ಅವನು ರಾಮನು
ಗುಣ ಸಂಪನ್ನನು
ನೀತಿ ನೇಮಕ್ಕೆ
ತಲೆಬಾಗುವನು
ಗುರುಹಿರಿಯರಿಗೆ
ಪ್ರೀತಿಪಾತ್ರನು
ಯಾರನ್ನೂ ನೋಯಿಸನು.
ಅನು ರಹೀಮನು
ಅವನೂ ಗುಣ ಸಂಪನ್ನನು
ಕೊಂಚ ಸಂಕೋಚದ ಸ್ವಭಾವ
ಸದಾ ಧ್ಯಾನಸ್ಥನು
ಏಕಾಂತ ಪ್ರಿಯನು.
ಹೀಗೊಮ್ಮೆ
ರಾಮನೂ ರಹೀಮನೂ
ಭೆಟ್ಟಿಯಾದರು
ಅವನೊಳಗೆ ಅವನೊ
ಇವನೊಳಗೆ ಅವನೊ
ಎಂಬಂತೆ ಒಂದಾದರು.
ಒಂದೇ ನೋಟ
ಒಂದೇ ಮಾಟ
ಕಣ್ಣಿದ್ದವರಿಗೂ
ಕಗ್ಗಂಟಾದರು.
ಸೂರ್‍ಯಚಂದ್ರರ
ಜೋಡಿ ಕೂಡಿ
ನಲಿದಿದ್ದು ನೋಡಿ
ಜನ ತಬ್ಬಿಬ್ಬಾದರು.
ಹೀಗೆ….. ಇಬ್ಬರೂ ಕೂಡಿ
ಒಬ್ಬರೇ ಆಗಿ
ಆಟವಾಡಿದರು.
ಹಗಲು-ರಾತ್ರಿಯ ಆಟ
ಹೂವು-ಗಿಡದ ಆಟ
ಬೆಂಕಿ-ಬೆಳಕಿನ ಆಟ
ಮೋಡ-ಮಳೆಯ
ಆಟವಾಡಿದರು.
ಕೆರೆ-ದಡ, ದಡ-ಕೆರೆ,
ಎಂದು ಕುಪ್ಪಳಿಸಿದರು
ಕಣ್ಣಾಮುಚ್ಚೆ ಕಾಡೆಗೂಡೆ
ಎಂದು ಉದ್ದಿನ ಮೂಟೆ
ಉರುಳಿಸಿದರು.
ಮಾಯದ ಕೈಗಳಿಂದ
ಮರಳಿನ ಕಣಗಳಿಂದ
ಕಪ್ಪೆಗೂಡು ಕಟ್ಟಿದರು.
೨
ರಾಮನಿಗೆ ಮೀಸೆ ಮೂಡಿ
ಮದುವೆಯಾಗಿ ಮಕ್ಕಳಾಗಿ
ಮರಣವೂ ಬಂತು.
ರಹೀಮ ಅಬ್ಬೆಪಾರಿಯಾಗಿ
ಅಲೆದು ಅಂತರ್‍ಧಾನನಾದನು.
೩
ಇದೀಗ ಕೆರೆ ಬತ್ತಿ ದಡ ಕುಸಿದು
ಕಪ್ಪೆಗೂಡು ಹುಳುಹುಪ್ಪಟೆ
ಬಾವಲಿಗಳಿಗೆ ಬಿಡಾರವಾಯಿತು
ಹೆಬ್ಬಾಗಿಲಿನಲ್ಲಿ ಹಾವೊಂದು
ಪೊರೆಕಳಚಿ, ಪಹರೆ ನಡೆಸುತ್ತಿದ್ದ
ಮುಂಗುಸಿಗೆ ಮುಖಭಂಗವಾಗಿ
ಮುನಿಸು ಮುಗಿಲು ಮುಟ್ಟಿತು.
ಪ್ರಸಿದ್ದ ಕಪ್ಪೆಗೂಡಿನ ಕದನಲ್ಲಿ
ನೆಲವೂ ನೀರಾಗಿ
ಚರಿತ್ರೆಗೂ ಚುರುಕು ಮುಟ್ಟಿತು.
೪
ಎಲ್ಲಾ ಮುಗಿಯಿತು
ಮುಗಿದೇ ಹೋಯಿತು ಅನ್ನುವಾಗ….
ಹೀಗೆಯೆ ಒಮ್ಮೆ
ಅಶೋಕನೂ, ಅಕ್ಬರನೂ
ಭೆಟ್ಟಿಯಾದರು.
ಮಾಯದ ಕೈಗಳಿಂದ
ಮರಳಿನ ಕಣಗಳಿಂದ
ಕಪ್ಪೆಗೂಡು ಕಟ್ಟತೊಡಗಿದರು…..
*****