ತರಂಗಾಂತರ – ೨

ತರಂಗಾಂತರ – ೨

ನಿದ್ರಿಸುವವರೆಲ್ಲರೂ ನಿದ್ರಿಸಿರುವುದಿಲ್ಲ. ಎಚ್ಚರಾಗಿರುವವರೆಲ್ಲರೂ ಎಚ್ಚರಾಗಿರುವುದಿಲ್ಲ. ಎಲ್ಲೋ ಒಂದೆಡೆ ಅವನಿಗೆಲ್ಲವೂ ಕೇಳಿಸುತ್ತಿತ್ತು. ಎಲ್ಲವೂ ಕಾಣಿಸುತ್ತಿತ್ತು. ಸಮಾಧಿಯೆಂದರೆ ಇದೇ ಎಂದುಕೊಂಡ. ಇದೇ ಸಮಾಧಿ ಯಾದರೆ ಅದು ಇಂದೇ ಆಗಲಿ, ಈ ಕ್ಷಣವೇ ಆಗಲಿ. ಆಗ ತಾನು ಎಂಥ ತರಂಗಾಂತರಗಳನ್ನೂ ಸಹಿಸಿಕೊಳ್ಳಬಹುದು. ಒಂದು ಬ್ಲಾಕ್ ಹೋಲ್, ಕಪ್ಪು ಕಣಿವೆ ಯಾಗಿಬಿಡುತ್ತೇನೆ. ಪರಮಾತ್ಮನೆಂದರೆ ಸಕಲ ಗ್ಯಾಲಕ್ಸಿಗಳನ್ನೂ ನುಂಗುವಂಥ ದೊಡ್ಡದೊಂದು ಕಪ್ಪು ಕಣಿವೆ. ಕೆಲವು ಮನುಷ್ಯರು ಕೂಡ ಹಾಗಿದ್ದರೆ ಆಶ್ಚರ್ಯವೇನೂ ಇಲ್ಲ. ಆಶ್ಚರ್ಯವೇನೂ ಇಲ್ಲದಿರುವುದೇ ಆಶ್ಚರ್ಯ. ಇದಕ್ಕೆ ಕಠಿಣವಾದ ಬ್ರಹ್ಮಚರ್ಯ ಬೇಕಾಗುತ್ತದೆಯೆ? ಕಠಿಣವಾದ ಬ್ರಹ್ಮಚರ್ಯವೆಂದರೇನು? ಸ್ನಾನದ ಮನೆಯಲ್ಲಿ ಕೂಡ ನಗ್ನವಾಗ ದಿರುವಿಕೆ?

ತುಪ್ಪುಳದ ಅಂಚಿನಿಂದ ತಟ್ಟಿ ಎಬ್ಬಿಸಿದಂತಾಯಿತು. ಕಣ್ಣು ಪೂರ್ತಿಯಾಗಿ ತೆರೆದು ನೋಡಿದ. ತಾನು ಯಾರಿಗೋಸ್ಕರ ಕಾಯುತ್ತಿದ್ದೇನೋ ಅವಳ ಮೇಲುದ ಬಂದು ಅವನ ಮುಖವನ್ನು ನೇವರಿಸುತ್ತಿದೆ. ಲಿಫ಼್ಟಿಗೋಸ್ಕರ ಕಾಯುತ್ತ ನಿಂತಿರುವ ಆಕೆಗೆ ಮಾತ್ರ ಇದು ಗೊತ್ತಿಲ್ಲ. ಅಥವಾ ಗೊತ್ತಿದ್ದರೂ ಅದರ ಗೊಡವೆಗೆ ಆಕೆ ಹೋಗುತ್ತಿರಲಿಲ್ಲವೋ ಏನೋ. ತೋಳು ತುಂಬ ಶಾಪಿಂಗ್ ಬ್ಯಾಗುಗಳನ್ನು ಎತ್ತಿಕೊಂಡು ಅವಳು ನಿಂತಿದ್ದಳು. ಲಿಫ಼್ಟು ಕೆಳಕ್ಕಿಳಿಯುವ ಸೂಚನೆ ಬಂದೊಡನೆ ತುಸು ಮುಂದಕ್ಕೆ ಸರಿದಳು. ವಿನಯಚಂದ್ರನ ಮುಖದ ಜತೆ ಮೇಲುದದ ಸಂಪರ್ಕ ಕಡಿದು ವಿದ್ಯುತ್ ಸಂಚಾರವೇ ನಿಂತ ಹಾಗಾಯಿತು.

ವಿದ್ಯುತ್ ಸಂಚಾರ ಈಗ ನಿಜಕ್ಕೂ ನಿಂತುಹೋಗಿತ್ತು. ಕಾಯುತ್ತ ನಿಂತವಳು ತಬ್ಬಿಬ್ಬಾದಳು. ಲಿಫ಼್ಟು ಕೆಳಗಿಳಿಯುವಂತಿಲ್ಲ. ಕೈಮೇಲಿದ್ದ ಹೊರೆಗಳನ್ನು ಹೊತ್ತುಕೊಂಡು ಮೆಟ್ಟಲುಗಳನ್ನು ಹತ್ತದೆ ಬೇರೆ ವಿಧಿಯಿಲ್ಲ.

“ಎಕ್ಸ್ ಕ್ಯೂಜ್ ಮಿ! ” ಅಂದ ವಿನಯಚಂದ್ರ.

ಚಷ್ಮ ಧರಿಸಿದ್ದ ಕಣ್ಣುಗಳು ಅವನ ಕಡೆ ಹೊರಳಿದುವು.

“ಲಿಫ಼್ಟು ಕೆಳಕ್ಕೆ ಬರುವುದಿಲ್ಲ. ನೀವು ಎಷ್ಟನೇ ಮಹಡಿಗೆ ಹೋಗ ಬೇಕು?”

“ಟೆಂತ್ ಫ಼್ಲೋರ್”

“ನೀವು ಇದೇ ಅಪಾರ್ಟ್ ಮೆಂಟ್ ನಲ್ಲಿದ್ದೀರ?”

“ಹೌದು.”

“ಆದರೆ ನಾನಿನುವರೆಗೆ ನಿಮ್ಮನ್ನ ನೋಡಿದ ಹಾಗೇ ಇಲ್ಲ. ನಾನು ಐದನೇ ಮಹಡೀ ಮೇಲೆ ಇದ್ದೇನೆ.”

“ಓ!”

“ನೋಡಿದಿರ! ಒಂದೇ ಕಟ್ಟಡದ ನಿವಾಸಿಗಳಾಗಿದ್ದೂ ನಾವಿದುವರೆಗೆ ಭೇಟಿಯಾಗಿಲ್ಲ ಅಂದರೆ!”

“ಸಿಟಿ ಲೈಫ಼ೇ ಹಾಗೆ ಅಲ್ವ?”

“ಒಳ್ಳೆ ಕೋಳಿ ಸಾಕಣೆ ಕೇಂದ್ರ ಇದ್ದಹಾಗೆ! ತಮ್ಮ ನೆರೆಕರೆ ಯಾರಂತಲೇ ಗೊತ್ತಿರೋದಿಲ್ಲ. ನೆಲದ ಸಂಪರ್ಕ, ಮನುಷ್ಯನ ಸಂಪರ್ಕ ಕಡಿದು ಹೋದಮೇಲೆ ಜೀವನದ ಅರ್ಥ ಏನು ಅಂದ್ಕೊಳ್ತೇನೆ. ಆಕಸ್ಮಿಕವಾಗಿ ಸಂಭವಿಸುವ ಬಟ್ಟೆಯ ಸಂಪರ್ಕ ಬಿಟ್ಟರೆ ಇಲ್ಲಿ ಬೇರೆ ಸಂಪರ್ಕವೇ ಇಲ್ಲ!”

ಅವಳು ತಬ್ಬಿಬ್ಬಾಗಿ ಇವನ ಮುಖ ನೋಡಿದಳು. ಅರ್ಥವಾದಂತೆ ಸಾಮಾಜಿಕವಾಗಿ ನಟಿಸಿ ಮುಗುಳ್ನಗೆ ನಕ್ಕಳು. ಲಿಫ಼್ಟಿಗೋಸ್ಕರ ಕಾಯುತ್ತಿದ್ದ ಇತರರು ಅದು ಬಾರದ ಸೂಚನೆ ಕಂಡು ತಮ್ಮೊಳಗೆ ಬಯ್ದುಕೊಳ್ಳುತ್ತ ಮೆಟ್ಟಲೇರಿ ಹೋದರು.

“ಲಿಫ಼್ಟ್ ಬರೋ ಸೂಚನೆಯಿಲ್ಲ.” ಎಂದಳು.

“ಡೋಂಟ್ ವರಿ ಆ ಬ್ಯಾಗುಗಳನ್ನ ಇಲ್ಲಿ ಕೊಡಿ. ನಿಮ್ಮನ್ನು ಮನೆ ತಲುಪಿಸುತ್ತೇನೆ.”

“ಓ ನೋ! ” ಎಂದಳು ಅಳುಕುತ್ತ.

“ನನ್ನ ಹೆಸರು ವಿನಯಚಂದ್ರ. ಸ್ನೇಹಿತರು ವಿನ್ ಅಂತ ಕರೆಯುತ್ತಾರೆ. ನಾನೇನೂ ನಿಮ್ಮ ಬ್ಯಾಗುಗಳನ್ನು ತಗೊಂಡು ಓಡಿಹೋಗೋದಿಲ್ಲ.”

“ಛೀ ಛೀ! ಹಾಗಲ್ಲ. ನೀವು ಯಾರಿಗೋಸ್ಕರನೋ ಕಾಯ್ತ ಕುಳಿತಿದ್ದೀರಿ ಅಂತ.”

“ಕಾಯ್ತ ಕುಳಿತಿದ್ದೆ?”

“ನಾನು ಹೋಗ್ತ ನಿಮ್ಮನ್ನು ನೋಡಿದ್ದೆ. ಆಗಿಂದ್ಲೂ ನೀವು ಕಾಯ್ತ ಕುಳಿತ ಹಾಗೆ ಅನಿಸ್ತು.”

“ಓ! ನೀವು ನನ್ನ ನೋಡಿದಿರಾ?”

“ಏನೋ ಪುಸ್ತಕ ಓದ್ತ ಇದ್ದಿರಿ.”

“ನಾನು ಓದೋಕೆಂತ್ಲೆ ಈ ಕಡೆ ಬಂದೆ.”

“ವಂಡರ್ ಫುಲ್! ”

“ಯಾಕೆ?”

“ಯಾರಾದ್ರೂ ಓದಕ್ಕೆ ಬೇಸ್ ಮೆಂಟ್ ಗೆ ಬರ್ತಾರೆಯೆ?”

“ಮಾಡರ್ನ್ ಸೈಕಾಲಜಿ ಏನು ಹೇಳ್ತದೆ ಗೊತ್ತೆ? ಸದ್ದಿರೋ ಕಡೆಯೇ ಕಾನ್ಸಂಟ್ರೇಶನ್ ಸಿಗೋದು ಅಂತ. ಯಾಕಂದ್ರೆ ಸದ್ದಿಗೆ ಮನಸ್ಸು ಹೊಂದಿಕೊಳ್ಳುವಷ್ಟು ಬೇಗನೆ ಪ್ರಶಾಂತತೆಗೆ ಹೊಂದಿಕೊಳ್ಳೋದಿಲ್ಲ. ಅಬ್ಸಲ್ಯೂಟ್ ಸೈಲೆನ್ಸ್ ಇಸ್ ಡೆಡ್ಳಿ. ಅಂಥ ಸಂದರ್ಭದಲ್ಲಿ ಮನಸ್ಸಿಗೆ ಅದೊಂದೇ ವರ್ರಿ ಯಾಗಿಬಿಡುತ್ತದೆ. ಕಿಂಚಿತ್ತು ಸದ್ದಾದರೂ ಗಮನ ಆ ಕಡೆಗೆ ಹರಿಯುತ್ತೆ. ಬೇಸ್ ಮೆಂಟ್ ನಲ್ಲಾದರೆ ವಾಹನಗಳ ಸದ್ದು. ಕಾನ್ಸೆಂಟ್ರೇಶನ್ ಬಗ್ಗೆ ನಾನಿಲ್ಲಿ ನಿಜವಾಗ್ಲೂ ಪ್ರಯೋಗ ನಡೆಸ್ತಿದ್ದೆ.”

“ಓ! ಅದ್ರೆ ನೀವು ನಿದ್ರಿಸ್ತಿರೋ ಹಾಗೆ ಕಾಣಿಸ್ತಿತ್ತು ನೋಡುವವರಿಗೆ!”

“ನಿದ್ರೇನೆ? ನಿದ್ರಿಸದೆ ಕೆಲವು ವಾರಗಳೇ ಆದವು. ನಾನು ಕಾನ್ಸಂಟ್ರೇಟ್ ಮಾಡ್ತಾ‌ಇದ್ದೆ. ಕಾನ್ಸಂಟ್ರೇಟ್. ನಾವು ಓದಿದ್ದನ್ನು ಅರಗಿಸಿಕೊಳ್ಳುವುದು ಇಮೇಜುಗಳ ಮೂಲಕ ಅಂತ ಕೆಲವು ಮನಶ್ಶಾಸ್ತ್ರಜ್ಞರು ಹೇಳುತ್ತಾರೆ. ಸ್ಮೃತಿಗಳಿಗೆ ಕೂಡ ಇಮೇಜುಗಳೇ ಕಾರಣವಂತೆ. ನಿಮಗೇನನಿಸ್ತದೆ? ಓ! ನಿಮ್ಮ ಹೆಸರು ಕೇಳೋದನ್ನೇ ಮರೆತುಬಿಟ್ಟೆ!”

“ರೇಶ್ಮ! ಅಹಾ! ನನ್ಹೆಸರು….”

“ವಿನಯಚಂದ್ರ, ಸ್ನೇಹಿತರು ವಿನ್ ಅಂತ…”

“ಯಸ್ ಯಸ್. ನಿಮಗೇನನಿಸ್ತದೆ, ರೇಶ್ಮ?”

“ಬಹಳ ಚೆನ್ನಾದ ಹೆಸರು. ಆದರ ಶಾರ್ಟ್ ಫ಼ಾರ್ಮ್ ವಿನ್ ಅನ್ನೋದಂತೂ ದಿವಿನಾಗಿದೆ!”

“ಥಾಂಕ್ಯೂ, ಆದ್ರೆ ನಾ ಕೇಳ್ತಾ ಇರೋದು ಇಮೇಜುಗಳ ಬಗ್ಗೆ. ಸ್ಮೃತಿಗಳಿಗೆ ಕೂಡ ಇಮೇಜುಗಳೇ ಕಾರಣಾಂತ ನಿಮಗನಿಸ್ತದೆಯೆ?”

“ನೀವು ಸೈಕಾಲಜಿಸ್ಟೆ?”

“ನೋ! ನೋ! ನಾನು ಇಲೆಕ್ಟ್ರಾನಿಕ್ಸ್ ಇಂಜಿನೀಯರಿಂಗ್ ಓದ್ತ ಇದ್ದೀನಿ. ಬೀ‌ಇ ಫ಼್ಯಾನಲ್ ಈಯರ್.”

“ಓ! ವಂ….ಡ….ರ್…..ಫ಼ು….ಲ್!”

ರೇಶ್ಮ ಕೈ ಕುಲುಕಲು ತನ್ನ ಕೈನೀಡಿದಳು. ಕೈಕುಲುಕುತ್ತ ವಿನಯಚಂದ್ರ ಪುಳಕಿತನಾದ. ಈಕೆಯ ದೇಹ ಎಷ್ಟು ಮಿದುವಾಗಿರಬೇಕು, ಕೈಯೇ ಇಷ್ಟು ಮಿದುವಿದ್ದ ಮೇಲೆ ಎಂದುಯೋಚಿಸತೊಡಗಿದ.

“ಗ್ಲಾಡ್ ಟು ಮೀಟ್ ಯೂ!” ಎಂದು ತೊದಲಿದ.

ಕೈ ಕುಲುಕುವಿಕೆಯ ಗಡಿಬಿಡಿಯಲ್ಲಿ ರೇಶ್ಮಳ ತೋಳಿನಲ್ಲಿದ್ದ ಒಂದು ಪ್ಲಾಸ್ಟಿಕ್ ಚೀಲ ಕೆಳಕ್ಕೆ ಬಿದ್ದು ಅದರೊಳಗಿಂದ ಸೋಪು, ಶಾಂಪೂ ವಗೈರೆ ನಾಧನಗಳು ಹೊರಚೆಲ್ಲಿದುವು. “ನೀವು ಕಾಳಜಿ ಮಾಡಬೇಡಿ” ಎನ್ನುತ್ತ ವಿನಯಚಂದ್ರ ಅವೆಲ್ಲವನ್ನು ಚೀಲಕ್ಕೆ ತುರುಕಿಸಿ, ಅವಳಿಂದ ಇನ್ನಷ್ಟು ಚೀಲಗಳನ್ನು ತನ್ನ ವಶ ತೆಗೆದುಕೊಂಡ.

“ನಿಮ್ಮನ್ನ ಮನೆ ತಲುಪಿಸುತ್ತೇನೆ, ಕಮ್.” ಎಂದ.

ಪಹಲೇ ಆಪ್, ಪಹಲೇ ಆಪ್ ನಡೆದು ಕೊನೆಗೂ ಅವಳೇ ಮೊದಲು ಮೆಟ್ಟಲೇರತೊಡಗಿದಳು. ಸುಂದರಿಯರು ಮೆಟ್ಟಲಿಳಿಯುವುದನ್ನು ನೋಡುವುದಕ್ಕಿಂತಲೂ, ಮೆಟ್ಟಲೇರುವುದನ್ನು ನೋಡುವುದೇ ಕಣ್ಣಿಗೆ ಹಿತವೆನ್ನುವುದು ವಿನಯಚಂದ್ರನಿಗೆ ಖಚಿತವಾಯಿತು. ಅವಳ ಕುತ್ತಿಗೆ, ತೋಳು, ಬೆನ್ನು, ನಿತಂಬ, ಕಾಲುಗಳ ಒಟ್ಟಾರ ಚಲನೆಯ ಕ್ಲೋಜಪ್ ಆಪ್ಯಾಯಮಾನವಾಗಿತ್ತು. ಹೆಸರಿಗೆ ಸರಿಯಾದ ದೇಹ, ದೇಹಕ್ಕೆ ಸರಿಯಾದ ಹೆಸರು. ಇಷ್ಟೂ ಸರಿಯಾದ ಹೊಂದಾಣಿಕೆ ತೀರ ಅಪರೂಪವೇ.

“ನಿಮ್ಮ ಹೆಸರು ಚೆನ್ನಾಗಿದೆ ಎಂದೆ.”

“ಯೂ ಲೈಕ್ ಇಟ್?”

“ಯಸ್,” ಎಂದ.

ನನಗೆ ನಿನ್ನ ಹೆಸರು ಇಷ್ಟ. ಯಾಕೆಂದರೆ ನೀನು ಇಷ್ಟವಾಗಿದ್ದೀ ಅದಕ್ಕೇ. ಹೆಸರು ಚೆನ್ನಾಗಿದೆ ಎಂದರೆ ನೀನು ಚೆನ್ನಾಗಿದ್ದೀ ಎಂದು ಅರ್ಥ. ಈ ಅರ್ಥ ನಿನಗಾಯಿತೋ ತಿಳಿಯದು-ಎಂದೆಲ್ಲ ಮನಸ್ಸಿನಲ್ಲಿ ಹೇಳಿಕೊಂಡ.

“ಎವ್ರಿ ವನ್ ಲೈಕ್ಸ್ ಇಟ್!” ಎಂದಳು.

ಅವನ ಮುಖಕ್ಕೆ ತಣ್ಣೀರೆರಚಿದಂತಾಯಿತು.

“ಎವ್ರಿ ವನ್?”

“ಅಂದ್ರೆ ನನ್ನ ಕಲೀಗ್ಸ್, ನನ್ನ ಫ಼್ರೆಂಡ್ಸ್, ಅಲ್ಲದೆ ನಿಮ್ಮ ತರ ಹೊಸದಾಗಿ ಪರಿಚಯ ಆದವರೂ ಕೂಡ. ಆದ್ರೆ ನೀವು ಯಾಕೆ ಲೈಕ್ ಮಾಡ್ತೀರಿ ನನ್ನ ಹೆಸರನ್ನ?”

“ಯಾಕಂತ ತಿಳೀದು. ಅದಿ ಬಹುಶಃ ಬಹಳ ಮೆತ್ತಗೆ ಇದೆ ಅನಿಸ್ತದೆ.”

“ಓಹೋ! ನೀವದನ್ನ ರೇಶ್ಮೆ ಜತೆ ಕನ್ಫ಼್ಯೂಸ್ ಮಾಡ್ಕೊಳ್ತ ಇದ್ದೀರಿ! ಅದೇನೋ ಹೇಳ್ತ ಇದ್ದಿರಲ್ಲ ಇಮೇಜ್ ಬಗ್ಗೆ.”

“ಅದಿದ್ರೂ ಇರಬಹುದು. ಆದ್ರೆ ನನಗೆ ಮುಖ್ಯ ಅನಿಸೋದು ಪ್ರನಸ್ಸಿಯೇಶನ್. ಅಂದ್ರೆ ಶಬ್ದ ಬಾಯನ್ನು ತುಂಬುವ ರೀತಿ. ಕೆಲವು ಶಬ್ದಗಳನ್ನು ಉಚ್ಚರಿಸುವಾಗ ಒಂದು ರೀತಿಯ ಸುಖ ಅನಿಸಲ್ವೆ….”

“ಸುಮ್ಮನೆ ಈ ಮಹಡಿ ಹತ್ತುವ ಪ್ರಯತ್ನ ಯಾಕೆ ಕೈಗೊಂಡಿರಿ? ನಿಮಗೆ ಸಮಯ ಹಾಳು.”

ಅವಳು ವಿಷಯ ಬದಲಾಯಿಸುತ್ತಿರುವುದನ್ನು ಗಮನಿಸಿದ.

“ಇಲ್ಲ. ದಯವಿಟ್ಟು ತಪ್ಪು ತಿಳಿಕೋಬೇಡಿ. ನನಗೀ ಹೈರೈಸ್ ಕಟ್ಟಡದ ಜೀವನ ಇಷ್ಟವಿಲ್ಲ. ಯಾರಿಗೂ ಇಷ್ಟವಿಲ್ಲ. ಇಲ್ಲಿ ಒಬ್ಬರಿನ್ನೊಬ್ಬರಿಗೆ ಪರಿಚಯ ಇರುವುದಿಲ್ಲ. ಯಾರು ಯಾರ ನೆರವಿಗೂ ಬರೋದಿಲ್ಲ. ಪ್ರತಿಯೊಬ್ಬರೂ ಅವರವರ ರುಟೀನಿನಲ್ಲಿ ಸಿಗಹಾಕಿಕೊಂಡಿದ್ದಾರೆ. ಆಫ಼ೀಸು, ಕೆಲಸ, ಟೀವಿ, ಹಾಲಿಡೇ, ಪಾರ್ಟೀ, ಪಿಕ್ ನಿಕ್, ಶಾಪಿಂಗ್ ಎಟ್ ಸೆಟರಾ. ನಾವಾಗಿಯೇ ಮಾತಾಡಿಸಿದರೆ ತಮ್ಮ ಪ್ರೈವೆಸಿ ಎಲ್ಲಿ ಹಾಳಾಗುತ್ತದೋ ಅಂತ ಭಯಪಡುತ್ತಾರೆ…”

ಇಷ್ಟರಲ್ಲಿ ಮೇಲಿನಿಂದ ಒಬ್ಬಾತ ಒಂದು ಭಾರೀ ದೊಡ್ಡ ತಂತಿವಾದ್ಯವನ್ನು ಕೈಯಲ್ಲಿ ಹಿಡಿದುಕೊಂಡು ಇಳಿಯುತ್ತಿದ್ದುದು ಕಾಣಿಸಿತು. ಅವನಿಗೆ ದಾರಿಬಿಡಲೆಂದು ಇಬ್ಬರೂ ಬದಿಗೆ ಸರಿದು ನಿಂತರು. ಗಡ್ಡ, ದೊಗಲೆ ಜುಬ್ಬ ಇತ್ಯಾದಿಗಳಿಂದ ಥೇಟ್ ಸ್ಪೀರಿಯೋಟ್ಯಾಪ್ ಸಂಗೀತಗಾರನಂತೆ ಕಾಣಿಸುತ್ತಿದ್ದ ವ್ಯಕ್ತಿಯ ಗಮನ ಪೂರ್ತ ತನ್ನ ವಾದ್ಯದ ಮೇಲೆಯೇ ಕೇಂದ್ರೀಕೃತವಾಗಿತ್ತು. ಆತ ಇಳಿದು ಹೋದ ಮೇಲೆ ವಿನಯಚಂದ್ರ ಮಾತು ಮುಂದರಿಸಿದ:

“ಉದಾಹರಣೆಗೆ ಈ ವ್ಯಕ್ತಿ ಯಾರು? ಇಷ್ಟು ದೊಡ್ಡ ವಾದ್ಯವನ್ನು ಹೊತ್ತುಕೊಂಡು ಎಲ್ಲಿಗೆ ಹೊರಟಿದ್ದಾನೆ-ಎಂದೆಲ್ಲ ತಿಳಿಯೋದಕ್ಕೆ ಕುತೂಹಲವಿದ್ದರೂ ಕೇಳುವಂತಿಲ್ಲ. ನಿಮಗೆ ಹಳ್ಳಿಯ ಜೀವನ-ಎಂದರೆ ನಮ್ಮ ಗ್ರಾಮೀಣಸಂಸ್ಕೃತಿಯ ಪರಿಚಯವಿದೆಯೆ?”

“ಊಹೂಂ”

“ನನಗಿದೆ. ಯಾಕೆಂದರೆ ನನ್ನ ತಾಯಿಯ ಊರು ಒಂದು ಹಳ್ಳಿ. ಕುಗ್ರಾಮ ಎಂದು ಕರೆಯರಿ ಬೇಕಾದರೆ. ಅಲ್ಲಿ ಪ್ರತಿಯೊಬ್ಬರೂ ಪ್ರತಿಯೊಬ್ಬರಿಗೆ ಪರಿಚಯವಿರುತ್ತದೆ. ಅಪರಿಚಿತನಾಗಿ ಉಳಿಯೋದು ಸಾಧ್ಯವೇ ಇಲ್ಲ. ಇಟ್ ಈಸ್ ವಂಡರ್ ಫುಲ್ ರೇಶ್ಮಾದೇವಿಯವರೆ!”

ಮೆಟ್ಟಲೇರುತ್ತ ಆಕೆ ಸುಸ್ತಾಗಿದ್ದಳು. ಆದರೂ ಅವನ ಮಾತು ಕೇಳಿ ಕಿಲಕಿಲನೆ ನಕ್ಕಳು.

“ಯಾಕೆ ನಗ್ತೀರಿ?” ಎಂದ ವಿನಯಚಂದ್ರ.

“ಯಾಕೂ ಇಲ್ಲ” ಎಂದಳು.

“ಇದೆ”

“ರೇಶ್ಮಾದೇವಿ ಎಂದು ಕರೆದದ್ದಕ್ಕೆ! ನನ್ನನ್ನು ಯಾರೂ ಇದುವರೆಗೆ ಹಾಗೆ ಕರೆದಿಲ್ಲ. ನಾನು ರೇಶ್ಮಾ ಜಿಂದಾಲ್.”

“ಐ ಆಮ್ ಸೋ ಸಾರಿ.”

“ಡೋಂಟ್! ನನ್ನಪ್ಪ ರಘುವೀರ್ ಜಿಂದಲ್. ಅಣ್ಣ ಸಂಪತ್ ಜಿಂದಲ್, ಇಬ್ಬರೂ ಬಿಸಿನೆಸ್ ಮಾಡಿಕೊಂಡಿದ್ದಾರೆ. ನನ್ನ ತಂಗಿ ಸುನಯನ ಜಿಂದಲ್, ತಾಯಿ ಶಾಂತಾ ಜಿಂದಲ್. ಇಟ್ ಈಸ್ ಜಿಂದಲ್ ಆಲ್ ದ ವೇ. ಗಾಡ್! ನನ್ನ ಮೊಣಕಾಲುಗಳು ಕುಸೀತಾ ಇವೆ!”

ಅವರು ಐದನೇ ಮಹಡಿ ತಲುಪಿದ್ದರು. ಅದರ ಲ್ಯಾಂಡಿಂಗ್ ನ ಗೋಡೆಗೊರಗಿ ರೇಶ್ಮಾ ನಿಂತಳು. ಶಾಪಿಂಗ್ ಗೆಂದು ಓಡಾಡಿ ಸಾಕಷ್ಟು ದಣಿದಿದ್ದವಳು ಈಗ ಪೂರ್ತಾ ಸುಸ್ತಾಗಿ ಕುಸಿದು ಬೀಳುವಂತಿದ್ದಳು. ನೋಡಲು ಬಹಳ ಸುಖಕರವಾದ ದೃಶ್ಯ. ಆದರೆ ನೋಡುತ್ತ ನಿಲ್ಲುವುದು ಶಿಷ್ಟಾಚಾರಕ್ಕೆ ವಿರುದ್ಧ.

“ಇದೇ ಫ಼್ಲೋರಿನಲ್ಲಿ ನನ್ನ ಮನೆಯಿದೆ.” ಎಂದ ವಿನಯಚಂದ್ರ.

“ಫ಼ರವಾಯಿಲ್ಲ. ಇನ್ನೇನು ಐದೇ ಫ಼್ಲೋರು.” ಎಂದು ನಕ್ಕು ಅವಳು ಮತ್ತೆ ಮೆಟ್ಟಲೇರುವುದಕ್ಕೆ ತಯಾರಾದಳು.

“ಆ ಬ್ಯಾಗುಗಳನ್ನ ಇಲ್ಲಿ ಕೊಡಿ!”

“ಬೇಡ! ಬೇಡ! ಈಗಾಗಲೆ ನಿಮ್ಮ ಕೈಮೇಲೆ ಸಾಕಷ್ಟು ಹೊರೆ ಹೊರಿಸಿದ್ದೇನೆ.”

“ಇರಲಿ, ಪರವಾಯಿಲ್ಲ. ನನಗೆ ಇದೆಲ್ಲ ಅಭ್ಯಾಸ. ಕೊಡಿ!”

ಅವನು ನೇರ ಆಕೆಯ ಚೀಲಗಳಿಗೆ ಕೈ ಹಾಕಿದ. ಗಡಿಬಿಡಿಯಲ್ಲಿ ಚೀಸಿನ ದೊಂದು ಉರುಟು ಟಿನ್ ಹೊರಬಿದ್ದು ಮೆಟ್ಟಲುಗಳನ್ನು ಜಿಗಿಯುತ್ತ ಕೆಳ ಗುರುಳತೊಡಗಿತು. ಮೆಟ್ಟಲಿಂದ ಮೆಟ್ಟಲಿಗೆ ಹಾರುತ್ತ ಆದರ ವೇಗ ವೃದ್ಧಿಸಿ ಕೊನೆಗೆ ಎರಡೆರಡು ಮೆಟ್ಟಲುಗಳನ್ನು ಒಮ್ಮೆಗೇ ನಗೆಯತೊಡಗಿತು. ಇಳಿ ಯುವ ದಾರಿ ಗೊತ್ತಿರುವ ರೀತಿಯಲ್ಲಿ ಲ್ಯಾಂಡಿಂಗ್ ನಲ್ಲಿ ಬೇಕಾದಂತೆ ತಿರುಗಿಕೊಂಡು ಅದು ಸಾಗುವ ರೀತಿ ನೋಡಿ ವಿನಯಚಂದ್ರ ಅಚ್ಚರಿಗೊಂಡ.

“ಅಯಾಮ್ ಸೋ ಸಾರಿ,” ಎನ್ನುತ್ತ ಅದನ್ನು ಹಿಡಿದು ತರುವುದಕ್ಕೆಂದು ಧಡಧಡನೆ ಮೆಟ್ಟಿಲಿಳಿಯತೊಡಗಿದ. ರೇಶ್ಮಾ ಜಿಂದಲ್ ಏನೂ ಹೇಳಲು ತೋಚದೆ ನಿಂತಲ್ಲೆ ಇದ್ದಳು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸನ್ಮಾನ
Next post ಸೃಷ್ಟಿ

ಸಣ್ಣ ಕತೆ

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…