ಆಸೆಯನ್ನೊಮ್ಮೆ ಜಾಡಿಸಿ ಕೊಡವಿ
ಮೇಲೆದ್ದು ಬಂದವನಂತೆ
ನಟಿಸಿದ ಆತ
ಕಾವಿ, ಜಪಮಣಿಯನ್ನು
ಬಹಳವಾಗಿ ಪ್ರೀತಿಸುತ್ತ
ಸ್ವಾರ್ಥಕ್ಕೆ ಬೆನ್ನು ತಿರುಗಿಸಿ ನಿಂತಂತೆ.
ಚಿತ್ರ-ವಿಚಿತ್ರ ಬದುಕಿನ
ಲಯವ ಮಾರ್ಪಡಿಸಲೆಂಬಂತೆ
ಜಗಕೆ ಬೆಳಕಿನ ಬಟ್ಟೆ ತೊಡಿಸಲು
ಮಠ ಮಾನ್ಯವಾಯಿತು
ಸಂಗ ಅರಸಿ ಬಂದರು
ಐಹಿಕರು, ಪಾಪಿಗಳು ಮನಃಶ್ಯಾಂತಿ
ಬಯಸಿ,
ಫಲ ಪುಷ್ಪ, ಬೆಳ್ಳಿ ಬಂಗಾರ
ಕಾಣಿಕೆಯಾಗಿ ನೀಡುತ್ತ
ತಮ್ಮ ಪಾಪದ ಲೇಪನ
ಕಣಕಣವಾಗಿ ಕರಗಲೆಂಬಂತೆ.
ಆಸೆ ತ್ಯಜಿಸಿದ ದೊರೆ
ಭಕ್ತರ ಆಸೆ ಪೂರ್‍ಐಸಲು
ದಾನವನ್ನು ಎರಡೂ ಕೈಗಳಿಂದ
ಬಾಚಿಕೊಂಡ-
ಬಯಲ ಆಲಯದಲ್ಲೂ
ಅದೇ ಕೊಳೆತ ಹಣ್ಣಿನ ತಿರುಳು
ಅಪ್ಯಾಯವಾದವು
ನಿಧಾನವಾಗಿ ಮತ್ತದೇ ಕೂಪಕ್ಕೆ ಬಿದ್ದಂತೆ.
*****