ ಗೊತ್ತಾಗಲಿಲ್ಲ. ಕೈಗಳಿಂದ ಅವನು ತನ್ನ ಮುಖ ಮುಚ್ಚಿಕೊಂಡಿದ್ದ. ಇಬ್ಬರಲ್ಲೂ ಬಹುಶಃ, ಈ ಕ್ಷಣದ ಭಾವದೊತ್ತಡ ಹಳೇ ಗೊಂದಲದ ನೆನಪುಗಳನ್ನು ಮತ್ತೆ ಮರುಕಳಿಸಿರಬೇಕು.
ಹತ್ತಿರದಲ್ಲೇ ಉಕ್ಕುತ್ತಿದ್ದ ಸಮುದ್ರದ ಭೋರ್ಗರೆತ ಇಬ್ಬರ ಕಿವಿಯನ್ನೂ ತುಂಬುತ್ತಿತ್ತು. ಇತ್ತ ಕೋಣೆಯೊಳಗೆ ಕತ್ತಲು ದಟ್ಟವಾಗಿತ್ತು.
ಇದ್ದಕ್ಕಿದ್ದಂತೆ ಅಗಾತಾ ದೃಢಸಂಕಲ್ಪ ಮಾಡಿದವಳಂತೆ ಎದ್ದುನಿಂತಳು.
ಮುಖದಿಂದ ಕೈಗಳನ್ನು ಸರಿಸಿದ ಮಾರಿಯೋ, ‘ನಾನು ಹೋಗುತ್ತೇನೆ’ ಎಂದು ಮತ್ತೆ ಹೇಳಿದ.
ಒಂದು ಸಣ್ಣ ವಿರಾಮದ ನಂತರ, ಉಗ್ಗುತ್ತ, “ನನ್ನ ಕ್ಷಮಿಸಿಬಿಡು ಅಗಾತಾ…. ನನ್ನಿಂದ ತಪ್ಪಾಗಿದೆ…. ನಿನಗೆ ಅನ್ಯಾಯ ಮಾಡಿಬಿಟ್ಟೆ”. ಎಂದ.
“ಏನೂ ತಪ್ಪು ಮಾಡಿಲ್ಲ….” ಮಂಕಾಗಿ ಹೇಳಿದಳು.
ತನಗರಿವಿಲ್ಲದೆ ಮನೆಯಿಂದ ಹೊರಬಂದ ಮಾರಿಯೋ ತಂತಾನೇ ಹಡಗುಕಟ್ಟೆಗೆ ಹೊರಟುಹೋದ. ಅರ್ಧದಾರಿಯಲ್ಲೇ ತನ್ನ ಅಣ್ಣನನ್ನು ಭೇಟಿಯಾದ. ಎರಡೂ ತೋಳುಗಳಲ್ಲಿ ಮಕ್ಕಳು, ಅಕ್ಕಪಕ್ಕದಲ್ಲಿ ಎರ್ಮಿನಿಯಾ ಮತ್ತು ಕೆಲಸದಾಕೆ ಇದ್ದರು.
“ನೋಡು…. ಬಂದೇ ಬಿಟ್ಟ…. ಒಂದು ಮುತ್ತು ಕೊಡು ಮಾರಾಯಾ….. ಅಪ್ಪಿಕೊಳ್ಳಲಂತೂ ಆಗುವುದಿಲ್ಲ…. ಹೇಗಿದ್ದೀಯಾ? ತುಂಬಾ ತೆಳ್ಳಗಾಗಿದ್ದೀಯಲ್ಲ …. ಹೌದಲ್ಲಾ?”
“ನಾನು ಮತ್ತೆ ಚೇತರಿಸಿಕೊಳ್ಳಲೆಂದು ತಂದೆ ಮನೆಗೆ ಹೋಗುತ್ತಿದ್ದೇನೆ…. ನಾಳೆ ಬೆಳಿಗ್ಗೆ ಹೊರಡುತ್ತಿದ್ದೇನೆ….” ಎಂದ ಮಾರಿಯೋ ಈಗ ಎರ್ಮಿನಿಯಾಳತ್ತ ತಿರುಗಿ, “ಅಗಾತಾ ಬಂದಿದ್ದಾಳೆ, ನಿನ್ನನ್ನ ನೋಡಲೆಂದೇ ಬಂದಿದ್ದಾಳೆ.” ಎಂದ.
‘ಅಗಾತಾ ಬಂದಿದ್ದಾಳಾ? ನೀನು ನೋಡಿದೆಯಾ ಅವಳನ್ನು?’ ಎಂದಳು ಉದ್ವೇಗದಿಂದ.
‘ಹೌದು…. ನಿನಗಾಗಿ ಕಾಯುತ್ತ ಇದ್ದಾಳೆ!’
‘ಪಾಪ…’ ಎಂದ ಸೇಸಾರ್.
‘ಗುರುತಿಸಲೂ ಸಾಧ್ಯವಾಗ್ತಾ ಇಲ್ಲ ಅವಳನ್ನು’ ಎಂದು ಮಾರಿಯೋ ಬಿಡಿಬಿಡಿಯಾಗಿ ತನ್ನಷ್ಣಕ್ಕೇ ಹೇಳಿದ.
‘ಹೌದು. ಸಹಜ ಅದು. ಅವಳು ಗರ್ಭಿಣಿಯಾಗಿದ್ದಾಳೆ…. ನನ್ನನ್ನು ನೋಡು…. ಮೂವರನ್ನು ಎತ್ತಿ ಕೊಂಡಿದ್ದೇನೆ’ ಎಂದು ಮಕ್ಕಳನ್ನು ಇನ್ನೊಂದು ತೋಳಿಗೆ ವರ್ಗಾಯಿಸುತ್ತ ನಕ್ಕು ಹೇಳಿದ.
ಅವರೆಲ್ಲ ಮನೆಗೆ ಬಂದಾಗ, ಆಗಷ್ಟೇ ಆಗಮಿಸಿದ್ದ ಜ್ಯೂಲಿಯೋ ಅಕುರ್ಜಿಯೂ ಅಲ್ಲಿದ್ದ, ಅಗಾತಾ ಮಾತ್ರ ಮಾರಿಯೋ ಹೊರಟಾಗ ಹೇಗಿದ್ದಳೋ ಅದೇ ಭಂಗಿಯಲ್ಲಿದ್ದಳು.
ಕೋಣೆಯಲ್ಲಿನ್ನೂ ಕತ್ತಲಿತ್ತು.
‘ಹಹಹಾ…’ ಎಂದು ವಿಚಿತ್ರವಾಗಿ ಗಹಗಹಿಸಿದ ಜ್ಯೂಲಿಯೋ, ಈಗ ಬೆಂಕಿಕಡ್ಡಿಯನ್ನು ಗೀರುತ್ತ ಎರ್ಮಿನಿಯಾಳತ್ತ ತಿರುಗಿ, ‘ಅಮೆರಿಕಾದಿಂದ ಆಗಮಿಸಿರುವ ಗಂಡನನ್ನು ಹೀಗೇನಾ ಸ್ವಾಗತಿಸುವುದು? ಎಲ್ಲ ದೀಪಗಳನ್ನೂ ಹಚ್ಚಿ! ನಮಗೆ ಅವನ ಮುಖ ನೋಡ್ಬೇಕು!”
ಸೇಸಾರ್, ಜ್ಯೂಲಿಯೋನನ್ನು ಚುಂಬಿಸುತ್ತ ತನ್ನ ತಮ್ಮನನ್ನು ಅವನಿಗೆ ಪರಿಚಯಿಸಿದ. ಜ್ಯೂಲಿಯೋ, ‘ತುಂಬಾ ಸಂತೋಷ’ ಎನ್ನುತ್ತ ಮಾರಿಯೋನ ಕೈಕುಲುಕಿದ. ‘ನನಗವನು ಪರಿಚಿತನೆ…. ಅಂದರೆ ನೋಡಿ ಗೊತ್ತಿದೆ…. ಓಹೋಹೋ…. ಹೌದೌದು. ಆತ ರೋಮ್ನಿಂದ ಬಂದವನಲ್ಲವೆ! ಸಮೃದ್ಧ ರೋಮ್ನಲ್ಲಿ ಬಹಳ ಖುಷಿಯಿಂದ, ಸ್ವಾತಂತ್ರ್ಯದಲ್ಲೇ ಕಳೆದವನಲ್ಲವೆ! ಅದರಲ್ಲೂ ಅಲ್ಲಿ ಚೆಂದಚೆಂದ ಹುಡುಗಿಯರೂ ಇದ್ದರಲ್ಲ” ಎಂದು ಮೃದುವಾಗಿ ಕಣ್ಣುಮಿಟುಕಿಸುತ್ತ ಹೇಳಿದ.
ಮಾರಿಯೋ ಸಪ್ಪೆಯಾಗಿ ಈಗ ಅವನ ಮುಖವನ್ನೇ ದಿಟ್ಟಿಸುತ್ತ ತಲೆಯಾಡಿಸಿದ. “ಹೌದು…. ಸಮೃದ್ಧ ರೋಮ್…. ವಿಶಾಲವಾದ ಮರುಭೂಮಿ” ಎಂದ.
“ಏನೂ? ಏನ ಹೇಳ್ತಾ ಇದೀಯ ನೀನು? ವಿಶಾಲವಾದ ಮರುಭೂಮಿಯೇ?”
“ನನ್ನ ಮಟ್ಟಗೆ….”
“ಬಹುಶಃ ನಿನ್ನ ಮಟ್ಟಿಗಿರಬಹುದು… ನನಗಂತೂ ನಿನ್ನ ಹಾಗೇ ಹೆಂಡತಿಯಿಲ್ಲದೆ ಇರಬೇಕೆಂಬಾಸೆ. ನಮ್ಮಂಥ ಎಳೆಪ್ರಾಯದವರಿಗೆ ಹೆಂಡತಿ ಎಂದರೆ ಗಂಭೀರ ವಿಚಾರದವಳು…. ಅಲ್ವಾ ಸೇಸಾರ್?”
ಅವನ ಕಣ್ಣುಗಳು ಹೊಳೆಯುತ್ತಿದ್ದವು; ಜ್ವರ ಬಂದವರ ಹಾಗೆ ದನಿ ಕಂಪಿಸುತ್ತಿತು.
ಯಾವ ಕ್ಷಣದಲ್ಲೂ ಗಂಡ ಸಿಟ್ಟಿಗೇಳಬಹುದೆಂಬ ಹೆದರಿಕೆಯಲ್ಲಿ ಅಗಾತಾ ಅವನನ್ನೇ ನೋಡುತ್ತಿದ್ದಳು.
ಜ್ಯೂಲಿಯೋ ಅವಳತ್ತ ತಿರುಗಿ, ‘ನನ್ನನ್ನು ನೋಡ್ತಾ ಇದೀಯ…. ಇದು ಸತ್ಯ ಡಾರ್ಲಿಂಗ್! ಇದೇ ಸತ್ಯ!’ ಎಂದು ದೊಡ್ಡದಾಗಿ ನಕ್ಕು ಹೇಳಿದ.
ಹೀಗೆ, ತನ್ನ ಹೆಂಡತಿಯನ್ನು ನೋಡುತ್ತಿದ್ದ ಹಾಗೆ, ಅಸಾಧಾರಣವಾದ ಯೋಚನೆಯೊಂದು ಮನಸ್ಸಲ್ಲಿ ಇದ್ದಕ್ಕಿದ್ದಂತೆ ಹುಟ್ಟಿ ಅವನ ಸಂತೋಷಭಂಗವಾಯಿತು. ಹಿಂದೊಮ್ಮೆ, ಮಾರಿಯೋ ಕೋರ್ವಾಜಾನನ್ನು ಅವನೆಷ್ಟು ದ್ವೇಷಿಸುತ್ತಿದ್ದನೋ ಈಗ ಮಾರಿಯೋ ಕೋರ್ವಾಜಾ ಇವನನ್ನೂ ಅಷ್ಟೇ ದ್ವೇಷಿಸುತ್ತಿದ್ದಾನೆ ಎಂದನಿಸಿತು. ಈ ಸ್ಥಿತಿ ಅವನಿಗೆ ಪೂರ್ಣಪ್ರಮಾಣದ ಗೆಲುವು ದಕ್ಕುವಂತೆ ಮಾಡಲಿಲ್ಲ. ಯಾಕೆಂದರೆ, ಈ ಅಸೂಯೆ ಮಿಶ್ರಿತ ಪ್ರೇಮ ಅವನೊಳಗಡೆ ಬೆಳೆಯುತ್ತ ಹೋಗಲು ಕೊನೆಗೂ ಅಗಾತಾ ಬಿಡಲಿಲ್ಲ; ಪ್ರೋತ್ಸಾಹಿಸಲಿಲ್ಲ ಕೂಡ.
*****
ಇಟಾಲಿಯನ್ ಮೂಲ: ಲುಯಿಗಿ ಪಿರಾಂಡೆಲ್ಲೋ
The Wave