ರಾತ್ರಿ ಶಾಲೆ ಚೆನ್ನಾಗಿಯೇ ನಡೆಯತೂಡಗಿತು. ಶಬರಿಯ ನೇತೃತ್ವದಲ್ಲಿ ಹೆಂಗಸರು ಹಚ್ಚಾಗಿಯೇ ಬರುತ್ತಿದ್ದರು; ಸಣ್ಣೀರ, ಹುಚ್ಚೀರ ಸೇರಿ ಗಂಡಸರನ್ನೂ ಕರೆತರುತ್ತಿದ್ದರು. ನವಾಬನನ್ನು ಎಲ್ಲರೂ ‘ನವಾಬಣ್ಣ’ ಎನ್ನುವುದಕ್ಕೆ ಆರಂಭಿಸಿದರು. ಸೂರ್ಯ ಕೆಲಸವಿದಿಯೆಂದು ಹಟ್ಟಿ ಬಿಟ್ಟು ಹೋಗುವುದೂ ಬರುವುದೂ ಜಾಸ್ತಿಯಾದಾಗ ನವಾಬನೇ ಎಲ್ಲ ಜವಾಬ್ದಾರಿಯನ್ನೂ ನಿರ್ವಹಿಸುತ್ತಿದ್ದ. ಹೀಗಾಗಿ ಸಲಿಗೆ ಜಾಸಿಯಾಗಿತ್ತು. ಸೂರ್ಯನ ಬಗ್ಗೆ ಗೌರವ ಜಾಸ್ತಿಯಿತ್ತು. ಸೂರ್ಯನ ಜೊತಗೆ ನವಾಬನೂ ಸೇರಿ ಕೆಲವು ಹಾಡುಗಳನ್ನು ಹೇಳಿಕೊಡುತ್ತಿದ್ದರು. ಹಾಡುಗಳು ಭೂಮಿ, ನೀರು, ಬೆಟ್ಟ, ಗುಡ್ಡ, ಮರ, ಗಿಡಗಳ ಮಹತ್ವದಿಂದ ಆರಂಭವಾಗಿ ಬುಡಕಟ್ಟು ಜನರ ಹಕ್ಕು ಮತ್ತು ಹೋರಾಟಗಳತ್ತ ಹೂರಳಿದ್ದವು.
ಶಬರಿಗೆ ಭೂಮಿ ಮೇಲಿನ ಹಾಡುಗಳೆಂದರೆ ತುಂಬಾ ಇಷ್ಟ. ಈ ಭೂಮಿಯನ್ನು ಕಂಡರೆ ಅವಳಲ್ಲಿ ಅದಮ್ಯ ಭಾವುಕತೆ. ಒಡೆಯರ ಹೊಲದ ಕೆಲಸಕ್ಕೆ ಹೋಗುವಾಗ ಆಕೆ ತೋರುವ ಉತ್ಸಾಹ ನೋಡಿ ಸೂರ್ಯನಿಗೆ ಅಚ್ಚರಿಯಾಗಿತ್ತು.
ಒಮ್ಮೆ ಸೂರ್ಯ ಕೇಳಿದ-
“ಶಬರಿ, ಆ ಒಡೆಯರ ಭೂಮೀಲ್ ಕೆಲ್ಸ ಮಾಡೋಕೆ ನಿನಗ್ಯಾಕೆ ಅಷ್ಟು ಉತ್ಸಾಹ?”
“ಬೂಮ್‌ತಾಯಿ ನಮ್ತಾವಿಲ್ವಲ್ಲ ಅದುಕ್ಕೆ”- ಶಬರಿ ಥಟನೆ ಉತ್ತರಿಸಿದಳು.
“ಹಾಗಂತ ಕಂಡೋರ ಭೂಮಿಗೆ ಬೆವರು ಹರಿಸಿ ಅವರ ಸಂಪತ್ತನ್ನ ಹೆಚ್ಚುಸ್ಬೇಕಾ?”
“ಅದೆಲ್ಲ ನಂಗೊತ್ತಿಲ್ಲಪ್ಪ ಈ ಬೂಮ್‌ತಾಯಿ ಏಟೊಂದ್ ದೊಡ್ಡೋಳು ಗೊತ್ತಾ? ನಮ್ಮನ್ನಿಲ್ಲ ವೂತ್ಕಂಡವ್ಳೆ. ಬೆಟ್ಟ ಗುಡ್ಡ, ಮನೆ ಮಠ ಎಲ್ಲಾ ವೂತ್ಕೊಂಡು ನಮ್ಮನ್ನ ಪಾತಾಳಕ್ ವೋಗ್ದಂಗೆ ತಡದವ್ಳೆ. ಇಂತಾ ಬೂಮ್‌ತಾಯೀಗೆ ನಾವು ಬೆವರು ಬಸುದ್ರೆ ಅದೇ ಪೂಜೆ ಮಾಡ್ದಂಗಲ್ವ? ಅವ್ಳನ್ನ ಹಸನ್ ಮಾಡಾದು, ಸಸಿ ನೆಡಾದು, ಕಳೆ ತೆಗ್ಯಾದು ಎಲ್ಲಾ ಮಾಡಿ ಚಂದಾಗಿಡ್ಬೇಕು ಅಲ್ವ?”- ಶಬರಿ ತನ್ನದೇ ರೀತಿಯಲ್ಲಿ ಭಾವನೆಗಳನ್ನು ನಿರೂಪಿಸಿದಳು.
“ಅದೆಲ್ಲ ಸರಿ ಶಬರಿ. ಭೂಮಿ ಎಲ್ಲದಕ್ಕೂ ದೊಡ್ಡದು ಅಂತ್ಲೇ ಇಟ್ಕೊಳ್ಳೋಣ. ನಾವು ಹುಟ್ಟೋದು ಭೂಮಿ ಮೇಲೆ, ಬದುಕೋದು ಭೂಮಿ ಮೇಲೆ, ಸಾಯೋದು ಭೂಮಿ ಮೇಲೆ. ಈ ಭೂಮೀಲಿ ನಮ್ ಬೆವರು ಸೇರಿದೆ. ಈ ಬೆವರು ಮನೆ ಕಟ್ಟಿದೆ; ಹೊಲ ಉತ್ತಿದೆ; ಕೆರೆ, ಕುಂಟೆ ಎಲ್ಲಾ ಮಾಡಿದೆ. ಅದ್ರೆ ನಿಮ್ ಒಡೆಯರಿಗೆ ಇರೊ ಮನೆ, ಭೂಮಿ, ನಿಮಗ್ಯಾಕ್ ಇಲ್ಲ?”- ಸೂರ್ಯ ವಿಷಯಕ್ಕೆ ಬಂದ.
“ನಂಗೊತ್ತಿಲ್ಲ. ಅದಕ್ಕೆ ನಾನ್ಯಾಕ್ ತಲೆ ಕೆಡಿಸ್ಕಮಾನ? ಅವ್ರಿಗೆ ಬೂಮ್‌ತಾಯಿ ಒಲ್ದವ್ಳೆ. ಅಲ್ಲೇ ವೋಗ್ ಪೂಜೆ ಅಂದ್ಕಂಡ್ ಕೆಲ್ಸ ಮಾಡ್ತೀನಿ.”
“ಅದೇ ಭೂಮಿತಾಯೀನ ನೀನು ಯಾಕ್ ಒಲಿಸ್ಕೊಬಾರದು?”
“ಅದೆಂಗಾಯ್ತದೆ ಯೇಳು? ನಮ್ಗೆ ಆಟಂದ್ ಪುಣ್ಣೇವೆಲ್ ಐತೆ?”
“ಪಾಪ-ಪುಣ್ಯ ಅಂತ ಆಕಾಶ ತೋರ್‍ಸಿ ನಿಮ್ಮಿಂದ ಭೂಮಿ ಕಸ್ಕಂಡಿದಾರೆ ಈ ಭೂಮಾಲೀಕ್ರು. ನೀವು ನಿಜವಾದ ಭೂಮಿತಾಯಿ ಮಕ್ಕಳು. ಅವರು ಮಾಲೀಕ್ರು; ಮಕ್ಕಳಲ್ಲ. ಮಾಲೀಕರಿಂದ ಮಕ್ಕಳು ಭೂಮಿತಾಯೀನ ಬಿಡುಗಡೆ ಮಾಡುಸ್ಬೇಕು.”
“ಅದೆಲ್ಲ ಎಂಗಾಯ್ತದೆ ಸೂರ್ಯ. ನಾವ್ ಪಡ್ಕಂಡ್ ಬಂದಿದ್ದು ಈಟೇ ಅಂಬ್ತ ಬೆವರು ಬಸ್ದು ಮಾಡ್ತೀವಿ. ಆಟೇಯ”
“ಇದೇ ತಪ್ಪು. ಆಗ ಚಂದ್ರ ಸತ್ತಾಗ್ಲು ಅಷ್ಟೆ. ಯಾಕ್ ಸತ್ತ ಏನ್ಕತೆ ಅಂತ ಯಾರೂ ಯೋಚಿಸ್ಲಿಲ್ಲ. ಅವ್ರ್ ಹೇಳಿದ್ರು; ನೀವ್ ನಂಬಿದ್ರಿ. ನಿಮ್ ನಂಬಿಕೇನ ಅವ್ರು ಬಳಸ್ಕೊಂಡು ಬದುಕ್ತಾ ಇದಾರೆ.”
ಚಂದ್ರನ ವಿಷಯ ಪ್ರಸ್ತಾಪವಾದ್ದರಿಂದ ಶಬರಿಗೆ ತಕ್ಷಣ ಮಾತು ಹೂರಡಲಿಲ್ಲ.
“ಯಾಕೆ ಬೇಜಾರಾಯ್ತ?”- ಸೂರ್ಯ ಕೇಳಿದ.
“ಚಂದ್ರನ್ ಕಳ್ಳಂಡೋಳ್ಗೆ ಸಂತೋಷ ಆಗಿರ್‍ತೈತಾ?”-ಶಬರಿಯ ತೀಕ್ಷ್ಣ ಮಾತು.
ಸೂರ್ಯ ಬೆಚ್ಚಿದ. “ಹಾಗಲ್ಲ ಶಬರಿ…..”
“ಚಂದ್ರ ಸತ್ತಿದ್ರಾಗೆ ಏನೋ ಐತೆ ಅಂಬ್ತ ನಂಗೂ ಒಂದೊಂದ್ ಕಿತ ಅನ್ನುಸ್ತೈತೆ. ಆದ್ರೆ ಏನೂ ಅಂಬ್ತ ಎಂಗೇಳಾದು. ಅವತ್ತು… ಏನೇನೊ ಆಗೋಯ್ತು… ಯಾರೋ ಬಂದಂಗೆ, ಬಿದ್ದಂಗೆ… ಈ ದ್ಯಾವ್ರ್ ಸವಾಸ ಬ್ಯಾಡ ಅಂಬ ವೋಡೋಡ್ ಬಂದೆ…”
ಶಬರಿಗೆ ನೆನಪುಕ್ಕಿ ಬಂದಂತೆ ಭೋರ್ಗರವ ಭಾಗ.
ಜಲಪಾತಕ್ಕೆ ಬಿದ್ದ ಮಾತು.
ಮತ್ತ ಮೇಲೇಳುವ ಸಾಹಸ ಸಂಘರ್ಷ.
ಜಲಪಾತದ ವೇಗೋತ್ಕರ್ಷಕ್ಕೆ ಹುಟ್ಟಿದ ವಿದ್ಯುತ್ತು.
ತಂತಿ ಮುಟ್ಟದ ತಂತು. ನಡುಗಿದ ನುಡಿಗುಂಪು.
ಶಬರಿ ತತ್ತರಿಸಿದಳು. ಒತ್ತಿ ಬಂದ ದುಃಖದಲ್ಲಿ ಹೂರಟುಹೋದಳು.
ಸೂರ್ಯ ತನ್ನ ಬಗ್ಗೆಯೇ ಬೇಸರಿಸಿಕೊಂಡ. ಭೂಮಿಯ ಬಗ್ಗೆ ಮಾತು ನಡೆಯುವಾಗ ಚಂದ್ರನ ವಿಷಯ ತೆಗೆದು ತಪ್ಪು ಮಾಡಿದೆ ಎಂದುಕೊಂಡ. ಮತ್ತೆ ಸಮಯ ನೋಡಿ ಸಜ್ಜುಗೊಳಿಸಬೇಕು. ಸೂಕ್ತ ತಿಳುವಳಿಕ ನೀಡಿ ಸರಿದಾರಿಗೆ ಹಚ್ಚಬೇಕು. “ಈ ಭೂಮಿ ನಮ್ಮದು” ಎಂದು ಇವರೆಲ್ಲ ಸೆಟೆದು ನಿಲ್ಲಬೇಕು- ಹೀಗೆಲ್ಲ ಯೋಚಿಸುತ್ತ ಮತ್ತೆ ಚಂದ್ರನ ವಿಷಯದ ನೆನಪು ಕಾಡಿತು.
ಸೂರ್ಯ ಹುಚ್ಚೀರನ ಬಳಿಗೆ ಹೋದ. ಅತನನ್ನು ಕರೆದುಕೊಂಡು ಬೆಟ್ಟದ ಬಳಿಗೆ ಬಂದ. ಚಂದ್ರನ ವಿಷಯ ಕೇಳಿದ.
“ಚಂದ್ರ ಸತ್ತ ದಿನ ನೀನೂ ಗುಡಿ ಹತ್ರ ಹೋಗಿದ್ದೆ ಅಂತ ಹೇಳ್ತಾರೆ. ನೀನು ಅಲ್ಲಿ ಏನ್ ನೋಡ್ದೆ ಹೇಳ್ತೀಯ” ಎಂದು ಕೇಳಿದ. ಹುಚ್ಚೀರನಿಗೆ ತನ್ನ ಮಾತಿನ ಅಂತರಾರ್ಥವನ್ನು ಸರಿಯಾಗಿ ಮನವರಿಕೆ ಮಾಡಿಕೊಟ್ಟ.
ಹುಚ್ಚೀರ ಇದ್ದಕ್ಕಿದ್ದಂತ ಅಳತೊಡಗಿದ. ನೆನಪುಗಳಲ್ಲಿ ನಡುಗಿದ. ಕಡೆಗೆ ಸೂರ್ಯನ ಸಾಂತ್ವನದಿಂದ ಸಹಜಸ್ಥಿತಿಗೆ ಬಂದ.
ತಾನು ದೇವಸ್ಥಾನದ ಒಳಗೆ ನೋಡಿದ್ದನ್ನು ಸಂಜ್ಞೆಗಳಲ್ಲಿ ವಿವರಿಸಲು ಪ್ರಯತ್ನ ಮಾಡಿದ. ಮೊದಲೆ ಭಯ; ಜೊತಗೆ ಶಾರೀರಿಕ ಸಂಜ್ಞಗಳಲ್ಲಿ ಸರಿಯಾಗಿ ಸ್ಪಷ್ಟಪಡಿಸಲಾಗದ ಗೊಂದಲ. ಸೂರ್ಯನಿಗೆ ಪೂರ್ಣ ಅರ್ಥವಾಗಲಿಲ್ಲ. ನಿರಾಶೆ ಯಾದರೂ ತೋರಗೊಡದೆ ಹುಚ್ಚೀರನ ಜೊತೆ ಹಟ್ಟಿಗೆ ಬಂದ.
ಸೂರ್ಯನಿಗೆ ಚಡಪಡಿಕೆ.
ಕತ್ತಲ ಕೋಣೆಯಲ್ಲಿ ಕಟ್ಟಿದ ಜೇಡರಬಲೆ.
ಅತ್ತಿತ್ತ ಹಾರಾಡುವ ಬಾವಲಿಗಳು.
ನೆಲೆ ನಿಲ್ಲದ ಹಾರಾಟ; ಪಟ ಪಟ ಸದ್ದು,
ಹೊತ್ತಾದಂತೆ ನಿಶ್ಬಬ್ದ: ನೀರವ ಭಾವ.
ಸೂರ್ಯ ಎದ್ದ ಪೂಜಾರಪ್ಪನ ಬಳಿಗೆ ಬಂದ. ಸೂರ್ಯ ತಾನಾಗಿಯೇ ಹುಡುಕಿಕೂಂಡು ತನ್ನ ಬಳಿಗೆ ಬಂದದ್ದು ಪೂಜಾರಪನಿಗೆ ಖುಷಿ ಕೊಟ್ಟಿತು. “ಏನಪ್ಪ ಮೇಷ್ರ್‍ಟೇ ಬಾ ಬಾ” ಎಂದು ಕೂತುಕೊಳ್ಳಲು ಹೇಳಿದ. ಮಗಳು ಗೌರಿಗೆ “ಉರ್‍ದಿರಾ ಕಳ್ಳೇಕಾಯಿದ್ರೆ ಕೊಡವ್ವ ನಿನ್ ಮೇಷ್ಟ್ರು ಬಂದವ್ರೆ” ಎಂದು ಕೂಗಿ ಹೇಳಿದ. ಗೌರಿ ಸಡಗರದಿಂದ ಕಡ್ಲೆಕಾಯಿ ತಂದು ಕೊಟ್ಟಳು. ಸೂರ್ಯ ಕಡ್ಲೇಕಾಯಿ ತಿನ್ನುತ್ತ ದೇವಸ್ಥಾನದ ವಿಷಯ ಎತ್ತಿದ. ಮದುವೆಯಾದ ಬುಡಕಟ್ಟಿನ ಹೆಣ್ಣು ಮೊದಲರಾತ್ರಿಯನ್ನು ದೇವರಜೊತೆ ಕಳೆಯಬೇಕೆಂಬ ನಂಬಿಕೆಯನ್ನು ಕೆದಕಿದ.
“ಊರಿನ ಹೆಣ್‌ಮಕ್ಕಳಿಗೆ ಇದು ಯಾಕ್ ಅನ್ವಯಿಸೊಲ್ಲ?” ಸೂರ್ಯನ ಪ್ರಶ್ನೆ.
“ಅವ್ರಿಗೆ ಆ ಪುಣ್ಣೇವ್ ಇಲ್ಲ ಕಣಪ್ಪ”- ಹೆಮ್ಮಯಿಂದ ಹೇಳಿದ ಪೂಜಾರಪ್ಪ. ನಾನು ಒಂದ್ಸಾರಿ ದೇವಸ್ಥಾನಕ್ ಹೋಗ್ಬೇಕಲ್ಲ?- ಸೂರ್ಯ ಕೇಳಿಕೊಂಡ.
“ಅದ್ಕೇನಪ್ಪ, ಜೋಯಿಸ್ರಿಗೇಳ್ತೀನಿ. ನಾಳೀಕೇ ಕರ್‍ಕಂಡ್‌ವೋಗ್ತೀನಿ”- ಎಂದು ಪೂಜಾರಪ್ಪ ಹೇಳಿದಾಗ ಸೂರ್ಯ ನಾಳೆಗಾಗಿ ಕಾದ.
ಜೋಯಿಸರು ಸೂರ್ಯನಿಗೆ ದೇವಸ್ಥಾನದ ಪ್ರತಿಯೊಂದನ್ನೂ ತೋರಿಸಿದರು. ಗರ್ಭಗುಡಿಯೊಳಗೆ ಮಾತ್ರ ಬಿಡಲಿಲ್ಲ. ಅಲ್ಲಿಗೆ ತಾನು ಮತ್ತು ನರಸಿಂಹರಾಯಪ್ಪ ಬಿಟ್ಟರೆ ಬೇರಾರೂ ಕಾಲಿಡುವಂತಿಲ್ಲ ಎಂದರು. ಗರ್ಭಗುಡಿಯ ವಿಶೇಷವನ್ನು ವಿವರಿಸುತ್ತ ಅಲ್ಲೊಂದು ನೆಲಮಾಳಿಗೆಯೂ ಇದೆಯೆಂದು ಹೇಳಿದರು. ಹಿಂದೆ ಯಾರೊ ಖುಷಿವರ್‍ಯರು ಈ ನಲಮಾಳಿಗೆಯಲ್ಲಿ ತಪಸ್ಸು ಮಾಡುತ್ತಿದ್ದರಂತೆ, ಹೆಸರು ಮರೆತು ಹೋಗಿದೆ ಎಂದು ತಲೆ ಕರೆದುಕೊಂಡರು. ಸೂರ್ಯ “ಅವರ ಹಸರೇನೂ ಬೇಡ. ಆ ನೆಲಮಾಳಿಗೆ ಯಾವ ಜಾಗದಲ್ಲಿದೆ?” ಎಂದು ಕೇಳಿದ. “ಆ ದೇವರ ವಿಗ್ರಹ ಇದೆಯಲ್ಲ. ಅದರ ಹಿಂದೇನೇ ಇದೆ” ಎಂದರು ಜೋಯಿಸರು.
ದೇವರ ವಿಗ್ರಹ ದೊಡ್ಡದಲ್ಲ. ತೀರಾ ಚಿಕ್ಕದಾದ ಒರಟಾದ ಒಂದು ಬಂಡೆ. ಅದರ ಮೇಲೆ ದೇವರ ಕೆತ್ತನೆ. ಜೋಯಿಸರು ಹೇಳುವಂತೆ ಅದರ ಹಿಂದೆಯೇ ನೆಲಮಾಳಿಗೆ.
ಸೂರ್ಯ. ಗರ್ಭಗುಡಿಯ ಬಾಗಿಲಲ್ಲಿ ನಿಂತು ಇಣುಕಿ ಅವಲೋಕಿಸಿದ. ಆನಂತರ ಮದುವೆಯಾದ ಹೆಣ್ಣು ಮೊದಲ ರಾತ್ರಿ ಕಳಯಬೇಕಾದ ‘ಶಯ್ಯಾಗೃಹ’ ಯಾವುದೆಂದು ಕೇಳಿದಾಗ ಜೋಯಿಸರು ಗರ್ಭಗುಡಿಯ ಮುಂದೆ ಎಡಭಾಗದಲ್ಲಿ ಇದ್ದ ಕಲ್ಲಿನ ಕೋಣೆಯೊಂದನ್ನು ತೋರಿಸಿದರು. ಅದು ವಿಶಾಲವಾಗಿತ್ತು. ಬಹುಶಃ ಹಿಂದೆಂಂದೋ ಇಲ್ಲೊಂದು ದೇವರ ವಿಗ್ರಹವಿದ್ದಿರಬಹುದೆಂದು ಸೂರ್ಯ ಊಹಿಸಿದ. ಯಾಕೆಂದರೆ ಅದರ ಎದುರಿಗೆ ಹೆಚ್ಚು ಕಡಿಮೆ ಅದೇ ರೀತಿಯ ಕೋಣೆಯೊಂದಿತ್ತು. ಅದರಲ್ಲಿ ದೇವರ ವಿಗ್ರಹವಿತ್ತು. ಎಲ್ಲ ನೋಡಿದ್ದಾದ ಮೇಲೆ “ಚಂದ್ರ ಎಲ್ ಸತ್ತು ಬಿದ್ದಿದ್ದ ಜೋಯಿಸರೆ” ಎಂದು ಕೇಳಿದ. ಜೋಯಿಸರು ಅದಕ್ಕೆ ಪೀಠಿಕೆಯಾಗಿ- ದೇವರು ಮೊದಲ ರಾತ್ರಿ ಅನುಭವದಲ್ಲಿರುವಾಗ ಈ ದೇವಸ್ಥಾನದ ಆಸುಪಾಸಿನಲ್ಲಿ ಯಾರೂ ಸುಳಿಯಬಾರದೆಂಬ ಬಗ್ಗೆ ಅನೇಕ ನಿದರ್ಶನಗಳನ್ನು ನೀಡಿ ವಿವರಿಸಿದರು. ರಾಜರ ಕಾಲದಲ್ಲಿ ನಿಯಮೋಲ್ಲಂಘನೆ ಮಾಡಿ ಸತ್ತವರ ವಿಷಯ ಹೇಳಿದರು. ಆನಂತರ ಚಂದ್ರ ಸತ್ತು ಬಿದ್ದಿದ್ದ- ಮುಖ್ಯ ದ್ವಾರದ ಹೂಸ್ತಿಲನ್ನು ತೋರಿಸಿ “ಅವ್ನ ತಲೆ ಈ ಹೊಸ್ತಿಲ ಮೇಲಿತ್ತು ಮೈಪೂರ್ತಿ ಹೊರ್‍ಗಡೆ ಇತ್ತು” ಎಂದು ವಿವರಣೆ ಕೊಟ್ಟರು. ಮತ್ತೆ ದೇವಾಲಯದ ಮಹಿಮೆಯನ್ನು ಹೇಳಲು ಮರೆಯಲಿಲ್ಲ. ಇಷ್ಟೆಲ್ಲ ಪುರಾತನವಾದ ದೇವಾಲಯಕ್ಕೆ ತಕ್ಕ ಪ್ರಚಾರ ಇಲ್ಲ ಎಂದು ಕೊರಗುತ್ತ “ಚಂದ್ರನ ವಿಷ್ಯಾನೂ ಸೇರಿಸ್ಕೂಂಡು ನೀನಾದ್ರು ಈ ದೇವಸ್ಥಾನದ ಮಹಿಮೇನ ಬರೀಬೇಕಪ್ಪ. ದೊಡ್ ದೊಡ್ಡ ಪೇಪರ್‌ಗಳಲ್ಲಿ ಹಾಕುಸ್ಬೇಕು” ಎಂದು ಒತ್ತಾಯಿಸಿದರು. ಸೂರ್ಯ ನಸುನಕ್ಕ.
ಸೂರ್ಯ ಒಬ್ಬನೇ ರಾತ್ರಿ ಶಾಲೆಯ ಕಡೆ ಹೊರಟ. ಎಂದಿನಂತೆ ಶಬರಿ, ಗೌರಿ, ಹುಚ್ಚೀರ, ಸಣ್ಣೀರ ಮತ್ತಿತರರು ಜೊತಗಿರಲಿಲ್ಲ. ಯಾಕಂದರೆ, ದೇವಸ್ಥಾನದಿಂದ ಹೂರಟವನು ಬೆಟ್ಟದ ಬಳಿಗೆ ಬಂದಿದ್ದ- ಒಂಟಿಯಾಗಿ. ಈಗ ಒಂಟಿಯಾಗಿಯೇ ಶಾಲೆಯ ಕಡೆಗೆ ಹೊರಟಿದ್ದ.
ಮುರಿದು ಬಿದ್ದ ಕೋಟೆಯ ಗೋಡೆಗಳು.
ಭಾವ ಭಗ್ನತೆಯಂತಿದ್ದ ಬುರುಜುಗಳು
ಅರೆಬರೆ ಉಳಿದಿದ್ದ ಮೆಟ್ಟಿಲ ಹಾದಿಗಳು.
ಅಲ್ಲೊಂದು ಗುಹೆ-ಇಲ್ಲೊಂದು ಪೊದೆ.
ಅವಶೇಷಗಳ ಪರಿಸೆ; ಆದರೂ ಆಳುವ ವರಸೆ.
ಖಿನ್ನನಾದ ಸೂರ್ಯನ ಹಜ್ಜೆಗಳು ಎಂದಿಗಿಂತ ಭಾರ.
ಮೂರು ಕಾಲಗಳ ಮುಖಾಮುಖಿಯ ಮಹಾಪೂರ.
ಅಂದು-ಇಂದುಗಳ ನಾನಾ ಘಟನೆಗಳು. ಮುಂದಿನ ಹಾದಿಗಳು.
ಒಟ್ಟಿಗೆ ಒತ್ತರಿಸಿ ಬಂದು ಕಡಗೆ ಕಡಗೋಲಿನ ಕಲಸ.
ಒಂಟಿತನದ ಅನುಭವ ಎಷ್ಟು ಘೋರ ಎನ್ನಿಸಿತು.
ಕಾಲದ ಕಂತುಗಳಲ್ಲಿ ಬಂದು ಕಂಗೆಡಿಸುವ ಒಂಟಿತನ.
ಆಗ ಅನ್ನಿಸಿತು – ಒಂಟಿತನ ಬಾಳಿನ ಬಂಜೆತನವಾಗಬಾರದು.
ಹೋರಾಟಗಳ ಹುಮ್ಮಸ್ಸಿನಲ್ಲಿರುವ ತನಗೇ ಇಂತಹ ಖಿನ್ನತ-ಒಂಟಿತನ ಕಾಡಿಸುತ್ತಿರುವಾಗ ‘ಶ್ರಮಕುಲದ ಶಬರಿ’ ಅದೆಂಥ ಒಂಟಿತನದಲ್ಲಿ ನರಳಿರಬಹುದು? ಕಾಯುವುದೇ ಕುಲವಾಗಿ, ಶ್ರಮವೇ ಶಬರಿಯಾಗಿ ಎಂಥ ಸಂಕಟವನ್ನು ಅನುಭವಿಸಿರಬಹುದು?
ಭೂಮಿತಾಯಿಯ ಮಕ್ಕಳು ಇಲ್ಲಿ ಪರಕೀಯರಾಗಿ, ಒಳಗೊಳಗೇ ಒಂಟಿಯಾಗಿ, ಚಿಂತಾರಣ್ಯದ ಸಂತರಾಗಿಬಿಟ್ಟರೆ? ಶ್ರಮಜೀವಿಗಳೆಲ್ಲ ಸೇರಿ ಶಬರಿಯಾದರೆ? ಪ್ರಶ್ನೆಗಳ ಮೇಲೆ ಪ್ರಶ್ನೆ.
ಉತರ ಹುಡುಕುತ್ತ ಹೋದಂತೆ ಅದು ಉತ್ತರದ ಹಿಮಾಲಯದಷ್ಟು ಎತ್ತರ.
ಮೂರು ದಿಕ್ಕುಗಳಲ್ಲಿ ಹಬ್ಬಿದ ಕಡಲ ವಿಸ್ತಾರ.
ಸೂರ್ಯನ ಎದೆಯಾಳದಲ್ಲಿ ರೊಯ್ಯನೆ ಸುತ್ತುವ ಸುಳಿ.
ಕಣ್ಣುಗಳಲ್ಲಿ ಖಿನ್ನತ; ಕಾಡಿಸುವ ಪರಕೀಯತೆ.
ಆಗ ಅವನಿಗೆ ಅನ್ನಿಸುತ್ತದೆ-
‘ನನ್ನ ಈ ನಾಡಿನಲ್ಲಿ ಭವ್ಯ ನಾಮ ಬೀಡಿನಲ್ಲಿ
ಬೇಗೆಯೇ ಬೆಟ್ಟವಾಗಿ ಉತ್ತರಕ್ಕೆ ಕಾವಲು;
ಬಿವರೆಲ್ಲ ನದಿಗಳಾಗಿ ಮೂರು ದಿಕ್ಕು ಕಡಲು!’
ಬೇಗೆ ಬೆವರುಗಳ ಸಂರಕ್ಷಣೆಯಲ್ಲಿ ಸ್ವತಂತ್ರಭಾರತ.
ಶಬರಿಕುಲದ ಸಮಸ್ತರಿಗೆ ಚಂಡ ಮಾರುತ.
ಆದರೆ ಇವರೆಲ್ಲ ಸೇರಿ ಚಂಡ ಮಾರುತವಾಗಬೇಕು.
ಅದು ಯಾವಾಗ?
ಪರಕೀಯ ಪ್ರಜ್ಞೆಯಿಂದ ಹೂರಬಂದು ಹೋರಾಟಕ್ಕಿಳಿದಾಗ.
ನಿಜ; ಇವರ ಒಂಟಿತನ, ಪರಕೀಯತೆ, ಮುಗ್ಧತೆ ಎಲ್ಲವೂ ಅಳೆಯಲಾಗದ ಆಳ. ಭೂಮಿ ಹಸನಾಗಲೆಂದು ಬೆವರು ಹರಿಸುತ್ತಾರೆ. ಆದರೆ ಈ ಭೂಮಿ ಅವರದಲ್ಲ, ಭೂಮಿಯ ಮೇಲೆ ಸ್ವತಃ ಬೆಳೆದ ಬೆಳೆ ಅವರದಲ್ಲ. ದುಡಿಮೆಯ ಫಲ ಪಡೆದವನು ಒಡೆಯ; ದುಡಿದವನು ಆಳು. ತಾನು ಉತ್ಪನ್ನ ಮಾಡಿದ ಫಸಲು ತನ್ನದಲ್ಲ. ತನ್ನ ಫಸಲಿಗೆ ತಾನೇ ಪರಕೀಯ- ಹೀಗೆ ಅನ್ನಿಸಿ, ಅನುಭವಿಸುವ ಕ್ಷಣದ ಅನಾಥಭಾವವನ್ನು ಅಳಯಲಾದೀತೆ?
ಸೂರ್ಯನ ಸ್ವಭಾವವೇ ಹೀಗೆ. ಒಂದು ವಿಷಯ ಒಳಹೂಕ್ಕರೆ ಅದು ತೊಲೆಯನ್ನು ಕೊರೆಯುವ ಗುಂಗರಿ ಹುಳದಂತೆ, ಗುಯ್ಯೆಂದು ಒಳ ಸೇರುತ್ತಲೇ ಹೋಗುತ್ತದೆ.
ಗಂಡು-ಹಣ್ಣಿನ ನಗು ಚಿಮ್ಮಿದಂತಾಗಿ ಸೂರ್ಯ ನೋಡಿದ.
ಶಾಲೆಯ ಹತ್ತಿರಕ್ಕೆ ಬಂದಿದ್ದ.
ಶಾಲೆಯ ಒಂದು ಬದಿಯಲ್ಲಿ ನವಾಬ್ ಮತ್ತು ಗೌರಿಯ ಕಿಲಕಿಲ ನಗು. ಸಡಗರದಲ್ಲಿದ್ದಾರೆ. ಬೇರಾರೂ ಕಾಣಿಸುತ್ತಿಲ್ಲ. ಎಲ್ಲರಿಗಿಂತ ಮುಂಚೆ ಇವರಿಬ್ಬರೇ ಬಂದಂತಿದೆ. ಅವರಿಬ್ಬರ ಮಾತುಕತೆಯ ಆನಂದಕ್ಕೆ ಯಾಕೆ ಅಡ್ಡಿಯಾಗಲಿ ಎಂದು ಒಂದು ಕ್ಷಣ ಯೋಚಿಸಿದ. ನಿಂತಲ್ಲೇ ನಿಂತ. ದೂರದಲ್ಲಿ ಶಬರಿ ಮುಂತಾದವರೆಲ್ಲ ಬರುವುದು ಕಾಣಿಸಿತು. ಅವರ ಜೊತೆ ಒಟ್ಟಾಗಿ ಹೋಗೋಣವೆಂದು ಒಂದು ಬಂದಡೆಯ ಮೇಲೆ ಕೂತ. ಆನಂತರ ಶಾಲೆಯ ಕಡೆ ನೋಡಿದ.
ಗಾರಿ ಮತ್ತು ನವಾಬ ಶಾಲೆಯ ಒಳಗೆ ಹೋದರು.
ಇನ್ನು ಇಲ್ಲಿ ಕೂತಿರುವುದೇಕೆ, ತರವಲ್ಲದ ಶಂಕೆ ತನಗೇಕೆ, ಎಂದು ಸಹಜ ಸ್ಥಿತಿಗೆ ಬಂದು ಶಾಲೆಯ ಕಡೆ ಹೊರಟ. ಬಂದು ನೋಡಿದಾಗ ನವಾಬ್ ಗೌರಿಯ ಕೈಹಿಡಿದು ಬರೆಸುತ್ತಿದ್ದ. ಕೆಲವು ಪದಗಳನ್ನು ಹೇಳಿಕೊಡುತ್ತಿದ್ದ.
“ಎಲ್ಲಿಗ್ ಬಂತು ಗೌರಿ ಓದು”- ಎನ್ನುತ್ತ ಸೂರ್ಯ ಒಳಬಂದ.
ಗೌರಿ ದಡಬಡನೆ ಎದ್ದಳು. ನವಾಬ್ ಸಹಜವಾಗೇ ಇದ್ದ. “ಸಲ್ಪ ಹಿಂದ್ ಬಿದ್ದಿದಾಳೆ. ಅದುಕ್ಕೇ ಮುಂಚೆ ಬಂದು ಹೇಳಿಸ್ಕೋತೀನಿ ಅಂದಿದ್ಲು” ಎಂದು ಆತ ಹೇಳ ತೊಡಗಿದಾಗ ಸೂರ್ಯ “ಒಳ್ಳೇದಾಯ್ತು ಮುಂದುವರ್‍ಸು. ಕೂತ್ಕೊ ಗೌರಿ. ಪಾಠ ಹೇಳಿಸ್ಕೊ” ಎಂದ. ಗಾಉರಿ ಕೂತುಕೊಂಡಳು. ನವಾಬ್ ಪಾಠ ಮುಂದುವರೆಸಿದ.
ಸ್ವಲ್ಪ ಹೊತ್ತಿನಲ್ಲೇ ಶಬರಿ ಮತ್ತು ಇತರರೆಲ್ಲ ಬಂದರು. ಗೌರಿಯನ್ನು ಕಂಡ ಶಬರಿ “ನಾನ್ ಅಲ್ಲೆಲ್ಲ ವುಡ್ಕಾಡ್ತಿದ್ದೆ. ಯಾವ್ದೊ ಮಾಯ್ದಾಗ್ ಇಲ್ಲಿಗ್ ಬಂದ್ ಬಿಟ್ಟಿದ್ದೀಯ?” ಎಂದು ಗೌರಿಯ ಉತ್ತರಕ್ಕೂ ಕಾಯದೆ ಸೂರ್ಯನ ಕಡೆ ತಿರುಗಿ “ನಾವ್ ಅಟ್ಟಿನಾಗ್ ಕಾಯ್ತಾ ಇದ್ರೆ ಎಲ್ಲಿಂದಾನೊ ಸೀದಾ ಇಲ್ಲಿಗ್ ಬಂದ್ರೆ ಎಂಗೆ? ಯಾವಾಗ್ಲೂ ಜತೇಗ್ ಬತ್ತಿದ್ದಿ ಎಲ್ಲಾರು. ಯಾಕೊ ಯಾವತ್ನಂಗಿಲ್ಲ ಇವತ್ತು” ಎಂದಳು.
ನಿಜ; ಇವತ್ತು ಯಾವೂತ್ತಿನಂತೆ ಇಲ್ಲ- ಎಂದುಕೊಂಡ ಸೂರ್ಯ. ಮಾತು ಬೆಳಸದೆ “ಬನ್ನಿ ಬನ್ನಿ ಪಾಠ ಶುರು ಮಾಡೋಣ” ಎಂದ.
ಯಾಕೊ ಮನಸ್ಸು ಹಿಡಿತಕ್ಕೆ ಸಿಗುತ್ತಿಲ್ಲ. ಮಾತಿನಲ್ಲಿ ಸರಾಗವಿಲ್ಲ. ಬೋರ್ಡಿನ ಮೇಲೆ ಕೆಲವು ಪದಗಳನ್ನು ಬರೆದು ಅದೇ ರೀತಿ ಬರೆಯಲು ಹೇಳಿದ. ನೋಡಿಕೊಳ್ಳುವಂತೆ ಗೆಳೆಯ ನವಾಬನಿಗೆ ತಿಳಿಸಿದ. ತಾನು ಕೂತು ಒಮ್ಮೆ ಕಣ್ಣು ಹಾಯಿಸಿದ. ಸಣ್ಣೀರನನ್ನೂ ಒಳಗೊಂಡಂತೆ ಗಂಡಸರ ಸಂಖ್ಯೆ ಕಡಿಮೆಯಾಗಿದೆ. ಆಮೇಲೆ ವಿಚಾರಿಸಿಕೊಳ್ಳೋಣವೆಂದುಕೊಂಡ. ತಡೆದುಕೊಳ್ಳಲು ಆಗಲಿಲ್ಲ. “ಯಾಕೆ ಗಂಡಸ್ರು ಕಡ್ಮೆ ಬಂದಿದಾರೆ?” ಎಂದು ಕೇಳಿದ.
“ಇನ್ ಯಾಕೆ? ಇವತ್ತು ಒಡೇರು ಬಟವಾಡೆ ಮಾಡವ್ರೆ. ದುಡ್‌ಸಿಗ್ತು ಅಂಬ್ತ ಗಡಂಗಿನ್ ಕಡೀಕ್ ವೋಗವ್ರೆ-ಕುಡ್ದು ಕಾಲಿ ಮಾಡ್ಕಮಾಕೆ”- ಎಂದು ಥಟನೆ ಬೇಸರದಿಂದ ಹೇಳಿದಳು ಶಬರಿ.
“ಹೀಗೆಲ್ಲ ದುಡ್ ಕಳೀಬೇಡಿ ಅಂತ ನೀವ್ ಹಂಗಸ್ರೆಲ್ಲ ಯಾಕ್ ಹೇಳ್‌ಬಾರದು?”- ಸೂರ್ಯ ಪ್ರಶ್ರೆಯೊಂದನ್ನು ಎಸೆದ.
“ಎಂಗುಸ್ರು ಮಾತ್ ಕೇಳಂಗಿದ್ರೆ ಅವ್ರ್‌ನ ಗಂಡುಸ್ರು ಅಂಬ್ತ ಯಾರ್ ಕರೀತಾರೆ?”- ಶಬರಿ ಗೊಣಗಿದಳು.
ಒಂದು ಕ್ಷಣ ನಿಶಬ್ಧ. ಮತ್ತೆ ಶಬರಿಯೇ ಮಾತಾಡಿದಳು.
“ಇವ್ಯಾಗ್ಯಾರಾನ ಉಸ್ರು ಬಿಡ್ತಾ ಅವ್ರ ನಮ್ಮೆಂಗುಸ್ರು ನೋಡಿ ಮತ್ತೆ. ಇದೇ ನಮ್ ಅಟ್ಟಿ ಅಣೇಬರಾ.”
“ನಿಮ್ ಹಣೆಬರ ಅಂತ ಸುಮ್ನೆ ಇದ್ರಾಗೊಲ್ಲ. ಈಗ ನೀವು ಬರೀತಾ ಇದ್ದೀರಲ್ಲ ಇದು ನಿಮ್ಮ ಬರಹ. ನೀವೇ ನಿಮ್ಮ ಬರಹ ಬರೀಬೇಕು. ಅಂದ್ರೆ ವಿವರುಸ್ತೀನಿ ಕೇಳಿ, ನಿಮ್ಮ ಬಾಳನ್ನ ನೀವೇ ರೂಪಿಸ್ಕೊಬಹುದು. ಎಲ್ಲಾ ನಿಮ್ ಕೈಯ್ಯಲ್ಲಿದೆ- ನೀವೂ ಗಂಡಸರಂತೆ ದುಡೀತೀರಿ. ದುಡ್ ತರ್‍ತೀರಿ, ಭೂಮಿಕೆಲ್ಸಾನೂ ಮಾಡ್ತೀರಿ; ಮನೇಗ್ ಬಂದು ಅಡುಗೆ ಕೆಲ್ಸಾನೂ ಮಾಡ್ತೀರಿ. ಆದ್ರಿಂದ ನಿಮ್ ನಿಮ್ ಗಂಡಸರಿಗೆ ತಿಳುವಳಿಕೆ ಹೇಳೋದ್ರಲ್ಲೇನೂ ತಪಿಲ್ಲ. ದುಡಿದಿದ್ ದುಡ್ಡನ್ನ ಕುಡ್ಯೋದ್ಕೇ ಖರ್ಚು ಮಾಡಿದ್ರೆ ಹೇಗೆ ಅಂತ ಒಂದ್ಸಾರಿ ಸರ್‍ಯಾಗ್ ಕೇಳಿ. ನಾನ್ ನಿಮ್ ಜೊತೆಯಾಗಿರ್‍ತೀನಿ”- ಸೂರ್ಯ ತಿಳಿಹೇಳಿದ.
“ನೀನಿರಾದಾದ್ರೆ ನಾವೆಂಗೊ ಮಾಡಿ ಕೇಳ್‌ಬಿಡ್ತೀವಪ್ಪ” ಎಂದಳು ಒಬ್ಬ ಹೆಂಗಸು.
“ಹಾಗಿರ್‌ಬೇಕು. ನಾನೂ ನವಾಬು ಇಬ್ರೂ ಹೇಳ್‌ನೋಡ್ತೀವಿ. ಆಮೇಲ್ ನೀವು ಎಲ್ಲ ಹಂಗುಸ್ರೂ ಒಟ್ಟಿಗೇ ಹೇಳಬೇಕು. ಆಗ ಬಲ ಬರುತ್ತೆ. ಇಲ್ಲಿ ನೋಡಿ, ಈಗ ಬಂದ್ ಕೂತಿದಾರಲ್ಲ ಎಷ್ಟು ಒಳ್ಳೇ ಗಂಡಸ್ರು. ಇವ್ರೂ ನೀವೂ ಎಲ್ಲಾ ಒಟ್ಟಿಗೇ ಸೇರಿ ತಿಳಿಹೇಳಿದ್ರೆ ಕೇಳ್ತಾರೆ. ಹಾಗಂತ ಜಗಳ ಆಡಬೇಡಿ. ಆಮೇಲ್ ಗಂಡ-ಹೆಂಡ್ತಿ ನಡುವೆ ಜಗಳ ತಂದಿಟ್ಟ ಅಂತ ನನ್ನ ಕೆಟ್ಟೋನ್ ಮಾಡ್‌ಬೇಡಿ” ಎಂದು ನಗುತ್ತಾ ನುಡಿದ.
“ಎಲ್ಲಾನ ಉಂಟಾ? ನೀನ್ ಯೇಳಾದು ನಮ್ ಒಳ್ಳೇದುಕ್ಕೆ” ಎಂದು ಒಬ್ಬ ಗಂಡಸು ದೃಢವಾಗಿ ಹೇಳಿದ.
“ಹಾಳಾದ್ದು ಆ ಸೇಂದಿ ಅಂಗಡಿ, ಅದೇ ದ್ವಾವ್ರ್ ಗುಡಿ ತರಾ ಆಗ್‌ಬಿಟ್ಟೈತೆ” ಎಂದು ಇನ್ನೊಬ್ಬ ಗೊಣಗಿದ.
ಸೂರ್ಯ ಕೂಡಲೇ ಹೇಳಿದ- “ಎಲ್ಲಾ ಸೇರಿ ಆ ಸೇಂದಿ ಅಂಗಡೀನೇ ಮುಚ್ಚುಸ್ಬೇಕು.”
“ಅದೆಂಗಾದಾತಪ್ಪ. ಅದು ಒಡೇರ್ ಅಂಗಡಿ. ಅವ್ರೇ ಕಂತ್ರಾಟ್ ತಗಂಡು ಸುತ್ತಮುತ್ತೆಲ್ಲ ಸೇಂದಿ ಸಾರಾಯಿ ಆಂಗಡಿ ಶುರು ಮಾಡವ್ರೆ”- ಒಬ್ಬಾತ ವಿವರಿಸಿದ.
“ಒಡೇರ್‌ದಾದ್ರೇನಂತೆ. ಅಂಗಡಿ ಮುಚ್ಚಸ್ಬೇಕು ಅಂಬ್ತ ಅನ್ಸಿದ್ರೆ ಅಂಗೇ ಮಾಡ್‌ಬೇಕಪ್ಪ”- ಶಬರಿಯ ಬಾಯಲ್ಲಿ ಸಹಜವಾಗಿ ಬಂದ ಈ ಮಾತಿನಿಂದ ಉತ್ತೇಜಿತನಾದ ಸೂರ್ಯ ಅದೇ ದಿಕ್ಕಿನಲ್ಲಿ ಮಾತುಕತೆಯನ್ನು ಕೊಂಡೊಯ್ದ. ಆತ್ಮವಿಶಾಸದ ಬೀಜ ಬಿತ್ತೊಡಗಿದ. ಸ್ವತಃ ರಾಜರ ವಂಶಸ್ತರೆಂದು ಹೇಳಿಕೊಳ್ಳುವ ನರಸಿಂಂಹರಾಯಪ್ಪನವರು ಈಗ ಲಾಭಕೊರತನಕ್ಕಾಗಿ ಸೇಂದಿ ಸಾರಾಯಿ ಅಂಗಡಿ ತೆಗದು ಬಡವರ ಸಂಸಾರಗಳನ್ನು ಹಾಳು ಮಾಡುತ್ತಿದ್ದಾರೆಂದು ಮನಮುಟ್ಟುವಂತೆ ವಿವರಿಸಿದ. ಅಲ್ಲೀವರೆಗಿನ ಖಿನ್ನತೆ ಕಳೆದು ಸೂರ್ಯ ತನಗೆ ಸಹಜವಾದ ಸಾಮಾನ್ಯಸ್ಥಿತಿಗೆ ಬಂದಿದ್ದ. ಇಲ್ಲೀವರಗೆ ಒಳ ಸಂಘರ್ಷದಲ್ಲಿದ್ದಾತ, ಒಳ ಪ್ರೇರಣೆಯಿಂದಲೇ ಹೊಸಸಂಘರ್ಷಕ್ಕೆ ಪ್ರೇರಣೆ ನೀಡತೊಡಗಿದ.
ಯಾವುದು ಒಳಗು? ಯಾವುದು ಹೊರಗು?
ಒಂದರೊಳಗೊಂದಾಗುವ ಬೆರಗು!
ಬೆರಗಿನ ಭಾವಕ್ಕೆ ಬೆಳಗಿನ ಭಾಷೆ.
ಸೂರ್ಯ ಉತ್ಸಾಹದಿಂದ ಮಾತಾಡುತ್ತಲೇ ಹೋದ. ಆದರೆ ಒಂದೇ ದಿನಕ್ಕೆ ಖಾಲಿಯಾಗದ ಎಚ್ಚರವಿತ್ತು. ಸಂದರ್ಭಕ್ಕನುಗುಣವಾಗಿ ಸಜ್ಜು ಮಾಡುವ ಕ್ರಮಬದ್ಧತೆಯಿತ್ತು.
ಈಗ ಚಿಂತನೆಯ ಸರದಿ ಕೂತಿದ್ದ ಜನರದು.
ಕ್ಷಣಕಾಲದ ಮೌನ: ನಿಧಾನವಾಗಿ ಪರಸ್ಪರ ಗುಸುಗುಸು ಮಾತು.
“ಎಲ್ಲಾ ಕೂತ್‌ಕಡೇನೇ ತೀರ್ಮಾನ ಆಗ್‌ಬೇಕಾಗಿಲ್ಲ. ನಾನ್ ಹೇಳಿದ ವಿಷ್ಯ ಯೋಚ್ನೆ ಮಾಡಿ. ಸಮಯ ಬಂದಾಗ ಒಂದು ನಿರ್ಧಾರ ಮಾಡಿದ್ರಾಯ್ತು. ಏಳಿ; ಹೋಗೋಣ” ಎಂದು ಸೂರ್ಯ ಎಲ್ಲರನ್ನೂ ಏಳಿಸಿದ.
ಎಲ್ಲರೂ ಒಟ್ಟಿಗೇ ಹೊರಟರು. ಹಟ್ಟಿಗೆ ಹೋಗುವಾಗ ಸೇಂದಿ ಅಂಗಡಿಯ ಸಮೀಪದಲ್ಲೇ ಹೋಗಬೇಕು. ಸೂರ್ಯನ ಕಣ್ಣಿಗೆ ತಿಮ್ಮರಾಯಿ. ಪೂಜಾರಪ್ಪ, ಸಣ್ಣೀರ, ಹುಚ್ಚೀರ ಮುಂತಾದವರೆಲ್ಲ ಸೇಂದಿ ಅಂಗಡಿಯಲ್ಲಿರುವುದು ಕಾಣಸಿತು. ಅವರೂ ಈತನನ್ನು ನೋಡಿದರು. ಪೂಜಾರಪ್ಪನಂತೂ “ನೀನು ಬಾರಪ್ಪ ಸೂರ್ಯ; ಒಸಿ ಸೇಂದಿ ಸಾರಾಯ್ ರುಚಿ ನೋಡು” ಎಂದು ಮತ್ತೇರಿದ ಮಾತನಾಡಿದ. ಹುಚ್ಚೀರ, ಸಣ್ಣೀರ ಮರೆಗೆ ಹೋಗಿ ನಿಂತರು.
ಪೂಜಾರಪ್ಪ ಮತ್ತ “ಬಾರಯ್ಯ ಓಚಯ್ಯ ಗುಂಡಿಗೆ ಇದ್ರೆ ಗಡಂಗಿಗ್ ಬಾ” ಎಂದು ಅರಚಿದ. ಸೂರ್ಯ ಅಲ್ಲಿಗೆ ಹೋಗಿ ಬುದ್ಧಿ ಹೇಳಬೇಕೆಂದುಕೊಂಡ. ಆದರೆ ಶಬರಿ, ಗೌರಿ ಮತ್ತಿತರರು ತಡೆದರು. ಅಲ್ಲಿ ಹೋಗಿ ಮಾತಿಗೆ ಮಾತು ಬೆಳೆದು ಬೇರೇನಾದರೂ ಆದೀತೆಂಬ ಆತಂಕ ಅವರಿಗೆ. ಆದ್ದರಿಂದ ಆಮೇಲೆ ಇನ್ನೊಂದು ದಿನ ಸಮಯನೋಡಿ ಎಲ್ಲ ಮಾತಾಡೋಣ ಎಂದರು. ಅವರ ಬಾಯಿಂದಲೇ ಸರಿಯಾದ ಮಾತು ಬಂದದ್ದು ಕೇಳಿ ಸೂರ್ಯನಿಗೆ ಸಂತೋಷವಾಯಿತು. ಎಲ್ಲರೂ ಒಟ್ಟಾಗಿ ಹಟ್ಟಿ ಕಡಗೆ ಹೆಜ್ಜೆ ಹಾಕಿದರು.
*****