ಬಿತ್ತುತ್ತಿದ್ದಾನೆ ಮುಳ್ಳನ್ನ ಕುಟ್ಟುತ್ತಿದ್ದಾನೆ ತೌಡನ್ನ
ಕಟ್ಟುತ್ತಿದ್ದಾನೆ ಒಂದೇ ಸಮನೆ ತಾನೇ ತನ್ನ ಚಟ್ಟವನ್ನ.
ಅಯ್ಯಾ ಬೆಳ್ಳಯ್ಯ! ನಿನ್ನ ಮೈಯ ಮರೆಸುವ
ಈ ಗ್ರಾಮರು ಡಾಮರು ಯಾಕೆ?
ಕೊಟ್ಟ ಕಾಫಿಗೆ ಥ್ಯಾಂಕ್ಸ್ ಹೇಳುವಾಗಲೂ
ಪಾಣಿನಿ ಪತಂಜಲಿ ಬೇಕೆ?
ನಿನ್ನ ಕಾಲ ಬಳಿ ಐವತ್ತು ಗ್ರೀಷ್ಮಋತು ಉದುರಿದೆ
ಬಿಳಿಗೂದಲಲ್ಲಿ ತಲೆ
ಸಾವಿನ ಬಲೆ ನೇಯುತ್ತಿದೆ
ಹಣೆ ನಿರಿಗೆಯಲ್ಲಿ ಬೇಡನ ಭಾರಿ ಕಣೆ
ಕ್ರಮಕ್ರಮೇಣ ಮೊನೆಗೊಂಡು ಬೆಳೆಯುತ್ತಿದೆ.
ಅಯ್ಯಾ, ನಿನ್ನೆ ನೈಕಟ್ಯ ಪ್ರಾಕಟ್ಯಗಳ ಹುಲಿಮುಖ ಕಳಚಿ
ಹೆಂಡತಿ ಜತೆ ಜಗಳವಾಡಿ ಸ್ವಲ್ಪ ಬೈಸಿಕೊ,
ಕತ್ತೆತ್ತರಕ್ಕೆ ನೀನೇ ಎತ್ತಿಹಿಡಿದು
ನಿನ್ನ ಮಗು ಕೈಯಲ್ಲಿ ಕೆನ್ನೆಗೆ ಬಿಗಿಸಿಕೊ.
ಕೊಟ್ಟ ಹಲಸನ್ನು ಮುಚ್ಚಿಟ್ಟು ಕೂತವನೆ
ಅದನ್ನಷ್ಟು ಹೆಚ್ಚು
ಎಣ್ಣೆ ಹಚ್ಚಿದ ಕೈಯನ್ನ ಅದರಲ್ಲಿ ಬಿಚ್ಚಿ
ಲೋಕದ ತೊಡೆಗೆ ಹಲ್ಲುಹಾಕಿ ಕಚ್ಚು;
ಹತ್ತಿದ ಸೊನೆಯನ್ನು ಒದರುತ್ತ
ಜೊಲ್ಲಿಳಿಸಿ ಸಿಹಿತೊಳೆ ಜಗಿಯುತ್ತ
ಒಂದು ದಿನವಾದರೂ ನಿಜವಾಗಿ ಬಾಳು;
ಅಲ್ಲಿಯವರೆಗೆ ಮಿದುಳ ಬಾಗಿಲು ತೆರೆದು
ನೀ ಕಾಪೀಚೆಟ್ಟು ಹೊಡೆದ ಬ್ಲೂಮ್‌ಫೀಲ್ಡನಿಗೆ
ಗೇಟಾಚೆ ನಿಂತಿರಲು ಹೇಳು.
*****