ವಾನ್‌ಗಾಫ್ ಕೆಫೆಗಳನ್ನು ಚಿತ್ರಿಸಿದ
ಬೀದಿಗಳನ್ನು ಚಿತ್ರಿಸಿದ
ಪಾರ್ಕುಗಳನ್ನು ಚಿತ್ರಿಸಿದ
ಹೊಲಗಳನ್ನು ಚಿತ್ರಿಸಿದ
ಪೈನ್ ಮರಗಳನ್ನು
ಬಣ್ಣದಲ್ಲಿ ಮುಳುಗಿಸಿದ
ವಿಮರ್ಶಕರಂದರು
“ಛೇ! ಛೇ!
ಇಂಥವನ್ನೆಲ್ಲ ಚಿತ್ರಿಸುತ್ತಾರೆಯೇ?
ಯಾರಾದರೂ!
ಇಕಾರಸ್‌ನ ಮರಣ
ಮಹಾ ಪ್ರಳಯ
ಕ್ರೈಸ್ತನ ಪುನರುತ್ಥಾನ
ಕಲೆಯ ವಸ್ತುಗಳೆಂದರೆ ಅವು!
ವ್ಯಾನ್‌ಗಾಫ್ ನಂತರ ಒಂದು ಜತೆ ಹಳೆಯ
ಬೂಟುಗಳ ಚಿತ್ರ ಬಿಡಿಸಿದ
ಚರಿತ್ರೆಗೆ ಸಂದ.
ಹತಾಶರಾದ ವಿಮರ್ಶಕರೀಗ ಎಲ್ಲಿ?
ಆ ಬೂಟುಗಳ ಕೆಳಗಿದ್ದಾರೆ!
*****