ಪಂಜದಮ್ಯಾಲ ನಿನ್ನ ಮನಸು ಕಾಲ-
ಕಂಜದೆ ಅದರೊಳು ಕಂಡಂಥ ಕನಸು || ಪ ||
ಅಂಜದಿರು ಅಲಾವಿ ಹಬ್ಬದಿ
ರಂಜಿಸುವ ರಾಜಿಸುವ ಮೋರುಮ
ಪಂಜದೊಳು ಪರಿತೆದ್ದು ಆಡುವ
ಭಜನವು ಬಹುತೆರದಿ ಪೂಜಿಸು || ಆ. ಪ. ||
ಜಲದೊಳು ಉರಿಯ ಬಿಸಿಲಣ್ಣ ಮಹಾ-
ಕಲಹ ಕರ್ಬಲದೊಳು ಕಲಹದಿರಣ್ಣ
ನೆಲದ ಹುಬಿದ ಬಲುಮಿ ಕುಣಿಯೊಳು
ಚೆಲುವ ಹಣ್ಗಳ ಹಾಕಿ ಮುಚ್ಚುತ
ದಳದ ಗೋದಾಳಿಂಬ್ರ ಊರುದು
ತಿಳಿದುಕೊ ತಾಬೂತಿನೊಳು ಘನ || ೧ ||
ಡೋಲಿಯೆಂಬುವದಿದು ಖಾಲಿ ಭೂ-
ಮಾಲಿ ಹಾಕಿ ಜನ ಜಗಕ ವಿಶಾಲಿ
ಬಾಲಕರು ಅಲಿ ಸಂತನೆಲೆಯನು
ಹೇಳಲಿರದೆ ದಣಿದು ಇಳೆಯೊಳು
ಮಾವು ಶಿಶುನಾಳೇಶನಾಲಯ-
ದೊಳು ಶಹದತ್ತ ಕತ್ತಲದಿ || ೨ ||
*****