ಈ ಸಂಜೆ ಗುಡಿಯ ಕಟ್ಟೆಯ
ತುದಿಯಲ್ಲಿ ಕಾಲು ಮಡಚಿ ಕುಳಿತ
ಮುದುಕನ ಕಣ್ಣ ತುಂಬ ನೀರಿನ ಪಸೆ
ಎಲುಬುಗಳು ಹಾಯ್ದ ಮುಖದ
ಆಕಾರದಲ್ಲಿ ಮುಕ್ಕಾದ ಮೂರ್‍ತಿಯ ಸ್ವರೂಪದವನು
ಅವನ ದೃಷ್ಠಿ ಹರಿವ ಉದ್ದಗಲಕೂ
ಮಾವಿನ ತೋಪಿನ ನೆರಳು ಉರಿವ
ಸೂರ್ಯ ನಾಚಿಕೆಯಿಂದ ಮರೆಯಾಗಿದ್ದಾನೆ
ನಕ್ಷತ್ರಗಳು ಅವನ ದಾರಿಗುಂಟ ಮೆರವಣಿಗೆ
ಹೊರಟಿದೆ ಸಂತೆಯಲಿ ಒಬ್ಬನೇ ನಿಂತ ಸಂತನವನು.
ಹಾಸಿ ಬೀಸಿದ ಹಕ್ಕಿಗೂಡಿನ ತುಂಬ ಧ್ವನಿ
ಚಿಲಿಪಿಲಿ ಕವಣಿ ಹೊಡೆದು ಅರಳಿದ ಬೀಜಗಳು
ಮತ್ತೆಲ್ಲಾ ಹಸಿರಾಚೆಯ ಹಳದಿ ಒಣ ಹುಲ್ಲು
ಬಂಕದ ಕಂದೀಲಿನ ತುಂಬ ಕಪ್ಪು ಕಾಡಿಗೆ
ಬರದ ಕತ್ತಲಲ್ಲಿ ಮಂಕಾಗಿ ತೂಕಡಿಸುವ ರೈತನವನು
ಇದ್ದ ಬದ್ಧ ನೆಲವೆಲ್ಲ ಒಕ್ಕಲೆಬ್ಬಿಸಿ
ಹಸಿರು ನೆಲ ಕಪ್ಪಾಗಿ ಬಿತ್ತಲಾಗದ
ಬೀಜಗಳು ಕಣ್ಣ ಪಾಸೆ ತುಂಬ ಬಿಳಿ ಹತ್ತಿ
ಕರಿಚಹಾದ ಕಪ್ಪಿನಲಿ ಗುಟುಕರಿಸಿ ಉಳಿದ ಬಿಕ್ಕು
ನೆರೆ ಸಂತ್ರಸ್ತದ ಶಿಬಿರದಲ್ಲಿ ಮೌನವಾಗಿ ಕುಳಿತ ಶಿಬಿ ಚಕ್ರವರ್ತಿ.
ಊಟ ಮಾಡುವ ನಾವು ನೀವು
ಎಲ್ಲ ಬಲ್ಲವರಂತೆ ಮಾತನಾಡುವುದು ಕಂಡ
ಕರಿಹೊಲ, ಹಸಿರು ಮೈದಾನ, ಬೀಜ ಪಿಸುಗುಡುವ
ಮೌನದಾಟಿ ಬಳಲಿದ ಕೈಗಳ ಸ್ಪರ್ಶ ಬಳಲಿ
ಒರಟಾದ ಲೆಕ್ಕವೇ ಇಲ್ಲದ ಖಾಲಿ ಕೈಯಲ್ಲಿ ಕುಳಿತ ಸಂತ.
*****