ಅಲ್ಲಿ ಬೆಳಗುವ ರವಿಯೆ ಇಲ್ಲಿ ಬೆಳಗುವ; ಹಗಲು
ಬೇರೆ. ಆ ತಾರೆಗಳೆ ಇಲ್ಲಿ ಹೊಳೆವುವು; ಇರುಳು
ಬೇರೆ. ಅದೆ ಮಳೆ ಗಾಳಿ, ಕೊರೆವ ಚಳಿ, ಎಳೆ ಬಿಸಿಲು
ಹದ ಬೇರೆ. ಒಂದೆ ಅನುಭವ, ಬೇರೆ ಹೊರ ಒಡಲು.
ಚಿತ್ತ ಮೆಲುಕಾಡಿಸಿದ ಸುಖ ದುಃಖ ಧಗೆಯೆಲ್ಲ
ಒಂದೆ ಇಡಿ ಲೋಕಕ್ಕೆ. ಬೇರೆ ನುಡಿ, ಆದರೂ
ಫರದೆ ತೆಳು, ಕಾಣುವುವು ಆಚೆಯ ನೋಟಗಳೆಲ್ಲ
ಹಾಗೆ ನೆಚ್ಚಿದ ಜೀವ ಒಳಗೊಳಗೆ ಕೈಬಿಡಲು
ಏನು ಉಳಿಯಿತು? ಭಾವಗೆಡಲು ಎದೆ, ಮನೆಯೊಳಗೆ
ಹಾವು ಎಲ್ಲೋ ಆಡಗಿದಂತೆ ಬಗೆ ಬಗೆ ಶಂಕೆ
ತೋಡುವುವು ಬಗೆಯ, ಬೆಳೆವುದು ಕಾಡು ಎದೆಯೊಳಗೆ,
ಕೂಗಿ ಬೆಚ್ಚಿಸಿ ಓಡುವುವು ತೋಳ ಹುಲಿ ಚಿರತೆ.
ಗೆದ್ದೆ ಬಿಡು ಹೋರಾಡಿ; ಸುಡಲೆದ್ದ ಕಿಚ್ಚನ್ನು
ಮಣಿಹಾರಮಾಡಿ ಲೋಕಕ್ಕಿತ್ತೆ ಮೆಚ್ಚನ್ನು.
*****