ದಣಿದ ಮೈ. ದುಡಿಮೆ ಭಾರಕೆ ರೆಪ್ಪೆ ಮುಚ್ಚಿತೋ
ಗಂಧರ್ವಗಣದವರ ಕಾಟ. ಕೂದಲಿಗಿಂತ
ಕರಿ ತೆಳುವು ಎಳೆ ಕಚ್ಚಿ
ನಡುಬಾನಿನಲಿ ತೂಗಿ
ಗಿರಗಿರನೆ ಮೈಮಣಿಸುವಾಟ.
ಹೊಸ ಲಯ, ಒತ್ತು; ಅರು ಅರೆಂಟೆಂಬ ಗತ್ತು;
ಬರಿ ಮಸಲತ್ತು! ಅದರೂ ತಲೆ ಒಲೆವ ಮತ್ತು!
ಬುದ್ಧಿಗೆ ಬೇಡಿ,
ಹಗಲೆಲ್ಲ ಮೂಲೆಯಲಿ ಸೆರೆಯಾದ ಹುಚ್ಚ
ಅವೇಶದಲಿ ಆಡಿ.
ನೆಲದ ಮೋಲಿಂದೆತ್ತಿ ಗಾಳಿಯಲಿ ತೂರಿಬಿಟ್ಟಿದೆ
ಬದುಕ ನೊರೆಗಳ್ಳು
ಮಿದುಳ ಚಿಪ್ಪೊಳು ಕೆಟ್ಟನಾತ,
ಕೊಳೆತಿದೆ ತಿರುಳು.
ಗಂಧರ್ವಗಣದವರ ಕಾಟ.
ಮುಗಿದೆವೆ ಮೇಲೆ
ಗಾಳಿಪಾದದ ಲಯದ ಬೀಳು,
ಒಳಕಿವಿಯೊಳಗೆ
ನೂರು ಚೈತ್ರದ ಮೀಟುಸಿಳ್ಳು, ಸಿಹಿ ಪಿಸುಸೊಲ್ಲು;
ಬಣ್ಣದರಮನೆಯೊಳಗೆ ಕೋಟಿ ಚಿಣ್ಣರ ಹಿಂಡು
ಕೊಳಲಿನಲಿ ಮಾತಾಡಿ, ಮಿಂಚಿನಲಿ ಸುತ್ತಾಡಿ,
ಚುಕ್ಕಿಯಲಿ ನೋಡಿ, ಗಲಿಬಿಲಿ ಗಲಭೆ ಬರಿ ಮೋಡಿ.
ಬಣ್ಣ ಬಣ್ಣದ ಬಳೆಯಚೂರ ಕೊಳವೆಯ ತಳಕೆ
ಹಚ್ಚಿ ಮಾಡಿದ ಮೋಜು;
ಟೊಳ್ಳು ಕಡ್ಡಿಯ ತುದಿಯ ಸೋಪುನೀರಿನಲಿಟ್ಟು
ಉಸಿರು ಹರಿಸಿದ ಜಾದು;
ತುದಿ ಮೊದಲು ಕಡಿದ ಸುಖದಾಳದಲಿ ಇನ್ನೇನು
ಕರ್ಪೂರಸುಂದರಿಯ ಮಲ್ಲಿಗೆ ತುಟಿಯ ತಾಗು,
ಅಷ್ಟರಲೆ-
ಇದ್ದಕ್ಕಿದ್ದಂತೆ ಹಾಲಿನ ಮುದುಕಿ ಕೂಗು.
ಅಯ್ಯೊ!
ಎಲ್ಲ ಸಿಡಿದು, ರೆಪ್ಪೆ ತೆರೆದು
ಒದ್ದ ಪ್ರಪಂಚವನ್ನೆ ತಬ್ಬು ಹೋಗು.
*****