ದೈವನಂಬಿಕೆಯೊಂದು ದಿನ್ನೆ, ಏರುವ ಜನಕ್ಕೆ.
ಹತ್ತಿನಿಂತರೆ ದಿನ್ನೆನೆತ್ತಿಯಲಿ ಸುತ್ತಲಿನ
ಹತ್ತು ವಿಷಯಗಳೆಲ್ಲ ಕಣ್ಣತೆಕ್ಕೆಗೆ ಸಿಕ್ಕಿ
ನೋಟ ಕೂರಾಗುವುದು, ನಿಲವು ದೃಢವಾಗುವುದು,
ತುಂಬಿ ಹರಿಯುವ ಗಾಳಿ ಬಗೆ ಸೋಸಿ ಮುಖದಲ್ಲಿ
ನೊಂದ ನೆನಪಿನ ಬಿರುಸು ಹರಿದು ನಗೆ ಹಾಸುವುದು.
ತಪ್ಪಲಿನ ಕಣ್ಣತಡೆ ಇಲ್ಲಿ ಕೆಳನಿಲ್ಲುವುವು;
ನೆಲದ ಗದ್ದಲ ಮೇಲಕೇರುತ್ತ ಸಣ್ಣಾಗಿ
ಕಡೆಗೊಮ್ಮೆ ಸಾಯುವುದು; ಮೇಲೆ ನಿಂತವರ ದನಿ
ಕೇಳಿಸದು ; ಹತ್ತು ಜನರ ರೀತಿಗೆ ಹೊರಗು.
ತಪ್ಪಲಿನ ಜನಕ್ಕೆ ಇದ ಕಂಡು ಬೆರಗೋ ಬೆರಗು.
ಇಂಥ ನಂಬಿಕೆಯೊಂದು ನೂಲು; ಬಾಳಿನ ಮೇಲು
ಕೀಳುಗಳ ಎಡೆಯರಿತು ಅದರೊಳಗೆ ಪೋಣಿಸಲು
ಮೂಡುವುದು ಕಾಣದಿಹ ಚೆಲುವು; ಅಳು ನಗು ಇಲ್ಲಿ
ಬೆರೆಯುವುವು ಬಣ್ಣಗಳ ತೊರೆದು, ಒಳಗಿನ ತಿರುಳು
ಒಂದೆ ಎನ್ನುವ ಪರಿಯ ಮೆರೆದು; ಬದುಕಿನ ಪರಿಧಿ
ಬೆಳೆಯುವುದು ಎಲ್ಲೆಯನು ಹರಿದು; ತನ್ನೊಳು ಹೊರಗ
ಕೊಳ್ಳುವುದು. ತನ್ನೆದೆಯ ತಿಳಿವುಗನ್ನಡಿಯಲ್ಲಿ
ಲೋಕಬಿಂಬವ ಕಂಡು ತಣಿಯುವುದು ಮಣಿಯುವುದು.
ನಂಬಿಕೆಗೆ ಕೋದ ಅನುಭವ ಒಂದಲಂಕಾರ
ಲೋಕವನು ಸವಿವ ಜೀವಿಗೆ ಭಾವಶೃಂಗಾರ.
*****