Home / ಕವನ / ಕವಿತೆ / ದೀಪಿಕಾ – ಸ್ವಗತ

ದೀಪಿಕಾ – ಸ್ವಗತ

ಯಾಕೆ ಈ ಆನಂದ ಕಾಡುತ್ತಾನೋ ಹೀಗೆ
ಆಡುತ್ತಾನೆ ಆಡುತ್ತಾನೆ ಆಡುತ್ತಾನೆ ದೇವರೇ
ನಡುಬೀದಿಯಲ್ಲಿ ಬಟ್ಟೆ ಎಳೆದ ಹಾಗೆ ಥಟ್ಟನೆ
ಕಿಬ್ಬೊಟ್ಟೆ ಮೇಲೆ ಕೈಯಿಟ್ಟಂತೆ ಫಕ್ಕನೆ!
ಒಳಗೆ ಕತ್ತಲೆಯಲ್ಲಿ ಹುಗಿದ ಗುಟ್ಟಿಗೆ ಕಡ್ಡಿ ಗೀರಿ
ಭಾರಿ ಪಟಾಕಿ ಸಿಡಿಸಿ ಬೆಚ್ಚಿಸುತ್ತಾನೆ
ರೇಗಿದರು ಹೊರಗೆ ಕತ್ತಲು ಮುಚ್ಚಿದೊಳಗೆ
ಸಣ್ಣ ದೀಪಾವಳಿ
ಮುಖದ ಮೇಲೆಲ್ಲ ಬೆವರಿನ ಕಡಲೆ ಹನಿಮೂಡಿ
ನೆನೆಸಿಕೊಂಡರೆ ಈಗ ತಂಗಾಳಿ.

ಆಡುತ್ತ ಆಡುತ್ತ ಬೇಲಿದಾಟಿದ ಮಾತ
ನಾಲಿಗೆಯ ಮೇಲೆ ಎದೆ ಹಿಂಡಿ ಹರವುತ್ತಾನೆ,
ಹಾಡುತ್ತ ಹಾಡುತ್ತ ಹಂಸಧ್ವನಿಯ ಬಿಟ್ಟು
ಕಾಮವರ್ಧಿನಿ ಕಡೆಗೆ ಕೊರಳಾಗುತ್ತಾನೆ,
ಕಣ್ಣಲ್ಲಿ ಬ್ಲೇಡಿಟ್ಟು ಕಳ್ಳವೇಷಗಳನ್ನ
ಗೀರಿಕೊಯ್ಯುತ್ತಾನೆ ಮಾತಿನಲ್ಲೆ,
ಕತ್ತಿನ ಕಣ್ಣಿಯ ಕಿತ್ತು ಹುಟ್ಟಿದ ಹೊತ್ತಿಗೆ ಮುಟ್ಟಿಸಿ
ಪೂರ ತುಂಬಿದ ಕೆರೆಯ ತೂಬು ತೆರೆಯುತ್ತಾನೆ.

ಹತ್ತಿರ ಬಂದಾಗ ಇವನು ಕಣ್ಣಲ್ಲಿ ಕತ್ತಿ ಹಿರಿದು
ಎದೆಗೆ ಎತ್ತಿಬಡಿದು ದೂರ ಓಡಿದ್ದೇನೆ,
ತುಟಿಯ ಕೊಂಕಿನಲ್ಲಿ ಥೂಛೀಗಳನ್ನು ಬರೆದು
ಬೆಕ್ಕಿನುಗುರಾಗಿ ಕತ್ತೆ ಪರಚಿದ್ದೇನೆ,
ಉರಿಮಾತ ಕಾರಿ ಬೆಂಕಿ ಬಾಣಲೆಯಲ್ಲಿ
ಕರಿಕಾಗುವಷ್ಟು ಬೇಯಿಸಿದ್ದೇನೆ;

ಆದರೂ ಈ ಭಂಡ
ಎಚ್ಚರಿದ್ದಾಗೆಲ್ಲ ಕೀಚಕನಾಗಿ ಕಂಡು
ರೆಪ್ಪೆ ಮುಚ್ಚಿದ ಗಳಿಗೆ ಕೊಳಲು ಹಿಡಿದು ಬಂದು
ಬಿಗಿಯಾಗಿ ಮುಚ್ಚಿದ್ದ ಎದೆಯೊಳಗೆ ಬಾಗಿ-
ಲುಗಳ ತೆರೆದಿದ್ದಾನೆ.
‘ಅಂತರಾಳಗಳಲ್ಲಿ ನಿಂತ ನೀರುಗಳಲ್ಲಿ
ಕಂತಿ ಕೈಬಡಿವ ಬೀಜಾಣುವ’ನ್ನ
ಹಿಡಿದೆತ್ತಿ ದಡದಲ್ಲಿ ನೀರು ಗೊಬ್ಬರ ಉಣಿಸಿ
ಕಾಮಕಸ್ತೂರಿವನ ಬೆಳಯಿಸಿದ್ದಾನೆ.
*****
ದೀಪಿಕಾ ಕವನಗುಚ್ಛ

Tagged:

Leave a Reply

Your email address will not be published. Required fields are marked *

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...