ಪಂಚೇಂದ್ರಿಯಗಳಿಗೆ ಒಲಿದು ಅವು ಹೇಳಿದ ಹಾಗೆ ನಲಿದು
ಕುಣಿ ಅಂದರೆ ಕುಣಿದು ಕಾಡಿ ಬೇಡಿ ಪಡೆದೆ
ಮಿರಿಮಿರಿ ಮಿಂಚೊ ಮೊಟ್ಟೆ, ಕಿಚ್ಚಾ ಹಚ್ಚೊ ಮೊಟ್ಟೆ
ಕಳ್ಳುಬಳ್ಳಿಯಾ ಹಂಗಿಲ್ಲದಾ ಮೊಟ್ಟೆ, ನಿಲುವು ನಡೆಯಿಲ್ಲದಾ ಮೊಟ್ಟೆ
ಒತ್ತಿದರೂ ಒಡೆಯದೆ ಕುಟ್ಟಿದರೂ ಸಿಡಿಯದೆ
ಮಂಕುಬೂದಿಯನೆರಚಿ ಮಿಕನನ್ನಾಗಿಸಿ ಮಣಿಸಿ
ಬೆರಕಿ ಗುಣವ ಕಲಿಸಿ ನಕ್ಕಿತವ್ವಾ ಮೊಟ್ಟೆ
ಮಿರ್‍ರನೆ ಮಿಂಚೊ ಮೊಟ್ಟೆ, ಮಾಯಾ ನಗರಿಯ ಮೊಟ್ಟೆ
ಕಣ್ಣಲಿ ಹಳ್ಳವ ಅಗೆದು ಮೂಗಿಗೆ ದಾರವ ಬಿಗಿದು
ಕಿವಿಯಾ ಕಚ್ಚಿ ನಾಲಗೆ ಚುಚ್ಚಿ ಬಾಯ ಮುಚ್ಚಿ
ದೆಯ್ಯ ಮೆಟ್ಟಿದ ಹಾಗೆ ಮೈಯಾ ಮೆಟ್ಟಿಕೊಂಡು
ಬದುಕಾ ನರಕಾ ಮಾಡಿ ಕೊಕ್ಕಿತವ್ವಾ ಮೊಟ್ಟೆ
ಮಿರಿಮಿರಿ ಮಿಂಚೊ ಮೊಟ್ಟೆ, ತಿಳಿವನು ತಿರುಚೊ ಮೊಟ್ಟೆ
ಕೊಡವಿದ್ದಕ್ಕೇ ಹೊರಳಿ ಕೆಡವಿದಕ್ಕೇ ಕೆರಳಿ
ಛಂಗನೆ ಮೇಲೆ ನೆಗೆದು ನೆತ್ತಿಯ ಮೇಲೆ ಕುಣಿದು
ಸರಸರ ಒಳಗೆ ಇಳಿದು ಬತ್ತಿಯ ಹಾಗೆ ಉರಿದು
ಸುಡುಸುಡು ಅಂತು ಮೊಟ್ಟೆ ಸುಟ್ಟಿತವ್ವಾ ಹೊಟ್ಟೆ
ಮಿರ್‍ರನೆ ಮಿಂಚೊ ಮೊಟ್ಟೆ, ನಂಜನು ಉಣಿಸೊ ಮೊಟ್ಟೆ
ಮಾಟವ ಮಾಡಿದೆ ಮಂತ್ರವ ಹಾಕಿದೆ
ಹರಕೆಯ ಹೊತ್ತು ಮುಡಿಪನು ಕಟ್ಟಿದೆ
ಹೋದೆ… ಹೋದೆ… ಅಂದು, ಒಮ್ಮೆಗೆ ಒಳಗೇ ಬಂದು
ಮುಳ್ಳಿನ ಹಾಗೆ ಮೊನೆದೂ, ನಟ್ಟಿತವ್ವಾ ಮೊಟ್ಟೆ
ಮಿರಿಮಿರಿ ಮಿಂಚೊ ಮೊಟ್ಟೆ, ಮೂಜಗ ಮುಕ್ಕಿದ ಮೊಟ್ಟೆ
ಕೆಟ್ಟೇ ಅನಿಸಿತು ಬಿಡುಗಡೆ ಬಯಸಿತು
ಹೃದಯವು ಕಲಿಸಿತು ಅರಿವದು ಉಳಿಸಿತು
ಧೂಪಾ ಹಚ್ಚಿ ದೀಪಾ ಬೆಳಗಿ ಹೂಗಳನೇರಿಸಿ
ತಟ್ಟೆಯಲ್ಲಿಟ್ಟು ಶಿವನಿಗೆ ಕೊಟ್ಟೆ
ಗಲ್ಲವ ಬಡಿದು ಬೆಲ್ಲದ ಮಾತಲಿ ಮೊರೆಯನು ಇಟ್ಟೆ
ಎಲ್ಲೇ ಹುಡುಗಿ ಮೊಟ್ಟೆ? ಎಲ್ಲೇ ಹುಡುಗಿ ಮೊಟ್ಟೆ?
ನನಗೆ ನಾನೆ ಕೇಳುವೆ, ನನಗೆ ನಾನೆ ಹೇಳುವೆ
ಮುಕ್ಕಣ್ಣನಿಗೆ ಕೊಟ್ಟು ಕೈಯ ಮುಗಿದು ಬಿಟ್ಟೆ.
*****