ನಿನ್ನ ನೆನಪಿನ ಬತ್ತಿ ಹೊಸೆದು
ಹೊಸೆದು ಎದೆಯ ಹಾಲೆರೆದು
ಪಣತಿಯ ಹಚ್ಚಿಟ್ಟೆ ಕಾರ್ತೀಕದ
ಇರುಳ ಸಂಜೆಯ ಮರುಳಭಾವಕೆ.
ಬಾ ನೀನು ಬೆಳಕಿನ ಗೆರೆಗುಂಟ
ಮಾಡಿನ ಕದವ ತೆರೆದು ತೇಜ
ತುಂಬಿದ ಹಾಸುಬೀಸು ಜೀವ
ಜೀವದ ಬೆಸುಗೆ ಪ್ರೇಮ ರಾಗಕೆ.
ಮಣ್ಣ ಕಡೆದ ಸಣ್ಣ ಮೊಳಕೆ
ಇರುಳ ತುಂಬಿ ನರಳಿ ಕಂಪ ಬೀರಿ
ಹೂವು ಅರಳು ಮೈಯ ಉಸಿರು
ಚಿಗುರಿ ತೋಯುವ ಇಬ್ಬನಿಗಳ ಸಾಲು.
ತೆರೆತೆರೆದ ಅಗಲ ಬಾಗಿಲ ತಳಿರು
ತೋರಣ ಚಿನಕುರಳಿ ಹೂ ಬಾಣ
ಕೈ ಹಿಡಿದು ಹಾಸಿದ ಬೆಳಕು ಕಳೆ
ಬೆಳಗು ಲಹರಿ ತಟ್ಟಿತಟ್ಟಿ ಹಾಡಿದ ಜೋಗುಳ.
ದೂರದಂಚಿನಲಿ ಹೂಗಳ ರಾಶಿ ಸುರಿದು
ಕನಸಿನ ಗೊನೆಗೆ ಮಿಂಚಿನ ತೆನೆ
ಮಿನುಗಿ ದಿವ್ಯ ನುಡಿಗಳ ಬಣ್ಣದ ಕಿಡಿ
ನಕ್ಕ ಕಂದನ ಹಾಲುಗಲ್ಲದ ಬೆಳಕು ತಾಯಕಣ್ಣ ಬಿಂಬ.
*****