ಕಮಲಗಣ್ಣಿನಿಂದ ಬಾನ ನೋಡುವ ಕೆರೆ
ದಂಡೆಯುದ್ದ ಅಂಚು ಹೆಣೆದ ಹೂವ ಹೊರೆ
ಭೂಮಿಯೆದೆಗೆ ಹೊಕ್ಕುನಿಂತ ಭಲ್ಲೆಗಬ್ಬು
ಸೊಕ್ಕಿ, ತಲೆಯ ಸುತ್ತ ಒಲೆವ ಪೈರಿನುಬ್ಬು
ಬಿಸಿಲ ಕುಡಿದು ಉರುಳಿ ಬಿದ್ದ ಕಲ್ಲ ನಿದ್ದೆ
ಚೌಕ ಚೌಕ ತೇಪೆ ಹೊಲಿದ ಪಗಡೆಗದ್ದೆ
ಹಸಿರ ಛತ್ರಿಯಲ್ಲಿ ಹೊಳೆವ ಹೀಚುಮಾವು
ಬಿಚ್ಚಿದಂತೆ ಚುಕ್ಕಿಗಣ್ಣ ಇರುಳ ಬಾನು
ಆಳೆತ್ತರ ತೆಂಗು ತಲೆಗೆ ತೊಟ್ಟ ಗರಿ
ಕತ್ತಿಸಾಲು ಮಿಂಚುತ್ತಿದೆ ಹವೆಯ ತೂರಿ
ಹಕ್ಕಿಕೊರಳು ಬರೆದ ಲಕ್ಷ ದನಿಯ ಗೀಟು
ಹವೆಯೆಲ್ಲಾ ಮಕ್ಕಳು ಗೀಚಿಟ್ಟ ಸ್ಲೇಟು
ತನಗೆ ತಾನೆ ಮಾತಾಡುತ ನಡೆವ ಪೋರಿ
ಸೊಟ್ಟ ಪಟ್ಟ ಚಲಿಸುವ ತೊರೆ ಗದ್ದೆ ಸೀಳಿ
ತಾರಾಡುತ ಜೋಲಿ ನಡೆದು ಡಿಕ್ಕಿ ಹೊಡೆದು
ಕುಸಿಯುತ್ತಿದೆ ಸೋತು ಗಾಳಿ ಮೈಗೆ ಒರಗಿ
ಹೊಳ್ಳೆ ಬಿರಿಸುವಂತೆ ಬರುವ ಶಾಲಿಗಂಧ
ಇಡೀ ಸೃಷ್ಟಿ ಯಾರೋ ಬರೆದ ಚಿತ್ರಬಂಧ.
*****