ಕಂದ ಬಾಬಾ ನಂದ ಬಾಬಾ
ಪುಟ್ಟ ಗಿಣಿಮರಿ ಸುಂದರಾ
ಓಡಿ ಬಾಬಾ ಕೈಯ ತಾತಾ
ಆತ್ಮಗುಬ್ಬಿಯ ಚಂದಿರಾ
ಕಲ್ಲುಸಕ್ಕರೆ ಮೆಲ್ಲುತಿರುವೆನು
ಕುಂಟ ಕಳ್ಳನೆ ಕಂದನೆ
ಎನ್ನ ಸೀರಿಯ ನಿರಿಗೆ ಮರೆಯಲಿ
ಮುಸುಡಿ ಮುಚ್ಚುವ ತುಂಟನೆ
ಎನ್ನ ಬಯಕೆಯ ನೂರು ಪಕಳಿಯ
ಬಿಚ್ಚಿ ನಿನ್ನನು ಹಡೆದನು
ಎನ್ನ ಹೆಣ್ತನವಾಯ್ತು ತಾಯ್ತನ
ಎದೆಯ ಹಾಲನು ಎರೆದೆನು
ನಾನು ಸುಂದರಿ ಎಂಬ ಮಾತೇ
ಮರೆತು ಹೋಯಿತು ಹುಟ್ಟಿನಿಂ
ನನ್ನ ಕೋಮಲ ಕುಚದ ಹಂಡೆಯು
ಎಡೆಯು ಆಯಿತು ಗುಟ್ಟಿನಿಂ
ನನ್ನ ಮಾಯದ ಗಂಡ ಎಳೆದಾ
ತುರುಬ ನೀನೀ ಕಟ್ಟಿದೆ
ನನ್ನ ಬಂಡನ ಗಂಡ ಗರುವನ
ಬೆಪ್ಪ ಕಪ್ಪೆಯ ಮಾಡಿದ
ಆ ನಾದಿನಿ ಭಾವ ಮೈದುನ
ಮಾವ ಮುಂಗುಲಿಯಾದರು
ಮನೆಗೆ ನೀನೇ ರಾಜತೇಜಾ
ನಿನ್ನ ಉಚ್ಚೆಯ ಬಳೆದರು
ಚೋಟು ಹುಡುಗಾ ಬೋಟು ಬೆಡಗಾ
ಏನು ಜೋರೋ ನಿನ್ನದು
ನೀನು ಅತ್ತರೆ ಮನೆಯ ಚತ್ತರಿ
ಗಿಮ್ಮಿ ಗಿರಿಗಿರಿ ಎನುವದು
ನೀನೆ ಬಿಂಗರಿ ನೀನೆ ಸಿಂಗರಿ
ನೀನೆ ಬೀಗರ ಬೀಗನೂ
ಕಡಬು ಹೋಳಿಗೆ ಉಂಡಿ ಚಕ್ಕುಲಿ
ತಟ್ಟಿ ಬುಟ್ಟಿಗೆ ಒಡೆಯನೊ
ಎಲ್ಲ ಖಾರಾ ಖೀರು ಪಾಯಸ
ಅಡುಗೆ ಮನೆಯೆ ನಿನ್ನದು
ನಾನು ಮಾಡಿದ ಮಾಯದಡುಗೆಯು
ಇನ್ನು ಮೀಸಲು ನಿನ್ನದು
*****